|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೊಸ ಪುಸ್ತಕ: ಬಾಳೆಕಾಯಿ ಸೋತಾಗ ಊರುಗೋಲಾದ ‘ಬಾಕಾಹು’

ಹೊಸ ಪುಸ್ತಕ: ಬಾಳೆಕಾಯಿ ಸೋತಾಗ ಊರುಗೋಲಾದ ‘ಬಾಕಾಹು’



ಬಾಳೆಕಾಯಿ ಸೋತಾಗ ಊರುಗೋಲಾದ ‘ಬಾಕಾಹು’

ಲೇಖಕರು: ಶ್ರೀ ಪಡ್ರೆ


ಅತ್ಯಲ್ಪ ಅವಧಿಯಲ್ಲಿ ವ್ಯಾಪಕ ಸಂಚಲನ ಮೂಡಿಸಿದ ಬಾಳೆಕಾಯಿ ಹುಡಿ (ಬಾಕಾಹು) ತಯಾರಿ ಅಭಿಯಾನದ ಸಮಗ್ರ ಚಿತ್ರಣ ನೀಡುವ ಕೃತಿ ಇದು.


ಇದು ನಿರ್ದಿಷ್ಟ ಉದ್ದೇಶದೊಂದಿಗೆ, ಬ್ಯಾನರ್ ಕಟ್ಟಿ ಭಾಷಣ ಮಾಡಿ ಚಾಲನೆ ನೀಡಿದ ಅಭಿಯಾನವಲ್ಲ. ಅಡವಿಯೊಳಗಿನ ಸಣ್ಣದೊಂದು ಒರತೆಯಂತೆ ಏಟೀವಿ (ಎನಿ ಟೈಮ್ ವೆಜಿಟೆಬಲ್) ವಾಟ್ಸಪ್ ಗುಂಪಿನಲ್ಲಿ ಸದ್ದಿಲ್ಲದೆ ಜಿನುಗಿದ ಪರಿಕಲ್ಪನೆಯಿದು. ‘ವರ್ಷವಿಡೀ ತರಕಾರಿ; ನಮ್ಮನೆಗೆ ನಮ್ಮದೇ ಸುರಕ್ಷಿತ ತರಕಾರಿ’ ಎನ್ನುವುದು ಈ ಗುಂಪಿನ ಮೂಲೋದ್ದೇಶ.


ಸದಾ ರೈತಹಿತವನ್ನು ಧ್ಯಾನಿಸುವ, ಹೊಸತಿನೆಡೆಗೆ ಲಕ್ಷ್ಯವಿಟ್ಟಿರುವ, ನವ ಮಾಧ್ಯಮದ ಸಕಾರಾತ್ಮಕ ಶಕ್ತಿಯಲ್ಲಿ ಅಪಾರ ನಂಬಿಕೆಯಿರುವ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಅವರಿಂದ ಅಯಾಚಿತವಾಗಿ ಅನಾವರಣಗೊಂಡ ಆಂದೋಲನ ಕೇವಲ ಒಂದು ತಿಂಗಳಲ್ಲೆ ವ್ಯಾಪಕವಾಗಿ ಬೆಳೆದದ್ದು ಮೇಲ್ನೋಟಕ್ಕೆ ಅಚ್ಚರಿಯ ಸಂಗತಿಯೆ. ಆದರೆ ಅವರು ಇಂತಹ ಉದ್ದೇಶಗಳಿಗೆ ಸಾಮಾಜಿಕ ಮಾಧ್ಯಮವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ ಎಂಬುದನ್ನು ಬಲ್ಲವರಿಗೆ ಬಾಕಾಹು ಅಭಿಯಾನದ ಯಶಸ್ಸಿನ ಮರ್ಮ ಸುಲಭವಾಗಿ ಅರ್ಥವಾದೀತು.


ಇಲ್ಲಿ ಆದದ್ದು ಇಷ್ಟೆ: ತುಮಕೂರು ಜಿಲ್ಲೆ ಅತ್ತಿಕಟ್ಟೆಯ ನಯನಾ ಆನಂದ್ ಒಂದು ವಾರವಿಡೀ ಪ್ರತಿ ದಿನ ಬಾಳೆಯ ಮೌಲ್ಯವರ್ಧನೆ-ಉಪಯೋಗ ಮಾಡಿದ್ದರ ಬಗ್ಗೆ ಏಟೀವಿ ಗುಂಪಿನಲ್ಲಿ ಹಾಕಿದ ಸಂದೇಶವನ್ನು ಗಮನಿಸಿದ ಪಡ್ರೆಯವರು ಅದಕ್ಕೆ ಪೂರಕವಾಗಿ ಕೇರಳದ ಜಯಾಂಬಿಕಾ ಅವರು ಆರು ತಿಂಗಳಲ್ಲಿ ಒಂದು ಕ್ವಿಂಟಾಲ್ ನೇಂದ್ರ ಬಾಕಾಹು ತಯಾರಿಸಿ ಮಾರಾಟ ಮಾಡಿದ್ದರ ಬಗ್ಗೆ ಪ್ರಸ್ತಾಪಿಸಿ ಎರಡು ಚಿತ್ರಗಳೊಂದಿಗೆ ಸ್ಫೂರ್ತಿದಾಯಕವಾದ ಪೋಸ್ಟ್ ಸೇರಿಸಿದರು.


ನಂತರದ ದಿನಗಳಲ್ಲಿ ಏಟೀವಿ ಗುಂಪಿನಲ್ಲಿ ಬಾಕಾಹು ಪ್ರಯೋಗಗಳು ತುಂಬಿ ತುಳುಕತೊಡಗಿದವು. ಜತೆಜತೆಗೆ ಪಡ್ರೆಯವರು ಈ ಸಂದೇಶಗಳನ್ನು ಇತರ ನಾಲ್ಕಾರು ಗುಂಪುಗಳೊಂದಿಗೆ ಹಂಚಿಕೊಂಡರು. ಫೇಸ್ಬುಕ್ ಮೂಲಕವೂ ಪ್ರಚುರಪಡಿಸಿದರು. ಕನ್ನಡ-ಇಂಗ್ಲಿಷ್-ಮಲಯಾಳಂ ಮಾಧ್ಯಮ ಮಿತ್ರರಿಗೆ ಅವರು ಮಾಹಿತಿ ನೀಡಿದ ಪರಿಣಾಮ ವಿವಿಧ ಪತ್ರಿಕೆ-ಚಾನೆಲ್‌ಗಳಲ್ಲಿ ಬಾಕಾಹು ಸುದ್ದಿ ಬೆಳಕು ಕಂಡಿತು. ಈ ಕುರಿತ ವೆಬಿನಾರ್‌ಗಳಲ್ಲಿಯೂ ಅವರು ಪಾಲ್ಗೊಂಡು ಆಸಕ್ತರಲ್ಲಿ ಉತ್ಸಾಹ ತುಂಬಿದರು.


ಇವೆಲ್ಲವುಗಳ ನಡುವೆಯೆ ಅಡಿಕೆ ಪತ್ರಿಕೆಯ ಆಗಸ್ಟ್ 2021 ಸಂಚಿಕೆಯನ್ನು ಬಾಕಾಹು ವಿಶೇಷಾಂಕವಾಗಿ ರೂಪಿಸಿದ್ದಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ರಾಜ್ಯದ ಅನೇಕ ಕೇವೀಕೆಗಳನ್ನು ಸಂಪರ್ಕಿಸಿ ಬಾಕಾಹು ತಯಾರಿ ಕೈಗೊಂಡು ಸುತ್ತಮುತ್ತಲ ರೈತರಿಗೂ ಮಾರ್ಗದರ್ಶನ ನೀಡುವಂತೆ ಒತ್ತಾಯಿಸಿದರು. ಹೀಗೆ ಹಲವು ದಿಕ್ಕುಗಳಲ್ಲಿ, ಹಲವು ಆಯಾಮಗಳಲ್ಲಿ ಅವರು ನಡೆಸಿದ ಪ್ರಯತ್ನಗಳು ಈಗ ಆಶಾದಾಯಕ ಫಲಿತಾಂಶ ನೀಡತೊಡಗಿವೆ. ಈ ಎಲ್ಲ ಬೆಳವಣಿಗೆಗಳ ವ್ಯವಸ್ಥಿತ ದಾಖಲೆ ಇಲ್ಲಿದೆ.


ಶ್ರೀ ಪಡ್ರೆ ಅವರು ಹೇಳುವಂತೆ, “ಮನೆಮಟ್ಟದಲ್ಲಿ ಬಾಳೆಕಾಯಿ ಹುಡಿ (ಬಾಕಾಹು) ತಯಾರಿಗೆ  ಹೆಚ್ಚುವರಿ ಬಂಡವಾಳ, ಬೇರೆ ಯಂತ್ರಗಳು, ಕಾರ್ಮಿಕ ಅವಲಂಬನೆ, ಪೇಟೆಯ ಒಳಸುರಿ- ಒಂದೂ ಬೇಡ. ಮಾಡಲು ಕಷ್ಟವಾಗುವಂಥದ್ದೇನೂ ಇಲ್ಲ.”


ಬಾಕಾಹು ಬಳಸಿ ತಯಾರಿಸಬಹುದಾದ ವೈವಿಧ್ಯಮಯ ತಿಂಡಿತಿನಿಸುಗಳ ರೆಸಿಪಿ ಈ ಪುಸ್ತಕದ ವಿಶೇಷ.


-ಶಿವರಾಂ ಪೈಲೂರು


ಪ್ರಕಾಶನ: ಕೃಷಿ ಮಾಧ್ಯಮ ಕೇಂದ್ರ ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್ 

ಬೆಲೆ: ರೂ.150

ಪುಸ್ತಕ ಆನ್ಲೈನ್ ಖರೀದಿಗೆ – https://booksloka.com/product/bakahu/ 

ಅಥವಾ ಕರೆಮಾಡಿ 9886856364


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم