|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ನೆನಪುಗಳು

ಕವನ: ನೆನಪುಗಳು




****

ಸಾವಿರಕು ಮಿಗಿಲಾದ 

ಸಾವಿರದ ನೆನಪುಗಳು 

ಸಾವಧಾನದಿ ಇಂದು ಕಾಡುತಿಹುದು.

ನೋವುಗಳ ನಲಿವುಗಳ

ಭಾವಗಳು ಎನಿತೆನಿತು

ಆವರಿಸಿ ಮನಸನ್ನು ಸುಡುತಲಿಹುದು.


ಹರಿದ ಅರಿವೆಯ ತೊಟ್ಟು

ಬರಿದೆ ಕಾಲಿನ ನಡೆಯು

ಮುರಿದಂಥ ಕೊಡೆ ಹಿಡಿದ ನೆನಪೆನಗಿದೆ.

ಸಿರಿತನದ ತಿಳಿವಿಲ್ಲ 

ಬರಿದೆ ಬಡತನವೆಲ್ಲ 

ಅರಿವಿಲ್ಲ ಮಾನಾಪಮಾನಗಳಲಿ.


ಸರಕಾರಿ ಶಾಲೆಯಲಿ 

ತರತರದ ವೇಷದಲಿ 

ಹಿರಿಕಿರಿಯ ಗೆಳೆಯರಲಿ ಸಂಬಂಧವು

ಗುರುಗಳಲಿ ಭೀತಿಯೂ 

ಹಿರಿಯರಲಿ ಗೌರವವು 

ಸರಿಮಿಗಿಲು ಇರದಿರುವ ಆನಂದವು 


ಕೆರೆಗಳಲಿ ಮಿಂದೆದ್ದು 

ಸುರಿವ ಮಳೆಯಲಿ ತೊಯ್ದು 

ಹರಿದ ಪಂಚೆಯ ತುಂಡು ಲಂಗೋಟಿಯ

ಇರಿಸುಮುರಿಸಿಲ್ಲದೇ

ಧರಿಸಿ ಕೀಳ್ತನವಿರದೆ 

ತೊರೆದ ಅಹಂಭಾವದ ಬದುಕೆಮ್ಮದು. 


ಹಸಿದ ಹೊಟ್ಟೆಗೆ ಇನಿತು 

ಬಿಸಿಯ ಗಂಜಿಯ ಕುಡಿದು 

ಹೊಸತಾದ ಹುರುಪಿಂದ ಬದುಕಿದ್ದೆವು 

ಬಸವಳಿಯದೇ ಇರುವ

ಕಸುವಿತ್ತು ಕಾಯದಲಿ 

ರಸಭರಿತ ಜೀವನವು ನಮ್ಮದಿತ್ತು. 


ಸೋಗೆ ಮಾಡಿನ ಮನೆಯು 

ಆಗಾಗ ಸೋರಿದರು

ಹೇಗಾದರೂ ಒರೆಸಿ ಸುಧಾರಿಸುತ

ಬಾಗಿಯೇ ಒಳಬರುವ 

ಬಾಗಿಲೂ ಹೇಳಿತ್ತು  

ಬೀಗದಿರು ನೀನೆಂಬ ಸಂದೇಶವ


ಎತ್ತುಗಳ ಬಂಡಿಗಳೆ

ಸುತ್ತಾಡಿಸುತ್ತಿರುವ 

ಗತ್ತು ಗೌಜಿಯ ನಮ್ಮ ವಾಹನವು 

ಹತ್ತೂರ ಜಾತ್ರೆಯಲಿ

ಮತ್ತೆ ಸುಖ ಕಷ್ಟದಲಿ

ನಿತ್ಯವೂ ಜತೆ ಎಮಗೆ ಈ ಬಂಡಿಯು.


ಬೈಕು ಕಾರುಗಳಿನ್ನು

ಸಾಕಷ್ಟು ಇರಲಿಲ್ಲ

ಲೋಕದಲಿ ನಗರಗಳು ಹೆಚ್ಚಿಲ್ಲದೆ 

ಠೀಕಾಗಿ ನಡೆವಲ್ಲಿ 

ಬೇಕಷ್ಟು ಬಲವಿತ್ತು 

ಆ ಕಾಲು ದಾರಿಗಳೆ ರಾಜಮಾರ್ಗ. 


ಹಲಸು ಮಾವಿನ ಹಣ್ಣು 

ಹುಲುಸಾದ ಪೇರಲೆಯು 

ಬಲವ ಹೆಚ್ಚಿಸುವಂಥ ಬಾಳೆ ಹಣ್ಣು 

ಕಾಲಕಾಲಕೆ ಸಿಗುವ 

ಜಲಭರಿತ ಚಕ್ಕೋತ 

ನಾಲಗೆಯ ರುಚಿ ಜತೆಗೆ ಆರೋಗ್ಯವು. 


ನಾಟಕವು ಹರಿಕಥೆಯು 

ಸಾಟಿಯೇ ಇಲ್ಲದಿಹ

ನೋಟಕ್ಕೆ ರಂಜನೆಯ ಯಕ್ಷಗಾನ 

ಏಟುಗಳ ಭಯದಿಂದ 

ಓಟದಲಿ ತೊಡಗಿರುವ 

ಮಾಟ ದೇಹದ ಕೋಣಗಳ ಕಂಬಳ 


ಬಿಡದೆ ಛಲ ಅನವರತ

ಅಡಿಕೆ ತೆಂಗಿನ ಮರವ 

ದಡದಡನೆ ಏರುವುದೆ ಆಟವಂದು 

ಸುಡು ಬಿಸಿಲೊ ಬಿರುಮಳೆಯೊ

ಆಡುತಿದ್ದೆವು ಕಬಡಿ 

ದುಡಿಮೆಯನೆ ಆಟವಾಗಿಸುತಿದ್ದೆವು 


ಒಂದಲ್ಲ ಎರಡಲ್ಲ 

ಇಂದೆಮಗೆ ಕನಸೆಲ್ಲ

ಸುಂದರದ ಸಹಜತೆಯ ಬದುಕಿದ್ದಿತು 

ಬಂದ ಪಾಲೇ ನಮಗೆ 

ಚಂದ ಪಂಚಾಮೃತವು 

ಅಂದುಕೊಂಡೇ ನಾವು ಬದುಕಿದ್ದೆವು 


ಸಾಗುತಿದೆ ಕಾಲವದು

ಹೋಗಲಾಗದೆ ಹಿಂದೆ 

ಬಾಗುತಿದೆ ಕಾಯವೂ ಶಿಥಿಲವಾಗಿ 

ಹೆಗಲ ಮೇಲಿಂದ ತಾ

ನೊಗ ಕಳಚಿಕೊಂಡಿರುವ 

ಹಗಲಿರುಳು ದುಡಿದಿರುವ ಬಸವನಂತೆ.

**********

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم