|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಕ್ತದಾನದಿಂದ ಜೀವದಾನ – ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನ, ಅಕ್ಟೋಬರ್ 1

ರಕ್ತದಾನದಿಂದ ಜೀವದಾನ – ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನ, ಅಕ್ಟೋಬರ್ 1ದೇಶದಾದ್ಯಂತ ಅಕ್ಟೋಬರ್ ಒಂದರಂದು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನ ಎಂದು ಆಚರಿಸಲಾಗುತ್ತಿದೆ. ಸುರಕ್ಷಿತ ರಕ್ತದಾನದ ಬಗೆಗಿನ ಆದ್ಯತೆ ಮತ್ತು ಅಗತ್ಯತೆಯ ಬಗ್ಗೆ ಅರಿವು ಮೂಡಿಸಲು ಹಾಗೂ ಜನರಲ್ಲಿ ರಕ್ತದಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆಯನ್ನು ದಿನಾಂಕ 1 ಅಕ್ಟೋಬರ್ 1975ರಂದು ಭಾರತೀಯ ರಕ್ತಪೂರಣ ಸಂಸ್ಥೆಯ ಅಡಿಯಲ್ಲಿ Dr. J.G. Jolly ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ಆರಂಭಿಸಲಾಯಿತು. ರಕ್ತದಾನದ ಬಗೆಗಿನ ಅನಗತ್ಯ ತಪ್ಪು ನಂಬಿಕೆಗಳನ್ನು ಹೋಗಲಾಡಿಸಿ ಪ್ರತಿ ಆರೋಗ್ಯವಂತ ವ್ಯಕ್ತಿ ಕಾಲಕಾಲಕ್ಕೆ ರಕ್ತದಾನ ಮಾಡಲು ಪ್ರಚೋದಿಸುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ. ಅದೇ ರೀತಿ ಸ್ವಂತ ರಕ್ತ ಸಂಬಂಧಿಗಳಿಗೆ ಮಾತ್ರ ರಕ್ತ ನೀಡುವುದರ ಜೊತೆಗೆ ಜಾತಿ, ಮತ, ಲಿಂಗ, ಬೇಧವಿಲ್ಲದೆ ಸರ್ವ ವರ್ಣದ, ಸರ್ವ ವರ್ಗದ ಜನರು ಸ್ವಯಂ ಪ್ರೇರಿತವಾಗಿ ಯಾವುದೇ ಲಾಭ, ಸ್ವಾರ್ಥವಿಲ್ಲದೆ ರಕ್ತದಾನ ಮಾಡುವಂತೆ ಮನಪರಿವರ್ತನೆ ಮಾಡುವ ಒಳ್ಳೆಯ ಉದ್ದೇಶದೊಂದಿಗೆ ಈ ಆಚರಣೆಯನ್ನು ಜಾರಿಗೆ ತರಲಾಯಿತು.  


ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸುವ ಸಲುವಾಗಿ ತನ್ನ ರಕ್ತವನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದಾನ ಮಾಡುವುದಕ್ಕೆ ರಕ್ತದಾನ ಎನ್ನುತ್ತಾರೆ. ರಕ್ತದಾನ ಎನ್ನುವುದು ಅತ್ಯಂತ ಪವಿತ್ರವಾದ ದಾನ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಆ ಕಾರಣದಿಂದಲೇ ರಕ್ತದಾನವನ್ನು ಜೀವದಾನ ಎಂದು ಕರೆಯಲಾಗುತ್ತದೆ. 


ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ, ರಕ್ತಕ್ಕೆ ಪರ್ಯಾಯವಾದ ವಸ್ತು ಇನ್ನೊಂದಿಲ್ಲ. ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಲಾಗುತ್ತದೆ. ರಕ್ತ ನಮ್ಮ ದೇಹದ ಅತೀ ಅಮೂಲ್ಯವಾದ ದ್ರವ್ಯ. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸುಮಾರು 5ರಿಂದ 6 ಲೀಟರ್‍ಗಳಷ್ಟು ರಕ್ತವಿರುತ್ತದೆ. ರಕ್ತ ನಮ್ಮ ದೇಹದ ತೂಕದ 7 ಪ್ರತಿಶತ ತೂಗುತ್ತದೆ. ರಕ್ತದಲ್ಲಿ ಬಿಳಿರಕ್ತಕಣ, ಕೆಂಪುರಕ್ತಕಣ, ಪ್ಲೇಟ್‍ಲೆಟ್ ಮತ್ತು ಪ್ಲಾಸ್ಮಾ ಮುಂತಾದ ಬೇರೆ ಬೇರೆ ರೀತಿಯ ಅಂಶಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿರುತ್ತವೆ. ಒಟ್ಟು ರಕ್ತದಾನ ಮಾಡುವಾಗ 350 ಮಿ. ಲೀ. ರಕ್ತವನ್ನು ತೆಗೆಯಲಾಗುತ್ತದೆ.  


ರಕ್ತದ ಅಗತ್ಯದ ಮತ್ತು ತುರ್ತು ಚಿಕಿತ್ಸೆಯ ಸಮಯಲ್ಲಿ ರಕ್ತದಾನಿಗಳ ರಕ್ತವನ್ನೇ ರೋಗಿಗಳು ಅವಲಂಬಿಸಿರುತ್ತಾರೆ. ಯಾಕೆಂದರೆ ಅನಿರೀಕ್ಷಿತ ಅಪಘಾತಗಳು, ತುರ್ತು ಚಿಕಿತ್ಸೆಗಳ ಸಮಯದಲ್ಲಿ,  ರಕ್ತದ ಕ್ಯಾನ್ಸರ್ ರೋಗಿಗಳಿಗೆ, ಗರ್ಭಿಣಿ ಸ್ತ್ರೀಯರಿಗೆ ಹೆರಿಗೆಯ ಸಮಯದಲ್ಲಿ ಹೆಚ್ಚಾಗಿ ರಕ್ತದ ಅವಶ್ಯಕತೆ ಇರುತ್ತದೆ. ಇದಲ್ಲದೆ ಥಾಲಸೀಮೀಯಾ (ಅನುವಂಶಿಕ ರೋಗ) ಮತ್ತು ಹಿಮೊಫಿಲಿಯಾ (ಕುಸುಮರೋಗ) ಇರುವ ವ್ಯಕ್ತಿಗಳಿಗೆ ಜೀವನ ಪರ್ಯಂತ ರಕ್ತದಾನದ ಅವಶ್ಯಕತೆ ಇರುತ್ತದೆ. 
ಪ್ರತೀ ವರ್ಷ ನಮ್ಮ ದೇಶದಲ್ಲಿ ಸುಮಾರು 1 ರಿಂದ 1.5 ಕೋಟಿ ಯೂನಿಟ್‍ಗಳಷ್ಟು ರಕ್ತದ ಅವಶ್ಯಕತೆ ಇದೆ. (ದೇಶದ ಜನಸಂಖ್ಯೆಯ  ಒಂದು ಶೇಕಡಾ) ಆದರೆ ಬಹಳ ನೋವಿನ ಸಂಗತಿಯೆಂದರೆ ಪ್ರತೀ ವರ್ಷ ಸ್ವಯಂಪ್ರೇರಿತ ರಕ್ತದಾನಿಗಳಿಂದ ಶೇಖರಿಸಲ್ಪಡುವ ರಕ್ತದ ಯೂನಿಟ್ ಕೇವಲ 90 ರಿಂದ 95ಲಕ್ಷ ಯೂನಿಟ್‍ಗಳು ಮಾತ್ರ. ಅಂದರೆ ಬೇಡಿಕೆಯ ಶೇಕಡಾ 70ರಿಂದ 80ರಷ್ಟು ಮಾತ್ರ ರಕ್ತದ ಪೂರೈಕೆಯಾಗುತ್ತಿದೆ. ನಮ್ಮ ರಾಜ್ಯದಲ್ಲಿಯೆ ಪ್ರತಿದಿನ 900ರಿಂದ 1200 ಯೂನಿಟ್‍ಗಳಷ್ಟು ರಕ್ತದ ಅವಶ್ಯಕತೆ ಇದೆ.  ನಮ್ಮ ದೇಶದಲ್ಲಿ  ಸರಿಸುಮಾರು 3000 ರಕ್ತದ ಬ್ಯಾಂಕ್‍ಗಳು ಕಾರ್ಯ ನಿರ್ವಹಿಸುತ್ತಿದೆ.


ದಿನದ ಪ್ರತಿಕ್ಷಣವೂ ದೇಶದ ಯಾವುದಾದರೂ ಭಾಗದಲ್ಲಿ ಯಾರೊಬ್ಬರಿಗಾದರೂ ರಕ್ತದ ಅವಶ್ಯಕತೆ ಇರುತ್ತದೆ. ಹಾಗಾಗಿ ಪ್ರತಿದಿನ ನಮ್ಮ ದೇಶದಲ್ಲಿ ಕನಿಷ್ಠ ಪಕ್ಷ 38,000 ಯೂನಿಟ್‍ಗಳ ಪೂರ್ತಿ ರಕ್ತದ ಅವಶ್ಯಕತೆ ಇದೆ. ರಕ್ತದಾನಿಗಳಿಂದ ಪಡೆದ ರಕ್ತವನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಪೂರ್ತಿ ರಕ್ತ (ಹೋಲ್ ಬ್ಲೆಡ್), ಕೆಂಪು ರಕ್ತ ಕಣ, ಪ್ಲೇಟ್‍ಲೆಟ್, ಪ್ಲಾಸ್ಮಾ ಮತ್ತು ಕ್ರಯೋ, ಪ್ರೇಸಿಪಿಟೇಟ್ ಎಂಬುದಾಗಿ ವಿಂಗಡಿಸುವುದರಿಂದ, ಒಂದು ರಕ್ತದಾನದಿಂದ ಮೂರು ರೋಗಿಗಳಿಗೆ ಜೀವದಾನ ಮಾಡುವ ಅವಕಾಶ ಒದಗಿ ಬರುತ್ತದೆ. ರಕ್ತದಾನ ಎಂಬುವುದು ಬಹಳ ಪವಿತ್ರವಾದ ಕಾರ್ಯ. ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಲೇಬೇಕು. ರಕ್ತದಾನ ಮಾಡುವುದು ಪ್ರತಿ ಆರೋಗ್ಯವಂತ ವ್ಯಕ್ತಿಯ ಕರ್ತವ್ಯ ಎಂದು ಭಾವಿಸಿ, ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ  ರೋಗಗ್ರಸ್ಥರು ಮತ್ತು ಗಾಯಗೊಂಡವರನ್ನು ಬದುಕಿಸುವುದು ಸಾಧ್ಯವಾಗುತ್ತದೆ.


ರಕ್ತದಾನ ಯಾರು ಮಾಡಬಹುದು:


18 ರಿಂದ 65 ವರ್ಷದ ಒಳಗಿರುವ ಎಲ್ಲಾ ಮಹಿಳೆಯರು ಮತ್ತು ಪುರುಷರು ರಕ್ತದಾನ ಮಾಡಬಹುದು. ರಕ್ತದಾನ ಮಾಡುವ ಮೊದಲ ವೈದ್ಯರು ರಕ್ತದಾನಿಯನ್ನು ಕೂಲಂಕುಶವಾಗಿ ಪರೀಕ್ಷೆ ಮಾಡುತ್ತಾರೆ. ರಕ್ತದಾನಿಯ ಸಂಪೂರ್ಣ ಆರೋಗ್ಯದ ಮಾಹಿತಿಯನ್ನು ಪಡೆಯುತ್ತಾರೆ. ರಕ್ತದಾನಿಯ ದೇಹತೂಕ, ರಕ್ತದ ಒತ್ತಡ, ಎತ್ತರ, ದೇಹದ ಉಷ್ಣತೆ, ನಾಡಿಬಡಿತ, ಹಿಮೋಗ್ಲೊಬಿನ್ ಅಂಶ ಇತ್ಯಾದಿಗಳನ್ನು ಅಳೆಯುತ್ತಾರೆ. ರಕ್ತದಾನಿಯ ಮೇಲೆ ತಿಳಿಸಿದ ಎಲ್ಲಾ ಅಂಶಗಳು ಸರಿಯಿದ್ದಲ್ಲಿ ಮಾತ್ರ ಆತನಿಗೆ ರಕ್ತದಾನ ಮಾಡಲು ಆದೇಶ ನೀಡುತ್ತಾರೆ.


ರಕ್ತವನ್ನು ದಾನಿಗಳ ದೇಹದಿಂದ ತೆಗೆಯಲು ಸಂಸ್ಕರಿಸಿದ ಉಪಕರಣಗಳನ್ನು ಉಪಯೋಗಿಸಿ ನುರಿತ ವೈದ್ಯರು ನೋವಿಲ್ಲದೆ ಸಂಗ್ರಹಿಸುತ್ತಾರೆ. ರಕ್ತದಾನಿಗಳಿಂದ ಪಡೆದ ರಕ್ತವನ್ನು ವಿಶೇಷವಾದ ಹೆಪ್ಪು ನಿರೋಧಕ ದ್ರವ್ಯಗಳಿರುವ ಚೀಲಗಳಲ್ಲಿ ಸಂಗ್ರಹಿಸಲಾಗುತ್ತದೆ. ದಾನಿಗಳಿಂದ ಪಡೆದ ರಕ್ತವನ್ನು ರಕ್ತದ ಮೂಲಕ ಹರಡಬಹುದಾದ ಹೆಪಟೈಟಿಸ್  ಬಿ ಮತ್ತು ಸಿ, ಎಚ್.ಐ.ವಿ, ಮಲೇರಿಯಾ, ಸಿಫಿಲಿಸ್ ರೋಗಾಣುಗಳಿಗಾಗಿ ಪರೀಕ್ಷಿಸಲಾಗುತ್ತದೆ. ಹೀಗೆ ದಾನಿಗಳಿಂದ ಪಡೆದ ರಕ್ತವನ್ನು ಯಾವುದೇ ರೋಗಾಣುಗಳಿಲ್ಲವೆಂದು ಖಾತರಿಗೊಳಿಸಿದ ಬಳಿಕವೇ ಬೇರೆ ರೋಗಿಗಳಿಗೆ ರಕ್ತದಾನ ಮಾಡಲು ಉಪಯೋಗಿಸುತ್ತಾರೆ.


ಒಂದು ವೇಳೆ ರಕ್ತದಾನಿಗಳಿಂದ ಪಡೆದ ರಕ್ತ ಮೇಲೆ ಕಾಣಿಸಿದ ರೋಗಾಣುಗಳಿಂದ ಕೂಡಿದ್ದು ಮಲಿನವಾಗಿದ್ದ, ಆ ರಕ್ತವನ್ನು ಬೇರೆ ರೋಗಿಗಳಿಗೆ ಕೊಡಲಾಗುವುದಿಲ್ಲ. ಮತ್ತು ಅಂತಹ ಮಲಿನ ರಕ್ತವನ್ನು ವೈಜ್ಞಾನಿಕವಾಗಿ ನಿಷ್ಕ್ರೀಯಗೊಳಿಸಲಾಗುತ್ತದೆ.


ದಾನಿಗಳಿಂದ ಪಡೆದ ರಕ್ತವನ್ನು ರೋಗಾಣು ಮಕ್ತ ಎಂದು ಖಾತರಿಗೊಳಿಸಿದ ಬಳಿಕ ಶೀತಲೀಕರಣ (ರೆಫ್ರಿಜರೇಟ್) ಯಂತ್ರಗಳಲ್ಲಿ ಸೂಕ್ತ ಉಷ್ಣತೆಯಲ್ಲಿ ಶೇಖರಿಸಿಡಲಾಗುತ್ತದೆ. ಸಾಮಾನ್ಯವಾಗಿ ಪೂರ್ತಿ ರಕ್ತವನ್ನು (ಹೋಲ್‍ಬ್ಲಡ್) ಮತ್ತು ಇದನ್ನು ಸುಮಾರು 32 ರಿಂದ 42 ದಿನಗಳವರೆಗೆ ನೀಡಬಹುದು ಮತ್ತು ಈ ಅವಧಿಯ ಒಳಗೆ ಬೇರೆಯವರಿಗೆ ನೀಡಬಹುದು. ಅವಧಿ ಕಳೆದ ರಕ್ತವನ್ನು ವೈಜ್ಞಾನಿಕವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ. ಕೆಲವೊಮ್ಮೆ ರಕ್ತದಿಂದ ಪ್ಲಾಸ್ಮಾ ಎಂಬ ಅಂಶವನ್ನು ಬೇರ್ಪಡಿಸಲಾಗುತ್ತದೆ. ಈ ರೀತಿ ಪ್ಲಾಸ್ಮಾವನ್ನು -40 ಡಿಗ್ರಿ ಸೆಂಟಿಗ್ರೇಡ್‍ನಲ್ಲಿ ಒಂದು ವರ್ಷದವರೆಗೆ ಶೇಖರಿಸಿಡಬಹುದು. -80 ಡಿಗ್ರಿ ಸೆಂಟಿಗ್ರೇಡ್‍ನಲ್ಲಿ 5 ವರ್ಷದಿಂದ 7 ವರ್ಷಗಳ ಕಾಲ ಶೇಖರಿಸಿಡಬಹುದು. ಕೆಲವೊಮ್ಮೆ ಕ್ರಯೋಪ್ರೆಸಿಪಿಟೇಟ್ (Cryoprecipitate) ಎಂಬ ರಕ್ತವನ್ನು ವಿಂಗಡಿಸಿ -40 ಡಿಗ್ರಿ ಸೆಂಟಿಗ್ರೇಡ್‍ನಲ್ಲಿ  ಒಂದು ವರ್ಷದವರೆಗೆ ಶೇಖರಿಸಿಡಲಾಗುತ್ತದೆ.


ಈ ಔಷಧಿಯನ್ನು ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟದೇ ಇರುವ ರೋಗಗಳಾದ ಕುಸುಮರೋಗ (ಹಿಮೋಫಿಲಿಯಾ) ಮತ್ತು ರಕ್ತನಾಳದ ಒಳಗೆ ಸ್ವಯಂಪ್ರೇರಿತವಾಗಿ ವಿನಾಕಾರಣ ರಕ್ತಹೆಪ್ಪುಗಟ್ಟುವ ರೋಗ (ಡಿ.ಐ.ಸಿ)ದ ಚಿಕಿತ್ಸೆಗಾಗಿ ಉಪಯೋಗಿಸಲಾಗುತ್ತದೆ. ಕೆಲವೊಮ್ಮೆ ರಕ್ತದಲ್ಲಿನ ಪ್ಲೇಟ್‍ಲೆಟ್ ಎಂಬ ಅಂಶÀವನ್ನು ರಕ್ತದಿಂದ ಬೇರ್ಪಡಿಸಿ 22 ಡಿಗ್ರಿ ಸೆಂಟಿಗ್ರೇಡ್‍ನಲ್ಲಿ ಸುಮಾರು 5 ದಿನಗಳವರೆಗೆ ಶೇಖರಿಸಲಾಗುತ್ತದೆ. ಈ ರೀತಿಯ ರಕ್ತಕಣಗಳನ್ನು ಡೆಂಗು, ಚಿಕುನ್‍ಗುನ್ಯಾ ಮುಂತಾದ ರೋಗಿಗಳಿಗೆ ಮತ್ತು ರಕ್ತ ಹೆಪ್ಪು ಗಟ್ಟದಿರುವ ರೋಗಿಗಳ ಚಿಕಿತ್ಸೆಗೆ ಉಪಯೋಗಿಸುತ್ತಾರೆ. ಆದರೆ ಇಂತಹ ರಕ್ತ ಕಣಗಳನ್ನು 5 ದಿನಗಳಿಗಿಂತ ಹೆಚ್ಚು ಉಪಯೋಗಿಸಲು ಸಾಧ್ಯವಾಗುವುದಿಲ್ಲ.


ರಕ್ತದಾನ ಬಹಳ ಪವಿತ್ರವಾದ ಕಾರ್ಯ. ಆದರೆ ವಿಪರ್ಯಾಸವೆಂದರೆ ವಿದ್ಯಾವಂತ ಜನರು ಕೂಡಾ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳನ್ನು ಹೊಂದಿದ್ದು ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ರಕ್ತದಾನದ ಬಗ್ಗೆ ಸೂಕ್ತವಾದ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿ ಸಾರ್ವಜನಿಕ ಮನದಾಳದಲ್ಲಿ ಬೇರೂರಿರುವ ಸತ್ಯಕ್ಕೆ ದೂರವಾದ ವಿಚಾರಗಳನ್ನು ತಪ್ಪು ಕಲ್ಪನೆಗಳನ್ನು ಹೊಡೆದೋಡಿಸುವ ಕಾರ್ಯ ನಡೆಯಬೇಕು. ರಕ್ತದಾನದಿಂದ ರೋಗಿಯೊಬ್ಬನಿಗೆ ಜೀವದಾನ ಮಾಡುವ ಶಕ್ತಿಯಿದೆ ಎಂದು ಜನರಿಗೆ ಮನವರಿಕೆ ಮಾಡಬೇಕು. ಈ ದಿಸೆಯಲ್ಲಿ ಸಾರ್ವಜನಿಕ ಹಾಗೂ ಸರಕಾರಿ ಸಂಘ ಸಂಸ್ಥೆಗಳು, ರಕ್ತನಿಧಿಗಳು ಮತ್ತು ಆರೋಗ್ಯ ಇಲಾಖೆಗಳು ಹೆಚ್ಚಿನ ಮುತುವರ್ಜಿ ವಹಿಸಿ ರಕ್ತದಾನದ ಬಗೆಗಿನ ತಪ್ಪು ಕಲ್ಪನೆಗಳನ್ನು ತೊಡೆದುಹಾಕಿ ಜನರ ಮನಸ್ಸಿನ ಗೊಂದಲಗಳನ್ನು ನಿವಾರಿಸಿ ಹೆಚ್ಚು ಹೆಚ್ಚು ಜನರು ರಕ್ತದಾನ ಮಾಡಲು ಮುಂದೆ ಬರುವಂತೆ ಪ್ರಚೋದನೆ ನೀಡುವ ಕಾರ್ಯ ಮಾಡಬೇಕು.    


-ಡಾ|| ಮುರಲೀ ಮೋಹನ್ ಚೂಂತಾರು 

ಸುರಕ್ಷಾ ದಂತ ಚಿಕಿತ್ಸಾಲಯ

ಹೊಸಂಗಡಿ – 671 323

ಮೊ : 09845135787 


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post