ಬಾಕಾಹು ಬೆಲ್ಲದ ಪೇಡಾ
ಪಾಕ: ರಘು ಆರ್.ಎಸ್, ಕುಲಂಬಿ- 95352 82617
ಬೇಕಾಗುವ ಸಾಮಗ್ರಿ: ಬಾಕಾಹು (ಬಾಳೆಕಾಯಿ ಹಿಟ್ಟು)- 100 ಗ್ರಾಮ್, ಸಾವಯವ ಬೆಲ್ಲ- 250 ಗ್ರಾಮ್, ನಂದಿನಿ ಹಾಲಿನ ಹುಡಿ - 100 ಗ್ರಾಮ್, ಹದವಾಗಿ ಬಲಿತ ತೆಂಗಿನಕಾಯಿಯ ತುರಿ 2 ಕಪ್, ಹುರಿದ ಬಾದಾಮಿ ಹುಡಿ- 10 ಗ್ರಾಮ್, ಹುರಿದ ಗೋಡಂಬಿ ಹುಡಿ- 10 ಗ್ರಾಮ್, ಹುರಿದ ಏಲಕ್ಕಿ ಹುಡಿ- 5 ಗ್ರಾಮ್
ಮಾಡುವ ವಿಧಾನ: ಬಾಣಲೆಯಲ್ಲಿ ಬಾಕಾಹು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ತೆಂಗಿನ ತುರಿಗೆ ನೀರು ಹಾಕದೆ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ ಬಾಣಲೆಯಲ್ಲಿ ಅದರ ತೇವಾಂಶ ಪೂರ್ತಿ ಹೋಗುವ ಹಾಗೆ ಬಾಡಿಸಿ. ಇದನ್ನೂ ಹುರಿದ ಬಾಕಾಹು ಹುಡಿಯನ್ನೂ ಚೆನ್ನಾಗಿ ಮಿಶ್ರ ಮಾಡಿ.
ಬೆಲ್ಲ ಪುಡಿ ಮಾಡಿ ಅದಕ್ಕೆ 25 ಮಿ.ಲೀ ನೀರು ಸೇರಿಸಿ ಕುದಿಯಲು ಇಡಿ. ಬೆಲ್ಲ ಕರಗಿದಾಗ ಸಣ್ಣ ಉರಿ ಮಾಡಿ ಅದಕ್ಕೆ ಮಾಡಿಟ್ಟ ಮಿಶ್ರಣ ಸೇರಿಸಿ ಕೈಬಿಡದೆ ತಿರುವುತ್ತಿರಿ. ಮಿಶ್ರಣ ಬಾಣಲೆ ಬಿಟ್ಟು ಬರಲು ಸುರುವಾದಾಗ, ಅದಕ್ಕೆ ಬಾದಾಮಿ, ಏಲಕ್ಕಿ, ಗೋಡಂಬಿಗಳ ಪುಡಿ ಮತ್ತು ಹಾಲಿನ ಹುಡಿ ಸೇರಿಸಿ. ಎರಡು ನಿಮಿಷ ಚೆನ್ನಾಗಿ ತಿರುವಿ. ಪಾಕ ಚೆನ್ನಾಗಿ ತಣಿಯಲಿ.
ನಂತರ, ಉಂಡೆ ಮಾಡಿ ಹಾಲಿನ ಪುಡಿಯಲ್ಲಿ ಉರುಳಿಸಿ ಡ್ರೈ ಫ್ರುಟ್ ಸೇರಿಸಿ ಅಲಂಕಾರ ಮಾಡಿ.
*****
ಬಾಕಾಹು ಬೆಲ್ಲದ ಬೂಂದಿ
ಪಾಕ: ರಘು ಆರ್. ಎಸ್, ಕುಲಂಬಿ
ಬೇಕಾಗುವ ಸಾಮಗ್ರಿಗಳು: ಬಾಕಾಹು (ಬಾಳೆಕಾಯಿ ಹಿಟ್ಟು)- 250 ಗ್ರಾಮ್, ಸಾವಯವ ಬೆಲ್ಲ- 250 ಗ್ರಾಮ್, ಹುರಿದ ಕೊಬ್ಬರಿ ಪುಡಿ - 2 ಕಪ್, ಹುರಿಗಡಲೆ ಪುಡಿ - 50 ಗ್ರಾಮ್, ಬಾದಾಮಿ ಪುಡಿ- 25 ಗ್ರಾಮ್, ಗೋಡಂಬಿ ಪುಡಿ- 50 ಗ್ರಾಮ್, ಒಣಶುಂಠಿ ಪುಡಿ- 5 ಗ್ರಾಮ್, 5- 6 ಲವಂಗದ ಪುಡಿ, 15 ಏಲಕ್ಕಿಯ ಪುಡಿ, ಒಂದು ಚಿಟಿಕೆ ಕೇಸರಿ ಬಾತ್ ಮಾಡುವ ಬಣ್ಣ, 150 ಮಿ.ಲೀ. ಬಿಸಿನೀರು, ಚಿಟಿಕೆ ಉಪ್ಪು, ಕರಿಯಲು ಎಣ್ಣೆ
ಮಾಡುವ ವಿಧಾನ: ಬಾಕಾಹು ಪುಡಿಗೆ ಉಪ್ಪು, ಬಿಸಿನೀರು, ಬಣ್ಣವನ್ನು ಮಿಶ್ರ ಮಾಡಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಅನಂತರ ಎಣ್ಣೆಯನ್ನು ಬಿಸಿಯಾಗಲು ಇಡಿ. ಚಕ್ಕುಲಿ ಒರಳಿಗೆ ಚಿಕ್ಕಚಿಕ್ಕ ರಂಧ್ರವಿರುವ ಬಿಲ್ಲೆ ಹಾಕಿ ಕಾದ ಎಣ್ಣೆಗೆ ಇದನ್ನು ಒತ್ತಿ. ಚೆನ್ನಾಗಿ ಗರಿ ಗರಿಯಾಗಿ ಕರಿದು ಒಂದು ಕಡೆ ಹಿಟ್ಟುಕೊಳ್ಳಿ.
ನೀರನ್ನು ಪಾತ್ರೆಗೆ ಹಾಕಿ, ಬೆಲ್ಲ ಸೇರಿಸಿ ದಾರದಂತೆ ಪಾಕ ಬರುವ ಹಾಗೆ ಕುದಿಸಿ. ಅದಕ್ಕೆ ಬಾದಾಮಿ ಪುಡಿ, ಗೋಡಂಬಿ ಪುಡಿ, ಏಲಕ್ಕಿ ಪುಡಿ, ಲವಂಗ ಪುಡಿ ಮತ್ತು ಶುಂಠಿ ಪುಡಿ ಎಲ್ಲವನ್ನೂ ಸೇರಿಸಿ. ಕರಿದಿಟ್ಟುಕೊಂಡಿರುವ ಬಾಕಾಹು ಶ್ಯಾವಿಗೆಯನ್ನು ಪುಡಿ ಮಾಡಿ ಹಾಕಿ ಅದಕ್ಕೆ ಹುರಿಗಡಲೆ ಪುಡಿ, ಕೊಬ್ಬರಿ ಪುಡಿ ಸೇರಿಸಿ ಚಿಕ್ಕಚಿಕ್ಕ ಉಂಡೆ ಮಾಡಿ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ