||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೋಪಿಕೆಯರ ಕೃಷ್ಣ ಪ್ರೇಮ

ಗೋಪಿಕೆಯರ ಕೃಷ್ಣ ಪ್ರೇಮ

 ಆ.30 ಕೃಷ್ಣ ಜನ್ಮಾಷ್ಟಮಿ ತನ್ನಿಮಿತ್ತ ಲೇಖನ
ಕೃಷ್ಣನ ಮಡದಿಯರು ರುಕ್ಮಿಣೀ, ಸತ್ಯಭಾಮಾ, ನೀಲಾ (ರಾಧೆ), ಮಿತ್ರವಿಂದಾ, ಕಾಳಿಂದೀ, ಭದ್ರಾ, ಲಕ್ಷಣಾ, ಜಾಂಬವತೀ ಮತ್ತು ಹದಿನಾರು ಸಾವಿರದ ನೂರು ಮಂದಿ. ಅವರಲ್ಲಿ ಹದಿನಾರು ಸಾವಿರದ ನೂರು ಮಂದಿ ನರಕಾಸುರನ ಬಂಧಿಯಾಗಿದ್ದವರು. ಅವೆರಲ್ಲರೂ ಶ್ರೇಷ್ಠರು. ಶ್ರೀಕೃಷ್ಣನ ಭಕ್ತೆಯರು. ಕೃಷ್ಣನಿಗೆ ಮಡದಿಯರಾಗಿ ತಮ್ಮ ಜನ್ಮ ಪಾವನಗೊಳಿಸಿಕೊಂಡರು.


ಅಧಿಕಾರ ಸಿಕ್ಕೊಡನೆ ಧರ್ಮ-ಅಧರ್ಮದ ವಿಚೇಚನೆಯಿಲ್ಲದೆ, ವಿಧಿ-ನಿಷೇಧಗಳ ಪರಿಜ್ಞಾನವಿಲ್ಲದೇ ತೋಚಿದಂತೆ ವರ್ತಿಸುವುದೇ ಅಸುರರ ಗುಣ. ನರಕಾಸುರನೂ ಇದಕ್ಕೆ ಹೊತರಲ್ಲ. ಸ್ವತಃ ವರಾಹರೂಪಿ ವಿಷ್ಣು ಮತ್ತು ಭೂದೇವಿಯರ ಪುತ್ರವನಿವನು. ತಂದೆ-ತಾಯಿ ಯಾರಾದರೇನು? ಎಂತಹ ದುಷ್ಟನೂ ಮಗನಾಗಿ ಹುಟ್ಟಬಹುದು ಎಂಬುದಕ್ಕೆ ಸಾವಿರಾರು ವರ್ಷಗಳ ಹಿಂದೆಯೇ ಉದಾಹರಣೆಯಾಗಿ ದಾಖಲಾದವನು.


ಅಸುರರಿಗೂ ಅಪಾರ ಶ್ರದ್ಧಾ ಭಕ್ತಿಗಳಿರುತ್ತವೆ. ದುಷ್ಟತನದಲ್ಲಿ, ಅಧರ್ಮದ ಆಚರಣೆಯಲ್ಲಿ. ಇವನೂ ಕೂಡಾ ಶ್ರದ್ಧಾ ಭಕ್ತಿಗಳಿಂದ ತಪವನ್ನಾಚರಿಸಿ ಬ್ರಹ್ಮನಿಂದ ತಾನು ಯಾರಿಂದಲೂ ಸಾಯಬಾರದು ಎಂಬ ವರ ಪಡೆದ. ವ್ಯಕ್ತಿಯ ಉದ್ದೇಶವೇ ಅವನ ಅಂತರಂಗಕ್ಕೆ ಹಿಡಿದ ಕನ್ನಡಿ. ಅದರಿಂದಲೇ ಅವನು ಸಜ್ಜನನೋ, ಅಲ್ಲವೋ ಎಂಬುದು ನಿಶ್ಚಯವಾಗುವುದು. ನರಕನು ಮಾತ್ರ ದುರ್ಜನನಾದ. ಸಜ್ಜನರನ್ನು ಪೀಡಿಸಲೆಂದೇ ಸಾವಿಲ್ಲದ ವರ ಪಡೆಯಲು ಬಯಸಿದ. ನರಕನ ನರಕಸದೃಶ ಆಳ್ವಿಕೆ ವಿಜೃಂಬಿಸಲು ಬ್ರಹ್ಮನಿಂದ ಒಂದು ಸಹಿಯೂ, ಮುದ್ರೆಯೂ ಸಿಕ್ಕಿದಂತಾಯಿತು. ಅವನ ದುರಾಡಳಿತ ಎಗ್ಗಿಲ್ಲದಂತೆ ಸಾಗಿತು.


ನರಕನೂ, ಜರಾಸಂಧನೂ ಪ್ರಾಯಃ ಆಪ್ತ ಗೆಳೆಯರು. ಜರಾಸಂಧನು ಎಲ್ಲಾ ರಾಜಕುಮಾರರನ್ನು ಅಪಹರಿಸಿ ಸೆರೆಯಲ್ಲಿಟ್ಟ. ಕ್ಷತ್ರಿಯ ಯುವಕ-ಯುವತಿಯರು ಬಂಧನದಲ್ಲಿದ್ದರೆ, ಮಂದಿ ರಾಜರನ್ನು ರಾಜ್ಯಸಹಿತ ವಶಪಡಿಸಿಕೊಳ್ಳುವುದು ಸುಲಭ ಎಂಬುದು ಜರಾಸಂಧನ ಉಪಾಯ. ಆದರೆ, ನರಕನದು ಜರಾಸಂಧನಿಗಿಂತಲೂ ದುಷ್ಟಾಲೋಚನೆ. ಅವನು ಎಲ್ಲಾ ರಾಜಕುಮಾರಿಯರನ್ನು ಬಂಧಿಸಿ ಸೆರೆಗಟ್ಟಿದ. ಕುಮಾರಿಯರಿಗೆ ಪಟ್ಟಗಟ್ಟಬಾರದು ಅಥವಾ ಅವರ ಸಂತಾನಕ್ಕೂ ಸಿಂಹಾಸನ ಸಿಗಬಾರದು. ಇದು ಅವನ ದುರುದ್ದೇಶ. ಹೀಗಾಗಿ ನರಕಾಸುರನ ಸೆರೆಯಲ್ಲಿದ್ದವರೆಲ್ಲಾ ಅವಿವಾಹಿತೆಯರು. ಎಲ್ಲರೂ ಗುಣವತಿಯರು. ದುಷ್ಟನ ಆಳ್ವಿಕೆಯಲ್ಲಿ ಯುವ ಕುಮಾರ-ಕುಮಾರಿಯರೆಲ್ಲ ವರ್ಷಗಟ್ಟಲೆ ಸೆರೆಯಲ್ಲಿ!! ತಲೆಮಾರುಗಳನ್ನೇ ನಾಶ ಮಾಡುವ ದುಷ್ಟ ಆಲೋಚನೆ ಇವನದು.


ಹೀಗೆ ಲೋಕ ಕಂಟಕರು ನಾಯಕರಾಗಿ ಅವರ ಉಪಟಳ ಹೆಚ್ಚಾದಾಗಲೇ ಧರ್ಮರಕ್ಷಕರು ಬಾಯ್ಬಿಡುವುದು. ಎಲ್ಲಾ ದೇವತೆಗಳು, ಋಷಿಮುನಿಗಳೂ ಸೇರಿ ಭಗವಾನ್ ವಿಷ್ಣುವಿನಲ್ಲಿ ಪ್ರಾರ್ಥಿಸಿದರು. `ನರಾಕಾಸುನೆಂಬ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು. ನರಕನಿಗೆ ಬ್ರಹ್ಮನ ವರವಿದ್ದುದರಿಂದ ಬ್ರಹ್ಮನಿಗಿಂತ ಹಿರಿಯನಾದ ವಿಷ್ಣುವಿನಿಂದ ಅವನಿಗೆ ಮರಣ.


ಸತ್ಯಭಾಮೆಯ ನೆರವು 

ವಿಷ್ಣು ಕೃಷ್ಣನಾಗಿ ಅವತರಿಸಿದಾಗ ನರಕಾಸುರನನ್ನು ಕೊಲ್ಲಲು ಬರುತ್ತಾನೆ, ಜೊತೆಗೆ ಪತ್ನಿ ಸತ್ಯಭಾಮೆ. ಬ್ರಹ್ಮನಿಂದ ನರಕನಿಗೆ ಅನೇಕ ದುರ್ಗಗಳಿಂದ ಕೂಡಿ ಸುಭದ್ರವಾದ ಪ್ರಾಗ್‍ಜ್ಯೋತಿಷ (ಅಸ್ಸಾಂ) ಎಂಬ ನಗರವೂ ಉಡುಗೊರೆಯಾಗಿ ಲಭಿಸಿತ್ತು. ಅಭೇದ್ಯವಾದ ಎಲ್ಲಾ ದುರ್ಗಗಳನ್ನೂ ಭೇದಿಸಿ ಕೃಷ್ಣನು ಭಾಮೆಯೊಡನೆ ನಗರ ಪ್ರವೇಶಿಸಿದ. ಘೋರ ಯುದ್ಧದಲ್ಲಿ ನರಕನ ಮಂತ್ರಿ-ಪುತ್ರರು ಸತ್ತರು.


ಕೃಷ್ಣನು ಆಯಾಸಗೊಂಡವನಂತೆ ಕಂಡ. ಕೂಡಲೇ ಭಾಮೆಯೇ ಧನುರ್ಬಾಣ ಹಿಡಿದು ನರಕನೊಡನೆ ಹೋರಾಡಿದಳು. ಹೆಣ್ಣು ಕೆರಳಿದರೆ ಕೆಚ್ಚಿಗೂ ಸೈ! ಎಂಬುದನ್ನು ಭಾಮೆ ಎಂದೋ ತೋರಿಸಿಬಿಟ್ಟಳು. ಅಕ್ಷರಶಃ ಭಾಮೆಯ ಪರಾಕ್ರಮಕ್ಕೆ ನರಾಸುರ ಹೆದರಿದ. ಅವಳ ಬಾಣಗಳ ಪರಾಕ್ರಮಕ್ಕೆ ನರಕಾಸುರ ಹೆದರಿದ. ಅವಳ ಬಾಣಗಳ ದಾಳಿಯ ವೇಗಕ್ಕೆ ಇವನು ಶಸ್ತ್ರ, ಸಾರಥಿ, ರಥವನ್ನೆಲ್ಲಾ ಕಳೆದುಕೊಂಡು ಪರಾಜಿತನಾಗಿ ಬರಿಗೈಲಿ ರಣರಂಗದಲ್ಲಿ ನಿಂತುಬಿಟ್ಟ.


ಕೃಷ್ಣನಿಗಾಗಿ ಕಾದ ನೀರೆಯರು 

ಕೃಷ್ಣನು ಭಾಮೆಯ ಅಭೂತಪೂರ್ವ ಶೌರ್ಯ ಸಾಹಸಕ್ಕೆ ಅವಳನ್ನು ಅಭಿನಂದಿಸಿದ. ಕೃಷ್ಣನು ಹೀಗೆ ಹೆಣ್ಣಿನ ಅಸಮಾನ ಸಾಮರ್ಥ್ಯವನ್ನು ಲೋಕಕ್ಕೆ ತಿಳಿಯಪಡಿಸಿದ. ಬಳಿಕ ನರಕನನ್ನು ಚಕ್ರದಿಂದ ತುಂಡರಿಸಿ ಭೂಭಾರ ತಗ್ಗಿಸಿದ.


ನರಕಾಸುರನ ತಾಯಿ, ವಿಷ್ಣುವಿನ ಮಡದಿ ಭೂದೇವಿಯು ಮೈತಾಳಿ ಬಂದು ಕೃಷ್ಣನಿಗೆ ನಮಿಸಿ ಮೊಮ್ಮಗ ಭಗದತ್ತನನ್ನು ಮುಂದೆ ತಂದಳು. ಕೃಷ್ಣನು ಭಗದತ್ತನಿಗೆ ಪಟ್ಟಗಟ್ಟಿದ. ಸ್ವತಃ ಭೂದೇವಿಯೇ ತನ್ನ ದುಷ್ಟ ಪುತ್ರನನ್ನು ಸಂಹರಿಸುವಂತೆ ಪತಿಯಲ್ಲಿ ಬೇಡಿದ್ದಳು. ಲೋಕಕಲ್ಯಾಣಕ್ಕಾಗಿ ಹೆತ್ತ ದುಷ್ಟಮಗನನ್ನು ಕೂಡಾ ಕೈಬಿಡಬೇಕೆಂಬುದನ್ನು ಕಲಿಸಿದ ಶ್ರೇಷ್ಠ, ದಿಟ್ಟ ತಾಯಿಯೀಕೆ, ಮತ್ತೂ ಉತ್ತಮರಾದ ಅನೇಕ ಸ್ತ್ರೀಯರು ಅರಮನೆಯ ಸೆರೆಯಲ್ಲಿ ಬಂಧಿಗಳಾಗಿದ್ದರೆಂದು ತಿಳಿದು, ಅವರನ್ನು ಬಿಡಿಸಲು ಅತ್ತ ಬಂದಾಗ ಕೃಷ್ಣ ಕಂಡಿದ್ದು ಹದಿನಾರು ಸಾವಿರದ ನೂರು ಮಂದಿ ಕುಮಾರಿಯರನ್ನು ಎಲ್ಲರೂ ಶ್ರೇಷ್ಠರು. ಕೃಷ್ಣನ ಭಕ್ತೆಯರು. ಕಷ್ಟಗಳ ಕೂಪದ ಸೆರೆವಾಸದಲ್ಲೂ ವ್ರತನಿಷ್ಠೆಯರಾಗಿದ್ದರು.  

ಇವರಲ್ಲಿ ಹಲವಾರು ದೇವಕನ್ಯೆಯರೂ, ಗಂಧರ್ವಕನ್ಯೆಯರೂ ಇದ್ದರು. ಎಲ್ಲರೂ ಹಿಂದಿನ ಜನ್ಮದಲ್ಲಿಯೇ ಭಗವದವತಾರವನ್ನು ನೇರವಾಗಿ ಕಂಡು ಅನುಭವಿಸಿ ಆನಂದಿಸಬೇಕೆಂದು ತೀವ್ರವಾಗಿ ಬಯಸಿದ್ದವರು.

ಬಹಳ ಮಂದಿ ಅಗ್ನಿದೇವನ ಪುತ್ರರಾಗಿದ್ದವರು. ಕೃಷ್ಣಾವತಾರದಲ್ಲಿ ಅವನನ್ನು ಪತಿಯಾಗಿ ಪಡೆಯಬೇಕೆಂದು ಆಸೆಪಟ್ಟವರು. ಅದಕ್ಕಾಗಿ ಹೆಣ್ಣಾಗಿ ಹುಟ್ಟಬೇಕೆಂದು ದೀರ್ಘಕಾಲ ಉತ್ತಮವಾದ ತಪವನ್ನಾಚರಿಸಿದ್ದರು. ವರ ಪಡೆದ ಬಳಿಕ ಇಂದಿನ ಬದರಿ ಕ್ಷೇತ್ರದಲ್ಲಿ ನಾರಾಯಣನ ಸೇವೆ ಮಾಡಿದರು. ಅಪಾರ ಪುಣ್ಯ ಹೊತ್ತು ರಾಜರ ಕುಲದಲ್ಲಿ ಕ್ಷತ್ರಿಯ ಕನ್ಯೆಯರಾಗಿ ಹುಟ್ಟಿ ಕೃಷ್ಣನಿಗಾಗಿಕಾದರು. ಹಾಗೆ ಕಾಯ್ದವರೆಲ್ಲ ನರಕನ ಸೆರೆಯಲ್ಲಿ ಒಂದೆಡೆ ಸೇರಿದ್ದರು.


ಕಲ್ಯಾಣಕ್ಕಾಗಿ ಕೋರಿಕೆ 

ಎಷ್ಟೋ ದಿನಗಳಿಂದ ಅನ್ನ-ಪಾನ-ಸ್ನಾನ ಕಾಣದ ಅವರಿಗೆ ಕೃಷ್ಣ ಕೂಡಲೇ ಅದಕ್ಕೆಲ್ಲಾ ವ್ಯವಸ್ಥೆ ಮಾಡಿದ. ಕೃಷ್ಣನನ್ನು ಕಂಡ ಆನಂದದಲ್ಲಿ ಅವರೆಲ್ಲ ಮಿಂದು ಹೊಸಬಟ್ಟೆಯುಟ್ಟು ಉಂಡು ಮತ್ತೆ ಕೃಷ್ಣನ ಮುಂದೆ ಬಂದರು. ಅವರೆಲ್ಲರನ್ನೂ  ಕೃಷ್ಣನು ತವರಿಗೆ ಸೇರಿಸಲು ಯತ್ನಿಸಿದಾಗ ಯಾವ ಯುವತಿಯೂ ಮನೆಗೆ ಮರಳಲು ಒಪ್ಪಲಿಲ್ಲ. ನರಕನ ಸೆರೆಯಲ್ಲಿದ್ದ ನಮ್ಮನ್ನು ಬೇರೆ ಯಾರು ವರಿಸುವುದಿಲ್ಲ. ನೀನೇ ನಮ್ಮನ್ನು ವಿವಾಹವಾಗಿ ಅನುಗ್ರಹಿಸು’ ಎಂದು ಪ್ರಾರ್ಥಿಸಿದರು.


ಅವರ ಹುಟ್ಟಿನ ಹಿನ್ನೆಲೆ, ಉದ್ದೇಶ ತಿಳಿದಿದ್ದ ಕೃಷ್ಣ ಎಲ್ಲರನ್ನೂ ವರಿಸಿದ. ಒಬ್ಬೊಬ್ಬರಿಗೂ ಪ್ರತ್ಯೇಕ ಅರಮನೆಯ ವ್ಯವಸ್ಥೆ ಮಾಡಿದ. ಕೃಷ್ಣನು ಅವರ ಬದುಕು ಸಾರ್ಥಕಗೊಳಿಸಿದ. 

ಕೃಷ್ಣನು ತನ್ನ ಅವತಾರದಲ್ಲಿ ಮಡದಿಯರಾಗಿ ಬಂದ ಹೆಣ್ಣಿಗೆ ಕೊಟ್ಟ ಪ್ರಾಮುಖ್ಯತೆಯನ್ನು ಇಲ್ಲಿ ಗಮನಿಸಬೇಕು. ಭಾಮೆಯ ಪರಾಕ್ರಮ, ಭೂದೇವಿಯ ಧೀರತೆ, ಹದಿನಾರು ಸಾವಿರದ ನೂರು ಮಂದಿಯ ಭಕ್ತಿ-ಪ್ರೇಮಗಳು ಇಲ್ಲಿ ಮನನೀಯವಾಗಿದೆ.


ಶ್ಯಮಂತಕ ಮಣಿ ಮಾಡಿದ ಕಿತಾಪತಿ 

ಅತಿ ಹೆಚ್ಚು ಬೆಲೆ ಬಾಳುವ ವಜ್ರ ಅಂದರೆ ಕೊಹಿನೂರ್. ಇಂತಹುದೇ ವಜ್ರಕ್ಕಿಂತಲೂ ಹೆಚ್ಚು ಬೆಲೆ ಬಾಳುವ ಮಣಿಯೊಂದು ನಮ್ಮ ಪುರಾಣದಲ್ಲಿದೆ. ಅದು ಶ್ಯಮಂತಕ ಮಣಿ. ಇದನ್ನು ಆಸೆಪಟ್ಟು ಇಟ್ಟುಕೊಂಡವರೆಲ್ಲಾ ಮಣ್ಣಾಗಿ ಹೋದದ್ದು ದುರಂತ. 

ಶ್ರೀಕೃಷ್ಣನ ಅತ್ಯಂತ ಪ್ರೀತಿಯ ಹೆಂಡತಿ ಸತ್ಯಭಾಮೆ. ಈ ಸತ್ಯಭಾಮೆಯ ತಂದೆ ಸತ್ರಾಜಿತ. ಈತ ಯಾದವ ವೀರ. ಸೂರ್ಯದೇವನ ಪರಮಭಕ್ತ. ಸತ್ರಾಜಿತ ನಡೆಸಿದ ಹಲವು ವರ್ಷಗಳ ತಪಸ್ಸಿನ ಫಲವಾಗಿ ಸೂರ್ಯದೇವ ಪ್ರತ್ಯಕ್ಷನಾಗಿ ನಿನಗೇನು ವರಬೇಕೆಂದು ಕೇಳುತ್ತಾನೆ.


ಅದಕ್ಕೆ ಸತ್ರಾಜಿತ, ನಿನ್ನನ್ನು ಬರಿಗಣ್ಣಿನಿಂದ ನೋಡಬೇಕು ಎನ್ನುತ್ತಾನೆ. ಸೂರ್ಯದೇವನ ಸ್ವಯಂಪ್ರಭೆಗೆ ಶ್ಯಮಂತಕ ಮಣಿಯೇ ಕಾರಣವಾದ್ದರಿಂದ ಸೂರ್ಯ ಶ್ಯಮಂತಕ ಮಣಿಯನ್ನು ತೆಗೆದು ದರ್ಶನ ನೀಡುತ್ತಾನೆ. ಅಷ್ಟಕ್ಕೆ ತೃಪ್ತನಾಗದ ಸತ್ರಾಜಿತ ಶ್ಯಮಂತಕವೇ ತನಗೆ ಬೇಕೆಂದು ಕೇಳುತ್ತಾನೆ. ಸೂರ್ಯದೇವ ನೀಡುತ್ತಾನೆ. ಕೆಲವೊಂದು ಶಿಸ್ತುಗಳೊಂದಿಗೆ, ಶುಚಿಯಾಗಿ ಪೂಜಿಸುತ್ತಾ ಧರಿಸಬೇಕು. ಹಾಗೆ ಭಕ್ತಿಯಿಂದ ಧರಿಸಿದರೆ ದಿನವು ಮಣದಷ್ಟು ಬಂಗಾರವನ್ನು ಅನುಗ್ರಹಿಸುತ್ತದೆ (ಒಂದು ಮಣವೆಂದರೆ ಹದಿನಾರು ಸೇರು). ಇದು ಇರುವ ಜಾಗದಲ್ಲಿ ರೋಗ ರುಜಿನಗಳು, ಕ್ಷಾಮ ಡಾಮರಗಳು ಹತ್ತಿರ ಸುಳಿಯುವುದಿಲ್ಲ. ಧರಿಸಿದವನು ಅಶುದ್ಧನೂ ಆಚಾರಹೀನನು ಆದರೆ ಅವನನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂದೂ ಹೇಳುತ್ತಾನೆ.


ಸತ್ರಾಜಿತ ಶ್ಯಮಂತಕ ಮಣಿಯನ್ನು ಧರಿಸಿ ದ್ವಾರಕೆಗೆ ಬರುತ್ತಾನೆ. ಸಾಕ್ಷಾತ್ ಸೂರ್ಯದೇವನೇ ಬರುತ್ತಿದ್ದಾನೆ ಎಂಬಂತೆ ಅವನ ಪ್ರಭೆ ಹೊರ ಹೊಮ್ಮುತ್ತಿರುತ್ತದೆ. ಇದನ್ನು ಕಂಡ ಕೃಷ್ಣ ಶ್ಯಮಂತಕಮಣಿಯ ಬೆಲೆಯನ್ನು ಅರಿತು ಇಂತಹ ಯೋಗ್ಯವಾದ ವಸ್ತು ರಾಜನಾದವನಲ್ಲಿ ಇರಬೇಕು ಎಂದು ಅದನ್ನು ರಾಜ ಉಗ್ರಸೇನನಿಗೆ ಕೊಟ್ಟುಬಿಡುವಂತೆ ಕೇಳುತ್ತಾನೆ. ಆದರೆ ಲೌಕಿಕ ಆಸಕ್ತಿಗಳ ಸತ್ರಾಜಿತ ಇದಕ್ಕೆ ಒಪ್ಪುವುದಿಲ್ಲ.  

ಈ ಸತ್ರಾಜಿತನಿಗೆ ಪ್ರಸೇನಜಿತ ಎಂಬ ಒಬ್ಬ ತಮ್ಮನಿದ್ದ. ಒಮ್ಮೆ ಪ್ರಸೇನಜಿತಬೇಟೆಗೆ ಹೋಗುವಾಗ ಈ ಮಣಿಯನ್ನು ಅವನ ಕೊರಳಿಗೆ ಹಾಕಿ ಕಳುಹಿಸಿದ ಸತ್ರಾಜಿತ. ಶುಚಿಯಾಗಿಲ್ಲದ ಅವನನ್ನು ಸಿಂಹವೊಂದು ಕೊಂದು ಹಾಕಿತು. ಅದೇ ದಾರಿಯಲ್ಲಿ ಬಂದ ಜಾಂಬವಂತನ ಕೈಗೆ ಮಣಿ ಸಿಕ್ಕಿತು. ಈ ಜಾಂಬವಂತ ವಾನರ ಯುದ್ಧದಲ್ಲಿ ಭಾಗವಹಿಸಿದ್ದವನು. ಬಹಳ ಶಕ್ತಿಶಾಲಿಯೂ ಬುದ್ಧಿವಂತನೂ ಆಗಿದ್ದ ಕರಡಿ. ಮಣಿಯ ಬಗ್ಗೆ ಅಷ್ಟೇನೂ ತಿಳಿಯದ ಜಾಂಬವಂತ ಅದನ್ನು ತೆಗೆದುಕೊಂಡು ಹೋಗಿ ತನ್ನ ಮಗಳಿಗೆ ಆಟದ ಸಾಮಾನಿನಂತೆ ಆಡಲು ಕೊಟ್ಟುಬಿಟ್ಟ.


ಪ್ರಸೇನಜಿತ ಬರದದ್ದನ್ನು ಕಂಡು ಸತ್ರಾಜಿತನಿಗೆ ಅನುಮಾನವಾಗುತ್ತದೆ. ಶ್ರೀಕೃಷ್ಣನೇ ಶ್ಯಮಂತಕಣಿಯು ಆಸೆಗಾಗಿ ಪ್ರಸೇನಜಿತನನ್ನು ಕೊಂದು ಮಣಿಯನ್ನು ಅಪಹರಿಸಿದ್ದಾನೆಂದು ಆರೋಪಿಸುತ್ತಾನೆ. ಕೃಷ್ಣ ತನ್ನದಲ್ಲದ ತಪ್ಪಿಗೆ ಮರುಗುತ್ತಾ ಪ್ರಸೇನಜಿತನನ್ನು ಹುಡುಕಿ ಹೊರಡುತ್ತಾನೆ. ದಾರಿ ಹಿಡಿದು ಹೊರಟವನು ಸೀದಾ ತಲುಪಿದ್ದು ಜಾಂಬವಂತ. ಇಪ್ಪತ್ತೊಂದು ದಿನಗಳವರೆಗೆ ಕೃಷ್ಣನಿಗೂ ಜಾಂಬವಂತನಿಗೂ ಯುದ್ಧ ನಡೆಯುತ್ತದೆ. ಆದರೆ ಇಬ್ಬರೂ ಸೋಲುವುದಿಲ್ಲ. ಇದರ ಮಧ್ಯೆ ಕೃಷ್ಣನ ಹಿಂದೆ ಸೈನಿಕರು ಕೃಷ್ಣ ಸತ್ತನೆಂದೇ ಹೋಗಿ ದ್ವಾರಕೆಗೆ ಸುದ್ದಿ ಮುಟ್ಟಿಸುತ್ತಾರೆ. ಯಾದವ ಕುಲೋತ್ತಮರು ಕೃಷ್ಣನ ಶ್ರಾದ್ಧವನ್ನೂ ಮಾಡಿ ಮುಗಿಸುತ್ತಾರೆ. ಇಪ್ಪತ್ತೊಂದನೆಯ ದಿನ ಶ್ರೀಕೃಷ್ಣ ತನ್ನ ಹಿಂದಿನ ರಾಮಾವತಾರವನ್ನು ಜಾಂಬವಂತನಿಗೆ ತೋರಿಸುತ್ತಾನೆ. ಕೂಡಲೇ ಪಶ್ಚಾತ್ತಾಪಗೊಂಡ ಜಾಂಬವಂತ ಕೃಷ್ಣನಿಗೆ ಶರಣಾಗಿ ಶ್ಯಮಂತಕ ಮಣಿಯನ್ನು ಕೃಷ್ಣನಿಗೆ ಕೊಡುತ್ತಾನೆ, ಹಾಗೆಯೇ ತನ್ನ ಮಗಳಾದ ಜಾಂಬವಂತಿಯನ್ನು ಕೃಷ್ಣನೊಡನೆ ಮದುವೆ ಮಾಡುತ್ತಾನೆ.ಕೃಷ್ಣ ಮಣಿಯನ್ನು ತಂದು ಸತ್ರಾಜಿತನಿಗೆ ಅರ್ಪಿಸುತ್ತಾನೆ. ಇದರಿಂದ ಪಶ್ಚಾತ್ತಾಪಗೊಂಡ ಸತ್ರಾಜಿತ ತನ್ನ ಮಗಳು ಸತ್ಯಭಾಮೆಯನ್ನು ಕೃಷ್ಣನಿಗೆ ಮದುವೆ ಮಾಡಿ ಕೊಡುತ್ತಾನೆ. ಆದರೆ ಮಣಿಯನ್ನು ತನ್ನಲ್ಲೇ ಉಳಿಸಿಕೊಳ್ಳುತ್ತಾನೆ. ಕೃತವರ್ಮ ಮತ್ತು ಶತಧ್ವನ ಈ ಇಬ್ಬರು ಯಾದವರಿಗೂ ಮಣಿಯ ಮೇಲೆ ಮೇಲೆ ಮೊದಲಿನಿಂದಲೂ ಮೋಹ. ಅದನ್ನು ಅಪಹರಿಸಲು ಸಮಯಕ್ಕಾಗಿ ಕಾದಿರುತ್ತಾರೆ. ಪಾಂಡವರು ಅರಗಿನ ಅರಮನೆಯಲ್ಲಿ ಸುಟ್ಟು ಹೋದರೆಂಬುವ ಸುದ್ದಿ ಬಂದಾಗ ಕೃಷ್ಣ-ಬಲರಾಮರು ಹಸ್ತಿನಾವತಿಗೆ ಹೋಗುತ್ತಾರೆ. ಇದೇ ಸುಸಂದರ್ಭಎಂದರಿತ ಕೃತವರ್ಮ-ಶತಧ್ವನರು ರಾತ್ರೋರಾತ್ರಿ ಸತ್ರಾಜಿತನನ್ನು ಕೊಲ್ಲುತ್ತಾರೆ. ಆದರೆ ಇಲ್ಲಿ ಶತಧ್ವನ ಕೃತವರ್ಮನಿಗೂ ತೋರಿಸದೆ ಮಣಿಯನ್ನು ತೆಗೆದುಕೊಂಡು ಓಡಿ ಹೋಗುತ್ತಾನೆ. ಓಡಿ ಹೋಗುವ ಭರದಲ್ಲಿ ಕೃಷ್ಣ-ಬಲರಾಮನ ನೆನಪಾಗಿ ಮುಂದಿನ ಅಪಾಯವನ್ನು ಅರಿತವನಂತೆ ಮಣಿಯನ್ನು ಯಾದವರ ಮಂತ್ರಿ ಅಕ್ರೂರನ ಬಳಿ ಗೌಪ್ಯವಾಗಿರಿಸಲು ಹೇಳಿ ಕೊಟ್ಟು ಹೋಗುತ್ತಾನೆ.


ಹಸ್ತಿನಾವತಿಯಿಂದ ಹಿಂದಿರುಗಿದ ಕೃಷ್ಣ-ಬಲರಾಮರಿಗೆ ಈ ವಿಷಯ ತಿಳಿಯುತ್ತಿದ್ದಂತೆ ಬಲರಾಮ, ಕೃಷ್ಣನೇ ಮಣಿಯನ್ನು ಅಪಹರಿಸಿದ್ದಾನೆ ಎಂದು ಅನುಮಾನಿಸಿ ಬೇಸರಗೊಂಡು ಮೂರು ವರ್ಷಗಳ ಕಾಲ ಮನೆ ಬಿಟ್ಟು ಹೋಗುತ್ತಾನೆ. ಈ ಅವಧಿಯಲ್ಲೇ ಅವನು ದುರ್ಯೋಧನನಿಗೆ ಗದಾಯುದ್ಧವನ್ನು ಕಲಿಸುತ್ತಾನೆ. ಇತ್ತ ಶತಧ್ವನನನ್ನು ಹುಡುಕುತ್ತಾ ಹೋಗುವ ಕೃಷ್ಣ ಅವನನ್ನು ಕೊಲ್ಲುತ್ತಾನೆ. ಆದರೆ ಮಣಿ ಸಿಗುವುದಿಲ್ಲ. ನಂತರ ಮಣಿ ಅಕ್ರೂರನ ಬಳಿ ಇರುವುದು ತಿಳಿಯುತ್ತದೆ. ಬಲರಾಮ ತಪ್ಪಿನ ಅರಿವಾಗಿ ವಾಪಾಸಾಗುತ್ತಾನೆ. ಶ್ಯಮಂತಕ ನೀಡುವ ಬಂಗಾರದಿಂದಾಗಿ ಯಾದವರು ಶ್ರೀಮಂತರಾಗತೊಡಗುತ್ತಾರೆ. ದುಡಿಮೆಯೇ ದುಡ್ಡು ಕೈ ಸೇರತೊಡಗಿದಂತೆ, ಖರ್ಚು ಮಾಡುವ ವಿಧಾನಗಳನ್ನೂ ಹುಡುಕುತ್ತಾರೆ. ಜೂಜು ಅಡ್ಡೆಗಳು, ಮದ್ಯಪಾನದ ಮೇಳಗಳು, ವೇಶ್ಯಾವಾಟಿಕೆಗಳು ಹೆಚ್ಚುತ್ತವೆ.


ಇದನ್ನರಿತ ಕೃಷ್ಣ ಅಕ್ರೂರನನ್ನು ಕರೆಸಿ ಶ್ಯಮಂತಕ ಮಣಿಯನ್ನು ಸಮುದ್ರರಾಜನಿಗೆ ಅರ್ಪಿಸಿ ಬಿಡುವಂತೆ ಸೂಚಿಸುತ್ತಾನೆ. ಆದರೇನಂತೆ ಅಷ್ಟರಲ್ಲಾಗಲೇ ಯಾದವರ ಬುದ್ಧಿ ಮದದಿಂದ ವಿನಾಶ ಹೊಂದಿರುತ್ತದೆ. ನಂತರವೇ ಅವರು ತೀರ್ಥಯಾತ್ರೆ ಕೈಗೊಂಡು ನಾಶವಾಗುವುದು. ಒಂದು ದಿವ್ಯಮಣಿ ಇಷ್ಟೆಲ್ಲಾ ಮಾಡಿಸುತ್ತದೆ.


-ಡಾ.ಗುರುರಾಜ ಪೋಶೆಟ್ಟಿಹಳ್ಳಿ

 ಸಂಸ್ಕೃತಿ ಚಿಂತಕರು, ಬೆಂಗಳೂರು

90356 18076


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post