|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇ-ರುಪಿ: ವ್ಯಕ್ತಿ ಹಾಗೂ ಉದ್ಧೇಶ ಕೇಂದ್ರಿತ ಸುಲಭ ಪಾವತಿ ವಿಧಾನ

ಇ-ರುಪಿ: ವ್ಯಕ್ತಿ ಹಾಗೂ ಉದ್ಧೇಶ ಕೇಂದ್ರಿತ ಸುಲಭ ಪಾವತಿ ವಿಧಾನ






ಆಡಳಿತ ಸುಧಾರಣೆಯ ಉಪಕ್ರಮಗಳು ಸರಕಾರಿ ಚಟುವಟಿಕೆಗಳ ಪಾರದರ್ಶಕತೆಯನ್ನು ಹೆಚ್ಚಿಸಿ, ಸಾರ್ವಜನಿಕ ಸಂಪನ್ಮೂಲಗಳ ಸದ್ಬಳಕೆಯನ್ನು ಖಾತರಿಪಡಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಗೋಸ್ತು 2ರಂದು ಬಿಡುಗಡೆಗೊಳಿಸಿದ ಎಲೆಕ್ಟ್ರಾನಿಕ್ ವೋಚರ್ ಆಧಾರಿತ ಡಿಜಿಟಲ್ ಪಾವತಿ ವಿಧಾನವಾದ 'ಇ-ರುಪಿ'  ಕ್ರಾಂತಿಕಾರಕ ಹೆಜ್ಜೆ. ದೇಶದಲ್ಲಿ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸುವ ದೃಷ್ಟಿಯಲ್ಲಿ ಇದೊಂದು ಪ್ರಥಮ ಹೆಜ್ಜೆ.


ಫಲಾನುಭವಿಗಳಿಗೆ ಸಹಾಯ ತಲುಪಿಸುವ ಜವಾಬ್ದಾರಿ

ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಪ್ರಗತಿಯು ಅಭಿವೃದ್ದಿಯ ರಹದಾರಿ. ಸರಕಾರ ಹಾಗೂ ಇತರ ಸೇವಾ ಸಂಸ್ಥೆಗಳಿಂದ ಸಬ್ಸಿಡಿ, ಸಹಾಯ ಹೀಗೆ ಹಲವು ರೂಪಗಳಲ್ಲಿ ಫಲಾನುಭವಿಗಳನ್ನು ತಲುಪುತ್ತದೆ. ಇತ್ತೀಚಿಗಿನ ವರ್ಷದಲ್ಲಿ ಅಳವಡಿಸಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸರಕಾರಿ ಸಹಾಯಧನಗಳ ನೇರ ಪಾವತಿಯ ಉಪಕ್ರಮದಿಂದಾಗಿ ದೇಶವು ಇಲ್ಲಿಯವರೆಗೆ ರೂ.1.78 ಲಕ್ಷ ಕೋಟಿಯಷ್ಟು ಹಣವನ್ನು ಉಳಿಸಿದೆ. ಸರಕಾರಿ ಹಾಗೂ ಖಾಸಗಿ ವಲಯದ ಸೇವಾ ಚಟುವಟಿಕೆಗಳ ಸಹಾಯಧನವು ನಿರ್ಧಿಷ್ಟ ಜನರನ್ನು ಸೋರಿಕೆಯಿಲ್ಲದೆ ಹಾಗೂ ಸೂಚಿತ ಉದ್ಧೇಶಗಳಿಗೆ ಬಳಸಲ್ಪಡುವುದನ್ನು ಖಾತರಿಪಡಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ತಾಂತ್ರಿಕ ಅವಿಷ್ಕಾರಗಳು ಸಹಾಯಕ್ಕೆ ಬರುತ್ತದೆ.


ಹಣದ ವಿಕಸನ:

ಅರ್ಥಶಾಸ್ತ್ರದ ಅಧ್ಯಯನ ಆರಂಭವಾಗುವುದೇ ಮಾನವನ ಬಯಕೆಗಳ ವ್ಯಾಖ್ಯಾನ ಮತ್ತು ಸ್ವರೂಪಗಳನ್ನು ತಿಳಿಯುವ ಮೂಲಕ. ಮಾನವನ ಬಯಕೆಗಳಿಗೆ ಮಿತಿ ಇಲ್ಲ, ಒಂದು ಬಯಕೆಯನ್ನು ತೃಪ್ತಿಪಡಿಸಿದರೆ ಇನ್ನೊಂದು ಬಯಕೆ ಮನಸ್ಸಿನಲ್ಲಿ ಮೂಡುತ್ತದೆ. ವಸ್ತು ವೈವಿದ್ಯತೆಯ ಬಯಕೆ ಇಂದಿನ ಜಗತ್ತಿನ ಆರ್ಥಿಕ ವಿಕಸನಕ್ಕೂ ಕಾರಣೀಭೂತವಾಗಿದೆ. ಮಾನವನ ಬಯಕೆ ಮತ್ತು ಸಾಮರ್ಥ್ಯ ಹಾಗೂ ಸಾಧ್ಯತೆಗಳ ನಡುವಿನ ಅಂತರ ವಸ್ತು ವಿನಿಮಯ ಅಥವಾ ’ಸಾಟಿ’ ಪದ್ಧತಿಯ ಉಗಮಕ್ಕೆ ಕಾರಣವಾಯಿತು. ಆರಂಭಿಕ ಹಂತದಲ್ಲಿ ನಿಗದಿತ ವಸ್ತುಗಳು ಹಾಗೂ ಸೇವೆಗಳಿರುವಾಗ ಬಹಳ ಸರಳವಾಗಿದ್ದ ಸಾಟಿ ಪದ್ಧತಿ ಕಾಲಾನುಕ್ರಮದಲ್ಲಿ ನವನವೀನ ವಸ್ತುಗಳ ಹಾಗೂ ಸೇವೆಗಳ ಆಗಮನದಿಂದ ಕ್ಲಿಷ್ಟಕರವಾದಾಗ ಪರಿಹಾರವಾಗಿ ವಿವಿಧ ರೂಪಗಳಲ್ಲಿ ಹಣ ಕಾಣಿಸಿಕೊಂಡಿತು.  

ಮೊದಲಿಗೆ ವಸ್ತು ರೂಪದಲ್ಲಿದ್ದ ಹಣ, ಅಗತ್ಯತೆಗಳಿಗನುಗುಣವಾಗಿ ಲೋಹ, ನಾಣ್ಯ, ಕಾಗದ ಹೀಗೆ ರೂಪಾಂತರಗೊಂಡು ಆಧುನಿಕ ಅವಿಷ್ಕಾರದ ಯುಗದಲ್ಲಿ ಡಿಜಿಟಲ್ ರೂಪವನ್ನು ಪಡೆದುಕೊಂಡು ನಮ್ಮ ಮುಂದೆ ನಿಂತಿದೆ.


ಸಾವಿರಾರು ವರ್ಷಗಳ ಹಿಂದೆ ಅನುಸರಿಸಿದ ಸರಳ ವಿನಿಮಯ ವ್ಯವಸ್ಥೆಯಿಂದ, ಕರೆನ್ಸಿ ಮತ್ತು ನಗದು ವಹಿವಾಟುಗಳ ಆಗಮನ, ಅತ್ಯಾಧುನಿಕ ತಂತ್ರಜ್ಞಾನದಿಂದ ನಡೆಸಲ್ಪಡುವ ಡಿಜಿಟಲ್ ಪಾವತಿಗಳವರೆಗೆ-ಸುಲಭ, ಅನುಕೂಲಕರ ಮತ್ತು ಸುರಕ್ಷಿತ ಪಾವತಿ ವಿಧಾನಗಳ ಕಡೆಗೆ ಕ್ರಮೇಣ ಚಲನೆ ಕಂಡುಬಂದಿದೆ.


ಹಣವು ನಿಜವಾಗಿಯೂ ಜಗತ್ತನ್ನು ಸುತ್ತುವಂತೆ ಮಾಡುತ್ತದೆ. ಇದು ಉದ್ಯೋಗಳು ಮತ್ತು ಹೂಡಿಕೆಗಳ ಮೂಲಕ ಗಳಿಸುವುದರಿಂದ ಹಿಡಿದು ಉತ್ಪನ್ನಗಳು, ಸೇವೆಗಳು ಮತ್ತು ಅನುಭವಗಳಿಗಾಗಿ ಖರ್ಚು ಮಾಡುವವರೆಗೆ ಯಾವಾಗಲೂ ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಮಾನವನ ಅಗತ್ಯಗಳಿಗೆ ಅನುಗುಣವಾಗಿ ಹಣವು ವಿಕಸನಗೊಳ್ಳುತ್ತಲೇ ಇರುತ್ತದೆ. ಇದರ ಈಗಿನ ಕೊಂಡಿ ಇ-ರುಪಿ.


ಏನಿದು ಇ-ರುಪಿ?

ಇದು ಡಿಜಿಟಲ್ ಪಾವತಿಗಾಗಿ ಇರುವಂತಹ ನಗದುರಹಿತ ಹಾಗೂ ಸಂಪರ್ಕರಹಿತ ವ್ಯವಸ್ಥೆ. ಕ್ಯೂಅರ್ ಕೋಡ್, ಎಸ್ಸೆಮ್ಮೆಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಇದಾಗಿದ್ದು, ಇದನ್ನು ನೇರವಾಗಿ ಫಲಾನುಭವಿಗಳ ಮೊಬೈಲ್ ಫೋನುಗಳಿಗೆ ಕಳುಹಿಸಲಾಗುತ್ತದೆ.


ಹೇಗೆ ಕೆಲಸ ಮಾಡುತ್ತದೆ?

ದೇಶದಲ್ಲಿ ಡಿಜಿಟಲ್ ಪಾವತಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರ ಇ-ರುಪೀಗೆ ಚಾಲನೆ ನೀಡಲಾಗಿದೆ. ಸರಕಾರದ ಯೋಜನೆಗಳ ಫಲಾನುಭವಿಗಳಿಗೆ ತಲುಪಬೇಕಾದ ಹಣದ ಸೋರಿಕೆಯನ್ನು ತಡೆಗಟ್ಟಲು ಅವತರಿಸಿದ ನೇರ ಪಾವತಿ (ಡಿಬಿಟಿ) ಉಪಕ್ರಮದಲ್ಲಿ ಸಬ್ಸಿಡಿ ಅಥವಾ ಸಹಾಯಧನವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.


ಆದರೆ ಇ-ರುಪಿ ಉಪಕ್ರಮದಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವ ಬದಲಿಗೆ ಸರಕಾರವು ಈ ’ಇ-ವೋಚರ್’ ಅನ್ನು ಫಲಾನುಭವಿಗಳ ಮೊಬೈಲ್ ಗೆ ಕ್ಯೂಆರ್ ಕೋಡ್ ಅಥವಾ ಎಸ್ಸೆಮ್ಮೆಸ್ ಮೂಲಕ ಕಳುಹಿಸಲಾಗುತ್ತದೆ. ಯಾವ ಉದ್ಧೇಶಕ್ಕೆ ವೋಚರ್ ಕಳುಹಿಸಲಾಗಿದೆಯೋ, ಆ ಉದ್ಧೇಶಕ್ಕೆ ಮಾತ್ರ ಅದನ್ನು ಬಳಸಬೇಕಾಗುತ್ತದೆ. ಬಳಕೆದಾರರು ಕಾರ್ಡ್ ಇಲ್ಲದೇ, ಡಿಜಿಟಲ್ ಪಾವತಿ ಆಪ್, ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದೆಯೂ ವೋಚರ್ ಅನ್ನು ನಗದೀಕರಿಸಬಹುದು.


ಸಹಾಯಧನದ ನಿರ್ದಿಷ್ಟ ಉದ್ದೇಶ ಈಡೇರಿಕೆಯನ್ನು ಖಾತರಿಪಡಿಸುವ ಇ-ರುಪಿ

ನೇರ ಪಾವತಿ ಉಪಕ್ರಮದಲ್ಲಿ ಫಲಾನುಭವಿ ತನ್ನ ಖಾತೆಯ ಮೂಲಕ ಪಡೆದ ಸಹಾಯಧನ ಅಥವಾ ಕೊಡುಗೆಯನ್ನು ಯಾವುದೇ ಉದ್ದೇಶಕ್ಕೆ ಬಳಸಬಹುದಾಗಿದೆ. ಆದರೆ ಈ ವ್ಯವಸ್ಥೆಯಲ್ಲಿ ಕೊಡುಗೆಯು ನಿರ್ದಿಷ್ಟ ಸೇವೆಗಾಗಿ ಮಾತ್ರ ಬಳಸಲ್ಪಡಬೇಕಾಗಿದೆ. ಉದಾಹರಣೆಗೆ ಕೊರೋನಾ ಲಸಿಕೆ ಪಡೆಯಲು ಸರಕಾರ ಅಥವಾ ಸೇವಾ ಸಂಸ್ಥೆ ಅಥವಾ ದಾನಿಗಳು ಫಲಾನುಭವಿಯ ಮೊಬೈಲಿಗೆ ಇ-ರುಪಿ ಅಥವಾ ವೋಚರನ್ನು ಕಳುಹಿಸಿದರೆ, ಲಸಿಕೆ ಪಡೆಯಲಷ್ಟೇ ಅದನ್ನು ಬಳಸಬಹುದು. ಆಸ್ಪತ್ರೆಗೆ ತೆರಳಿ ತನ್ನ ಮೊಬೈಲಿಗೆ ಬಂದಿರುವ ಇ-ವೋಚರ್ ಸಂದೇಶವನ್ನು  ತೋರಿಸಿದರೆ ಸಾಕು. ಅದನ್ನು ಅವರು ಸ್ಕ್ಯಾನ್ ಮಾಡಿದಾಗ ಅದರ ಮೊತ್ತ ಪಾವತಿಯಾಗುತ್ತದೆ.


ಇ-ವೋಚರ್ ಪಾವತಿ/ ನಗದೀಕರಣದ ಸಮಯ ಯಾವುದೇ ವೈಯುಕ್ತಿಕ ಮಾಹಿತಿಗಳನ್ನು ನೀಡಬೇಕಾದ ಅಗತ್ಯ ಇರುವುದಿಲ್ಲ. ಈ ಉಪಕ್ರಮ ಸಹಾಯಧನ ನಿರ್ದಿಷ್ಟ ಫಲಾನುಭವಿಯನ್ನು ಯಾವುದೇ ಸೋರಿಕೆಯಿಲ್ಲದೆ ತಲುಪುವುದು ಮಾತ್ರವಲ್ಲದೆ, ನಿರ್ದಿಷ್ಟ ಉಪಯೋಗವನ್ನೂ ಖಾತರಿಪಡಿಸುತ್ತದೆ.


ಸರಕಾರ ನೀಡುವ ಸಬ್ಸಿಡಿ ಮೊತ್ತವನ್ನೂ ಇ-ವೋಚರ್ ಮೂಲಕವೇ ಕಳುಹಿಸಲಾಗುತ್ತದೆ. ಸೇವಾ ಸಂಸ್ಥೆಗಳು, ದಾನಿಗಳು, ನಿರ್ದಿಷ್ಟ ಉದ್ದೇಶಗಳಿಗಾಗಿ ಕೊಡುಗೆ ನೀಡುವವರೂ ಇ-ರುಪೀಯ ಮೂಲಕವೇ ಪಾವತಿಸಿ, ಉದ್ದೇಶ ಈಡೇರಿಕೆಯನ್ನು ಖಾತರಿಪಡಿಸಬಹುದು. ವಿವಿಧ ಕಲ್ಯಾಣ ಯೋಜನೆಗಳು, ಆಯುಷ್ಮಾನ್ ಭಾರತ್ ನಡಿ ಔಷಧಗಳ ಪೂರೈಕೆ, ರಸಗೊಬ್ಬರ ಸಬ್ಸಿಡಿ ಇತ್ಯಾದಿಗಳ ಫಲಾನುಭವಿಗಳಿಗೆ ಇದು ಅನೂಕೂಲವಾಗಲಿದೆ. ಖಾಸಗಿ ಕಂಪೆನಿಗಳು ತಮ್ಮ ಉದ್ಯೋಗಿಗಳ ಕ್ಷೇಮಾಭಿವೃದ್ಧಿ ಯೋಜನೆ, ಸಿಎಸ್ ಆರ್ ಚಟುವಟಿಕೆಗಳಿಗೆ ಬಳಸಬಹುದು.


ಅನುಕೂಲಗಳು ಬಹಳ

• ನಗದುರಹಿತ ಮತ್ತು ಸಂಪರ್ಕರಹಿತ ಡಿಜಿಟಲ್ ಪಾವತಿಗಾಗಿ ಇರುವ ವ್ಯವಸ್ಥೆ

• ಸೇವಾ ಪ್ರಾಯೋಜಕರು ಹಾಗೂ ಫಲಾನುಭವಿಗಳ ನಡುವೆ ನೇರ ಸಂಪರ್ಕ

• ವಿವಿಧ ಸೇವೆಗಳ ಸೋರಿಕೆರಹಿತ ಹಾಗೂ ತಡೆರಹಿತ ಪಾವತಿ

• ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಗತ್ಯವಿಲ್ಲ. ಗ್ರಾಮೀಣ ಪ್ರದೇಶಕ್ಕೂ ಸಹಕಾರಿ.

• ಫಲಾನುಭವಿಗೆ ಸಹಾಯಧನದ ನೇರ ವರ್ಗಾವಣೆಯ ಸಮಯದಲ್ಲಿಯೇ ಸೇವೆ ನೀಡುವವರಿಗೆ ಹಣ ದೊರೆಯುತ್ತದೆ.

• ಫಲಾನುಭವಿಗಳು ಸೂಚಿತ ಉದ್ಧೇಶಕ್ಕೆ ಮಾತ್ರ ಸಹಾಯಧನವನ್ನು ಉಪಯೋಗಿಸಬಹುದಾಗಿದೆ.

• ಖಾಸಗಿವಲಯದ ಸೇವಾದಾರರು ಕೂಡಾ ಫಲಾನುಭವಿಗಳಿಗೆ ಸಹಾಯಧನವನ್ನು ನೇರವಾಗಿ ವರ್ಗಾಯಿಸಬಹುದು ಹಾಗೂ ನಿರ್ದಿಷ್ಟ ಉದ್ಧೇಶಕ್ಕಾಗಿ ಬಳಸುವುದನ್ನು ಖಾತರಿಪಡಿಸಬಹುದು.

• ಮೂಲತಃ ಪೂರ್ವ ಪಾವತಿಯಾಗಿರುವುದರಿಂದ, ಇದು ಯಾವುದೇ ಮಧ್ಯವರ್ತಿ ಇಲ್ಲದೆಯೇ ಸಕಾಲಿಕ ಸೇವೆಯನ್ನು ಒದಗಿಸುತ್ತದೆ.


ಪುರೋಗಾಮಿ ಹೆಜ್ಜೆ:

ನೇರ ನಗದು ವರ್ಗಾವಣೆಯನ್ನು ಬಲಿಷ್ಠಗೊಳಿಸಲಿರುವ ’ಇ-ರುಪಿ’ ಭಾರತದಲ್ಲಿ ಡಿಜಿಟಲ್ ಆಡಳಿತಕ್ಕೆ ಹೊಸ ಆಯಾಮ ನೀಡಲಿದೆ. ಸರಕಾರಿ ಸವಲತ್ತುಗಳು ನೇರವಾಗಿ ಅರ್ಹರಿಗೆ- ಸೂಚಿತ ಗುರಿ ಸಾಧನೆಯನ್ನು ಖಾತ್ರಿಗೊಳಿಸುತ್ತದೆ. ಮುಂದಿನ ದಿನಗಳಲ್ಲಿ ವಿಸ್ತಾರಗೊಳ್ಳುವ ಸಾಧ್ಯತೆಯಿರುವ ಈ ವ್ಯವಸ್ಥೆ ಭ್ರಷ್ಟಾಚಾರ ನಿಯಂತ್ರಣದಲ್ಲಿ ಉತ್ತಮ ಹೆಜ್ಜೆ. ಅಭಿವೃದ್ಧಿ ಪ್ರಕ್ರಿಯೆ ಮತ್ತು ಆಡಳಿತಾತ್ಮಕ ಸುಧಾರಣೆಯಲ್ಲಿ ದೀರ್ಘಗಾಮಿ ಪರಿಣಾಮ ಬೀರಬಲ್ಲ “ಇ-ರುಪಿ’ ಒಂದು ಪುರೋಗಾಮಿ ಹೆಜ್ಜೆ. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ತಂತ್ರಜ್ಞಾನವನ್ನು ಜನಸಾಮಾನ್ಯರ ಪಾಲಿಗೆ ಅನುಕೂಲಕರವಾಗಿ ಪರಿವರ್ತಿಸುವ ಉದ್ದೇಶದ ’ಇ-ರುಪಿ’ ಸಬಲೀಕರಣದ ಯೋಜನೆಗಳ ಯಶಸ್ವೀ ಅನುಷ್ಠಾನಕ್ಕೆ ನಾಂದಿಯಾಗಲಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post