|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೊಸಪೇಟೆಯ ಹೆಣ್ಮಕ್ಕಳಲ್ಲಿ ಹೊಸ ಹುಮ್ಮಸ್ಸು

ಹೊಸಪೇಟೆಯ ಹೆಣ್ಮಕ್ಕಳಲ್ಲಿ ಹೊಸ ಹುಮ್ಮಸ್ಸು



ತರಬೇತಿಯ ಮರುದಿನದಿಂದಲೇ ಬಾಕಾಹು- ಬಾಕಾಶಾ ತಯಾರಿ



"ಬಾಳೆಹಣ್ಣು ತಿನ್ನೋದು, ಬಾಳೆಕಾಯಿಯ ಪಲ್ಯ ಮಾಡೋದು, ಇವು ಬಿಟ್ಟರೆ ಬಾಳೆಕಾಯಿಯನ್ನ ನಂನಮ್ಮ ಮನೆಗಳಲ್ಲಿ ಇಷ್ಟೊಂದು ಉಪಯೋಗ ಮಾಡಲು ಬರುತ್ತದೆ ಎಂದು ಗೊತ್ತಿರಲೇ ಇಲ್ಲ."


ಈ ಮಾತು ಹೇಳುತ್ತಿರುವವರು ಹೊಸಪೇಟೆಯ ಸಂಸ್ಥೆಯೊಂದರ ಕಾರ್ಯಕರ್ತೆ ಮಂಜುಳಾ ಕಮಲಾಪುರ. ಮೂರು ಉಪಸಮಿತಿಗಳ 20 ಮಂದಿ ಹೆಣ್ಮಕ್ಕಳು, ಹಲವರು ಬಾಳೆ ಬೆಳೆಗಾರರ ಜತೆ ಸೆಪ್ಟೆಂಬರ್ 16ರಂದು ಇವರು ’ಬಾಕಾಹು ತರಬೇತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಕರ್ನಾಟಕ ಸುಸ್ಥಿರ ಮತ್ತು ಸಮಗ್ರ ಜಲಸಂಪನ್ಮೂಲ ನಿರ್ವಹಣೆ ಹೂಡಿಕೆ ಕಾರ್ಯಕ್ರಮ, ವಿಜಯನಗರ ಕಾಲುವೆಗಳ ಆಧುನೀಕರಣ ಯೋಜನೆ ಮತ್ತು ಬಳ್ಳಾರಿ ಕೃಷಿ ವಿಜ್ಞಾನ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಈ ತರಬೇತಿ ನಡೆದಿತ್ತು. ಕೇವೀಕೆಯ ಗೃಹ ವಿಜ್ಞಾನಿ ಡಾ. ಶಿಲ್ಪಾ ಬಾಕಾಹು- ಬಾಕಾಶಾ ತಯಾರಿಗಳನ್ನು ಮಾಡಿ ತೋರಿಸಿದ್ದರು. ಇದಲ್ಲದೆ, ತಾವೇ ಬಾಕಾಹುವಿನಿಂದ ತಯಾರಿಸಿದ ಗವ್ವಲು, ಖಾಕ್ರಾ, ಕಾರದಕಡ್ಡಿ ಇತ್ಯಾದಿ ತಿಂಡಿಗಳ ಪ್ರದರ್ಶನವನ್ನೂ ಮಾಡಿದ್ದರು.


"ಕಳೆದ ವರ್ಷ ಲಾಕ್ ಡೌನ್ ಅವಧಿಯಲ್ಲಿ ನಮ್ಮೂರ ಬಾಳೆ ಬೆಳೆಗಾರರು ಬಾಳೆಕಾಯಿ ಮಾರಲಾಗದೆ ಕೋತಿ-ದನಗಳಿಗೆ ತಿನ್ನಿಸಿದ್ದರು. ಹಾಗೆಯೇ ಅಲ್ಲಲ್ಲಿ ಬಿಸಾಕಿ ಕೊಳೆತೂ ಹೋದದ್ದೂ ಇದೆ", ಮಂಜುಳಾ ನೆನೆಯುತ್ತಾರೆ.


ಹೊಸ ವಿದ್ಯೆ ಪಡೆದ ಹೆಣ್ಮಕ್ಕಳಲ್ಲಿ ಭೂರಹಿತರೂ ಚಿಕ್ಕ ಬೆಳೆಗಾರರೂ ಇದ್ದಾರೆ. ಮರುದಿನದಿಂದಲೇ ಹಲವು ಮನೆಗಳಲ್ಲಿ ಬಾಕಾಹು (ಬಾಳೆಕಾಯಿ ಹುಡಿ/ಹಿಟ್ಟು) ಬಾಕಾಶಾ (ಬಾಳೆಕಾಯಿ ಶಾವಿಗೆ) ತಯಾರಿಸ ತೊಡಗಿದ್ದಾರೆ. ತರಬೇತಿಯ ನಂತರದ ಫಾಲೋ ಅಪ್ ಉಸ್ತುವಾರಿ ಮಂಜುಳಾ ಅವರದು.


ಕೃಷ್ಣಾಪುರ ಉಪಸಮಿತಿಯ 10 ಹೆಣ್ಮಕ್ಕಳು 25 ಕಿಲೋ ಬಾಳೆಕಾಯಿಯನ್ನು ತುಂಡರಿಸಿ ಒಂದು ಮನೆಯ ತಾರಸಿಯ ಮೇಲೆ ಒಣಗಿಸಹತ್ತಿದ್ದಾರೆ. ನೆರೆಯೂರಿನ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದಕೆಲವರು ಸ್ವಲ್ಪ ಬಾಕಾಹು ಒಯ್ದದ್ದು ಅಲ್ಲೇ ಮಾರಾಟವಾಯಿತು. ಸ್ವಲ್ಪ ದೊಡ್ಡ ಪ್ರಮಾಣದಲ್ಲೇ ಮಾಡಿಕೊಡಿ ಎಂಬ ಆದೇಶವೂ ಸಿಕ್ಕಿದೆಯಂತೆ.


ಬಾಳೆ ಬೆಳೆದು ಮಾರುಕಟ್ಟೆ ಕುಸಿತದಿಂದ ಕಂಗೆಟ್ಟ ಈ ಊರುಗಳಲ್ಲೀಗ ಹೊಸ ಸಂಚಲನ, ಮುಗುಳುನಗೆ ಮೂಡಿದೆ. ಬಾಕಾಹು- ಬಾಕಾಶಾಗಳು ತಮ್ಮ ನೋವು ಶಮನಗೊಳಿಸಬಲ್ಲ ಮುಲಾಮು ಎಂದು ಇವರಿಗೆ ಮನದಟ್ಟಾಗಿದೆ. 


ವರ್ಷದ ಹಿಂದೆ ಎಸೆದ ಅದೇ ಬಾಳೆಕಾಯಿ ಈಗ ಹುಡಿಯಾಗಿ ಮಾರಾಟವಸ್ತುವೂ, ಶಾವಿಗೆಯಾಗಿ ದೈನಂದಿನ ಆಹಾರವೂ ಆಗತೊಡಗಿರುವುದು ಸಣ್ಣ ಬದಲಾವಣೆಯೇನಲ್ಲ.

ಮಂಜುಳಾ ಕಮಲಾಪುರ- 94491 00614

- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post