ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ: ಮಾಸಿಕ ಚಿಂತನ ಸಭೆ, ಸಾಧಕರಿಗೆ ಅಭಿನಂದನೆ

Upayuktha
0

ಮಂಗಳೂರು: ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಮಾಸಿಕ ಚಿಂತನ ಸಭೆ ತೊಕ್ಕೊಟ್ಟಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. 'ಸ್ವಾತಂತ್ರ್ಯ ಸೇನಾನಿ ಅಬ್ಬಕ್ಕನ ಚರಿತ್ರೆಯನ್ನು ಶಾಶ್ವತ ದಾಖಲೆಯನ್ನಾಗಿಸುವ ನಿಟ್ಟಿನಲ್ಲಿ ಹೇಳಿಕೊಳ್ಳಬಹುದಾದ ಯಾವ ಕೆಲಸಗಳೂ ಆಗಿಲ್ಲ.ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಾಗಿದೆ' ಎಂದವರು ನುಡಿದರು.


ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ 'ಕಳೆದೆರಡು ದಶಕಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಅಬ್ಬಕ್ಕ ಉತ್ಸವ ಈಗ ಕೇವಲ ಸರಕಾರಿ ಉತ್ಸವವಾಗಿ ಮಾರ್ಪಟ್ಟಿದೆ.ಅಲ್ಲಿ ಮಂಡಿಸಲಾದ ಯಾವ ಬೇಡಿಕೆಗಳೂ ಕಾರ್ಯರೂಪಕ್ಕೆ ಬಂದಿಲ್ಲ. ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ಥಾಪಕ ಸದಸ್ಯರನ್ನೊಳಗೊಂಡ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನವು ಈ ಬಗ್ಗೆ ಚಿಂತನೆ ನಡೆಸಿದ್ದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ' ಎಂದರು.


ಸಾಧಕ ಸನ್ಮಾನ:

ಸಭೆಯಲ್ಲಿ ವಿವಿಧ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ ಪುರಸ್ಕೃತರಾದ ಪ್ರತಿಷ್ಠಾನದ ಸದಸ್ಯರನ್ನು ಅಭಿನಂದಿಸಿ ಗೌರವಿಸಲಾಯಿತು. 2020 - 21 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರತಿಮಾ ಹೆಬ್ಬಾರ್ ಮತ್ತು ಭಗವತಿ ಆರಾಧನೆ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಗಳಿಸಿದ ಡಾ.ಅರುಣ್ ಉಳ್ಳಾಲ್ ಅವರನ್ನು ಗಣ್ಯರು ಸನ್ಮಾನಿಸಿದರು. ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಅಭಿನಂದನಾ ಭಾಷಣ ಮಾಡಿದರು.


ದಶಂಬರದಲ್ಲಿ 'ನಮ್ಮ ಅಬ್ಬಕ್ಕ':

'ಕೋವಿಡ್ ಕಾರಣದಿಂದ ಕಳೆದೆರಡು ವರ್ಷ ನಡೆಸಲಾಗದ ಪ್ರತಿಷ್ಠಾನದ ಸಾಂಸ್ಕೃತಿಕ ಉತ್ಸವ 'ನಮ್ಮ ಅಬ್ಬಕ್ಕ' ತೌಳವ ಸಿಂಹಿಣಿಯ ಸಾಧನಾ ಸಂಸ್ಮೃತಿ ಕಾರ್ಯಕ್ರಮವನ್ನು ಇದೇ ದಶಂಬರ ತಿಂಗಳಲ್ಲಿ ನಡೆಸಲಾಗುವುದು; ಅದರಲ್ಲಿ ತುಳುನಾಡಿನ ಶ್ರೇಷ್ಠ ಸಮಾಜ ಸೇವಕರೊಬ್ಬರಿಗೆ 'ರಾಣಿ ಅಬ್ಬಕ್ಕ ಸೇವಾ ಪುರಸ್ಕಾರ' ನೀಡಿ ಗೌರವಿಸಲಾಗುವುದು' ಎಂದು ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ತ್ಯಾಗಂ ಹರೇಕಳ, ದೀಪಕ್ ರಾಜ್ ಉಳ್ಳಾಲ್, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ವಿಜಯಲಕ್ಷ್ಮಿ ಬಿ.ಶೆಟ್ಟಿ, ಗೀತಾ ಜ್ಯುಡಿತ್ ಸಲ್ದಾನ ಚಿಂತನ ಸಭೆಯಲ್ಲಿ ಪಾಲ್ಗೊಂಡರು.


ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಕೋಶಾಧಿಕಾರಿ ಪಿ.ಡಿ.ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top