ಕೇರಳದ ಕೋಟ್ಟಯಂ ಜಿಲ್ಲೆಯಲ್ಲಿದೆ ಪೆರಿಂಗುಲಂ. ಇಲ್ಲಿ ಬಾಳೆ ಕೃಷಿಕರ ಅಭ್ಯುದಯಕ್ಕಾಗಿ ನೊಂದಾಯಿಸಿದ ವೇದಿಕೆಯೇ ’ಬನಾನಾ ಬಡ್ಸ್.’
’ಬನಾನಾ ಬಡ್ಸ್’ ವಾರಗಳ ಹಿಂದೆ ಮನೆಯಲ್ಲೇ ಬಾಳೆಕಾಯಿ ಹುಡಿ ಮಾಡುವ ಪ್ರಯೋಗ ನಡೆಸಿತು. ಒಟ್ಟು 11 ಕುಟುಂಬಗಳು. ಇವರು ಬಳಸಿದ್ದು ಊರಿನ ಮುಖ್ಯ ತಳಿ ನೇಂದ್ರ. ಅದರಿಂದ ಆಹಾರ ತಯಾರಿಸಿ ಆ ಬಗ್ಗೆ ವಿಚಾರ ವಿನಿಮಯ. ಆದರೆ ಶಿಶು ಆಹಾರವೆಂದೇ ಈ ವರೆಗೆ ತಿಳಿದ ಬಾಕಾಹು (ಬಾಳೆಕಾಯಿ ಹುಡಿ) ವಿನ ಬಳಕೆಯ ಪರಿಧಿಯನ್ನು ಹೆಚ್ಚು ಹಿಗ್ಗಿಸುವಷ್ಟು ಈ ಹೆಣ್ಮಕ್ಕಳ ಕಲ್ಪನೆ ದೂರ ಓಡಲಿಲ್ಲ. ಹಾಗಾಗಿ, ಹಲ್ವ, ಕೇಕ್, ಪಕ್ಕ ವಡಾ, ಮಿಕ್ಸ್ಚರ್ ಮೊದಲಾದ ಅಪರೂಪಕ್ಕೊಮ್ಮೆ ಸವಿಯುವ ಸಿಹಿ- ಕಾರ ತಿಂಡಿಗಳಷ್ಟೇ ತಯಾರಾದವು.
ಬಾಳೆಕಾಯಿ ಹುಡಿಯಿಂದ ದೈನಂದಿನ ಬಳಕೆಯ ಉಪಾಹಾರ ಸಾಧ್ಯ ಎಂಬ ಮಾಹಿತಿ ಸಿಗುತ್ತಲೇ ಇವರು ಮತ್ತೆ ಚುರುಕಾದರು. ಈ ಬಾರಿ ಸೇರಿದ್ದು 7 ಮನೆಯವರು. ಹದಿನೈದು ತಿಂಡಿ ಸಿದ್ಧ. ಇದರಲ್ಲಿ ಹತ್ತರಷ್ಟೂ ದೈನಂದಿನ ಬಳಕೆಯವೇ.
ಉಪ್ಪಿಟ್ಟು, ಶ್ಯಾವಿಗೆ, ದೋಸೆ ವೆರಾಯ್ಟಿಗಳು, ಎಲೆಯಡ, ಇಡ್ಲಿ, ಪುಟ್ಟು, ಕಲ್ಲಪ್ಪ, ವಟ್ಟೆಯಪ್ಪಂ, ವೆಳ್ಳಯಪ್ಪಂ, ಇಡಿಯಪ್ಪಂ (ಶ್ಯಾವಿಗೆ) ಕೊಯಿಕಟ್ಟ, ಚಪಾತಿ, ಪೂರಿ ಇತ್ಯಾದಿ.
"ಎಲ್ಲದರಲ್ಲೂ 25ರಿಂದ 30ಶೇಕಡಾ ಬಾಳೆಕಾಯಿ ಹುಡಿ ಸೇರಿಸಿದ್ದೆವು. ರುಚಿಯಲ್ಲಿ ಏನೂ ವ್ಯತ್ಯಾಸ ಅಥವಾ ಕೊರತೆ ಆಗಲಿಲ್ಲ. ಎಲ್ಲರಿಗೂ, ಅದರಲ್ಲೂ ವಿಶೇಷವಾಗಿ ಕೃಷಿಕರಿಗೆ ತುಂಬ ಪ್ರಯೋಜನ ಆಗುವ ವಿಚಾರ ಇದು" ಎನ್ನುತ್ತಾರೆ ಈ ಕೂಟದ ಒಬ್ಬರು ಗೃಹಿಣಿ ಮಿನಿ ಸಾಬು.
Contact : Sabu Thomas - 99616 54198- (5- 7 PM)
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು