|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗ್ಯಾಂಗ್ ರೇಪ್, ಪುರುಷ ಪ್ರಧಾನ ಮಾನಸಿಕತೆ, ಸ್ವಾತಂತ್ರ್ಯ, ಸ್ವೇಚ್ಛೆ ಇತ್ಯಾದಿ

ಗ್ಯಾಂಗ್ ರೇಪ್, ಪುರುಷ ಪ್ರಧಾನ ಮಾನಸಿಕತೆ, ಸ್ವಾತಂತ್ರ್ಯ, ಸ್ವೇಚ್ಛೆ ಇತ್ಯಾದಿ

 



ಅತ್ಯಾಚಾರವನ್ನು ಯಾವ ನಾಗರಿಕ ಸಮಾಜ ಕೂಡ ಸಮರ್ಥನೆ ಮಾಡಬಾರದು. ಮೈಸೂರಿನ ಗ್ಯಾಂಗ್ ರೇಪ್ ಆರೋಪಿಗಳ  ಬಂಧನವು ಆಗಿದೆ. ಅವರಿಗೆ ಅತ್ಯಂತ ಕಠಿಣವಾದ ಶಿಕ್ಷೆ ಆಗಲಿ ಎನ್ನುವುದು ನಮ್ಮ ಪ್ರಾರ್ಥನೆ. 


ಇಂತಹ ಪ್ರಕರಣಗಳು ಆಗುವಾಗ ಒಮ್ಮೆ ಸಮಾಜ, ಸರಕಾರ, ಮಾಧ್ಯಮಗಳು ಬೆಚ್ಚಿ ಬೀಳುತ್ತವೆ. ಮತ್ತೆ ಕೆಲವೇ ದಿನಗಳಲ್ಲಿ  ಮರೆತೇ ಬಿಡುತ್ತವೆ. ಇಲ್ಲಿ ಹಾಗಾಗದೇ ಇರಲಿ. 


ಅತ್ಯಾಚಾರಕ್ಕೆ ಒಳಗಾದ ಹುಡುಗಿ ತನ್ನ ಜೀವನ ಪೂರ್ತಿ ಮಾನಸಿಕವಾಗಿ  ಜರ್ಜರಿತವಾಗಿ ಬದುಕುವಾಗ ಅದಕ್ಕೆ ಕಾರಣರಾದವರು 5-7 ವರ್ಷ ಮಾತ್ರ ಜೈಲುವಾಸ ಅನುಭವಿಸುವುದು, ಮತ್ತೆ ಹೊರಬಂದು ತಮ್ಮ ಹಳೆಯ ಚಾಳಿಗಳನ್ನು  ಮುಂದುವರೆಸುವುದು ಖಂಡಿತವಾಗಿ ಸರಿಯಲ್ಲ. ಅತ್ಯಾಚಾರದ ಪ್ರಕರಣಗಳಲ್ಲಿ   ಆಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ಆಗಬೇಕು ಎನ್ನುವುದು ನಮ್ಮೆಲ್ಲರ ಆಶಯ ಆಗಬೇಕು.


ಅವರನ್ನು ಎನ್ಕೌಂಟರ್ ಮಾಡಿ ಸಾಯಿಸಿ ಹೀಗೆಲ್ಲ ಹೇಳಿಕೆ ಕೊಡುವವರು ಇದ್ದಾರೆ. ದೇಶದ ಕಾನೂನನ್ನು ಗೌರವಿಸುವವರು ಹಾಗೆ ಹೇಳುವುದಿಲ್ಲ! 


ಅತ್ಯಾಚಾರಗಳು ಸಮಾಜದ ಪುರುಷ ಪ್ರಧಾನವಾದ  ಮಾನಸಿಕತೆಯ ಪ್ರತೀಕ ಎನ್ನುವವರು ಕೂಡಾ ಇದ್ದಾರೆ. ಅದನ್ನು ಕೂಡ ನಾನು ಒಪ್ಪುವುದಿಲ್ಲ. ಅವುಗಳು ಕೇವಲ ವಿಕೃತ ಮನಸ್ಸಿನ ಪ್ರತೀಕಗಳು. ಕುಡಿತ, ಧೂಮಪಾನ, ಡ್ರಗ್ಸ್ ಮೊದಲಾದ ವ್ಯಸನಗಳು, ಸಾಮಾಜಿಕ ಜಾಲತಾಣಗಳು ಹರಡುವ ವಿಕೃತ ಮನಸ್ಥಿತಿ, ಸ್ವೇಚ್ಚೆಯ ಹೆಸರಿನಲ್ಲಿ ಹಾದಿ

ತಪ್ಪುತ್ತಿರುವ ಯುವಕ ಯುವತಿಯರು, ಮಕ್ಕಳು ಮಾಡಿದನ್ನೆಲ್ಲ ಸಮರ್ಥನೆ ಮಾಡಲು ಹೊರಡುವ ಪೋಷಕರು ಇವರೆಲ್ಲರೂ ಅತ್ಯಾಚಾರದ ಪ್ರಕರಣಗಳಿಗೆ ಪರೋಕ್ಷವಾಗಿ ಕಾರಣರಾಗುತ್ತಾರೆ. 


ಕ್ಯಾರೆಕ್ಟರ್ ಅನ್ನುವುದು ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಅದು ಗಂಡು ಮಕ್ಕಳಿಗೆ ಕೂಡ ಅನ್ವಯ ಆಗುತ್ತದೆ. ಹೆಣ್ಣು ಮಕ್ಕಳಿಗೆ ಬಿಗಿ ಬಂಧನಗಳನ್ನು ಹಾಕಿ ಗಂಡು ಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯ ಕೊಡುವ ಪೋಷಕರನ್ನು ನಾನು ನೋಡಿದ್ದೇನೇ. ಅದು ಖಂಡಿತ ತಪ್ಪು. ತುಂಬಾ ತಡವಾಗಿ ಮನೆಗೆ ಬರುವ ಮಗಳನ್ನು ಕಾರಣ ಕೇಳುವ ಅಪ್ಪ ಅಮ್ಮಂದಿರು ಗಂಡು ಮಕ್ಕಳಿಗೆ ಕೂಡ ಕಾರಣ ಕೇಳಬೇಕು ಅಲ್ವಾ?  


ಗೆಳೆಯ ಗೆಳತಿಯರಾಗಲಿ, ಪ್ರೇಮಿಗಳಾಗಲಿ ರಾತ್ರಿ ಕತ್ತಲಾದ ನಂತರ ನಿರ್ಜನ ಪ್ರದೇಶ ಹುಡುಕಿಕೊಂಡು ಹೋಗುವ ಅಗತ್ಯ ಇದೆಯಾ? ಇಡೀ ಜಗತ್ತಿಗೆ ಸಿಸಿ ಕ್ಯಾಮರಾ ಹಾಕಿಕೊಂಡು ಪೊಲೀಸರು ಕಾವಲು ಕಾಯಲು ಸಾಧ್ಯ ಇದೆಯಾ? ಎಲ್ಲವನ್ನೂ ಪೊಲೀಸರ ತಲೆಗೆ ಕಟ್ಟಿ, ಬೇಕಾಬಿಟ್ಟಿ ಹೇಳಿಕೆಗಳನ್ನು ಕೊಡುವ ನಮ್ಮ ರಾಜಕೀಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. 


ಜಗತ್ತಿನ ಎಲ್ಲಿ ಅತ್ಯಾಚಾರ ನಡೆದರೂ ಅದನ್ನು ನಾನು ಬಲವಾಗಿ ಖಂಡಿಸುತ್ತೇನೆ, ಸಂತ್ರಸ್ತೆಗೆ ನ್ಯಾಯವನ್ನು ಕೊಡಿಸುತ್ತೇವೆ ಎಂದು ಮಂತ್ರಿಗಳು, ಶಾಸಕರು ತುಂಬಾ ಗಟ್ಟಿಯಾಗಿ ಹೇಳಬೇಕು. 


ಅದನ್ನು ಬಿಟ್ಟು ಸಮಾಜವನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಬಾರದು. ರೇಪ್ ನಡೆದಾಗ ಅದರಲ್ಲಿ ತಮ್ಮ ರಾಜಕೀಯ ಲಾಭ ಪಡೆಯಲು ಪ್ರಯತ್ನ ಮಾಡುವರು ಕೂಡ ಅಪರಾಧಿಗಳು ಅಲ್ಲವೇ? 


ಇನ್ನು ಒಂದು ಪ್ರಮುಖವಾದ ಮಾತನ್ನು ಹದಿಹರೆಯದ ಮಕ್ಕಳ ಅಪ್ಪನಾಗಿ ನಾನು ಹೇಳಬೇಕು. ಸ್ವಾತಂತ್ರ್ಯ ಮತ್ತು ಸ್ವೇಚ್ಛೆಗಳ ನಡುವೆ ತುಂಬಾ ದೊಡ್ಡ ವ್ಯತ್ಯಾಸ ಇದೆ.  


ನಮ್ಮ ಮಕ್ಕಳ ಮೇಲೆ ನಮಗೆ ನಂಬಿಕೆ ಇದೆ. ಅವರು ಎಲ್ಲಿ ಬೇಕಾದರೂ ಹೋಗಬಹುದು. ಎಷ್ಟು ಲೇಟ್ ಆದರೂ ಮನೆಗೆ ಬರಬಹುದು. ನನ್ನ ಮಕ್ಕಳ ನಿಜವಾದ ಅಗತ್ಯಕ್ಕಿಂತ ಹೆಚ್ಚು ಪಾಕೆಟ್ ಮನಿ ಕೊಡ್ತೇವೆ. ನನ್ನ ಮಗ, ಮಗಳು ಮಧ್ಯರಾತ್ರಿ ಕಳೆದು ಎಷ್ಟು ಲೇಟ್ ಆದ್ರೂ ಆನ್ಲೈನ್ ಇರುತ್ತಾರೆ. ಅದನ್ನು ಪ್ರಶ್ನೆ ಮಾಡಲು ನೀವ್ಯಾರು? ತನ್ನ ಇಷ್ಟ ಪಡುವ ಗೆಳೆಯ, ಗೆಳತಿಯರ ಜೊತೆಗೆ ಬಾರ್, ಪಬ್, ರೆಸಾರ್ಟ್ಸ್, ಡ್ಯಾನ್ಸಿಂಗ್ ಬಾರ್, ಹುಕ್ಕಾ ಬಾರಗಳಿಗೆ ಹೋದರೆ ಏನು ತಪ್ಪು? ಅವರು ನಮ್ಮ ಕಾಲದವರ ಹಾಗೆ ಮನೆಯ ಮೂಲೆಯಲ್ಲಿ ಕಳೆದುಹೋಗಬೇಕೆ? ಹೀಗೆಲ್ಲ ಪ್ರಶ್ನೆ ಮಾಡುವ ತುಂಬಾ ಅಡ್ವಾನ್ಸ್ ಆದ ಪೋಷಕರನ್ನು ನಾನು ನೋಡಿರುವೆ.  ಅಂತವರು ಎಲ್ಲಾ ಕಾಲ ಮಿಂಚಿ ಹೋದ ನಂತರ ಅಯ್ಯೋ! ಎಂದು ಕಣ್ಣೀರನ್ನು ಸುರಿಸುತ್ತಾ ಸರಕಾರವನ್ನು, ಪೊಲೀಸರನ್ನು ಬಯ್ಯಬಾರದು ಅಲ್ಲವೇ? ನಮ್ಮ ಮಾಧ್ಯಮಗಳಿಗೂ ಅತ್ಯಾಚಾರವು ಪ್ರಮುಖ TRP ಸರಕು ಆಗಬಾರದು.  


ನನ್ನ ಟಿವಿ ಕಾರ್ಯಕ್ರಮಕ್ಕೆ ಬಂದಿದ್ದ ಕಾಲೇಜು ಹುಡುಗಿ ಒಬ್ಬಳು ವಿಚ್ಛೇದನ ಅನ್ನುವುದು ಸ್ತ್ರೀ ಸ್ವಾತಂತ್ರ್ಯದ ಪ್ರತೀಕ ಅಂದಿದ್ದಳು. ಸ್ವಲ್ಪ ಮಟ್ಟಿಗೆ ಅದನ್ನಾದರೂ ಒಪ್ಪೋಣ. 


ಸಿನೆಮಾ ನಟಿ ಒಬ್ಬಳು ಮೂರು ಬಾರಿ ಮದುವೆಯಾದಳು ಅಂದಾಗ ಇನ್ನೊಬ್ಬಳು ಮಾಡರ್ನ್ ಹುಡುಗಿ ಅದು ಅವಳ ಪರ್ಸನಲ್ ಲೈಫ್ ಅಲ್ವಾ? ಅವಳದ್ದು ಏನೂ ತಪ್ಪಿಲ್ಲ ಅಂದಿದ್ದಳು! ಅದನ್ನು ಕೂಡ ಸ್ವಲ್ಪ ಮಟ್ಟಿಗೆ ಒಪ್ಪಬಹುದು. 


ಮೂರು ಮದುವೆಯಾಗಿ ಸುಖವನ್ನು ಅನುಭವಿಸಿದ ದಕ್ಷಿಣ ಭಾರತದ ಖ್ಯಾತ ನಟ ಒಬ್ಬ ನಾಲ್ಕನೇ ಹೆಂಗಸಿನ ಸೆರಗನ್ನು ಹಿಡಿದು ಲಿವಿಂಗ್ ಟುಗೆದರ್ ರಿಲೇಶನ್ ಹೊಂದುತ್ತಾನೆ. ಅವನ ಮಗಳು (ಅವಳು ಕೂಡ ಸಿನೆಮಾ ನಟಿ) ನನಗೆ ಕೂಡ ಅಪ್ಪನ ಹಾಗೆ ಮದುವೆಗಳಲ್ಲಿ ನಂಬಿಕೆಯೇ ಇಲ್ಲ ಎಂದು ಹೇಳುತ್ತಾಳೆ! ಅವರೆಲ್ಲರೂ ಸೆಲೆಬ್ರಿಟಿಗಳು, ಅವರನ್ನು ಫಾಲೋ ಮಾಡುವ ಬಹುದೊಡ್ಡ ಯುವಪಡೆ ಇದೆ ಅನ್ನುವುದನ್ನು ನಾವು ಯಾರೂ ಮರೆಯಬಾರದು. ಇಂಥವರ ನಡೆ ನುಡಿಗಳನ್ನು ಬ್ಲೈಂಡ್ ಆಗಿ ಸಮರ್ಥನೇ ಮಾಡುವ ಹಾಗೂ ಕಾಪಿ ಮಾಡುವ ಯುವಕ, ಯುವತಿಯರು ನಮಗೆ ಎಲ್ಲಾ ಕಾಲೇಜುಗಳಲ್ಲಿ ಸಿಗುತ್ತಾರೆ! 


ಇನ್ನೂ ಒಬ್ಬ ಕಾಲೇಜು ಹುಡುಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಅಪ್ಪ ನನ್ನ ಅಮ್ಮನ ಜೊತೆಗೆ ಮೂವತ್ತು ವರ್ಷಗಳ ಕಾಲ ಅದು ಹೇಗೆ ಜೊತೆಯಾಗಿ ಬದುಕಿದರೋ? ನನಗೆ ಅವರ ಬಗ್ಗೆ ಅಯ್ಯೋ ಪಾಪ ಅನ್ನಿಸುತ್ತದೆ ಎಂದು ಹೇಳಿ ಕಾಲೇಜು ವೇದಿಕೆಯಲ್ಲಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ! 


ಮದುವೆಯಾದ ಗಂಡ, ಹೆಂಡತಿಯರು ಪರಸ್ಪರ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಮೆಟ್ಟಿ ನಿಂತು 30-40 ವರ್ಷಗಳ ಕಾಲ ಜೊತೆಯಾಗಿ ಬದುಕಿದ ನೂರಾರು ಉದಾಹರಣೆಗಳು ಒಂದೆಡೆ!


ಅದ್ದೂರಿಯಾಗಿ ಮದುವೆ ಮಾಡಿಕೊಟ್ಟ ಅಪ್ಪ ಅಮ್ಮನ ಮುಂದೆ ಬಂದು (ಮದುವೆಯಾದ  ಕೇವಲ ಒಂದೆರಡು ತಿಂಗಳಲ್ಲಿ) ಅವನ ಬಗ್ಗೆ ಇಷ್ಟುದ್ದ ಚಾಡಿ ಹೇಳಿ ಮದುವೆ ಮುರಿಯಲು ಸಿದ್ದರಾಗುವ ಹೆಣ್ಮಕ್ಕಳು ಇನ್ನೊಂದೆಡೆ!


ಇಷ್ಟವಾಗದ ಗಂಡನ ಜೊತೆಗೆ ಜೀವನ ಪೂರ್ತಿಯಾಗಿ ಬದುಕಲು ನಾನು ನನ್ನ ಅಮ್ಮ ಅಲ್ಲ ಎಂದು ಧಿಮಾಕು ತೋರುವ ಮಗಳು ಮತ್ತೊಂದು ಕಡೆ! 


ಐವತ್ತು ವರ್ಷಗಳ ದಾಂಪತ್ಯವನ್ನು ಯಶಸ್ವೀ ಆಗಿ ಪೂರೈಸಿದ ಹೆಂಡತಿ ತೀರಿ ಹೋದಾಗ ಪುಟ್ಟ ಮಗುವಿನ ಹಾಗೆ ಜೋರಾಗಿ ಕಣ್ಣೀರು ಸುರಿಸಿದ ಗಂಡ ಇನ್ನೊಂದು ಕಡೆ! 


ಮದುವೆಯ ಮೊದಲ ರಾತ್ರಿಯೇ ನನ್ನ ಮೈ ಮುಟ್ಟಿದರೆ ಜಾಗ್ರತೆ, ನಾನು ಬೇರೆ ಒಬ್ಬನನ್ನು ಪ್ರೀತಿ ಮಾಡ್ತಾ ಇದ್ದೇನೆ. ಹೆತ್ತವರ ಒತ್ತಾಯಕ್ಕೆ ನಾನು ಈ ಮದುವೆ  ಆಗಬೇಕಾಯಿತು. ನನಗೆ ಡೈವೋರ್ಸ್ ಬೇಕು ಎಂದು ಕೇಳುವ ಹುಡುಗಿ ಇನ್ನೊಂದೆಡೆ! 

ಸಮಾಜ ಯಾವ ಕಡೆ ಹೋಗ್ತಾ ಇದೆ? 

- ರಾಜೇಂದ್ರ ಭಟ್ ಕೆ,

ಜೇಸಿಐ ರಾಷ್ಟ್ರಮಟ್ಟದ ತರಬೇತುದಾರ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post