ಕನ್ನಡ ಸಾಹಿತಿ ಕವಿ ಸಂಶೋಧಕ ಡಾ ಉಪ್ಪಂಗಳ ರಾಮ ಭಟ್ಟರಿಗೆ ನುಡಿನಮನ

Upayuktha
0


ಉಡುಪಿ ಎಂಜಿಎಂ ಕಾಲೇಜಿನಲ್ಲಿ ಬಹಳ ವರ್ಷಗಳ ಕಾಲ‌ ಕನ್ನಡ ಉಪನ್ಯಾಸಕ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಡಾ ಉಪ್ಪಂಗಳ ರಾಮ ಭಟ್ಟರು (83 ವರ್ಷ) ನಿನ್ನೆ ಮಂಗಳವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.


ಮೂಲತಃ ಕಾಸರಗೋಡು ಕುಂಬ್ಡಾಜೆಯ ಉಪ್ಪಂಗಳದ ಹವ್ಯಕ ಮನೆತನದವರು. ಕನ್ನಡ ಭಾಷೆ, ವ್ಯಾಕರಣ, ಕಾವ್ಯ ಛಂದಸ್ಸುಗಳ ಬಗ್ಗೆ ತಲಸ್ಪರ್ಶಿ ಅಧ್ಯಯನ ನಡೆಸಿ

ಕನ್ನಡ ಪಂಡಿತ ಪರಂಪರೆಯ ಪೋಷಕರೆನಿಸಿದರು.


ಹಿಂದಿ ಭಾಷೆಯಲ್ಲಿ ಉನ್ನತ ವ್ಯಾಸಂಗ ನಡೆಸಿದ್ದಾರೆ. ಕನ್ನಡ ಸಂಶೋಧನಾತ್ಮಕ ಕೆಲಸಗಳಲ್ಲೂ ತೊಡಗಿಸಿಕೊಂಡು ಪಿಎಚ್ ಡಿ ಪದವಿ ಪಡೆದ ರಾಮಭಟ್ಟರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಅನೇಕ ಯುವಕರಿಗೆ ಸಂಶೋಧನಾ ಮಾರ್ಗದರ್ಶಕರಾಗಿದ್ದರು.


ಸಾಹಿತ್ಯಿಕವಾಗಿ ಅನೇಕ ವಿಧದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು 2007ರಲ್ಲಿ ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಅನೇಕ‌ ಸಾಹಿತ್ಯ ಕೃತಿಗಳು, ಅಂಕಣ ಬರಹಗಳ ಮೂಲಕ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿದ್ದರು. ಅತ್ತಿಮಬ್ಬೆ ಪ್ರಶಸ್ತಿ, ಉಡುಪಿ ತಾಲೂಕು ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆಯೂ ಸೇರಿದಂತೆ ಅನೇಕ ಗೌರವಾದರಗಳಿಗೆ ಪಾತ್ರರಾಗಿದ್ದ ಭಟ್ಟರು ಸಂಗೀತ ನಾಟಕ ಮೊದಲಾದ ಕಲೆಗಳ ಪೋಷಣೆಗೂ ನೆರವಾಗಿದ್ದಾರೆ.‌


ಉಡುಪಿ ಹವ್ಯಕ ಸಭಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಅಕಲಂಕ ಪ್ರತಿಷ್ಠಾನ ಮತ್ತು ಪ್ರಕಾಶನವನ್ನು ಸ್ಥಾಪಿಸಿ ಅನೇಕ ಯುವಕರ ಕೃತಿ ಪ್ರಕಾಶನ ಮತ್ತು ಸಾಧಕರಿಗೆ ಅಕಲಂಕ ಪ್ರಶಸ್ತಿ ನೀಡುತ್ತಿದ್ದರು.


ಪತ್ನಿ (ನಿವೃತ್ತ ಶಿಕ್ಷಕಿ) ಪುತ್ರ ಮತ್ತು ಅಪಾರ ಶಿಷ್ಯರನ್ನು ಅಗಲಿರುವ ಉಪ್ಪಂಗಳ ರಾಮ ಭಟ್ಟರು ಮರಣಾನಂತರ ತಮ್ಮ ದೇಹವನ್ನು ಮಣಿಪಾಲ ಆಸ್ಪತ್ರೆಗೆ ದಾನ ಮಾಡವುದಾಗಿ ಘೋಷಿಸಿದ್ದರು.


ಡಾ ಭಟ್ಟರ ಆತ್ಮಕ್ಕೆ ದೇವರು ಸದ್ಗತಿಯನ್ನು ಕರುಣಿಸಲಿ. ಓಂ ಶಾಂತಿಃ


-ಜಿ ವಾಸುದೇವ ಭಟ್ ಪೆರಂಪಳ್ಳಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top