||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಾಮಾನ್ಯ ಶ್ರೇಣಿ ಪ್ರಾಧಿಕಾರ ರಚನೆ ಪ್ರಸ್ತಾಪ- ಸಹಕಾರದ ಸ್ವಾಯತ್ತೆಗೆ ಧಕ್ಕೆ

ಸಾಮಾನ್ಯ ಶ್ರೇಣಿ ಪ್ರಾಧಿಕಾರ ರಚನೆ ಪ್ರಸ್ತಾಪ- ಸಹಕಾರದ ಸ್ವಾಯತ್ತೆಗೆ ಧಕ್ಕೆಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959ಕ್ಕೆ ತಿದ್ದುಪಡಿ ತಂದು ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇಮಕಾತಿ, ವರ್ಗಾವಣೆ, ಹತೋಟಿಯನ್ನು ಜಿಲ್ಲಾ ಡಿಸಿಸಿ ಬ್ಯಾಂಕುಗಳ ನೇತೃತ್ವದ ಸಾಮಾನ್ಯ ಶ್ರೇಣಿ ಪ್ರಾಧಿಕಾರ ರಚಿಸಿ ಅವುಗಳಿಗೆ ಒಪ್ಪಿಸುವ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಮುಂದಿಟ್ಟಿದೆ.


2010ರ ಹಿಂದೆ ಸಾಮಾನ್ಯ ಶ್ರೇಣಿ ಪ್ರಾಧಿಕಾರ ರಚಿಸುವ ಅಧಿಕಾರ ಕಾನೂನಿನಲ್ಲಿತ್ತು. ಪ್ರೊ. ವೈದ್ಯನಾಥನ್ ವರದಿ ಹಾಗೂ ಸಂವಿಧಾನದ 97ನೇ ತಿದ್ದುಪಡಿಯ ತಳಹದಿಯಲ್ಲಿ ಸಾಮಾನ್ಯ ಶ್ರೇಣಿ ಪ್ರಾಧಿಕಾರ ರಚನೆಗೆ ಸಂಬಂಧಿಸಿದ ಕರ್ನಾಟಕ ಸಹಕಾರಿ ಸಂಘಗಳ ಕಾನೂನು 1959ರ ಕಲಂ 128ಎ ರದ್ದುಗೊಂಡಿತು. ಸಹಕಾರಿಸಂಘಗಳು ಸ್ವಇಚ್ಚಾ ರಚನೆ ಹಾಗೂ ಸದಸ್ಯನಿಯಂತ್ರಿತ ಸ್ವಯಂಆಡಳಿತ ಹೊಂದಿರುವ ಸ್ವಾಯತ್ತಾ ಸಂಸ್ಥೆಗಳಾಗಿರಬೇಕು ಎಂಬ ಸಹಕಾರದ ಮೂಲ ಸಿದ್ದಾಂತದ ಆಧಾರದಲ್ಲಿ ಬಾಹ್ಯ ನಿಯಂತ್ರಿತ ನೌಕರರ ಸಾಮಾನ್ಯ ಶ್ರೇಣಿ ಪ್ರಾಧಿಕಾರ ಕಾನೂನಿನಲ್ಲಿ ಅಸ್ತಿತ್ವ ಕಳಕೊಂಡಿತು. ಸಂವಿಧಾನದ 97ನೆ ತಿದ್ದುಪಡಿಯಲ್ಲಿ ಸದಸ್ಯರು ಹಾಗೂ ಆಡಳಿತ ಮಂಡಳಿ ಪರಮೋಚ್ಚ ಅಧಿಕಾರವುಳ್ಳವರು ಎಂಬುದಾಗಿ ಹೇಳಲಾಗಿದೆ. ಇತ್ತೀಚೆಗೆ  ದೇಶದ ಸುಪ್ರೀಂಕೋರ್ಟು ಸಂವಿಧಾನದ 97ನೇ ತಿದ್ದುಪಡಿಯ ಭಾಗ 19Bಯನ್ನು ರದ್ದುಪಡಿಸಿದರೂ ಸಹಕಾರಿರಂಗದಲ್ಲಿ ಸ್ವಯಂ ಆಡಳಿತ ಹಾಗೂ ಸ್ವಾಯತ್ತೆ ಇರಬೇಕೇಂಬ ಅಂಶವನ್ನು ರದ್ದು ಪಡಿಸದೇ ಇರುವುದು ಗಮನಾರ್ಹ ವಿಷಯ.


ಸಾಮಾನ್ಯ ಶ್ರೇಣಿ ಪ್ರಾಧಿಕಾರದಿಂದ  ದುಷ್ಪರಿಣಾಮಗಳು.

1. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಗ್ಗೆ ಆಡಳಿತ ಮಂಡಳಿಗೆ ಯಾವುದೇ ಹಿಡಿತ ಇರಲಾರದು. ಇದರಿಂದಾಗಿ ಅಧ್ಯಕ್ಷˌಆಡಳಿತ ಮಂಡಳಿ ನಿರ್ದೇಶನಗಳಿಗೆ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅಗೌರವ ತೋರುವ ಸಾಧ್ಯತೆಗಳಿಂದ ಸಂಘರ್ಷದ ವಾತಾವರಣ ನಿರ್ಮಾಣವಾಗಬಹುದು.

2. ಇದರಲ್ಲಿ ವರ್ಗಾವಣೆಗೆ ಅವಕಾಶ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಖಾಯಂ ಯಾ ಸ್ಥಳೀಯನಲ್ಲದ ವ್ಯಕ್ತಿಗೆ ಸಂಸ್ಥೆಯ ಬಗ್ಗೆ ಪ್ರೀತಿ ಮಮಕಾರ ಆಸಕ್ತಿ ಇಲ್ಲದಿರುವ ಸಾಧ್ಯತೆ ಇದೆ.

3. ವರ್ಗಾವಣೆಗೊಂಡು ಯಾವುದೇ ಊರಿನಿಂದ ಬಂದಾತನಿಗೆ ಸ್ಥಳೀಯ ಜನರ ಪರಿಚಯ ಅವರ ವ್ಯವಹಾರದ ಬಗ್ಗೆ ತಿಳುವಳಿಕೆ ಕೊರತೆಯಿಂದ ಜನಸ್ನೇಹಿಯಲ್ಲದೇ ಸಹಕಾರಿ ಸಂಘ ಸರಕಾರಿ ವ್ಯವಸ್ಥೆಯ ಸ್ವರೂಪ ಪಡೆದು ನಷ್ಟ ಅಥವಾ ಕ್ಷೀಣವಾಗುವ ಎಲ್ಲಾ ಸಾಧ್ಯತೆಗಳಿವೆ.

4. ಆತನ ಮೇಲೆ ಹಿಡಿತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಹೊಂದಿ ಅವರ ಎಲ್ಲ ನಿರ್ದೇಶನದಂತೆ ಕಾರ್ಯವೆಸಗುವ ಸಾಧ್ಯತೆಯಿದ್ದು ಇದರಿಂದ ಸಂಘದ ಆಡಳಿತ ಮಂಡಳಿ ಮತ್ತು ಜಿಲ್ಲಾ ಬ್ಯಾಂಕಿನ ಮಧ್ಯೆ ಘರ್ಷಣೆಗೆ ದಾರಿಯಾಗಬಹುದು. ಅಲ್ಲದೇ ಸಂಘದ ಸ್ವಾಯತ್ತೆಗೆ ಧಕ್ಕೆ ಸಂಭವಿಸಲಿದ್ದುˌಇದೊಂದು ಜಿಲ್ಲಾ ಬ್ಯಾಂಕಿನ ಶಾಖೆಯ ರೀತಿ ವ್ಯವಹಾರ ನಡೆಸುವ ಸಾಧ್ಯತೆಗಳಿವೆ. ಇದು ಸಹಕಾರಿ ಸಿದ್ದಾಂತಕ್ಕೆ ಬಹುದೊಡ್ಡ ಧಕ್ಕೆ.

5. ಬೇರೆ ಬೇರೆ ಸಂಘಗಳ ವ್ಯವಹಾರದ  ಪ್ರಮಾಣದಲ್ಲಿ ವ್ಯತ್ಯಾಸವಿದ್ದು CEO ವೇತನ ಭತ್ಯೆ ಸೌಲಭ್ಯಗಳನ್ನು CCA ಸಮಾನವಾಗಿ ನಿಗದಿಪಡಿಸಿದರೆ ಸಣ್ಣಪ್ರಮಾಣದ ವ್ಯವಹಾರದ ಸಂಸ್ಥೆಗಳು ಆರ್ಥಿಕವಾಗಿ ಬಳಲುವ ಸಾಧ್ಯತೆಗಳಿವೆ.


ಮೇಲ್ಕಾಣಿಸಿದ ದುಷ್ಪರಿಣಾಮಗಳು ಸಹಕಾರದ ಸ್ವಯಂಆಡಳಿತˌಸ್ವಾಯತ್ತೆ ಸಿದ್ದಾಂತಕ್ಕೆ ವಿರುದ್ದವಾಗಿರುವ ಕಾರಣ ಬೆಳೆದು ನಿಂತಿರುವ ಸಹಕಾರ ಚಳವಳಿ ನಿಧಾನವಾಗಿ ಸೊರಗುವ ಅವಕಾಶಗಳು ವಿಫುಲವಾಗಿದೆ.

ಕರ್ನಾಟಕ ಸರಕಾರದ ಗೌರವಾನ್ವಿತ ಸಹಕಾರ ಸಚಿವರು ಪತ್ರಿಕಾ ಹೇಳಿಕೆ ನೀಡುತ್ತಾ, 'ಸಹಕಾರ ಸಂಘಗಳು ರೈತ ಸ್ನೇಹಿಯಾಗಿಲ್ಲ. ಸಂಘಗಳ ಕಾರ್ಯದರ್ಶಿಗಳು ತಮ್ಮಮನೆಯ ವ್ಯವಹಾರದಂತೆ ಸಂಘದ ವಹಿವಾಟು ನಡೆಸುತ್ತಿದ್ದಾರೆ. ಆದ್ದರಿಂದ ಸಹಕಾರ ಸಂಘಗಳು ರೈತರ ಆಸ್ತಿಯಾಗಬೇಕು'- ಎಂಬ ಕಾರಣ ಮುಂದಿಟ್ಟು ಸಾಮಾನ್ಯ ಶ್ರೇಣಿ ಪ್ರಾಧಿಕಾರ ರಚನೆ ಸಮರ್ಥಿಸಿರುವುದು ವರದಿಯಾಗಿದೆ. ಆದರೆ ಸಹಕಾರ ಚಳವಳಿ ಬಲಿಷ್ಟವಾಗಿ ಬೆಳೆದಿರುವ ಕರಾವಳಿ ಮಲೆನಾಡು ಭಾಗಗಳಲ್ಲಿ ಎಷ್ಟೇ ಹುಡುಕಾಡಿದರೂ ಇಂತಹ ನಿಕೃಷ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸಿಗಲಾರದು.


ಒಂದು ವೇಳೆ ರಾಜ್ಯದ ಯಾವುದೊ ಒಂದು ಭಾಗದಲ್ಲಿ ಅಂತಹ ಸಹಕಾರಿ ಸಂಘಗಳಿದ್ದಲ್ಲಿ ಅವುಗಳ ಆಡಳಿತ ಮಂಡಳಿ ಅಥವಾ ಮುಖ್ಯಕಾರ್ಯನಿರ್ವಹಣಾಧಿಕಾರಿಗಳನ್ನು ಕಾನೂನಿನ ಮೂಲಕ ಸರಿಪಡಿಸಬೇಕು. ಸಾಮೂಹಿಕವಾದ ಕಾನೂನು ತಿದ್ದುಪಡಿ ಜ್ಯಾರಿಗೆ ತಂದು  ಸರಿದಾರಿಯಲ್ಲಿ ಸಾಗುತ್ತಿರುವ ಸಂಘಗಳ ಮೇಲೆ ದುಷ್ಪರಿಣಾಮ ಬೀರಿ ಸಹಕಾರಿವ್ಯವಸ್ಥೆಯನ್ನು ಕೆಡಹುವಂತಹ ಕ್ರಮಗಳನ್ನು ವಿರೋಧಿಸಿ ಅದಕ್ಕೆ ತಡೆಯೊಡ್ಡುವ ಕಾರ್ಯ ಎಲ್ಲಾ ನಿಷ್ಪೃಹ ಸಹಕಾರಿಗಳ ಜವಾಬ್ದಾರಿಯಾಗಿದೆ.


2010ರ ಹಿಂದೆ ಕಲಂ 128a ಜ್ಯಾರಿಯಲ್ಲಿದ್ದರೂ ದ ಕ ಜಿಲ್ಲೆಯಲ್ಲಿ ಸಾಮಾನ್ಯ ಶ್ರೇಣಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿರಲಿಲ್ಲ. ಇದರಿಂದಾಗಿ ದೈನಂದಿನ ಚಟುವಟಿಕೆಗೆ ತೊಂದರೆಯಾಗಿರಲಿಲ್ಲ. ಆದರೆ ಕೆಲವು ವರ್ಷ ಪ್ಯಾಕ್ಸ್ ಗಳು ತಮ್ಮ managerial contribution ಪಾವತಿಸಿದ್ದು ಪ್ಯಾಕ್ಸ್ ಗಳಿಗೆ ವಾಪಾಸಾಗಿಲ್ಲ.

ಕಾನೂನಿನ ಕಲಂ 128ಎ ರದ್ದುಗೊಂಡರೂ ರಾಜ್ಯದ ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃಧ್ಧಿ ಬ್ಯಾಂಕ್ ನ (PCARD Bank) ನೌಕರರ ನಿಯಂತ್ರಣಕ್ಕಾಗಿ ಸಹಕಾರಿ ಸಂಘಗಳ ಕಾನೂನು 1959ರಲ್ಲಿ ಕಲಂ 97ಎಯನ್ನು 2011ರಲ್ಲಿ ಸೇರ್ಪಡೆಗೊಳಿಸುವ ಮೂಲಕ ಪಿಕಾರ್ಡು ಬ್ಯಾಂಕುಗಳಿಗೆ ಸಾಮಾನ್ಯ ಶ್ರೇಣಿ ಪ್ರಾಧಿಕಾರದ ಅಸ್ತಿತ್ವವನ್ನು ಉಳಿಸಲಾಗಿದೆ. ಇದರಿಂದಾಗಿ ಕರಾವಳಿಯ ಉತ್ತಮ ವ್ಯವಹಾರದ ಪಿಕಾರ್ಡು ಬ್ಯಾಂಕುಗಳು ಹಲವು ಸಮಸ್ಯೆ ಎದುರಿಸುತ್ತಿವೆ.


ಕಳೆದ ಹಲವು ವರ್ಷಗಳಿಂದ ಹೊಸ ನೇಮಕಾತಿ ಇಲ್ಲ 10-12ಖಾಯಂ ನೌಕರರು ಇರಬೇಕಾದ ಪಿಕಾರ್ಡುಗಳಲ್ಲಿ 2-3 ಖಾಯಂ ನೌಕರರು ಮಾತ್ರ ಇರುವುದು. ವ್ಯವಹಾರ ಸುಸೂತ್ರವಾದ ನಿರ್ವಹಣೆಗೆ ಆಡಳಿತ ಮಂಡಳಿಗಳು ದಿನವಹಿ ವೇತನದ ನೌಕರರನ್ನು ನೇಮಿಸಿಕೊಂಡಿವೆ. ಇವರಿಗೆ ಕರ್ತವ್ಯದಲ್ಲಿ ಜವಾಬ್ದಾರಿಗಳಿರುವುದಿಲ್ಲ ಹಾಗೆಯೇ ಕಾನೂನಿನಲ್ಲಿ ದಿನವಹಿ ವೇತನದ ನೌಕರರ ನೇಮಕಾತಿಗೆ ಅವಕಾಶವಿಲ್ಲದಿದ್ದರೂ ಅನಿವಾರ್ಯ ಸಂದರ್ಭ ಆದ ಕಾರಣ ಆಡಳಿತ ಮಂಡಳಿ ನಿಯಮ ಮೀರಿ ನೇಮಿಸುವ ಅವಶ್ಯಕತೆ ಬಂದಿದೆ. ಖಾಯಂ ನೌಕರರ ವೇತನ ಸೌಲಭ್ಯಗಳು ಸಕಾಲದಲ್ಲಿ ಮಂಜೂರಾಗುವುದಿಲ್ಲ. ಇಡೀ ರಾಜ್ಯದ ಪರಿಸ್ಥಿತಿಯ ಅಧ್ಯಯನ ಸಾಮಾನ್ಯ ಶ್ರೇಣಿ ಪ್ರಾಧಿಕಾರಕ್ಕೆ ಇಲ್ಲದಿರುವುದು ಇಂತಹ ಎಡವಟ್ಟುಗಳಿಗೆ ಕಾರಣ. ಸ್ವಯಂಆಡಳಿತ ಸ್ವಾಯತ್ತೆ ಇಲ್ಲದಿದ್ದಲ್ಲಿ ಆಡಳಿತ ನಿರ್ವಹಣೆ ಅಧಃಪತನಕ್ಕೆ ಸಾಗುತ್ತದೆಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ.


ಆದ್ದರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಸಂಬಂಧಿಸಿದ ಸಾಮಾನ್ಯ ಶ್ರೇಣಿ ಪ್ರಾಧಿಕಾರ ರಚನೆಯ ಕಾನೂನು ತಿದ್ದುಪಡಿ ಕೈಬಿಡಬೇಕು. ಜತೆಯಲ್ಲಿ  ಪಿಕಾರ್ಡು ಸಂಬಂಧಿತ ಕಲಂ97ಎ ಯನ್ನು ರದ್ದು ಪಡಿಸಿ ಸಹಕಾರದ ಸ್ವಾಯತ್ತೆ, ಸ್ವಯಂಆಡಳಿತಕ್ಕೆ ಮನ್ನಣೆ ನೀಡುವ ಕಾರ್ಯ ರಾಜ್ಯ ಸರಕಾರ ಕೈಗೊಳ್ಳಲಿ.

-ಸಹಕಾರಂ ಗೆಲ್ಗೆ-

-ರಾಧಾಕೃಷ್ಣ ಕೋಟೆ

ಅಂಚೆ: ಕಳಂಜ

ಸುಳ್ಯ ತಾಲೂಕು ದ.ಕ. 574212

ಮೊಬೈಲ್‌: 9448503424


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post