ಮಂಗಳೂರಿಗೆ ರಾಷ್ಟ್ರಪತಿಗಳ ಭೇಟಿ, ಅ.7-8ರಂದು ನಗರದಲ್ಲಿ ವಾಸ್ತವ್ಯ

Upayuktha
0

ಶಿಷ್ಟಾಚಾರದಂತೆ ಅಗತ್ಯ ಕ್ರಮ- ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಶೃಂಗೇರಿಗೆ ತೆರಳುವ ಮಾರ್ಗದಲ್ಲಿ ಜಿಲ್ಲೆಗೆ ಭೇಟಿ


ಮಂಗಳೂರು: ಮುಂಬರುವ ಅಕ್ಟೋಬರ್ 6 ರಿಂದ 9 ರವರೆಗೆ ರಾಜ್ಯದ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಅವರು ಅ. 7 ಹಾಗೂ 8 ರಂದು ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿದ್ದು, ಅದಕ್ಕಾಗಿ ಶಿಷ್ಟಾಚಾರದಂತೆ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ತಿಳಿಸಿದರು.


ರಾಷ್ಟ್ರಪತಿಗಳ ರಾಜ್ಯ ಭೇಟಿಯ ಹಿನ್ನಲೆಯಲ್ಲಿ ಸೆ. 29ರ ಬುಧವಾರ ಬೆಂಗಳೂರಿನಿಂದ ಏರ್ಪಡಿಸಲಾಗಿದ್ದ ವಿಡಿಯೋ ಸಂವಾದದಲ್ಲಿ ಅವರು, ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ರಾಷ್ಟ್ರಪತಿಗಳ ತಂಗುವಿಕೆಗಾಗಿ ಕೈಗೊಳ್ಳುವ ಪೂರ್ವಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.


ಅಕ್ಟೋಬರ್ 7 ಮತ್ತು 8 ರಂದು ಜಿಲ್ಲೆಯಲ್ಲಿ ವಾಸ್ತವ್ಯ ಮಾಡುವ ರಾಷ್ಟ್ರಪತಿಗಳಿಗೆ, ಅವರ ಕಚೇರಿಯ ನಿರ್ದೇಶನ ಹಾಗೂ ಶಿಷ್ಟಾಚಾರದಂತೆ ವಾಸ್ತವ್ಯ, ಊಟೋಪಚಾರ ಹಾಗೂ ಅವರೊಂದಿಗೆ ಆಗಮಿಸುವ ಅಧಿಕಾರಿಗಳು, ಸಿಬ್ಬಂದಿಗಳಿಗೂ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುವುದು, ಅದಕ್ಕಾಗಿ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹವನ್ನು ಮತ್ತಷ್ಟು ಸ್ವಚ್ಛ ಪಡಿಸುವುದು, ಅಲ್ಲಿನ ಪಿಠೋಪಕರಣ, ಕರ್ಟನ್, ಅಡುಗೆ ಕೋಣೆ ಸೇರಿದಂತೆ ಅಲ್ಲಿನ ಅಗತ್ಯತೆಗಳನ್ನು ಪರಿಶೀಲಿಸಿ, ಉತ್ತಮ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು, ಅದೇ ರೀತಿ ಊಟೋಪಚಾರ ಸಿದ್ದಪಡಿಸಲು ಹಾಗೂ ಉಣಬಡಿಸಲು ಕೂಡ ಅನುಭವಿ ಪರಿಚಾರಕನ್ನು ನಿಯೋಜಿಸಲಾಗುವುದು, ಉಳಿದಂತೆ ಭದ್ರತೆ, ಏರ್‌ಪೋರ್ಟ್‌ನಿಂದ ಅವರು ವಾಸ್ತವ್ಯದ ಅತಿಥಿ ಗೃಹದ ವರೆಗೆ ಕರೆ ತರುವ ಹಾದಿಯಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಹಾಗೂ ಅತಿಥಿ ಗೃಹದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಲು ಆಗಾಗ ಭೇಟಿ ನೀಡಿ ತಪಾಸಣೆ ಮಾಡಲಾಗುವುದು ಎಂದರು.




ಅಂಬುಲೆನ್ಸ್, ವೈದ್ಯರ ತಂಡ ಸಿದ್ದವಿದೆ ಹಾಗೂ ಸಂಪರ್ಕ ರಸ್ತೆಗಳಲ್ಲಿ ದುರಸ್ತಿ ಇದ್ದಲ್ಲಿ ಕೂಡಲೇ ಮಾಡಿಸಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಲಾಗಿದೆ, ಮುಖ್ಯವಾಗಿ ಕೋವಿಡ್ ನಿಯಮಾವಳಿ ಅನ್ವಯ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುವುದು ಹಾಗೂ ರಾಷ್ಟ್ರಪತಿಗಳ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲಿ ಲೋಪಗಳಾಗದಂತೆ ಎಚ್ಚರ ವಹಿಸಲು ಲೈಸನಿಂಗ್  ಅಧಿಕಾರಿಗಳನ್ನು ನಿಯೋಜಿಸಲಾಗುವುದು, ಆಹಾರ ಸುರಕ್ಷತೆ ಅಧಿಕಾರಿಗಳು ಸ್ಥಳದಲ್ಲಿಯೇ ಇರಲಿದ್ದಾರೆ, ಮೆಸ್ಕಾಂನಿಂದ ವಿದ್ಯುತ್ ಕಡಿತವಾಗದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.


ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಡಿಸಿಪಿ ಹರಿರಾಮ್ ಶಂಕರ್, ಮೆಸ್ಕಾಂ ಎಂಡಿ ಪ್ರಶಾಂತ್ ಮಿಶ್ರ, ಸಹಾಯಕ ಆಯುಕ್ತ ಮದನ್ ಮೋಹನ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಯಶವಂತ್ ಸೇರಿದಂತೆ ಸಂಬಂಧಿಸಿದವರಿದ್ದರು.


ರಾಷ್ಟ್ರಪತಿಗಳು ಅ.8ರಂದು ಶೃಂಗೇರಿಗೆ ಭೇಟಿ ನೀಡಲಿರುವ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top