ಉಡುಪಿ: ಗೋಹತ್ಯಾನಿಷೇಧ ಕಾನೂನು ಜಾರಿಗೆ ತಂದ ಬಳಿಕ ರಾಜ್ಯ ಸರ್ಕಾರವು ಜಿಲ್ಲಾವಾರು ಗೋಶಾಲೆಗಳನ್ನು ಸ್ಥಾಪಿಸಲು ತ್ವರಿತ ಸಿದ್ಧತೆಗಳನ್ನು ನಡೆಸುತ್ತಿದೆ.
ಇದರ ಅಂಗವಾಗಿ ಉಡುಪಿ ಜಿಲ್ಲೆಯಲ್ಲೂ ಸರ್ಕಾರಿ ಗೋಶಾಲೆ ಸ್ಥಾಪನೆಗೆ ಪಶು ಸಂಗೋಪನಾ ಇಲಾಖೆಯು ನಿರ್ಧರಿಸಿದ್ದು ಈ ಕುರಿತು ಉಡುಪಿಯ ಶ್ರೀ ಪೇಜಾವರ ಮಠದಲ್ಲಿ ಸಮಾಲೋಚನಾ ಸಭೆಯು ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ಬುಧವಾರ ನಡೆಯಿತು.
ಇಲಾಖೆಯ ಉಡುಪಿಯ ಉಪನಿರ್ದೇಶಕ ಶ್ರೀ ಶಂಕರ ಶೆಟ್ಟಿಯವರು ಉಡುಪಿಯಲ್ಲಿ ಸರ್ಕಾರಿ ಗೋಶಾಲೆ ಸ್ಥಾಪನೆಯ ಕುರಿತಾಗಿ ಸರ್ಕಾರದ ಸೂಚನೆಯನ್ನು ವಿವರಿಸಿದರು.
ಸದ್ರಿ ಗೋಶಾಲೆಯು ಸರ್ಕಾರದ ನಿರ್ದೇಶಾನುಸಾರವೇ ನಡೆಯಬೇಕಾಗಿದೆ. ಆದರೆ ಉಡುಪಿಯ ಶಾಸಕರುಗಳು ಮತ್ತು ಇಲಾಖೆಯ ಚಿಂತನೆಯಂತೆ ಈಗಾಗಲೇ ಗೋಶಾಲೆಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಶ್ರೀ ಪೇಜಾವರ ಶ್ರೀಗಳ ಸಾರಥ್ಯದಲ್ಲೆ ಈ ನೂತನ ಗೋಶಾಲೆಯೂ ನಡೆದರೆ ಸುಸೂತ್ರವಾಗಿ ನಡೆಯುತ್ತದೆ ಆ ಹಿನ್ನೆಲೆಯಲ್ಲಿ ಸುದೀರ್ಘ ಸಮಾಲೋಚನೆಯು ನಡೆಯಿತು.
ಅದರಂತೆ ಶ್ರೀಗಳ ನೇತೃತ್ವದ ಶ್ರೀ ವಿಶ್ವೇಶ ಕೃಷ್ಣ ಗೋಸೇವಾ ಟ್ರಸ್ಟ್ ಈ ಗೋಶಾಲೆಯ ನೇತೃತ್ವ ವಹಿಸಿ ಮುನ್ನಡೆಸುವುದು.
ಈ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿರುವ ಹೆಬ್ರಿ ತಾಲೂಕು ಶಿವಪುರ ಗ್ರಾಮದ ಕೆರೆಬೆಟ್ಟಿನಲ್ಲಿರುವ 13.24 ಎಕ್ರೆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಸದ್ರಿ ಟ್ರಸ್ಟ್ ಗೆ ನೀಡಿ, ಸರ್ಕಾರದ ಅನುದಾನದಲ್ಲಿ ಗೋಶಾಲೆ ಸ್ಥಾಪಿಸುವ ಬಗ್ಗೆ ಇಲಾಖೆ ಮಂಡಿಸಿದ ಚಿಂತನೆಗೆ ಶ್ರೀಗಳು ಮತ್ತು ಸಭೆಯಲ್ಲಿ ಉಪಸ್ಥಿತರಿದ್ದ ಟ್ರಸ್ಟ್ ನ ಎಲ್ಲ ವಿಶ್ವಸ್ಥರೂ ಪೂರ್ಣ ಸಮ್ಮತಿಯನ್ನು ಸೂಚಿಸಿದರು.
ಸರ್ಕಾರದ ನಿಯಮಾವಳಿಗಳನ್ನು ಖಾತರಿಪಡಿಸಿಕೊಂಡು ಗೋಶಾಲೆಯನ್ನು ನಡೆಸಲು ಶ್ರೀಗಳು ಸಮ್ಮತಿಸಿದರು.
ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಶ್ರೀಗಳವರಿಂದ ಸ್ವೀಕರಿಸಿದ ಉಪನಿರ್ದೇಶಕ ಶಂಕರ ಶೆಟ್ಟರು ಅದನ್ನು ಕೂಡಲೇ ಸರ್ಕಾರಕ್ಕೆ ಕಳಿಸಿ ಮುಂದಿನ ತೀರ್ಮಾನಗಳನ್ನು ಕೃಗೊಳ್ಳುವುದಾಗಿ ತಿಳಿಸಿದರು.
ಇಲಾಖೆಯ ನಿವೃತ್ತ ನಿರ್ದೇಶಕ ಡಾ ಸರ್ವೋತ್ತಮ ಉಡುಪ, ಶ್ರೀ ವಿಶ್ವೇಶಕೃಷ್ಣ ಗೋಸೇವಾ ಟ್ರಸ್ಟ್ ಅಧ್ಯಕ್ಷ ಪದನಾಭ ಆಚಾರ್ಯ, ಮತ್ತಿತರರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ