ಬಾಕಾಹು ಕಾರ್ಯಾಗಾರ ಸಂಘಟಿಸಿದ ಹುಳಗೋಳ ಸೊಸೈಟಿ ಅಧ್ಯಕ್ಷ ವಿ.ಎಸ್. ಹೆಗಡೆ ಅಭಿಪ್ರಾಯ
"ಮೈದಾ, ಗೋಧಿ ಮತ್ತು ಕಡ್ಲೆಹುಡಿ ಇತ್ಯಾದಿ ದೊಡ್ಡದೊಡ್ದ ಮಿಲ್ಲುಗಳಿಂದ ಬರುತ್ತವೆ. ಇವುಗಳ ಬಳಕೆ ಕಡಿಮೆ ಮಾಡಿ, ಆ ಜಾಗವನ್ನು ಬಾಕಾಹು (ಬಾಳೆಕಾಯಿ ಹುಡಿ/ ಹಿಟ್ಟು) ವಿನಿಂದ ತುಂಬುವ ಟ್ರೆಂಡ್ ನಮ್ಮಲ್ಲಿ ಸುರುವಾಗಿದೆ. ಮಿಲ್ಲಿನ ಉತ್ಪನ್ನಗಳಲ್ಲಿ ಏನೇನು ಸೇರಿರುತ್ತದೆಂದು ಗೊತ್ತಿರುವುದಿಲ್ಲ. ನಾವೇ ಬೆಳೆದ ಉತ್ಪನ್ನವನ್ನು ಸವಿಯುವ ಖುಷಿಗೆ ಬೆಲೆ ಕಟ್ಟಲೂ ಸಾಧ್ಯವಿಲ್ಲ."
ಇದು ಭೈರುಂಬೆಯ ಹುಳಗೋಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿ.ಎಸ್.ಹೆಗಡೆ (70) ಕೆಶಿನ್ಮನೆಯವರಿಗೆ ಕಂಡ ಒಳನೋಟ. ಆಗಸ್ಟ್ 23ಕ್ಕೆ ಈ ಸಂಘ ಭೈರುಂಬೆಯಲ್ಲಿ ನಡೆಸಿದ ’ಬಾಕಾಹು ಕಾರ್ಯಾಗಾರ’ ನಿರೀಕ್ಷೆಗೆ ಮೀರಿ ಯಶಸ್ವಿ ಆಗಿತ್ತು.
"ಬಾಕಾಹುವಿನಲ್ಲಿ ಅಡ್ಡ ವಾಸನೆಯಾಗಲೀ, ಋಣಾತ್ಮಕ ಎನಿಸುವ ಅಂಶ ಯಾವುದೂ ಇಲ್ಲ. ನಮ್ಮ ಮಂದಿಗೆ ಇದರ ಆರೋಗ್ಯ ಗುಣಗಳು ಓದಿ ಮಾತ್ರ ಗೊತ್ತು. ಸುರಿಮನೆ ವಿ.ಜಿ. ಹೆಗಡೆಯಂತವರು ಇದು ಉತ್ತಮ ಎಂದು ಮನಗಂಡು ತಮ್ಮ ರಾತ್ರಿಯೂಟಕ್ಕೆ ಖಾಯಮ್ಮಾಗಿ ಬಳಸಲು ತೊಡಗಿದ್ದಾರೆ. ಜೋಳದ ರೊಟ್ಟಿಗೆ ಅರ್ಧಪಾಲು ತಮ್ಮದೇ ಬಾಳೆಕಾಯಿಯ, ತಾವೇ ಮಾಡಿದ ಹಿಟ್ಟು ಸೇರಿಸಿಕೊಳ್ಳುತ್ತಾರೆ."
"ಫ್ಯಾಶನ್ ಅಥವಾ, ದಿನಬಳಕೆಯ ಐಶಾರಾಮಿ ವಸ್ತುಗಳ ವಿಚಾರಗಳಲ್ಲಾಗುವಷ್ಟು ಕ್ಷಿಪ್ರ ಬದಲಾವಣೆ ಆಹಾರ ಪದ್ಧತಿ ಅಥವಾ ಕೃಷಿಕ್ರಮಗಳಲ್ಲಿ ಆಗುವುದಿಲ್ಲ." ನಾಲ್ಕು ದಶಕದ ಸಹಕಾರಿ- ಕೃಷಿಕ್ಷೇತ್ರದ ಸಕ್ರಿಯ ಚಟುವಟಿಕೆ ವಿಶ್ವೇಶ್ವರ ಸೀತಾರಾಮ (ವಿಎಸ್) ಹೆಗಡೆ ಅವರಿಗೆ ಈ ವಾಸ್ತವವನ್ನು ಶ್ರುತಪಡಿಸಿದೆ.
"ಈಗಿನ ಪೀಳಿಗೆಯವರಿಗೆ ಸುಲಭದಲ್ಲಿ ಕೈಗೆಟಕುವ ಹೊಸಹೊಸ ಮಾಹಿತಿಗಳ ಪಾತ್ರ ಇದೆ" ಎಂದು ಇವರು ವಿಶ್ಲೇಷಿಸುತ್ತಾರೆ. ಈ ಕಾರಣವೂ ಸೇರಿಕೊಂಡು, ಸಾಂಪ್ರದಾಯಿಕವಾಗಿ 'ನಿಧಾನವೇ ಪ್ರಧಾನ' ಆಗಿರುವ ತಮ್ಮೂರಿನಲ್ಲಿ ಬಾಕಾಹು ವಿದ್ಯೆ ತಂದಿರುವ ಅಭೂತಪೂರ್ವ ವೇಗದ ಪ್ರಸರಣ ವಿಶ್ವೇಶ್ವರ ಅವರಿಗೆ ಸಂತಸ ತಂದಿದೆ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ