ಕೋವಿಡ್ ಮಹಾಮಾರಿಯು ಜಗತ್ತನ್ನು ಆವರಿಸಿ ಅಟ್ಟಹಾಸ ಮೆರೆದಾಗ ಜೀವದ ಹಿತ ದೃಷ್ಟಿಯಿಂದ ಕೆಲವು ಬದಲಾವಣೆಗಳಿಗೆ ನಾವೆಲ್ಲರೂ ಹೊಂದಿಕೊಳ್ಳಲೇ ಬೇಕಾಯಿತು. ಶಿಕ್ಷಣ, ಉದ್ಯೋಗ, ವಾಣಿಜ್ಯ, ವ್ಯಾಪಾರ, ವಹಿವಾಟು, ಕಲೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ನಾವು ಹಲವಾರು ಬದಲಾವಣೆಗಳನ್ನು ಕಂಡೆವು. ಕರಾವಳಿಯ ಶ್ರೀಮಂತ ಕಲೆ ಯಕ್ಷಗಾನವೂ ಈ ಬದಲಾವಣೆಗೆ ಹೊರತಲ್ಲ. ತುಂಬಿದ ಸಭೆ, ಅಲಂಕೃತ ರಂಗಸ್ಥಳ, ಪ್ರೇಕ್ಷಕರ ಕರತಾಡನದ ಮಧ್ಯೆ ನಡೆಯುತ್ತಿದ್ದ ಪ್ರದರ್ಶನಗಳು, ತಾಳಮದ್ದಲೆ ಕಾರ್ಯಕ್ರಮಗಳು ಆನ್ಲೈನ್ ವೇದಿಕೆಯತ್ತ ಮುಖ ಮಾಡಿತು. ಇತ್ತ ಯಕ್ಷಗಾನ ತರಗತಿಗಳೂ ಆನ್ಲೈನ್ ಮೂಲಕ ನಡೆದು ಜನಪ್ರಿಯತೆ ಪಡೆಯಿತು.
ಬೆಂಗಳೂರಿನ ಬೇರೆ ಬೇರೆ ಕಡೆಗಳಲ್ಲಿ ಸುಮಾರು ಹತ್ತು ವರ್ಷಗಳಿಂದ ತೆಂಕುತಿಟ್ಟು ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆಯ ತರಬೇತಿಯನ್ನು ನೀಡುತ್ತಿದ್ದ, ಪ್ರಸ್ತುತ ಕಥೆಗಾರರು (the storytellers) ಎಂಬ ಸಂಸ್ಥೆಯ ನಿರ್ದೇಶಕರಾಗಿರುವ ಶ್ರೀ ಪ್ರಸಾದ್ ಚೇರ್ಕಾಡಿ ಅವರು ಕಳೆದ ವರ್ಷ ಜುಲೈ ತಿಂಗಳಲ್ಲಿ ಆನ್ಲೈನ್ ಯಕ್ಷಗಾನ ತರಗತಿಗಳನ್ನು ಆರಂಭಿಸಿದರು. ಮೂಲತಃ ಉಡುಪಿ ಜಿಲ್ಲೆಯ ಚೇರ್ಕಾಡಿ ಗ್ರಾಮದವರಾದ ಇವರು ಬಾಲ್ಯದಲ್ಲಿ ನಾಟ್ಯವನ್ನು ಚೇರ್ಕಾಡಿ ಮಂಜುನಾಥ ಪ್ರಭು ಹಾಗೂ ಚೇರ್ಕಾಡಿ ಕೃಷ್ಣ ಪ್ರಭು ಅವರಲ್ಲಿ ಅಭ್ಯಸಿಸಿದರು. ತದನಂತರ ತೆಂಕುತಿಟ್ಟು ಯಕ್ಷಗಾನ ನಾಟ್ಯವನ್ನು ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಶೇಖರ್ ಡಿ ಶೆಟ್ಟಿಗಾರ್ ಅವರಲ್ಲಿಯೂ, ಭಾಗವತಿಕೆಯನ್ನು ಗಣೇಶ್ ಕೊಲೆಕಾಡಿಯವರಲ್ಲಿ ಅಭ್ಯಾಸ ಮಾಡಿದರು. ಕಟೀಲು ಹಾಗು ಎಡನೀರು ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವ ಉಳ್ಳವರು. ಪ್ರಸಾದ್ ಅವರು ಉತ್ತಮ ರಂಗಭೂಮಿ ಕಲಾವಿದರೂ ಆಗಿದ್ದು, ಯಕ್ಷಗಾನದೊಂದಿಗೆ ರಂಗಭೂಮಿ ಚಟುವಟಿಕೆಗಳಲ್ಲೂ, ಚಲನಚಿತ್ರ ನಿರ್ದೇಶನ, ಸ್ಕ್ರಿಪ್ಟ್ ಬರವಣಿಗೆ ಹಾಗೂ ನಟನೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಇವರ ಆನ್‌ಲೈನ್ ತರಗತಿಗಳು ಸಾಕಷ್ಟು ಜನಪ್ರಿಯತೆ ಗಳಿಸಿದ್ದು ಭಾರತದ ಇತರೇ ರಾಜ್ಯದಲ್ಲಿ ಹಾಗೂ ವಿದೇಶಲ್ಲಿ ನೆಲೆಸಿರುವ ಕನ್ನಡಿಗರು ಯಕ್ಷಗಾನ ಕಲಿಕೆಯತ್ತ ಆಸಕ್ತಿ ತೋರಿದ್ದಾರೆ. ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಯಕ್ಷಗಾನ ತರಬೇತಿ ಪಡೆದಿದ್ದು ಹಲವರು ಕಲಿಕೆಯನ್ನು ಮುಂದುವರಿಸುತ್ತಿದ್ದಾರೆ.
"ಯಕ್ಷಗಾನವನ್ನು ಆನ್ಲೈನ್ನಲ್ಲಿ ಕಲಿಯುವುದು, ಪ್ರದರ್ಶನ ನೀಡುವುದು ಸಾಧ್ಯವಾ ಎಂಬ ಪ್ರಶ್ನೆ ಈಗ ನಮ್ಮ ಮನಸ್ಸಿನಿಂದ ಹಾರಿ ಹೋಗಿದೆ. ಆ ಪ್ರಶ್ನೆಗಳಿಗೆ ಸಮರ್ಥ ಉತ್ತರವೂ ಸಿಕ್ಕಿದೆ. ಕಳೆದ ಜುಲೈನಲ್ಲಿ ಕಲಿಕೆ ಆರಂಭಿಸಿ, ಪ್ರಾಥಮಿಕ ಪಾಠವನ್ನು ಮುಗಿಸಿದ ವಿದ್ಯಾರ್ಥಿಗಳು ಒಂದು ಸಣ್ಣ ಪ್ರಸಂಗದ ಅಭ್ಯಾಸ ಪ್ರದರ್ಶನವನ್ನೂ ಮಾಡಿದ್ದಾರೆ. ಜಗತ್ತಿನ ಬೇರೆ ಬೇರೆ ಮೂಲೆಗಳಲ್ಲಿರುವ, ನೇರ ತರಗತಿಗೆ ಬರಲಾಗದವರಿಗೆ ಆನ್ಲೈನ್ ತರಗತಿಗಳು ತುಂಬಾ ಸಹಾಯಕಾರಿಯಾದವು" ಎಂದು ಬೋಧಕರಾದ ಪ್ರಸಾದ್ ಚೇರ್ಕಾಡಿ ಅವರು ಆನ್ಲೈನ್ ತರಗತಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಇತ್ತ ವಿದ್ಯಾರ್ಥಿಗಳು "ಗುರುಗಳು ಪಾಠ ಹೇಳಿ ಕೊಡುವ ಪರಿ, ಸ್ಪೂರ್ತಿ ತುಂಬಿಸಿ ಪ್ರೋತ್ಸಾಹ ನೀಡುವ ರೀತಿಯೇ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ ಇನ್ನಷ್ಟು ಕಲಿಯಲು ಪ್ರೇರೇಪಿಸುತ್ತದೆ" ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಇದೀಗ ಮತ್ತೊಂದು ಸುತ್ತಿನ 'ಪರಿಚಯಾತ್ಮಕ ಕೋರ್ಸ್- ಭಾಗವತಿಕೆ ಮತ್ತು ನಾಟ್ಯ ತರಗತಿಗಳು' ಇದೇ ಸಪ್ಟೆಂಬರ್ 01ರಿಂದ ಆರಂಭವಾಗಲಿದ್ದು ಅದರ ವಿವರ ಹೀಗಿದೆ:
- ಆನ್ಲೈನ್ ಮೂಲಕ ನಡೆಯಲಿರುವ ತರಗತಿಗಳು.
- ಒಟ್ಟು ಅವಧಿ ಮೂರು ತಿಂಗಳು
- ವೇಳಾಪಟ್ಟಿ: ಸೋಮವಾರದಿಂದ ಶುಕ್ರವಾರದವರೆಗೆ, ಸಂಜೆಯ ಮತ್ತು ಇಳಿ ಸಂಜೆಯ ಬ್ಯಾಚುಗಳು.
- ಪಠ್ಯ:
ಭಾಗವತಿಕೆ- ತೆಂಕುತಿಟ್ಟು ಪೂರ್ವರಂಗದ ಪರಿಚಯ ಮತ್ತು ಪ್ರಸಂಗಾಭ್ಯಾಸದ ಪರಿಚಯ.
ನಾಟ್ಯ- ಯಕ್ಷಗಾನದ ದೇಹಾಂಗ ಮತ್ತು ತೆಂಕುತಿಟ್ಟು ಯಕ್ಷಗಾನ ಪೂರ್ವರಂಗದ ಪರಿಚಯ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ +91 9611134810 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ವಿವರಗಳಿಗೆ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ 'ಕಥೆಗಾರರು' ಫೇಸ್ಬುಕ್ ಪುಟಕ್ಕೆ ಭೇಟಿ ನೀಡಬಹುದು.
https://www.facebook.com/1994092054179763/posts/2914321372156822/?app=fbl
ಹಾಗೆ ನಾಟ್ಯದ ವಿದ್ಯಾರ್ಥಿಗಳು ಮಾಡಿದ ಪ್ರದರ್ಶನವನ್ನು ವೀಕ್ಷಿಸಲು ಕೆಳಗಿನ ಯೂಟ್ಯೂಬ್ ಕ್ಲಿಕ್ಕಿಸಿ :
https://youtu.be/e6zoh6qF4hw
https://youtu.be/i1izGbfGoJs
-ಅನರ್ಘ್ಯ ಟಿ.ಪಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ