ಯೋಗ ಶಿಬಿರದ ಅಧ್ಯಕ್ಷ ಸ್ಥಾನದಿಂದ ಕವಿ ಡಾ. ವಸಂತಕುಮಾರ ಪೆರ್ಲ ಹೇಳಿಕೆ
ಮಂಗಳೂರು: ಯೋಗ ಎಂಬುದು ಚಿತ್ತವೃತ್ತಿ ನಿರೋಧ ಮಾಡುವ ಮಹಾನ್ ವಿದ್ಯೆಯಾಗಿದೆ. ಇಂತಹ ಯೋಗವಿದ್ಯೆಯ ಮೂಲಕ ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಬಹುತೇಕ ಎಲ್ಲ ಅನಾರೋಗ್ಯಗಳಿಂದ ನಾವು ಪಾರಾಗಬಹುದು. ಆಧುನಿಕ ಕಾಲದ ಎಲ್ಲ ರೀತಿಯ ಒತ್ತಡಸಂಬಂಧೀ ರೋಗಗಳಿಗೆ ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ನಾವು ನಿಯಂತ್ರಣ ಕಳೆದುಕೊಂಡಿರುವುದೇ ಕಾರಣವಾಗಿದೆ. ಹಾಗಾಗಿ ಯೋಗವು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
ಪತಂಜಲಿ ಯೋಗ ಕೇಂದ್ರದ ವತಿಯಿಂದ ಡಾ. ಎಂ. ಜಗದೀಶ್ ಶೆಟ್ಟಿ ಬಿಜೈ ಅವರು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಯೋಗ ಶಿಬಿರದ 199 ನೇ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಡಾ. ಪೆರ್ಲ ಅವರು ಮಾತಾಡುತ್ತಿದ್ದರು. ಮಂಗಳೂರು ನಗರದ ಅಬ್ಬಕ್ಕ ಬಡಾವಣೆಯಲ್ಲಿ ಈ ಶಿಬಿರ ನಡೆಯುತ್ತಿದ್ದು ಸ್ಥಳೀಯರೊಂದಿಗೆ ಆನ್‌ಲೈನ್ ನಲ್ಲಿ ಕೂಡ ನೂರಾರು ಮಂದಿ ಶಿಬಿರಾರ್ಥಿಗಳಾಗಿ ಭಾಗವಹಿಸುತ್ತಿದ್ದಾರೆ.
ಯೋಗಶಾಸ್ತ್ರವು ಮನುಷ್ಯನನ್ನು ಪ್ರಕೃತಿಯೊಂದಿಗೆ ಸಂಪೂರ್ಣತಾ ದೃಷ್ಟಿಯಿಂದ ನೋಡಿದೆ. ಮನುಷ್ಯಜೀವಿಯನ್ನು ಪ್ರಕೃತಿಯ ತಾಳ-ಮೇಳದೊಂದಿಗೆ ಜೋಡಿಸಿ ಒಂದಾಗಿಸುವ ವಿದ್ಯೆಯೇ ಯೋಗವಾಗಿದೆ. ಒಮ್ಮೆ ಈ ಸಂಯೋಗಗೊಳ್ಳುವ ಕ್ರಮವನ್ನು ಅರ್ಥ ಮಾಡಿಕೊಂಡರೆ ಮನುಷ್ಯನಲ್ಲಿ ಸಂಯಮಗುಣ ವೃದ್ಧಿಯಾಗಿ ಸಣ್ಣತನಗಳಾಗಲೀ ರೋಗಗಳಾಗಲೀ ಬಾಧಿಸಲಾರವು ಎಂದು ಡಾ. ಪೆರ್ಲ ಅವರು ಹೇಳಿದರು.
ನಗರದ ಉದ್ಯಮಿ ಸುವರ್ಣಸುಂದರ್ ಅವರು ದೀಪ ಬೆಳಗಿ ಶಿಬಿರ ಉದ್ಘಾಟಿಸಿದರು. ಮಾತೃಪೂಜನ ಅಂಗವಾಗಿ ಯೋಗವನ್ನು ಅನುಷ್ಠಾನ ಮಾಡುತ್ತ ಯೋಗವನ್ನು ಪ್ರಚುರಪಡಿಸುತ್ತಿರುವ ಐದು ಮಂದಿ ಹಿರಿಯ ಮಹಿಳೆಯರಾದ ಲಕ್ಷ್ಮೀ ಶೆಟ್ಟಿ, ಕಸ್ತೂರಿ ಶೆಟ್ಟಿ, ಅಪ್ಪಿ ಹೆಂಗ್ಸು, ಗಿರಿಜಾ ಶೆಟ್ಟಿ ಮತ್ತು ಶ್ರೀಮತಿ ಶಾಂತಾ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಯೋಗಗುರು ಎಂ. ಜಗದೀಶ್ ಶೆಟ್ಟಿ ಬಿಜೈ ಅವರು ಸ್ವಾಗತಿಸಿದರು. ನೀಲಲೋಹಿತ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸುಧಾಕರ ಕಾಮತ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸುಬ್ರಾಯ ನಾಯಕ್ ಅವರು ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ