|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೋಂಪು- ಅನಂತವ್ರತ: ಇಂದು ಅನಂತ ಚತುರ್ದಶಿ, ಶೇಷಶಯನ ಶ್ರೀಮನ್ನಾರಾಯಣನ ಉಪಾಸನೆ ಆರಂಭ

ನೋಂಪು- ಅನಂತವ್ರತ: ಇಂದು ಅನಂತ ಚತುರ್ದಶಿ, ಶೇಷಶಯನ ಶ್ರೀಮನ್ನಾರಾಯಣನ ಉಪಾಸನೆ ಆರಂಭ

ಅನಂತಾನಂತ ದೇವೇಶ...


'ಕ್ಷೀರಸಾಗರದಲ್ಲಿ ಮಹಾಶೇಷನ ಮೇಲೆ ಮಲಗಿರುವ ಶ್ರೀಮನ್ನಾರಾಯಣ' ಈ ನೋಟ ಅಥವಾ ದೃಶ್ಯದ ಯಥಾವತ್ತಾದ ಪರಿಕಲ್ಪನೆ- ಅನುಸಂಧಾನದೊಂದಿಗೆ ನೆರವೇರುವ ಉಪಾಸನೆಯೇ 'ಶ್ರೀಮದನಂತವ್ರತ', 'ಅನಂತವ್ರತ, ಅಥವಾ 'ನೋಂಪು'. ಭಾದ್ರಪದ ಶುದ್ಧ ಚತುರ್ದಶಿ ತಿಥಿಯಲ್ಲಿ 'ಅನಂತ ಚತುರ್ದಶಿ' ಆಚರಣೆ. ಇದು ವ್ರತವಾಗಿ ನೆರವೇರುತ್ತದೆ.


ಕ್ಷೀರ ಸಾಗರವನ್ನು ಸಾಂಕೇತಿಸುವ ಜಲ ಪೂರಿತ ಕಲಶ. ಅದರ ಮೇಲೆ ದರ್ಭೆಯಿಂದ ನಿರ್ಮಿಸಿರುವ ಏಳು ಹೆಡೆಯುಳ್ಳ ಶೇಷಾಕೃತಿ. ಈ ಶೇಷಾಕೃತಿಯ ಮೇಲೆ ಶಾಲಗ್ರಾಮ. ಈ ಕಲ್ಪನೆಯಲ್ಲಿ ಅನಂತನಾಮಕನಾದ ಶೇಷನ ಮೇಲೆ ಶಯನ ಮಾಡಿದ ಅನಂತಪದ್ಮನಾಭನ ಚಿಂತನೆಯೊಂದಿಗೆ ಆರಾಧನೆ ನೆರವೇರುವುದು. ವೈಕುಂಠವನ್ನೆ ಸಾಕಾರ ಗೊಳಿಸುವ, ವಾಸ್ತವದ ಸ್ಥಾಪನೆಯಾಗಿ ವ್ರತ ನಡೆಯುವುದು. ಲೌಕಿಕದಲ್ಲಿ ಅಲೌಕಿಕವನ್ನು ನಿರ್ಮಿಸುವ ವೈದಿಕದ ಉಪಾಸನಾ ವಿಧಾನ ಅದ್ಭುತ.


ಹದಿನಾಲ್ಕು ಗಂಟುಗಳುಳ್ಳ ಕೆಂಪು ಬಣ್ಣದ "ದಾರ ಅಥವಾ ದೋರ"ವನ್ನು ಪ್ರತಿಷ್ಠಾಪಿತ ಕಲಶದಲ್ಲಿ ಪ್ರಧಾನ ಪೂಜಾಕಾಲದಲ್ಲಿ ಇರಿಸಿ ಪೂಜಾನಂತರದಲ್ಲಿ ಧರಿಸಿಕೊಳ್ಳುವುದು ಅನಂತವ್ರತದ ಮುಖ್ಯ ಅಂಗ. ಪುರುಷರಾದರೆ ಬಲಕೈಯ ತೋಳಿನಲ್ಲಿ, ಸ್ತ್ರೀಯರಾದರೆ ಎಡಕೈಯ ತೋಳಿನಲ್ಲಿ ಕಟ್ಟಿಕೊಳ್ಳುವುದು ಸಂಪ್ರದಾಯ.



          

ಪೂಜೆ - ದೋರ ಬಂಧನ‌


ಶ್ರೀಮದನಂತವ್ರತ ಕಲ್ಪೋಕ್ತ ಪೂಜಾವಿಧಿಯು ಹಂತಹಂತವಾಗಿ ಸಂಪನ್ನಗೊಳ್ಳುತ್ತದೆ.


ಯಮುನಾ ಪೂಜೆ, ಅಂಗಪೂಜೆ, ಪತ್ರಪೂಜೆ, ಪುಷ್ಪಪೂಜೆ, ನಾಮಪೂಜೆ, ಧೂಪದೀಪಾದಿ ಸಮರ್ಪಣೆ. ಕಲಶಸ್ಥಾಪನೆ, ಶೇಷ ಪೂಜೆ, ಧ್ಯಾನಾವಾಹನಾದಿ, ಅಭಿಷೇಕ, ವಸ್ತ್ರಯುಗ್ಮ ಸಮರ್ಪಣೆ, ಅಂಗಪೂಜೆ, ಅನಂತಪೂಜೆ, ಧ್ಯಾನಮ್, ಮಂಟಪ ಧ್ಯಾನಮ್, ಪೀಠಪೂಜೆ, ನವಶಕ್ತಿಪೂಜೆ, ಆವಾಹನಮ್, ನವದೋರ ಸ್ಥಾಪನೆ, ಷೋಡಶೋಪಚಾರ ಪೂಜೆ, ಅಂಗಪೂಜೆ, ಷೋಡಶಾವರಣ ಪೂಜೆ, ಶಕ್ತಿಪೂಜೆ, ದೋರಪೂಜೆ, ಪತ್ರಪೂಜೆ, ಪುಷ್ಪಪೂಜೆ, ಅಷ್ಟೋತ್ತರನಪೂಜೆ, ಧೂಪದೀಪ ನೈವೇದ್ಯ, ಫಲನಿವೇದನೆ, ನೀರಾಜನ, ಪ್ರಸನ್ನಾರ್ಘ್ಯ, ಪ್ರದಕ್ಷಿಣ ನಮಸ್ಕಾರ, ಪ್ರಾರ್ಥನೆ, ದೋರಪ್ರಾರ್ಥನೆ, ದೋರನಮಸ್ಕಾರ- ಬಂಧನ, ಜೀರ್ಣದೋರ ವಿಸರ್ಜನೆ, ಉಪಾಯನದಾನಮ್, 

ಉದ್ವಾಸನ, ಕ್ಷಮಾಪಣ, ಸಮಾಪನ. ಹೀಗೆ ವಿವಿಧ ಹಂತಗಳಲ್ಲಿ ಪೂಜೆ ನೆರವೇರಿ ಒಂದು ಭಕ್ತಿ ಭಾವದ ವ್ರತಾಚಾರಣೆಯ ಸಾರ್ಥಕತೆ ಸನ್ನಿಹಿತವಾಗುತ್ತದೆ.


ಜಲಸಂಗ್ರಹ- ಯಮುನಾಪೂಜೆಯಿಂದ‌ ಕಲಶ ಪ್ರತಿಷ್ಠೆ, ಶೇಷ ಕಲ್ಪನೆ, ಮತ್ತೆ ಶಾಲಗ್ರಾಮ ಸ್ಥಾಪನೆಯ ಚಿಂತನೆ ಬಳಿಕ ದೋರದ ಮಹತ್ವ- ಧಾರಣೆ. ಇವು ಅನಂತವ್ರತದಲ್ಲಿ ವ್ಯಕ್ತವಾಗುವ ಮುಖ್ಯ ಅಂಶಗಳು.


ಸಂಕ್ಷಿಪ್ತ ಅನಂತವ್ರತ ಕಥಾ:

ಅನಂತವ್ರತ ಕಥೆಯು ಯಾರಿಂದ ಯಾರಿಗೆ ಹೇಳಲ್ಪಟ್ಟಿತು, ಕಲ್ಪೋಕ್ತ ಪೂಜಾವಿಧಾನದೊಂದಿಗೆ ದೋರ (ದಾರ) ಬಂಧನದ ಮಹತ್ವ... ಇತ್ಯಾದಿ.


ಕಪಟ ದ್ಯೂತದ ಪರಿಣಾಮವಾಗಿ ವನವಾಸಕ್ಕೆ ದ್ರೌಪದಿ ಸಹಿತ ಪಾಂಡವರು ಹೊರಡುತ್ತಾರೆ. ವಿಷಯ ತಿಳಿದ ಕೃಷ್ಣ ಕಾಡಿಗೆ ಬರುತ್ತಾನೆ. ಒದಗಿದ ಕಷ್ಟ ಪರಂಪರೆಗೆ ನಿವೃತ್ತಿ ಹೇಗೆ ಎಂದು ಧರ್ಮರಾಯನು ಕೇಳಲು, ಶ್ರೀಕೃಷ್ಣನು 'ಅನಂತವ್ರತ'ವನ್ನು ಮಾಡುವಂತೆ ಸೂಚಿಸುತ್ತಾನೆ. "ಅನಂತನೆಂದರೆ" ನಾನೆ ಆಗಿದ್ದೇನೆ, ಆ ಅನಂತ ಸ್ವರೂಪವು ನನ್ನದೇ ಆಗಿದೆ ಎಂದು ತಿಳಿ" ಎಂದು ಅವತಾರದ ಸೂಕ್ಷ್ಮವನ್ನು ತಿಳಿಸುತ್ತಾನೆ. ಇಂತಹ ಅನಂತಸ್ವರೂಪವೇ ತಾನು ಎಂದು ಹೇಳುತ್ತಾನೆ ಕೃಷ್ಣ:


ಕೃತಯುಗದಲ್ಲಿದ್ದ ಸುಮಂತನೆಂಬ ಬ್ರಾಹ್ಮಣನ ಕತೆಯನ್ನು ಹೇಳುವ ಮೂಲಕ ಅನಂತ ವ್ರತದ ಫಲಪ್ರಾಪ್ತಿಯ ವಿವರಣೆಯನ್ನು ನೀಡುತ್ತಾನೆ ಶ್ರೀಕೃಷ್ಣ. ಸುಮಂತನು ತನ್ನ ಮಗಳನ್ನು ಕೌಂಡಿನ್ಯನೆಂಬ ಮಹರ್ಷಿಗೆ ಗೃಹ್ಯಸೂತ್ರದ ಕ್ರಮದಲ್ಲಿ ಮದುವೆ ಮಾಡಿ ಕೊಡುತ್ತಾನೆ.


ನವವಧೂವರರಿಗೆ ಬಳುವಳಿಯಾಗಿ ಉತ್ತಮ ವಸ್ತುವನ್ನು ಕೊಡಬೇಕೆಂದು ಬಯಸಿ ಪತ್ನಿಯಲ್ಲಿ ಹೇಳಲು, ಆಕೆ ಕೋಪಗೊಂಡು ಮನೆಯಲ್ಲಿದ್ದ ಸುವಸ್ತುಗಳನ್ನೆಲ್ಲ ಪೆಟ್ಟಿಗೆಯಲ್ಲಿ ಹಾಕಿ ಬಚ್ಚಿಡುತ್ತಾಳೆ. ಕೌಂಡಿನ್ಯನು‌ ತನ್ನ ಶಿಷ್ಯರ ಸಹಿತ ನವ ವಧುವಿನೊಂದಿಗೆ ಹೊರಡುತ್ತಾನೆ. ಬರಬರುತ್ತಾ ಯಮುನಾ ನದಿಯ ದಡದಲ್ಲಿ ಮಧ್ಯಾಹ್ನದ ಆಹ್ನಿಕಕ್ಕಾಗಿ‌ ಪ್ರಯಾಣವನ್ನು ನಿಲ್ಲಿಸಿ ಅನುಷ್ಠಾನ ಪೂರೈಸಲು ನದಿ ಬದಿಗೆ ಹೋಗುತ್ತಾನೆ.


ನವ ವಧು ಶೀಲೆಯು ಹೊಳೆ ಬದಿ ಹೋಗುತ್ತಾ ಕೆಂಪುಬಟ್ಟೆಯನ್ನು ಧರಿಸಿದ ಹೆಂಗಸರ ಗುಂಪು ಅನಂತ ವ್ರತದಲ್ಲಿ ತೊಡಗಿರುವುದನ್ನು ಕಾಣುತ್ತಾಳೆ. ವ್ರತದ ವಿವರವನ್ನು ತಿಳಿದುಕೊಂಡ ಶೀಲೆ ತಾನು ವ್ರತ ಮಾಡಲು ಸಿದ್ಧಳಾಗುತ್ತಾಳೆ. ಆಗ ಹೆಂಗಸರು ವ್ರತವಿಧಿಯನ್ನು ಹೇಳುತ್ತಾರೆ. ಈ ವ್ರತ ವಿಧಿಯಲ್ಲಿ ಅನಂತನು ಪೂಜಿಸಲ್ಪಡುತ್ತಾನೆ.


ಒಂದು ಸೇರು ಅಕ್ಕಿಯಿಂದ ಪುರುಷನಾಮಕನಾದ ಪರಮಾತ್ಮನ ನಿಮಿತ್ತದಿಂದ ಪಾಕಮಾಡಿ ಅನಂತನಿಗರ್ಪಿಸಿ‌ ಅರ್ಧವನ್ನು ಬ್ರಾಹ್ಮಣನಿಗೆ ದಾನಮಾಡಿ ಉಳಿದರ್ಧವನ್ನು‌ ತಾನು ಭೋಜನಮಾಡಬೇಕು. ದ್ರವ್ಯದಲ್ಲಿ‌ ವಂಚನೆಮಾಡದೆ ತನ್ನ ಶಕ್ತಿಯಿದ್ದಷ್ಟು ದಕ್ಷಿಣೆ ಕೊಡಬೇಕು. ನದಿಯ ದಡದಲ್ಲಿ‌‌ ಅನಂತನನ್ನು‌ ಪೂಜಿಸಬೇಕು.


ದರ್ಭೆಯಿಂದ ಶೇಷನ ಪ್ರತಿಮೆಯನ್ನು ಮಾಡಿ ಬಿದಿರಿನ ಪಾತ್ರದಲ್ಲಿಟ್ಟು ಸ್ನಾನಮಾಡಿ‌ ಮಂಡಲದ ಮೇಲೆ ಗಂಧ, ಪುಷ್ಪ‌, ಧೂಪ‌, ದೀಪ‌ಗಳಿಂದ ಅನೇಕ‌ವಿಧ ಪಕ್ವಾನ್ನಗಳಿಂದೊಡಗೂಡಿದ ನೈವೇದ್ಯಗಳಿಂದ ದೇವರ ಮುಂಭಾಗದಲ್ಲಿ‌ ಕುಂಕುಮದಿಂದ ಕೆಂಪಾದ ದೃಢವಾದ ಹದಿನಾಲ್ಕು ಗಂಟುಗಳುಳ್ಳ‌ ದೋರವನ್ನಿಟ್ಟು‌ ಪೂಜಿಸಬೇಕು.

ಅನಂತರ ದೋರವನ್ನು ಮೇಲೆ ಹೇಳಿದಂತೆ ಕಟ್ಟಿಕೊಳ್ಳಬೇಕು.


"ಸಂಸಾರವೆಂಬ ಮಹಾಸಮುದ್ರದಲ್ಲಿ‌ ಮುಳುಗಿದ್ದ ನನ್ನನ್ನು, ಎಲೈ, ಅನಂತನೆ‌, ವಾಸುದೇವನೆ ಉದ್ಧರಿಸು, ನಾಶವಿಲ್ಲದ ನಿನ್ನ ರೂಪದಲ್ಲಿ ನನ್ನನ್ನು ವಿನಿಯೋಗಿಸು, ಸಾರೂಪ್ಯವೆಂಬ ಮೋಕ್ಷವನ್ನು ಕೊಡು.

ಅನಂತರೂಪಿಯಾದ ನೀನು‌ ಈ ಸೂತ್ರದಲ್ಲಿ ಸನ್ನಿಹಿತನಾಗಿರುವೆ, ನಿನಗೆ ನಮಸ್ಕಾರ" ಎಂಬ ಮಂತ್ರದಿಂದ ದೋರವನ್ನು ಕಟ್ಟಿಕೊಳ್ಳಬೇಕು. ಹೀಗೆ ದೋರವನ್ನು ಕಟ್ಟಿಕೊಂಡ ಶೀಲೆಯು ಮನೆಗೆ ಬರಲಾಗಿ ಮನೆಯು ಧನ ಧಾನ್ಯಗಳಿಂದ ತುಂಬಿತ್ತು. ಒಂದು ದಿನ ಕೌಂಡಿನ್ಯನು ಶೀಲೆಯ ತೋಳಿನಲ್ಲಿದ್ದ ದೋರವನ್ನು‌ ಕಂಡು ಕುಪಿತನಾಗಿ "ನನ್ನನ್ನು ವಶೀಕರಿಸಿಕೊಳ್ಳಲು‌ ಇದನ್ನು ಕಟ್ಟಿಕೊಂಡಿರುವೆಯಾ" ಎಂದು ಮೂದಲಿಸುತ್ತಾ ದೋರವನ್ನು ಕಿತ್ತು ಬೆಂಕಿಗೆ ಹಾಕುತ್ತಾನೆ.‌ ಆ ಕ್ಷಣ ಶೀಲೆಯು ದೋರವನ್ನು ಬೆಂಕಿಯಿಂದ ತೆಗೆದು ಹಾಲಿಗೆ ಹಾಕುತ್ತಾಳೆ.


[ಪ್ರಸ್ತುತ ವ್ರತಾಚರಣೆಯಲ್ಲಿ ತೊಡಗುವವರು, ಕಳೆದ ವರ್ಷ ಆರಾಧಿಸಿ ಕಟ್ಟಿಕೊಂಡ ದೋರವನ್ನು ಮತ್ತೆ ಕಟ್ಟಿಕೊಂಡು, ಕಲ್ಪೋಕ್ತಪೂಜೆಯನ್ನು ನೆರವೇರಿಸಿ ಬಳಿಕ‌ ನೂತನವಾಗಿ ಪೂಜಿಸಲ್ಪಟ್ಟ ದೋರವನ್ನು‌ ಕಟ್ಟಿಕೊಂಡು ಹಳೆದೋರವನ್ನು‌ ಬಿಚ್ಚಿ ಹಾಲಿಗೆ ಹಾಕುವ ವಿಧಿ ಪೂಜಾಕ್ರಮದ ಅವಿಭಾಜ್ಯ ಅಂಗವಾಗಿದೆ.]


ಇಂತಹ ಘಟನೆಯಿಂದ ಸಕಲ‌ಸಂಪತ್ತನ್ನು ಕೌಂಡಿನ್ಯನು‌ ಕಳೆದುಕೊಂಡು ನಿರ್ಗತಿಕನಾದನು. ಎಂದು ಶ್ರೀಕೃಷ್ಣನು ಧರ್ಮರಾಯನಿಗೆ ವಿಸ್ತಾರವಾದ ಕಥೆಯನ್ನು ಹೇಳುತ್ತಾ ಕೌಂಡಿನ್ಯನು ಅನಂತನನ್ನು ಹುಡುಕಿ ಹೊರಟು ಕೊನೆಗೆ ಹೇಗೆ ಮರಳಿ ವ್ರತವನ್ನು ಮಾಡಿ ಅನಂತನ ಅನುಗ್ರಹದಿಂದ ಕಳಕೊಂಡ ಸಂಪತ್ತನ್ನು ಪಡೆದು ಬಾಳಿ ಬದುಕಿ ವೈಕುಂಠವನ್ನು ಸಿದ್ಧಿಸಿಕೊಂಡ ಎಂಬ ವಿವರವನ್ನು ಹೇಳುತ್ತಾನೆ. 


ಯಾರು ಸಂಸಾರಿಯಾಗಿ ಸುಖಿಗಳಾಗಿ  ಋಜುಮಾರ್ಗಿಗಳಾಗಿ ಬದುಕಲು ಬಯಸುವರೋ ಅವರು ಮೂರುಲೋಕಕ್ಕೂ ಸ್ವಾಮಿಯಾದ ಅನಂತದೇವನ್ನು ಭಕ್ತಿಯಿಂದ ಪೂಜಿಸಿ ಉತ್ತಮ ದೋರವನ್ನು ಬಲತೋಳಿನಲ್ಲಿ ಕಟ್ಟಿಕೊಳ್ಳುತ್ತಾರೆ.


ಬಹಳಷ್ಟು ಮನೆಗಳಲ್ಲಿ ನೋಂಪು ವ್ರತಾಚರಣೆ ಶತಮಾನಗಳಿಂದ ನಡೆದು ಬಂದಿದೆ, ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಪರ್ವ ವ್ರತವಾಗಿ ನೆರವೇರುತ್ತದೆ. ಪ್ರಸಿದ್ಧ ವಿಷ್ಣು ದೇವಾಲಯಗಳಲ್ಲಿ, ಅನಂತ ಪದ್ಮನಾಭ ದೇವಳಗಳಲ್ಲಿ ಅನಂತವ್ರತ ಸಂಭ್ರಮದಿಂದ ನಡೆಯುತ್ತದೆ.  


|ಹದಿನಾಲ್ಕರ ವಿಶೇಷ|

ಚತುರ್ದಶಿ ತಿಥಿಯಂದು ಅನಂತವ್ರತ‌ ಆಚರಣೆ. ಶುದ್ಧ ಪಕ್ಷದ ಹದಿನಾಲ್ಕನೇ ದಿನ. ಮರುದಿನ ಹುಣ್ಣಿಮೆ. ಅಂದರೆ ವೃದ್ಧಿ ಪಕ್ಷದ ಪರಿಪೂರ್ಣ ವೃದ್ಧಿಯ ಹಿಂದಿನ ದಿನ.‌ ಚತುರ್ದಶಿಗೆ ದ್ವಿತೀಯ‌ ಹುಣ್ಣಿಮೆ. ಇದು ಬಹಳ ಪ್ರಸ್ತುತ. ಇದಕ್ಕೆ ಪೂರಕವಾಗಿ ದೋರದಲ್ಲಿ ಹದಿನಾಲ್ಕು ಗಂಟುಗಳು. ವ್ರತದ ಅನುಷ್ಠಾನ ಕ್ರಮದಂತೆ ನಿರಂತರ ಹದಿನಾಲ್ಕು ವರ್ಷ ನೆರವೇರಿಸಬೇಕು.

ಇದು ಶ್ರೀಕೃಷ್ಣನು ಧರ್ಮರಾಯನಿಗೆ ಉಪದೇಶಿಸಿದ ಅನಂತವ್ರತದ ಸೂಕ್ಷ್ಮ ವಿವರಗಳು.


ಹದಿನಾಲ್ಕು ಲೋಕಗಳೆಂದು ಒಂದು ತಿಳಿವಳಿಕೆ. ಅದರಂತೆ ಏಳು + ಏಳು ಲೋಕಗಳು. ಲೋಕಗಳ ಎಣಿಕೆ. ಭುವನ, ಅತಳ, ವಿತಳ.. ಇತ್ಯಾದಿ.


ಚತುರ್ದಶ ವಿದ್ಯೆ: ನಾಲ್ಕು ವೇದ, ಆರು ವೇದಾಂಗ, ಧರ್ಮ ಶಾಸ್ತ್ರ, ಪುರಾಣ ನ್ಯಾಯ, ಮೀಮಾಂಸೆ.

ಚತುರ್ದಶ ರತ್ನ: ಲಕ್ಷ್ಮೀ, ಕೌಸ್ತುಭ, ಪಾರಿಜಾತ, ಸುರಾ, ಧನ್ವಂತರಿ, ಚಂದ್ರಮ, ಐರಾವತ, ಉಚ್ಚೈಃಶ್ರವ, ಶಂಖ, ಹರಿಧನುಸ್ಸು, ಅಪ್ಸರೆ, ವಿಷ, ಅಮೃತ, ಕಾಮಧೇನು.

ಹೀಗೆ ಹದಿನಾಲ್ಕರ ನಿರೂಪಣೆಗಳಿವೆ.

(ಸಂಗ್ರಹ)


• ಕೆ. ಎಲ್. ಕುಂಡಂತಾಯ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post