ದ.ಕ: ವಾರಾಂತ್ಯ ರಸ್ತೆಬದಿ ಉತ್ಸವಕ್ಕೆ ಜಿಲ್ಲಾಡಳಿತ ಯೋಜನೆ

Upayuktha
0

ಸ್ಥಳೀಯ ಕಲಾವಿದರು, ವ್ಯಾಪಾರಿಗಳಿಗೆ ವೇದಿಕೆ ಒದಗಿಸಲು ಚಿಂತನೆ: ಜಿಲ್ಲಾಧಿಕಾರಿ ಡಾ.ರಾಜೇಂದ್ರ



ಮಂಗಳೂರು: ಕೊರೋನ 2ನೆ ಅಲೆ ತಗ್ಗುತ್ತಿರುವಂತೆಯೇ ಜಿಲ್ಲೆಯಲ್ಲಿ ಸ್ಥಳೀಯ ಕಲಾವಿದರು ಹಾಗೂ ವ್ಯಾಪಾರಿಗಳಿಗೆ ವೇದಿಕೆಯ ಜತೆಗೆ ಜಿಲ್ಲೆಯ ಜನರಿಗೆ ವೀಕೆಂಡ್ ಮನರಂಜನೆಗೆ ಜಿಲ್ಲಾಡಳಿತ ಯೋಜನೆ ರೂಪಿಸಿದೆ. ನಗರದ ಪ್ರಮುಖ ರಸ್ತೆಗಳಾದ ಕದ್ರಿ ಪಾರ್ಕ್ ಎದುರು ಹಾಗೂ ಕ್ಲಾಕ್‍ಟವರ್ ನಿಂದ ಎಬಿಶೆಟ್ಟಿ ಸರ್ಕಲ್ ರಸ್ತೆಯಲ್ಲಿ ವಾರಾಂತ್ಯ ರಸ್ತೆಬದಿ ಉತ್ಸವ(ವೀಕೆಂಡ್ ಸ್ಟ್ರೀಟ್ ಫೆಸ್ಟಿವಲ್) ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.


ದ.ಕ. ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ವತಿಯಿಂದ ಸೆ.24 ರಂದು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಆಯೋಜಿಸಲಾದ ಜಿಲ್ಲಾಧಿಕಾರಿ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ವಾರಾಂತ್ಯದ ದಿನಗಳಲ್ಲಿ (ಶನಿವಾರ, ರವಿವಾರ) ನಿಗದಿತ ರಸ್ತೆಯುದ್ದಕ್ಕೂ ಸ್ಥಳೀಯ ಆಹಾರ, ಕರಕುಶಲ ವಸ್ತುಗಳು ಸೇರಿದಂತೆ ತಾತ್ಕಾಲಿಕ ವ್ಯಾಪಾರ ಮಳಿಗೆಗಳು ಹಾಗೂ ಸ್ಥಳೀಯ ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳ ಮೂಲಕ ಜನರಿಗೆ ಮನರಂಜನೆಯ ಜತೆಗೆ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಈ ಉತ್ಸವ ವರ್ಷಪೂರ್ತಿ ನಿರಂತರ ವಾರಾಂತ್ಯದಲ್ಲಿ ನಡೆಸಲು ಚಿಂತನೆ ಮಾಡಲಾಗಿದೆ. ಕೊರೋನ ಪಾಸಿಟಿವಿಟಿ ದರ ಇನ್ನಷ್ಟು ಕಡಿಮೆಯಾಗುವ ಜತೆಗೆ ಮೂರನೇ ಅಲೆಯ ಆತಂಕವಿಲ್ಲದಿದ್ದರೆ ಇದನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಅವರು ಹೇಳಿದರು.




ಬೀಚ್‍ಗಳ ಅಭಿವೃದ್ಧಿ, ಪಿಲಿಕುಳಕ್ಕೆ ಪ್ರವಾಸಿಗರ ಆಕರ್ಷಣೆಗೆ ಕ್ರಮ:

ತಣ್ಣೀರುಬಾವಿ, ಪಣಂಬೂರು ಸೇರಿದಂತೆ ದ.ಕ. ಜಿಲ್ಲೆಯ ಬೀಚ್‍ಗಳಲ್ಲಿ ಮೂಲಭೂತ ಸೌಕರ್ಯದೊಂದಿಗೆ ಪ್ರವಾಸಿಗರನ್ನು ಸೆಳೆಯಲು ವಿಭಿನ್ನ ರೀತಿಯ ಕ್ರಮಗಳನ್ನು ರೂಪಿಸಲಾಗಿದೆ. ಪ್ರವಾಸಿಗರಿಗೆ ಮಂಗಳೂರಿನ ಒಳಗಡೆ ಇರುವ ಬೀಚ್‍ಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಬಗ್ಗೆ ಸೆ. 27ರಂದು ಪ್ರವಾಸೋದ್ಯಮ ದಿನದ ಅಂಗವಾಗಿ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು. ಬೀಚ್‍ಗಳಿಗೆ ಆಗಮಿಸುವವರಿಗೆ ಶೌಚಾಲಯ, ವಿಶ್ರಾಂತಿ ಕೊಠಡಿ ಜತೆಗೆ ಹೊಟೇಲ್ ಮಾದರಿಯ ಊಟೋಪಾಚರ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು.


ಬೆಂಗ್ರೆ ಬೀಚ್‍ನಲ್ಲಿ ಗಾಲ್ಫ್ ಕಾರ್ಸ್ ಗಾಗಿ 2007-08ನೆ ಸಾಲಿನಲ್ಲಿ ಓಪಸ್ ಲಗೂನಾ ಸಂಸ್ಥೆ ಟೆಂಡರ್ ವಹಿಸಿದ್ದು, ಸಂಸ್ಥೆಗೆ ಇದೀಗ ಸಿಆರ್ ಝಡ್ ಅನುಮತಿ ದೊರಕಿದೆ. ಇಲ್ಲಿ ಜಮೀನು ಒತ್ತುವರಿ ಸಮಸ್ಯೆ ಇರುವುದರಿಂದ ಅದಕ್ಕೆ ಸೂಕ್ತ ಕ್ರಮಗಳೊಂದಿಗೆ ರೆಸಾರ್ಟ್ ಮಾದರಿಯಲ್ಲಿ ಅಭಿವೃದ್ದಿ ಪಡಿಸಿದಾಗ ಸ್ಥಳೀಯ ಸುಮಾರು 800 ಮಂದಿಗೆ ಉದ್ಯೋಗವೂ ದೊರಕಲಿದೆ. ಈ ಕುರಿತಂತೆ ಕಳೆದ ಎರಡು ತಿಂಗಳ ಅವಧಿಯಲ್ಲಿ 6 ಸಭೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


ಸಸಿಹಿತ್ಲು ಹಾಗೂ ತಣ್ಣೀರುಬಾವಿ ಬೀಚ್‍ನಲ್ಲಿ ಸರಕಾರಿ ಸರ್ಫಿಂಗ್ ಸ್ಕೂಲ್ ಆರಂಭಿಸುವ ಪ್ರಸ್ತಾವನೆ ಇದೆ. ಸಸಿಹಿತ್ಲು ಬೀಚ್ ಅಭಿವೃದ್ಧಿಗೆ ಈಗಾಗಲೇ 5 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ಅಲ್ಲಿ ಯಾವುದೇ ರೀತಿಯ ತಾತ್ಕಾಲಿಕ ಮೂಲಭೂತ ಸೌಕರ್ಯಗಳನು ಮಾಡಿದಾಗಲೂ ಕಡಲ್ಕೊರೆತದಿಂದ ಸಮಸ್ಯೆಯಾಗುವ ಕಾರಣ, ಅದನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ. ಜಂಗಲ್ ಲಾಡ್ಜ್ ಮಾದರಿಯಲ್ಲಿ ಅಲ್ಲಿ ತಾತ್ಕಾಲಿಕ ಸಾಂಪ್ರದಾಯಿಕ ಗುಡಿಸಲುಗಳ ನಿರ್ಮಾಣ, ಮೇಲ್ಛಾವಣಿ ರಹಿತ ರೆಸ್ಟೋರೆಂಟ್‍ಗಳ ನಿರ್ಮಾಣ ಮಾಡುವ ಯೋಜನೆಯೂ ಇದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.


ಪಿಲಿಕುಳ ಜೈವಿಕ ಉದ್ಯಾನವಾಗಿದ್ದು, ನೈಸರ್ಗಿಕ ರೀತಿಯಲ್ಲಿ ಇಲ್ಲಿ ಪ್ರಾಣಿ, ಪಕ್ಷಿಗಳ ವಾಸಕ್ಕೆ ಅವಕಾಶವಿದೆ. ಈಗಿರುವ ವನ್ಯಜೀವಿಗಳಿಗೆ ವಿಶೇಷ ಆಕರ್ಷಣೆಯಾಗಿ ಜಿರಾಫೆ, ಜೀಬ್ರಾ ಹಾಗೂ ಆನೆಗಳನ್ನು ಸೇರ್ಪಡೆಗೊಳಿಸಲು ಚಿಂತಿಸಲಾಗಿದೆ. ಇದೇ ವೇಳೆ ಜಿಲ್ಲೆಯ ಪ್ರಮುಖ ಆಕರ್ಷಣೆಯಾದ ಕಂಬಳವನ್ನು ಪಿಲಿಕುಳದಲ್ಲಿ ಮತ್ತೆ ನಡೆಸುವುದು, ನದಿ ಉತ್ಸವವನ್ನು ಆರಂಭಿಸುವ ಬಗ್ಗೆಯೂ ಆಲೋಚನೆ ಇದೆ ಎಂದು ಅವರು ಹೇಳಿದರು.


ಸಂವಾದದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top