ಅಧಿಕೃತ ಪಾವತಿ ಸ್ವೀಕರಣಾ ವಿಧಾನಗಳಲ್ಲಿ ಒಂದಾಗಿ ಬಿಟ್‌ಕಾಯಿನ್ಝಡ್ ಅಳವಡಿಕೆ
ಪುತ್ತೂರು: ವಿಭಾ ಟೆಕ್ನಾಲಜೀಸ್ ಸಂಸ್ಥೆಯು ಶುಕ್ರವಾರ ಬಿಟ್‌ಕಾಯಿನ್ಝಡ್ (BitcoinZ) ಕ್ರಿಪ್ಟೋಕರೆನ್ಸಿಯನ್ನು ತನ್ನ ಅಧಿಕೃತ ಪಾವತಿ ಸ್ವೀಕರಿಸುವ ವಿಧಾನಗಳಲ್ಲಿ ಒಂದಾಗಿ ಅಳವಡಿಸಿಕೊಂಡಿದೆ.
ಪುತ್ತೂರು ತಾಲೂಕಿನಲ್ಲಿ ಕಳೆದ ಏಳು ವರ್ಷದಿಂದ ವೆಬ್ ಡಿಸೈನಿಂಗ್, ಅಪ್ಲಿಕೇಶನ್ ಡೆವೆಲಪ್ಮೆಂಟ್, ಎಸ್ಎಂಸ್ ಸೊಲ್ಯುಷನ್ಸ್ ಇತ್ಯಾದಿ ಸೇವಾ ವಿಭಾಗದಲ್ಲಿ ಹೆಸರುಗಳಿಸಿದ್ದ ವಿಭಾ ಟೆಕ್ನಾಲಜೀಸ್, ಇದೀಗ ಕ್ರಿಪ್ಟೋಕರೆನ್ಸಿ- ಬಿಟ್ಕಾಯಿನ್ಝಡ್ (BitcoinZ) ನ್ನು ತನ್ನ ಪೇಮೆಂಟ್ ವಿಧಾನವನ್ನಾಗಿ ಬಳಸಿಕೊಳ್ಳಲು ಆರಂಭಿಸಿದೆ. ಜಮ್ಶದ್ಪುರದ ಖಾಸಗಿ ಐಟಿ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಅಬು ಅಕ್ತರ್ ಪ್ರಥಮ ಪಾವತಿ ಮಾಡುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಬು ಅಕ್ತರ್, ಮಾರುಕಟ್ಟೆಯಲ್ಲಿ ಸಾವಿರಾರು ಕ್ರಿಪ್ಟೋಕಾಯಿನ್ಗಳಿವೆ. ಅದರಲ್ಲಿ ಸರಿಯಾದ ಕ್ರಿಪ್ಟೋಕರೆನ್ಸಿಯನ್ನು ಆಯ್ದುಕೊಳ್ಳುವುದು ನಿಜವಾದ ಸವಾಲು ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನ, ಮಾರುಕಟ್ಟೆಯ ಟ್ರೆಂಡ್, ತಾಂತ್ರಿಕ ವಿಚಾರಗಳನ್ನು ಅರಿತು ಕ್ರಿಪ್ಟೋದಲ್ಲಿ ಹೂಡಿಕೆ ಮಾಡಬೇಕು. BitcoinZ ಮುಂದಿನ ದಿನದಲ್ಲಿ ಅತ್ಯುತ್ತಮ ಮೌಲ್ಯವಾಗಿ ಪರಿವರ್ತನೆಯಾಗುವ ಡಿಜಿಟಲ್ ಅಸೆಟ್ ಎನ್ನಬಹುದು. ಇಂದಿನ ದಿನದಲ್ಲಿ ಡಿಜಿಟಲ್ ಅಸೆಟ್‌ಗಳನ್ನು ಪಡೆದುಕೊಳ್ಳುವುದು ಹೂಡಿಕೆಗೆ ಅತ್ಯುತ್ತಮ ಆಯ್ಕೆ. ಸರಿಯಾದ ಹೂಡಿಕೆಯಿಂದ ಅನಿಯಮಿತವಾದ ಲಾಭ ಪಡೆಯುವ ಅವಕಾಶ ಕ್ರಿಪ್ಟೋಕರೆನ್ಸಿ ಕ್ಷೇತ್ರದಲ್ಲಿ ಮಾತ್ರವೇ ಇದೆ ಎಂದರು.
ವಿಭಾ ಟೆಕ್ನಾಲಜೀಸ್ನ ಮಾರ್ಗದರ್ಶಕ ಹಾಗೂ ಐಟಿ ವಿಭಾಗದ ಮುಖ್ಯಸ್ಥ, ಕೇಶವ ಮೂರ್ತಿ ಚಂದ್ರಶೇಖರ್ ಮಾತನಾಡಿ, ವಿಶ್ವದಾದ್ಯಂತ ಇಂದು ಕ್ರಿಪ್ಟೋ ತನ್ನದೇ ಆದ ಮಾರುಕಟ್ಟೆ ಹಾಗೂ ಕಮ್ಯುನಿಟಿಯನ್ನು ಸ್ಥಾಪಿಸುತ್ತಿದೆ. ಈಗಾಗಲೇ ಕೆಲ ರಾಷ್ಟ್ರಗಳು ಕ್ರಿಪ್ಟೋಕರೆನ್ಸಿ ವಿಧಾನವನ್ನು ತಮ್ಮ ಅಧಿಕೃತ ಹಣಕಾಸು ಚಲಾವಣಾ ನಾಣ್ಯವಾಗಿ ಪರಿಗಣಿಸುವತ್ತ ಹೆಜ್ಜೆ ಇಡುತ್ತಿದೆ. ಅಂತೆಯೇ ಭಾರತದಲ್ಲೂ ಅನೇಕ ಖಾಸಗಿ ಸಂಸ್ಥೆಗಳು ವಿವಿಧ ಬಗೆಯ ಕ್ರಿಪ್ಟೋ ನಾಣ್ಯವನ್ನು ಪೇಮೆಂಟ್ ವಿಧಾನವಾಗಿ ಅಳವಡಿಸಿಕೊಳ್ಳುತ್ತಿವೆ. ಇನ್ನು ಮುಂದೆ ವಿಭಾ ಟೆಕ್ನಾಲಜೀಸ್ ಸಹ BitcoinZ ತನ್ನ ಪೇಮೆಂಟ್ ವಿಧಾನವನ್ನಾಗಿ ಅಳವಡಿಸಿಕೊಳ್ಳಲಿದೆ. ಅಲ್ಲದೆ ಕ್ರಿಪ್ಟೋಕರೆನ್ಸಿ ಹೂಡಿಕೆ ಸಂಬಂಧ ಸಲಹೆಯನ್ನೂ ನೀಡುತ್ತಿದ್ದೇವೆ ಎಂದರು.
ಮುಂದಿನ ದಿನದಲ್ಲಿ ವಿಭಾ ಸಂಸ್ಥೆಯು, ಕ್ರಿಪ್ಟೋಕರೆನ್ಸಿ ಬಗ್ಗೆ ತಾಂತ್ರಿಕ ಕಾರ್ಯಾಗಾರ, ಶೇರು ಮಾರುಕಟ್ಟೆಯಲ್ಲಿ ತಾಂತ್ರಿಕ ಚಾರ್ಟ್ ವಿಶ್ಲೇಷಿಸಿ ಟ್ರೇಡಿಂಗ್ ಮಾಡುವ ವಿಧಾನ, ಕೌಶಲ್ಯಾಭಿವೃದ್ಧಿ, ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಐಒಟಿ, ಬಿಗ್ ಡೇಟಾ ಇತ್ಯಾದಿ ತಂತ್ರಜ್ಞಾನ ಆಧಾರಿತ ಸರ್ಟಿಫಿಕೇಟ್ ಕೋರ್ಸ್ಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನೂ ಆಯೋಜಿಸಲಿದೆ ಎಂದು ತಿಳಿಸಿದರು.
ಸಂಸ್ಥೆಯ ಸಿಇಒ ಆದರ್ಶ್, ಉದ್ಯಮಿ, ಪೆನ್ಸಿಲ್ಬಾಕ್ಸ್- ಚಿತ್ರದ ನಿರ್ಮಾಪಕ ದಯಾನಂದ ಎಸ್ ರೈ ಸೇರಿದಂತೆ ಮತ್ತಿತರರು ಇದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ