ಇತ್ತೀಚಿನ ದಿನಗಳಲ್ಲಿ ಸೊಂಟ ನೋವಿನಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತದೆ. ಸೊಂಟ ನೋವು ಬರಲು ಹಲವಾರು ಕಾರಣಗಳಿವೆ. ಈ ಹಿಂದಿನ ವಾರದ ಸಂಚಿಕೆಯಲ್ಲಿ ಸೊಂಟನೋವು ಬೆನ್ನುನೋವು ಇದ್ದವರು ಮಕರಾಸನದ ಮೂಲಕ ವಿಶ್ರಾಂತಿ ಪಡೆಯಬೇಕೆಂದು ತಿಳಿಸಿದೆ.
ಸೊಂಟನೋವು ಬರಲು ಕೆಲವು ಪ್ರಮುಖ ಕಾರಣಗಳು:
- ತುಂಬಾ ಹೊತ್ತು ಕುಳಿತುಕೊಂಡು ವಾಹನ ಪ್ರಯಾಣ
- ಕಂಪ್ಯೂಟರ್‍ನಲ್ಲಿ ತುಂಬಾ ಹೊತ್ತು ಕುಳಿತುಕೊಂಡು ಕೆಲಸ ನಿರ್ವಹಣೆ.
- ಅಧಿಕ ತೂಕದ ವ್ಯಕ್ತಿಗಳು ವಯಸ್ಸಾದಂತೆ ಸೊಂಟ ನೋವಿನಿಂದ ಬಳಲುವಿಕೆ.
- ತುಂಬಾ ಹೊತ್ತು ನಿಂತುಕೊಂಡೇ ಕೆಲಸ ಹಾಗೂ ತಪ್ಪಾಗಿ ನಿಲ್ಲುವುದು
- ಬಾಗುವ ಕೆಲಸಗಳನ್ನು ಮಾಡದೇ ಇರುವುದು.
- ಬೆನ್ನುಮೂಳೆಯ (ಕೆಳಗಿನ) ಸುತ್ತಮುತ್ತಲಿನ ಭಾಗಗಳಿಗೆ ಅನಗತ್ಯ ಒತ್ತಡವಾದಾಗ.
- ದೈಹಿಕ ವ್ಯಾಯಾಮದ ಕೊರತೆ, ಕ್ಷೀಣಗೊಳ್ಳುವ ಡಿಸ್ಕ್ ಕಾಯಿಲೆ.
- ಆಹಾರ ಸೇವನೆ ಪದ್ಧತಿಯಲ್ಲಿ ವ್ಯತ್ಯಾಸವಾಗಿರುವುದು.
ಸೇತು ಬಂಧ ಸರ್ವಾಂಗಾಸನ:
ಈ ಆಸನವು ಸೇತುವೆಯ ಆಕಾರವನ್ನು ಹೋಲುತ್ತದೆ. ಸೇತುವೆ ಅಂದರೆ ಅಣೆಕಟ್ಟು ಬಂಧ ಅಂದರೆ ಕಟ್ಟುವುದು (ಲಾಕ್).
ಅಭ್ಯಾಸ ಕ್ರಮ: ಜಮಾಖಾನ ಹಾಸಿದ ನೆಲದ ಮೇಲೆ ಅಂಗಾತ ಮಲಗಬೇಕು. ಆಮೇಲೆ ಕಾಲುಗಳು ಜೋಡಣೆ, ಕೈಗಳು ತೊಡೆಯ ಪಕ್ಕದಲ್ಲಿರಿಸಬೇಕು. ಅನಂತರ ಎರಡು ಕೈಗಳ ಸಹಾಯದಿಂದ ಎರಡು ಕಾಲುಗಳನ್ನು ಮಡಿಸಿ ನೆಲಕ್ಕೆ ಪಾದಗಳು ಊರಬೇಕು. ಮೊಣಕಾಲುಗಳು ಮೇಲ್ಮುಖವಾಗಿ ಬಾಗಿಸಿರಬೇಕು. ಕಾಲಿಗಳಲ್ಲಿ ಅಂತರವಿರಬೇಕು. ಕೈಗಳು ಕಾಲುಗಳ ಹಿಮ್ಮಡಿಗೆ ತಾಗುವಂತಿರಲಿ. ಆ ಮೇಲೆ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಪೃಷ್ಠದ ಭಾಗ ಸಾಧ್ಯವಾಗುವಷ್ಟು ಮೇಲಕ್ಕೆತ್ತಬೇಕು. ಬೆನ್ನು ಮೇಲ್ಮುಖವಾಗಿ ಕಮಾನಿನಂತೆ ಭಾಗಿಸಬೇಕು. ಆದಷ್ಟು ಹೊಟ್ಟೆ, ನಾಬಿ, ಎದೆ ಭಾಗ ಸಾಧ್ಯವಾಗುವಷ್ಟು ಮೇಲಕ್ಕೆ ಎತ್ತಬೇಕು. ಗಲ್ಲವು ಕಾಲರ್ ಬೋನಿಗೆ ತಾಗುವಂತಿರಲಿ. ಈ ಸ್ಥಿತಿಯಲ್ಲಿ ಸಾಮಾನ್ಯ ಉಸಿರಾಟ ಸ್ವಲ್ಪ ಹೊತ್ತು ನಡೆಸುತ್ತಾ ಅನಂತ ವಿಶ್ರಮಿಸಬೇಕು. ಈ ರೀತಿ ಎರಡು ಯಾ ಮೂರು ಬಾರಿ ಅಭ್ಯಾಸ ಮಾಡಬೇಕು.
ಪ್ರಯೋಜನಗಳು: ಈ ಆಸನ ಬೆನ್ನು ನೋವಿನ ಹಾಗೂ ಸೊಂಟ ನೋವಿನ ಪರಿಹಾರಕ್ಕೆ ಸಹಾಯವಾಗುತ್ತದೆ. ಬೆನ್ನು ಹುರಿಯು ಸಚೇತನಗೊಳ್ಳುತ್ತದೆ. ಭುಜಗಳು ಬಲಿಷ್ಠಗೊಳ್ಳುತ್ತದೆ. ಉದರದ ಭಾಗಕ್ಕೆ ವ್ಯಾಯಾಮ ದೊರಕಿ ಜೀರ್ಣಕ್ರಿಯೆಗೆ ಸಹಾಯವಾಗುವುದು ಸ್ತ್ರೀಯರ ಮುಟ್ಟು ದೋಷ ನಿವಾರಣೆ, ಮತ್ತು ಸ್ತ್ರೀಯರ ಸಂತಾನೋತ್ಪತ್ತಿ ಭಾಗವು ಪುನಶ್ಚೇತನಗೊಳ್ಳುತ್ತದೆ. ಶ್ವಾಸಕೋಶದ ಸಮಸ್ಯೆಗಳ ನಿಯಂತ್ರಣಕ್ಕೆ ಈ ಆಸನ ಸಹಕಾರಿ. ಮತ್ತು ಥೈರಾಯಿಡ್ ಗ್ರಂಥಿಯ ಆರೋಗ್ಯ ವರ್ಧನೆಗೆ ಈ ಆಸನ ತುಂಬಾ ಪ್ರಯೋಜನಕಾರಿಯಾಗಿದೆ. ಈ ಆಸನದಲ್ಲಿ ಶಿರಸ್ಸಿಗೆ ರಕ್ತ ಪರಿಚಲನೆ ಜರುಗಿ ಆತಂಕ, ಮನಸ್ಸಿಗೆ ಆಯಾಸ, ತಲೆನೋವು ಇತ್ಯಾದಿ ಕಡಿಮೆಯಾಗುತ್ತದೆ.
ಆದರೆ ಪೆಪ್ಟಿಕ್ ಅಲ್ಸರ್, ಉದರದ ಹರ್ನಿಯಾ ಸಮಸ್ಯೆ ಇದ್ದವರು ಈ ಆಸನವನ್ನು ಅಭ್ಯಾಸ ಮಾಡುವುದು ಬೇಡ. ತೀವ್ರ ಬೆನ್ನು, ಸೊಂಟ ನೋವು ಇದ್ದವರು ವೈದ್ಯರ ತಪಾಸಣೆ, ಚಿಕಿತ್ಸೆ ಪಡೆದು, ಸರಳ ಯೋಗವನ್ನು ಅಳವಡಿಸಬೇಕು. ಕರಿದ ಮಸಾಲೆ ಆಹಾರ ಸೇವನೆ ಬೇಡ. ಸತ್ವಯುತವಾದ ಸಾತ್ವಿಕ ಆಹಾರ ಸೇವಿಸಬೇಕು.
ಈ ಆಸನಗಳನ್ನು ಶಿಸ್ತು ಬದ್ಧವಾಗಿ ಉಸಿರಿನ ಗತಿಯೊಂದಿಗೆ ಅಭ್ಯಾಸ ಮಾಡಿದಾಗ ಸೊಂಟದ ನೋವಿನ ಭಾಗಕ್ಕೆ ಹಿತವಾಗುತ್ತದೆ. ಹಾಗೂ ನೋವಿನ ವೇದನೆ ಪರಿಹಾರವಾಗುತ್ತದೆ.
ಈ ಆಸನವನ್ನು ಅಭ್ಯಾಸ ಮಾಡುವ ಮುಂಚೆ ಕೆಲವು ಸರಳ ವ್ಯಾಯಾಮಗಳನ್ನು ಅಭ್ಯಾಸ ಮಾಡಿ ಮಕರಾಸನದಲ್ಲಿ ವಿಶ್ರಾಂತಿ ಪಡೆಯಬೇಕು. ಯೋಗಾಸನಗಳನ್ನು ಗುರುಮುಖೇನವೇ ಕಲಿತು ಅಭ್ಯಾಸ ಮಾಡಬೇಕು.
-ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ
2-72/5, ಪಾರಿಜಾತ
ಬಿಷಪ್ ಕಂಪೌಂಡ್, ಕೊಂಚಾಡಿ ಅಂಚೆ,
ಯೆಯ್ಯಾಡಿ ಪದವು, ಮಂಗಳೂರು-575008.
ಮೊಬೈಲ್: 9448394987
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ಮಾಹಿತಿ
ReplyDelete