ವಿದ್ಯಾರ್ಥಿಗಳಿಗೆ ಬೇಕಿದೆ ವಿವೇಕ ಪ್ರೇರಿತ ಸುಶಿಕ್ಷಣ

Upayuktha
0


ಸಮಾಜದ ಎಲ್ಲಾ ಸಮಸ್ಯೆಗಳಿಗೂ ರಾಮಬಾಣ ಶಿಕ್ಷಣ. ಕೇವಲ ವಿಷಯಗಳನ್ನು ಮಕ್ಕಳ ತಲೆಗೆ ತುರುಕದೇ ಮನಸ್ಸಿಗೆ ತರಬೇತಿ ನೀಡುವ ಲಕ್ಷಾಂತರ ಶಿಕ್ಷಕರ ಸೇವೆ ಭಾರತಕ್ಕೆ ಅವಶ್ಯವಿದೆ ಎಂದು ಸ್ವಾಮಿ ವಿವೇಕಾನಂದರು ಶಿಕ್ಷಣದ ಮಹತ್ವದ ಕುರಿತಂತೆ ಹೇಳಿರುವುದನ್ನು ತನ್ನ ಧ್ಯೇಯವಾಗಿಟ್ಟುಕೊಂಡು ಸಮಾಜದ ಒಳಿತಿಗಾಗಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಮಂಡ್ಯದಲ್ಲಿರುವ ಸಂಸ್ಥೆ ವಿವೇಕ ಶಿಕ್ಷಣ ವಾಹಿನಿ. ಈ ಸಂಸ್ಥೆಯ ಕನಸಿನ ಕೂಸೇ ‘ಸುಶಿಕ್ಷಣಂ’ ಎಂಬ ರಾಮಬಾಣ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ಅಥವಾ ನೀತಿ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂಬುದೇ ಇದರ ಮುಖ್ಯ ಉದ್ದೇಶ. ವಿದ್ಯಾರ್ಥಿಗಳಿಗೆ ತಮ್ಮ ನಾಡಿನ ಇತಿಹಾಸ, ಸಂಸ್ಕೃತಿ, ರಾಷ್ಟ್ರೀಯ ವಿಚಾರಧಾರೆಗಳ ಬಗ್ಗೆ ಅರಿವು ಮೂಡಿಸಲೆಂದೇ ಸ್ಥಾಪಿತವಾಗಿರುವ ಸಂಸ್ಥೆ ವಿವೇಕ ಶಿಕ್ಷಣ ವಾಹಿನಿ.


ವಿದ್ಯಾರ್ಥಿಗಳಿಗೆ ಯೂರೋಪಿಯನ್ನರ ಹಾಗೂ ಪಾಶ್ಚಾತ್ಯರ ಬಗ್ಗೆ ತಿಳಿಸುವುದೇ ಶಿಕ್ಷಣವಲ್ಲ. ಸ್ವಾಮಿ ವಿವೇಕಾನಂದರು ಹೇಳಿರುವಂತೆ ಮೌಲ್ಯ ಶಿಕ್ಷಣವನ್ನು ನೀಡಬೇಕು. ವಿವೇಕಾನಂದರ ಕಲ್ಪನೆಯ ‘ಸುಶಿಕ್ಷಣ’ವನ್ನು ಸಾಕಾರಗೊಳಿಸುತ್ತಿದೆ ‘ವಿವೇಕ ಶಿಕ್ಷಣ ವಾಹಿನಿ ಸಂಸ್ಥೆ’. ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಮೌಲ್ಯಯುತ ವಿಚಾರಧಾರೆಗಳನ್ನು ತಿಳಿಸಬೇಕು, ಸ್ವಾಮಿ ವಿವೇಕಾನಂದರು ಶಿಕ್ಷಣಕ್ಕೆ, ಧರ್ಮದ ಕುರಿತಂತೆ, ಯುವಶಕ್ತಿಗೆ ಪ್ರೇರಣೆ ನೀಡುವಂತೆ ಆಡಿರುವ ಮಾತುಗಳನ್ನು ಮಕ್ಕಳ ಪಠ್ಯಕ್ರಮದಲ್ಲಿ ಸೇರಿಸಬೇಕು. ಶಿಕ್ಷಣವು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು. ಆಧುನಿಕ ಜಗತ್ತಿನ ಈ ಮಕ್ಕಳಿಗೆ ಇಂತಹ ವಿಚಾರಧಾರೆಗಳನ್ನು ಶಿಕ್ಷಣದಲ್ಲಿ ಅಳವಡಿಸುವ ಅವಶ್ಯಕತೆ ತುಂಬಾ ಇದೆ. ಈ ನಿಟ್ಟಿನಲ್ಲಿ ವಿವೇಕ ಶಿಕ್ಷಣ ವಾಹಿನಿ ಸಂಸ್ಥೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.




ತನ್ನ ಯೋಜನೆಗಳಿಗೆ ‘ನಿರ್ಮಾಣಂ’ ‘ವಿಮೋಚನಂ’, ‘ವಿವೇಕವಾಹಿನಿ’, ‘ಆಚಾರ್ಯಕುಲಂ’, ‘ಸಂಗ್ರಹಣಂ’, ‘ವಿದ್ಯಾದಾನಂ’, ಹೀಗೆ ವಿಶಿಷ್ಟವಾದ ಹೆಸರನ್ನು ನೀಡಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಪುಸ್ತಕಗಳ ಮೂಲಕ ಮೌಲ್ಯಯುತ ವಿಷಯಗಳ ಬಗ್ಗೆ, ಧರ್ಮದ ಬಗ್ಗೆ, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಹಾಗೂ ಶಿಕ್ಷಕರಿಗಾಗಿ ವೃತ್ತಿ ಶಿಕ್ಷಣದ ಬಗ್ಗೆ ವಿಶೇಷವಾದ ಪುಸ್ತಕಗಳನ್ನು ಈ ಸಂಸ್ಥೆ ಪರಿಚಯಿಸಿದೆ. ’ವಿದ್ಯಾದಾನಂ’ ಎಂಬ ಯೋಜನೆಯ ಅಡಿಯಲ್ಲಿ ಬಡಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವನ್ನು ಮಾಡಿಕೊಡುತ್ತಿದೆ. ಈ ಯೋಜನೆಯಿಂದ ಮಕ್ಕಳಿಗೆ ಬ್ಯಾಗುಗಳು, ಪುಸ್ತಕಗಳು, ಅಟ್ಲಾಸ್, ಪೆನ್ನುಗಳು ಹಾಗೂ ಸ್ವಾಮಿ ವಿವೇಕಾನಂದರ ಸುಂದರ ಭಾವಚಿತ್ರದೊಂದಿಗೆ ಒಬ್ಬ ವಿದ್ಯಾರ್ಥಿಗೆ ಅಂದಾಜು ಎರಡು ಸಾವಿರ ರೂಪಾಯಿಗಳ ಸಾಮಾಗ್ರಿಗಳನ್ನು ದಾನಿಗಳಿಂದ ಸಂಗ್ರಹಿಸಿ ಅನೇಕ ಶಾಲಾ ಮಕ್ಕಳಿಗೆ ನೀಡಿದ್ದಾರೆ. ತಮ್ಮ ಯೋಜನೆಗಳ ಮೂಲಕ ಶಾಲೆಗಳಲ್ಲಿ ಲಿಖಿತ ಪರೀಕ್ಷೆಗಳನ್ನು ನಡೆಸಿ ಬಹುಮಾನವಾಗಿ ಪುಸ್ತಕಗಳನ್ನು ನೀಡುತ್ತಾರೆ. ಶುಭ ಸಮಾರಂಭಗಳಲ್ಲಿ ಮನೆಗೆ ಬಂದ ಅತಿಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಜೀವನ ಕುರಿತಾದ ಪುಸ್ತಕಗಳನ್ನು ಕೊಡುವ ಸಂಸ್ಕೃತಿಯನ್ನು ಸಾರ್ವಜನಿಕರಲ್ಲಿ ಜಾರಿಗೆ ತಂದ ಹೆಗ್ಗಳಿಕೆ ಈ ಸಂಸ್ಥೆಗೆ ಇದೆ.


ಹೀಗೆ ಹತ್ತು ಹಲವಾರು ಯೋಜನೆಗಳನ್ನು ತಂದು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿರುವ ಈ ಸಂಸ್ಥೆಯು ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದು ಈ ಸಂಸ್ಥೆಯ ಸ್ಥಾಪಕರಾದ ಪ್ರಖರ ವಾಗ್ಮಿ, ಚಿಂತಕರೂ ಆದ ಶ್ರೀಯುತ ನಿತ್ಯಾನಂದ ವಿವೇಕವಂಶಿಯವರು. ಇವರು ತಮ್ಮ ತಂಡದೊಂದಿಗೆ ಶಾಲೆಗಳಿಗೆ ತೆರಳಿ ತಮ್ಮ ಸಂಸ್ಥೆಯ ಯೋಜನೆಗಳನ್ನು ಜಾರಿಗೆ ತಂದು ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಿದ್ದಾರೆ. ಈ ಸಂಸ್ಥೆಯ ಕಾರ್ಯಗಳಿಗೆ ನಿಮ್ಮೆಲ್ಲರ ಬೆಂಬಲ ಹಾಗೂ ಆಶೀರ್ವಾದವಿರಲಿ.


-ವಾಸವಿ ಸಾಗರ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top