ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಂಭ್ರಮದ ಅನಂತ ವ್ರತಾಚರಣೆ

Upayuktha
0

ಉಡುಪಿ: ಪಣೆ ಅಂದರೆ ಏತ. ಏತದ ಅಡಿಯಿಂದ ತನ್ನ ಪರಮ ಭಕ್ತ ಮಾಧವ ಕುಂಜಿತ್ತಾಯರ ಮನದಿಂಗಿತವ ಪೂರೈಸಲು ದರ್ಶನ ಭಾಗ್ಯ ಕೊಡಲು ಬಿಂಬ ರೂಪದಲ್ಲಿ ಒಲಿದು ಬಂದ ಶ್ರೀ ಶೇಷಾಸನ ಅನಂತ ಪದ್ಮನಾಭನ ಪುಣ್ಯ ಸ್ಥಳ ಪಣಿಯಾಡಿ. ಇತ್ತೀಚೆಗಷ್ಟೇ ಮೂರನೇ ಬಾರಿ ಪ್ರತಿಷ್ಟೆಗೊಂಡ ದೇವಸ್ಧಾನ ಜೀರ್ಣೋದ್ಧಾರದ ಒಂದು ಹಂತವನ್ನು ಮುಗಿಸಿದೆ. ಈ ಮೂಲ ರೂಪಿ ಪರಮಾತ್ಮನ ಪರ್ವದಿನ ಅನಂತನ ವ್ರತ. ಭಾದ್ರಪದ ಮಾಸದ ಆನಂತನ ಚತುರ್ದಶಿಯೆಂದೇ ಹೆಸರಾಗಿರುವ ನಿನ್ನೆಯ ದಿನ ಆದಿತ್ಯವಾರದಂದು ಪಣಿಯಾಡಿಯಲ್ಲಿ ಹಿಂದೆಂದೂ ಕಾಣದ ಅತ್ಯಂತ ವೈಭವಯುತವಾಗಿ ಈ ಹಬ್ಬವನ್ನು ಬಹಳ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.


ಕದಳೀ ಪ್ರಿಯ ಅನಂತ ಪದ್ಮನಾಭನಿಗೆ ಭಕ್ತರು ಅರ್ಪಿಸಿದ ಸುಮಾರು 80ಕ್ಕೂ ಮಿಕ್ಕಿದ ಕದಳೀ ಗೊನೆಯಿಂದ ದೇವಳವನ್ನು ಶೃಂಗರಿಸಿ ಸಮರ್ಪಿಸಿ ಪೂಜಿಸಲಾಯಿತು. ವಿವಿಧ ವರ್ಣದ ಪರಿಮಳ ಪುಷ್ಟಗಳಿಂದ ಶ್ರೀದೇವಳವನ್ನು ಮತ್ತು ಶ್ರೀ ದೇವರನ್ನು ಅಲಂಕರಿಸಲಾಗಿದ್ದು ತಿರುಪತಿಯ ಸೊಬಗು ಪಣಿಯಾಡಿಯಲ್ಲಿ ಬಿಂಬಿತವಾದಂತಿತ್ತು. ಮುಂಜಾನೆಯಿಂದ ರಾತ್ರಿಯವರೆಗೆ ನಿರಂತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.


ಕದಿರು ಕಟ್ಟುವ ಮೂಲಕ ಪ್ರಾರಂಭವಾಗಿ ಪ್ರಾತಃ ಪೂಜೆ, ಕದಳೀ ಪೂಜೆ, ವಿಷ್ಣು ಸಹಸ್ರನಾಮಾದಿ ಪಾರಾಯಣ, ವೇದ ಘೋಷ, ವನಿತೆಯರಿಂದ ಲಕ್ಷ್ಮೀ ಶೋಭಾನೆ, ಚಂಡೆನಾದ, ಮಹಾಪೂಜೆ, ಪಲ್ಲಪೂಜೆ, ಪಾನಕ ಸೇವೆ, ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಸಂಗೀತ ಕಾರ್ಯಕ್ರಮ, ಊರಿನ ಯುವಕರ ತಂಡದ ಕುಣಿತ ಭಜನೆ, ಅ೦ಬಲಪಾಡಿಯ ಮಹಿಳಾ ತಂಡದ ಕುಣಿತ ಭಜನೆ, ಊರಿನ ಮಹಿಳೆಯರಿಂದ ಭಜನೆ, ಸಾಯಂಕಾಲ ಹೂವಿನ ಪೂಜೆ, ರಂಗಪೂಜೆ, ಅಷ್ಟಾವಧಾನಾದಿ ನೃತ್ಯ ಸೇವೆ ಮಂಗಳ ವಾದ್ಯಗಳಿಂದ ಊರ ಪರವೂರ ಭಕ್ತರ ದಿವ್ಯ ಉಪಸ್ಥಿತಿಯಲ್ಲಿ ಸುಸಂಪನ್ನಗೊಂಡಿತು.




(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top