||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗುರುವಿಗೆ ನಮನ: ನನ್ನೊಲುಮೆಯ ನಳಿನಿ ಟೀಚರ್

ಗುರುವಿಗೆ ನಮನ: ನನ್ನೊಲುಮೆಯ ನಳಿನಿ ಟೀಚರ್1979 ರ ಜೂನ್ ತಿಂಗಳು ನನ್ನ ವಿದ್ಯಾರ್ಥಿ ಜೀವನದ ಆರಂಭಗೊಂಡಿತ್ತು. 1973ರಲ್ಲಿ ಜನಿಸಿದ ನಾನು ಬರೋಬ್ಬರಿ 6 ವರ್ಷ ತುಂಬಿದ ಬಳಿಕ ನೇರವಾಗಿ ಒಂದನೇ ತರಗತಿಗೆ ದಾಖಲಾತಿಗೊಂಡಿದ್ದೆ. ಆಗ ಈಗಿನಂತೆ ಪ್ಲೇಸ್ಕೂಲ್, ಪ್ರಿಸ್ಕೂಲ್, ಎಲ್.ಕೆ.ಜಿ., ಯು.ಕೆ.ಜಿ ಎಂಬ ವ್ಯವಸ್ಥೆ ಇರಲಿಲ್ಲ. ಖಾಸಗಿ ಶಾಲೆಗಳಂತೂ ಇರಲೇ ಇಲ್ಲ. ನಮ್ಮೂರಿಗೆ ಇದ್ದದ್ದು ಒಂದೇ ಸರಕಾರಿ ಶಾಲೆ ಅದುವೇ ಸರಕಾರ ಕಿರಿಯ ಪ್ರಾಥಮಿಕ ಶಾಲೆ ಶೇಣಿ, ಸುಳ್ಯ ತಾಲೂಕಿನ ಅಮರ ಪಡ್ನೂರು ಗ್ರಾಮದ ಚೊಕ್ಕಾಡಿ ಸಮೀಪದ ಶೇಣಿ ಎಂಬ ಕುಗ್ರಾಮದ ಒಂದೇ ಶಾಲೆ ಆದಾಗಿತ್ತು. ನನ್ನ ಊರು ಚೂಂತಾರಿನಿಂದ ಬರೋಬ್ಬರಿ 4 ಕಿ.ಮೀ. ದೂರದ ಏಕೋಪಾಧ್ಯಾಯ ಶಾಲೆ ಅದಾಗಿತ್ತು. ನನ್ನ ಈ ಕಥೆಯ ಕಥಾ ನಾಯಕಿಯೇ ನನ್ನ ಜೀವನದ ಅಧಿಕೃತವಾದ ಮೊದಲ ಟೀಚರ್ ಶ್ರೀಮತಿ ನಳಿನಿ, ನಾವು ಅವರನ್ನು ಪ್ರೀತಿಯಿಂದ ನಳಿನಿ ಟೀಚರ್ ಎಂದು ಕರೆಯುತ್ತಿದ್ದೆವು.


1 ರಿಂದ 4 ನೇ ತರಗತಿವರೆಗೆ ಮಾತ್ರ ಸೀಮಿತವಾಗಿದ್ದ ಆ ಶಾಲೆಯಲ್ಲಿ ಏನಿಲ್ಲವೆಂದರೂ ಸುಮಾರು 80 ಮಂದಿ ಮಕ್ಕಳಿದ್ದರು. ಒಂದು ತರಗತಿಯಲ್ಲಿ ಸರಾಸರಿ 20 ರಿಂದ 25 ಮಕ್ಕಳಿದ್ದರು. ಆ ಶಾಲೆಗೆ ಇದ್ದದ್ದು ಎರಡೇ ರೂಮ್‍ಗಳು, ಒಂದು ನಮ್ಮ ಶಿಕ್ಷಕಿ, ರಕ್ಷಕಿ, ಮುಖ್ಯ ಶಿಕ್ಷಕಿ ಎಲ್ಲವೂ ಆಗಿದ್ದ ನಳಿನಿ ಟೀಚರು ಕುಳಿತುಕೊಳ್ಳುತ್ತಿದ್ದ ರೂಮ್, ಇನ್ನೊಂದು ದೊಡ್ಡ ವಿಶಾಲವಾದ ಹಾಲ್ ಇತ್ತು. ಅದನ್ನೇ ನಡುವೆ ಮರದ ಹಲಗೆಯನ್ನು ಇಟ್ಟು ನಾಲ್ಕು ರೂಮುಗಳನ್ನಾಗಿ ಪರಿವರ್ತಿಸಿ 1 ರಿಂದ 7ನೇ ತರಗತಿಗೆ ಪಾಠ ಮಾಡಲಾಗುತ್ತಿತ್ತು  ಎಲ್ಲ ತರಗತಿಗೂ ಒಬ್ಬರೇ ಟೀಚರ್. ಕನ್ನಡ, ಸಮಾಜ, ಗಣಿತ, ವಿಜ್ಞಾನ ಹೀಗೆ ಎಲ್ಲಾ ವಿಷಯವನ್ನು ಅವರೇ ಹೇಳಿಕೊಡುತ್ತಿದ್ದರು.


ಒಂದು ತರಗತಿಯ ಕ್ಲಾಸ್ ಮುಗಿದ ಬಳಿಕ ಇನ್ನೊಂದು ತರಗತಿಗೆ, ಅದು ಮುಗಿದ ಬಳಿಕ ಮತ್ತೊಂದು ತರಗತಿಗೆ ಹೀಗೆ ಬಿಡುವಿಲ್ಲದೆ ಪಾಪ ನಮ್ಮ ನಳಿನಿ ಟೀಚರ್ ಪಾಠ ಮಾಡುತ್ತಲೇ ದಿನ ಮುಗಿದು ಹೋಗುತ್ತಿತ್ತು. ನಮ್ಮ ತರಗತಿ ಮುಗಿದ ಬಳಿಕ ನಮ್ಮೆಲ್ಲರನ್ನು  ತರಗತಿಯ ಹೊರಗಿನ ವರಾಂಡದಲ್ಲಿ ಕುಳಿತುಕೊಳ್ಳಿಸಿ ಮಗ್ಗಿ ಪಾಠ ಹೇಳುತ್ತಿದ್ದ ಸಿಹಿ ನೆನಪು ಇನ್ನು ನನ್ನ ಮನದಲ್ಲಿ ಹಸಿರಾಗಿದೆ. ಎರಡೊಂದ್ಲಿ ಎರಡು, ಎರಡೆರಡ್ಲಿ ನಾಲ್ಕು, ಎರಡುಮೂರ್ಲಿ ಆರು ಹೀಗೆ ಮಗ್ಗಿಯ ಕಂಠ ಪಾಠ ಎಗ್ಗಿಲ್ಲದೆ ನಳಿನಿ ಟೀಚರ್ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಿತ್ತು.


ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಗ ಇಂಗ್ಲೀಷ್ ವಿಷಯ (ಎಬಿಸಿಡಿ ಕಲಿಯಲು) 5ನೇ ತರಗತಿವರೆಗೆ ಕಾಯಬೇಕಿತ್ತು. 6ನೇ ತರಗತಿಯಿಂದ ಹಿಂದಿ ವಿಷಯ ಆರಂಭವಾಗುತ್ತಿತ್ತು.  ಒಂದರಿಂದ 4 ರವರೆಗೆ ಬರೀ ಮಗ್ಗಿ ಕಂಠಪಾಠ, ಸರಳ ಕನ್ನಡ, ಗಣಿತ, ಸಮಾಜ, ವಿಜ್ಞಾನ ಹೀಗೆ ಇದರಲ್ಲಿಯೇ ಮುಗಿದು ಹೋಗುತ್ತಿತ್ತು. ಇಡೀ ಶಾಲೆಗೆ ಒಬ್ಬರೇ ಅಧ್ಯಾಪಕಿ ಅವರೇ ಆಗಿದ್ದರೂ ಯಾವತ್ತೂ ಮಕ್ಕಳ ಮೇಲೆ ರೇಗಿದ ನಿದರ್ಶನಗಳಿಲ್ಲ. ಹಾಗೆಂದ ಮಾತ್ರಕ್ಕೆ ನಾವು ತಪ್ಪು ಮಾಡಿದಾಗ ಶಿಕ್ಷೆ ನೀಡಲು ಹಿಂಜರಿದವರೂ ಅಲ್ಲ. ಆಗಿನ ಕಾಲದಲ್ಲಿ ಮಕ್ಕಳ ಕಿವಿ ಹಿಂಡುವುದು, ಅಡಿಕೋಲನ್ನು ಅಡ್ಡ ಮಾಡಿ ಕೈಗೆ ಬಡಿಯುವುದು ಸಾಮಾನ್ಯವಾಗಿತ್ತು. ಇವೆಲ್ಲ ಸಾಮಾನ್ಯ ತಪ್ಪುಗಳಿಗೆ ಮಾಮೂಲಿ ಶಿಕ್ಷೆಯಾಗಿತ್ತು. ಇದರ ಜೊತೆಗೆ ನಾಗರ ಬೆತ್ತ ಎಂಬ ಬ್ರಹ್ಮಾಸ್ಟ್ರ ಕೂಡ ನಮ್ಮ ನಳಿನಿ ಟೀಚರ್‍ರವರ ಬತ್ತಳಿಕೆಯಲ್ಲಿ ಇತ್ತು. ದೊಡ್ಡ ತಪ್ಪು ಮಾಡಿದಾಗ ಅಥವಾ ಪರೀಕ್ಷೆಯಲ್ಲಿ ಸರಿಯಾಗಿ ಉತ್ತರ ಬರೆಯದಿದ್ದಲ್ಲಿ ನಾಗರಬೆತ್ತದ ಪ್ರಯೋಗ ಆಗುತ್ತಿತ್ತು. ನಾವೆಲ್ಲ ಇವೆಲ್ಲದರ ಶಿಕ್ಷೆಗೆ ಹಲವು ಬಾರಿ ಒಳಗಾಗಿದ್ದೆವು. ಆಗ ಆ ನೋವು, ಕಹಿ ಅನಿಸಿದ್ದರೂ ಈ ನೋವಿನಿಂದಲೇ ನಾವೀಗ ಸಮಾಜದಲ್ಲಿ ಸಿಹಿ ಗಳಿಗೆ ಪಡೆದದ್ದು ಎಂದರೂ ಅತಿಶಯೋಕ್ತಿಯಾಗಲಾರದು.


ಆಗ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದು ಅತೀ ಸಾಮಾನ್ಯವಾಗಿತ್ತು. ಈಗಿನಂತೆ ಮಕ್ಕಳಿಗೆ ಹೊಡಿಯಬಾರದು, ಶಿಕ್ಷಿಸಬಾರದು ಎಂಬ ನಿಯಮವಿರಲಿಲ್ಲ. ಶಿಕ್ಷಿಸಿ, ತಿದ್ದಿ ತೀಡಿ ಬುದ್ದಿ ಹೇಳಿ, ವಿದ್ಯೆ ನೀಡಿದವರೇ ನಿಜವಾದ ಶಿಕ್ಷಕ ಎಂಬ ಭಾವನೆ ಆಗಿನ ಸಮಯದಲ್ಲಿ ಇತ್ತು. ಈಗಿನ ಕಾಲದಲ್ಲಿ ಶಿಕ್ಷಿಸುವುದು ಬಿಡಿ ಜೋರಾಗಿ ಮಕ್ಕಳಿಗೆ ಬೈದರೂ ಎಲ್ಲರ ಮುಂದೆ ನನ್ನ ಮಗನಿಗ್ಯಾಕೆ ಬೈದಿರಿ ಎಂದು ಹೆತ್ತವರು ಶಾಲೆಗೆ ಬಂದು ರಂಪಾಟ ಮಾಡಿ ಶಿಕ್ಷಕರನ್ನೇ ಶಾಲೆಯಿಂದ ವರ್ಗಾವಣೆ ಮಾಡಿಸುವ ಹಂತಕ್ಕೆ ಬಂದಿದೆ ಎಂದರೂ ತಪ್ಪಾಗಲಾರದು. 


ನನಗಿನ್ನೂ ನೆನಪಿದೆ, ನಾನಾಗ ಮೂರನೇ ತರಗತಿಯಲ್ಲಿದ್ದೆ. ನನಗೆ ಬೇಸಿಗೆ ತಿಂಗಳ ಆರಂಭದಲ್ಲಿ ಆಗೆಲ್ಲ ಸಾಂಕ್ರಾಮಿಕವಾಗಿದ್ದ ಚಿಕನ್ ಫಾಕ್ಸ್ (ಸೀತಾಳೆ ಸಿಡುಬು) ಬಂದಿತ್ತು.  ಬಹಳ ಜ್ವರ ಬಂದು ನಿತ್ರಾಣವಾಗಿ ನಡೆಯಲೂ ಅಶಕ್ತನಾಗಿದ್ದೆ. ನನ್ನನ್ನೂ ಮನೆವರೆಗೆ ಕೈ ಹಿಡಿದು ನಡೆಸಿ ಕರೆತಂದು ಸುರಕ್ಷಿತವಾಗಿ ನನ್ನ ಹೆತ್ತವರ ಬಳಿಗೊಪ್ಪಿಸಿ ಮಗನಿಗೆ ಸರಿಯಾಗಿ ಔಷಧಿ ನೀಡಿ ವಿಶ್ರಾಂತಿ ನೀಡಿ ಅಂಥ ಧೈರ್ಯ ತುಂಬಿ ಹೋಗಿದ್ದರು ನಮ್ಮ ನಳಿನಿ ಟೀಚರ್.  ಆಗ ಈಗಿನಂತೆ ವಾಹನ ಸೌಕರ್ಯವೂ ಇರಲಿಲ್ಲ. ಸುಮಾರು 4 ಕಿ.ಮೀ. ನಡೆದು ಮನೆಗೆ ಬಂದು ಬಳಿಕ 2 ಕಿ.ಮೀ ದೂರದ ತಮ್ಮ ಮನೆಗೆ ಹೋಗಿದ್ದರು.


ಇನ್ನೊಮ್ಮೆ ಶಾಲೆಯಲ್ಲಿ ಕ್ರಿಕೆಟ್ ಆಡುವಾಗ ನನ್ನ ಸಹಪಾಠಿಯೊಬ್ಬ ಜೋರಾಗಿ ಬ್ಯಾಟ್ ಬೀಸಿದ ರಭಸಕ್ಕೆ ನನ್ನ ಹಣೆಭಾಗದಲ್ಲಿ ಗಾಯವಾಗಿ ಜೋರಾಗಿ ರಕ್ತ ಒಸರುತ್ತಿತ್ತು.  ರಕ್ತ ನೋಡಿ ನಾನು ಗಾಬರಿಯಿಂದ ಏದುಸಿರು ಬಿಡುತ್ತಿದ್ದಾಗ ಸಂತೈಸಿ ಸಮಾಧಾನ ಮಾಡಿಸಿ, ಶಾಲೆಯಲ್ಲಿದ್ದ ಚಹಾ ಪುಡಿಯನ್ನು ಗಾಯಕ್ಕೆ ಹಚ್ಚಿ ರಕ್ತ ಒಸರುವುದನ್ನು ನಿಯಂತ್ರಿಸಿದ್ದರು.  ತನ್ನದೇ ಸೀರೆಯ ಅಂಚನ್ನು ಹರಿದು ನನ್ನ ಹಣೆಗೆ ಕಟ್ಟಿ ರಕ್ತ ನಿಲ್ಲಿಸಿ ಪ್ರಸಂಗಾವಾಧಾನತೆ ಮೆರೆದಿದ್ದರು.


ಹೀಗೆ ನಮ್ಮ ನಳಿನಿ ಟೀಚರು ಬರೀ ಶಿಕ್ಷಕಿಯಾಗದೇ ರಕ್ತ ಬಂದಾಗ ವೈದ್ಯರಾಗಿ, ಜ್ವರ ಬಂದು ಸುಸ್ತಾದಾಗ ತಾಯಿಯ ಮಮತೆ ಪ್ರೀತಿಯನ್ನು ನೀಡಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿದರು. ಈ ಕಾರಣಕ್ಕೆ ನಮಗೆ ನಳಿನಿ ಟೀಚರು ಬಹಳ ಆಪ್ಯಾಯಮಾನವಾಗುತ್ತಾರೆ.


ಗ್ರಾಮೀಣ ಪ್ರದೇಶಗಳ ಸರಕಾರಿ ಶಾಲೆಗಳ ವಿಶೇಷತೆ ಎಂದರೆ ಅದುವೇ ಪ್ರತೀ ಮಕ್ಕಳನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ಆಪ್ಯಾಯಮಾನತೆಯಿಂದ ಕಾಣುತ್ತಾರೆ. ಬಡವ, ಬಲ್ಲಿದ, ಹಿಂದು ಮುಸ್ಲಿಂ, ಕ್ರೈಸ್ತ ಎಂಬ ಬೇದಭಾವ ಇರಲಿಲ್ಲ. ಎಲ್ಲಾ ಮಕ್ಕಳಿಗೂ ತಾಯಿಯ ಮಮತೆ ಅಕ್ಕರೆ ವಾತ್ಸಲ್ಯ, ಪ್ರೀತಿಯನ್ನು ಸಮವಾಗಿ ಹಂಚುತ್ತಾರೆ. ಈ ಕಾರಣಕ್ಕೆ ಸರಕಾರಿ ಶಾಲೆಗಳು ಈಗಲೂ ನಮ್ಮ ಮನಸ್ಸಿಗೆ ಮತ್ತಷ್ಟು ಹತ್ತಿರವಾಗುತ್ತದೆ. ಈಗಲೂ ಶಾಲೆಗೆ ಹೋದಾಗ ದೇವಾಲಯಕ್ಕೆ ಹೋದಂತೆ ಮೈ ರೋಮಾಂಚನವಾಗುತ್ತದೆ. ಹೆಚ್ಚಿನ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳ ಸುತ್ತ ಹಸಿರು ತುಂಬಿದ ಕಾಡುಗಳ ಪ್ರಶಾಂತ ವಾತಾವರಣ ದೊಡ್ಡದಾದ ಆಟದ ಅಂಗಳ ಇವೆಲ್ಲವೂ ಮನಸ್ಸಿಗೆ ಮುದ ನೀಡಿ ಚರಿತ್ರೆಯ ಪುಟಗಳನ್ನು ಮನಪಟಲದಲ್ಲಿ ಮೂಡುವಂತೆ ಮಾಡುತ್ತದೆ.


ಇವತ್ತಿಗೂ ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದರ ಹಳೆ ವಿದ್ಯಾರ್ಥಿಗಳು ಮತ್ತು ನಳಿನಿ ಟೀಚರ್ ಅವರ ಶಿಷ್ಯಂದಿರು ದೇಶ ವಿದೇಶಗಳಲ್ಲಿ ವೈದ್ಯರಾಗಿ, ಇಂಜಿನಿಯರ್ ಆಗಿ, ವಕೀಲರಾಗಿ, ಸಾಹಿತಿಗಳಾಗಿ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯರಾಗಿ ಬಹಳ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಇದನ್ನು ನೋಡಿ ಅತೀ ಹೆಚ್ಚು ಸಂತಸಪಟ್ಟವರು ಎಂದರೆ ನಮ್ಮ ಪ್ರೀತಿಯ ನನ್ನೊಲವಿನ ನಳಿನಿ ಟೀಚರ್ ಎಂದರೆ ಖಂಡಿತ ತಪ್ಪಾಗಲಾರದು. ಈ ಕಾರಣಕ್ಕೆ ನಮ್ಮ ನಳಿನಿ ಟೀಚರು ನಮಗೆ ಮತ್ತಷ್ಟು ಹತ್ತಿರವಾಗುತ್ತಾರೆ. ಯಾವತ್ತೂ ತಾನು ಹೆತ್ತು ಸಾಕಿದ ತನ್ನ ಮಕ್ಕಳು ವ್ಯದ್ಯರಾಗಲಿಲ್ಲ, ವಕೀಲರಾಗಲಿಲ್ಲ ಎಂದು ಕೊರಗಿದವರೇ ಅಲ್ಲ, ತಾನು ಕಲಿಸಿದ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಿದಾಗ ಸ್ವತ: ತಾವೇ ಫೋನು ಮಾಡಿ ಶುಭಾಶಯ ಕೋರಿದ  ದೊಡ್ಡತನ ನಮ್ಮ ನಳಿನಿ ಟೀಚರ್ ಅವರದ್ದು, ಒಬ್ಬ ನಿಜವಾದ ಶಿಕ್ಷಕರ ದೊಡ್ಡತನ, ಹೃದಯವಂತಿಕೆ ಅದುವೇ ತಮ್ಮ ಮಕ್ಕಳು ಓದಿನಲ್ಲಿ ಹಿಂದುಳಿದು ಡಿಪ್ಲೋಮಾ ಕೂಡಾ ಮಾಡಲಾಗದೆ ಮನೆಯಲ್ಲಿ ಉಳಿದರೂ, ಯಾವತ್ತೂ ಶಿಕ್ಷಕರು ಬೇಸರಿಸುವುದೇ ಇಲ್ಲ, ಅದಕ್ಕೆ ಶಿಕ್ಷಕರ ವೃತ್ತಿಯಷ್ಟು ಪವಿತ್ರ ವೃತ್ತಿ ಇನ್ನಾವುದೂ ಇಲ್ಲ ಎಂಬುದೇ ನನ್ನ ಪ್ರಾಮಾಣಿಕ ಅನಿಸಿಕೆ.


ಯಾಕೆಂದರೆ ಒಬ್ಬ ವೈದ್ಯ ತನ್ನ ಮಗ ಅಥವಾ ಮಗಳು ತನ್ನಂತೆ ವೈದ್ಯನಾಗಲಿ ಎಂದು ಬಯಸುತ್ತಾರೆ. ಒಬ್ಬ ಇಂಜಿನಿಯರ್ ತನ್ನ ಮಗ ತನ್ನಂತೆ ಇಂಜಿನಿಯರ್ ಆಗಲಿ ಎಂದು ಬಯಸುತ್ತಾರೆ. ಆದರೆ ಶಿಕ್ಷಕ ಮಾತ್ರ ತನ್ನ ಶಿಷ್ಯರು ವ್ಯದ್ಯರಾಗಲಿ, ವಕೀಲಾಗಲಿ, ಇಂಜಿನಿಯರ್ ಆಗಲಿ ಎಂದು ಪ್ರಾಮಾಣಿಕವಾಗಿ ಬಯಸುತ್ತಾರೆ. ತನ್ನ ಶಿಷ್ಯಂದಿರು ಸಮಾಜದಲ್ಲಿ ಉಂದೆ ಒಂದು ಉನ್ನತ ಸ್ಥನ ಗಳಿಸಿದಾಗ ತಮ್ಮ ಮಕ್ಕಳೇ ಸಾಧನೆ ಮಾಡಿದ್ದಾರೆ ಎಂದು ಸಂಭ್ರಮಿಸುತ್ತಾರೆ. ಅದಕ್ಕೆ ನನಗೆ ಅತೀ ಹೆಚ್ಚು ಆಪ್ಯಾಯಾಮಾನವಾಗುವ ಹುದ್ದೆ ಎಂದರೆ ಶಿಕ್ಷಕ ಹುದ್ದೆ ನಮ್ಮ ನಳಿನಿ ಟೀಚರ್ ಕೂಡಾ ಇದಕ್ಕೆ ಹೊರತಲ್ಲ.  


ಸರಳ ಜೀವನ, ಸದಾ ನಗು ಮುಖದ ನಳಿನಿ ಟೀಚರು ನಮಗೆ ಅತ್ಯಂತ ಪ್ರೀತಿ ಪಾತ್ರವಾದ ದೇವರ ಸಮಾನವಾದ ವೈಕ್ತಿತ್ವ ಎಂದರೆ ಖಂಡಿತ ಅಭಾಸವಾಗದು. ಪ್ರಾಥಮಿಕ ಶಿಕ್ಷಣ ಮುಗಿಸಿ ನಾಲ್ಕು ದಶಕಗಳು ಸಂದರೂ, ಆ ಒಡನಾಟ, ಆತ್ಮೀಯತೆಗೆ ಯಾವತ್ತೂ ಕುಂದು ಬಂದಿಲ್ಲ. ಈಗಲೂ ಎಲ್ಲಿ ಸಿಕ್ಕಿದರೂ ಅದೇ ನಗುಮುಖ, ಅದೇ ಮಂದಹಾಸ ಅವರ ಮುಖದಲ್ಲಿ ಮಾಸುವುದೇ ಇಲ್ಲ. ಮತ್ತೆ ಮತ್ತೆ ಮಾತನಾಡಿಸಬೇಕು ಎನ್ನುವ ಆಸೆ ಮನದಲ್ಲಿ ಹಂಬಲಿಸುತ್ತಲೇ ಇರುತ್ತದೆ. ಇಂತಹ ಸರಳ ಸಜ್ಜನಿಕೆಯ ಪ್ರಾಮಾಣಿಕತೆಯ ಆಡಂಬರವಿಲ್ಲದ ಜೀವನಶೈಲಿ ಮತ್ತು ಜೀವನದ ಹುಮ್ಮಸಿನ ನಳಿನಿ ಟೀಚರು ಅಂತಹ ಸಾವಿರಾರು ಶಿಕ್ಷಕರು ನಮ್ಮ ಸಮಾಜದಲ್ಲಿ ಇರುವುದರಿಂದಲೇ ಇಂದಿಗೂ ಗುರು ಶಿಷ್ಯರ ಸಂಬಂಧ ಗಟ್ಟಿಯಾಗಿ ಉಳಿದಿದೆ ಎಂದರೂ ಅತಿಶಯೋಕ್ತಿಯಾಗಲಾರದು.


ಇನ್ನು ಈಗಿನ ಶಿಕ್ಷಣ ವ್ಯವಸ್ಥೆ, ಶಾಲೆಗಳ ಆಡಂಬರ ಮತ್ತು ಸಮಾಜದ ವ್ಯವಸ್ಥೆ ನೋಡಿದರೆ ಬಹಳ ಬೇಸರ ಉಂಟಾಗುತ್ತದೆ. ಈಗಿನ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಒಂದು ಬಿಟ್ಟು ಬೇರೆಲ್ಲವೂ ಸಿಗುತ್ತದೆ. ಎಲ್ಲ ವ್ಯಾಪಾರೀಕರಣವಾಗಿರುವುದರಿಂದ ಶಾಲೆ, ದೇವಾಲಯವಾಗಿ ಉಳಿದಿಲ್ಲ. ಅದೊಂದು ವ್ಯಾಪಾರಿ ಸಂಕೀರ್ಣವಾಗಿ ಬೆಳೆದು ನಿಂತಿದೆ. ಮಕ್ಕಳಿಗೆ ಶೂ, ಸಾಕ್ಸ್, ಕರ್ಚಿಫ್‌ನಿಂದ ಹಿಡಿದು ಊಟ ತಿಂಡಿ ಪುಸ್ತಕ, ಬಟ್ಟೆ, ಬರೆ, ಅಂಗಿ ಚಡ್ಡಿ ಎಲ್ಲಾ ಸಿಗುತ್ತದೆ. ಆದರೆ ಸಿಗದಿರುವುದು ಸಂಸ್ಕಾರ ಮತ್ತು ಶಿಕ್ಷಣ ಮಾತ್ರ. ಎಲ್ಲಾ ಶಾಲೆಗಳೂ ಬುದ್ದಿವಂತ ಮಕ್ಕಳನ್ನು ಉತ್ಪಾದಿಸುವ ಕಾರ್ಖಾನೆಗಳಾಗಿ ಬೆಳೆದು ನಿಂತಿದೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಲೇಬೇಕು.


ಎಲ್ಲರಿಗೂ 90% ಶೇಕಡಾಕ್ಕಿಂತ ಜಾಸ್ತಿ ಅಂಕಗಳು, ಜೀವನದ ಶಿಕ್ಷಣ ಬಿಟ್ಟು ಬರೀ ಮಾರ್ಕ್‍ಗಳಲ್ಲಿ ವಿದ್ಯಾರ್ಥಿಯ ಬುದ್ದಿಮತ್ತೆಯನ್ನು ಮಾಪನ ಮಾಡುವ ಕೆಲಸ ಎಲ್ಲಾ ಶಾಲೆಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ. ಗುರುಶಿಷ್ಯರ ಸಂಬಂಧವೂ ಹಳಸದೆ. ಎಲ್ಲವೂ ಕೊಟ್ಟುಕೊಳ್ಳುವ ವ್ಯವಹಾರವಾಗಿ ಮಾರ್ಪಾಡಾಗಿರುವುದು ದೌರ್ಭಾಗ್ಯದ ಸಂಗತಿ. ಈ ಕಾರಣದಿಂದಲೇ ಸರಕಾರಿ ಶಾಲೆಗಳು ಇನ್ನೂ ತನ್ನ ಜೀವಂತಿಕೆ ಉಳಿಸಿದೆ ಎಂದರೂ  ತಪ್ಪಾಗಲಾರದು. ಅಲ್ಲಿ ಬರೀ ಸರಕಾರದಿಂದ ಉಚಿತವಾಗಿ ಸಿಗುವ ಊಟ ಮತ್ತು  ಯೂನಿಫಾರಂ ಮಾತ್ರ ಸಿಗುತ್ತದೆ. ಶಾಲೆಯಿಂದ ಖರೀದಿಸಲೇ ಬೇಕು ಎಂಬ ಒತ್ತಡವೂ ಇಲ್ಲ. ಇಂತಹ ಒಂದು ಮಹತ್ತರ ಕಾಲಘಟ್ಟದಲ್ಲಿ ಇರುವಾಗ ನಮಗೆ ಪದೇ ಪದೇ  ನೆನಪಾಗುವುದು ನಾವು ಕಲಿತ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳು ಮತ್ತು ನಮ್ಮನ್ನು ಪ್ರೀತಿ ಮಮತೆಯ ವಾತ್ಸಲ್ಯದಿಂದ ತಿದ್ದಿ ತೀಡಿ ಸಲುಹಿದ ನಳಿನಿ ಟೀಚರ್ ಅವರಂತ ಹೃದಯವಂತ ಶಿಕ್ಷಕ ಮತ್ತು ಶಿಕ್ಷಕಿಯರು.


ಇವತ್ತಿನ  ಈ ಶಿಕ್ಷಕರ  ದಿನಾಚರಣೆಯ ಸಂದರ್ಭದಲ್ಲಿ ಸಮಾಜದ ಮತ್ತು ಶಿಷ್ಯಂದಿರ ಒಳಿತಿಗಾಗಿ ಶ್ರೀಗಂಧದ ಕೊರಡಿನಂತೆ ತಮ್ಮನ್ನೇ ಧಾರೆಯೆರೆದುಕೊಳ್ಳುವ ನಳಿನಿ ಟೀಚರ್ ಅವರಂತಹ ಶಿಕ್ಷಕ-ಶಿಕ್ಷಕಿಯರು ಮತ್ತು ಎಲ್ಲಾ ಸಭ್ಯ ಸಂಭಾವಿತ ಹೃದಯವಂತ ಗುರುಗಳಿಗೆ  ವಂದಿಸೋಣ ಮತ್ತು ಸ್ಮರಿಸೋಣ. ಹಾಗಾದಲ್ಲಿ ಮಾತ್ರ ಶ್ರೀ ಸರ್ವಪಳ್ಳಿ ಡಾ|| ರಾಧಾಕೃಷ್ಣ ಇವರ ಜನ್ಮ ದಿನದ ಅಂಗವಾಗಿ ನಡೆಸುವ ಶಿಕ್ಷಕರ ದಿನಾಚರಣೆಗೆ ಹೆಚ್ಚಿನ ಮೌಲ್ಯ ಬರಬಹುದು.


-ಡಾ|| ಮುರಲೀ ಮೋಹನ್ ಚೂಂತಾರು


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post