ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

Upayuktha
0

ಮೆರುಗು ನೀಡಿದ ಗಾನಾಮೃತ, ಭಜನೆ, ನೃತ್ಯ ಹಾಗೂ ಯಕ್ಷಗಾನ ತಾಳಮದ್ದಳೆ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯ ಕ್ಯಾಂಪಸ್‍ನಲ್ಲಿ ಜರಗಿದವು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಪ್ರಸ್ತುತ ವರ್ಷ ಶ್ರೀಕೃಷ್ಣನ 5252ನೇ ಜನ್ಮ ಜಯಂತಿಯನ್ನು ಆಚರಿಸುತ್ತಿದ್ದೇವೆ. ಇಷ್ಟು ವರ್ಷಾನಂತರವೂ ಒಬ್ಬಾತ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾನೆಂದ ಮೇಲೆ ಆತನ ಇರುವಿಕೆ ಕಾಲ್ಪನಿಕ ಎಂಬ ಭ್ರಮೆಗೊಳಗಾಗುವುದರಲ್ಲಿ ಅರ್ಥವಿಲ್ಲ. ಕೇವಲ ಕಲ್ಪನೆಯ ಮೂಸೆಯೋಳಗೆ ಮೂಡಿದ ವ್ಯಕ್ತಿ ಸಹಸ್ರ ಸಹಸ್ರ ವರ್ಷಗಳ ನಂತರವೂ ನೆನಪಿನಲ್ಲುಳಿಯುವುದು ಅಸಾಧ್ಯ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ ಈಗಿನ ಕಾಲದಲ್ಲಿ ಹೇಗೆ ಉಗ್ರರನ್ನು ಕಾಣುತ್ತಿದ್ದೇವೆಯೋ ಹಾಗೆಯೇ ಶ್ರೀಕೃಷ್ಣನ ಕಾಲದಲ್ಲೂ ವಿಧ್ವಂಸಕರಿದ್ದರು. ನರಕಾಸುರ, ಮಾಗಧನಂತಹವರು ಇಡಿಯ ಮನುಕುಲಕ್ಕೆ, ಕ್ಷತ್ರಿಯ ಕುಲಕ್ಕೆ ಮಾರಕರಾಗಿದ್ದದ್ದನ್ನು ಗಮನಿಸಬಹುದು ಎಂದು ನುಡಿದರು.


ಕೆಮ್ಮಾಯಿಯ ಆನಂದ ಕುಟೀರದ ಕಾರ್ಯದರ್ಶಿ ಶ್ರೀನಾಥ್ ಬಪ್ಪಳಿಗೆ ಕ್ಯಾಂಪಸ್‍ನಲ್ಲಿ ಅಷ್ಟಮಿಯ ಸಂದೇಶ ನೀಡಿದರೆ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸಂದೇಶ ನೀಡಿದರು.


ಸುಬ್ರಹ್ಮಣ್ಯ ನಟ್ಟೋಜ ಹಾಗೂ ರಾಜಶ್ರೀ ನಟ್ಟೋಜ ದಂಪತಿ ಶ್ರೀಕೃಷ್ಣನಿಗೆ ಆರತಿ ಬೆಳಗಿದರು. ವಿದ್ಯಾರ್ಥಿಗಳಿಂದ ಕೃಷ್ಣ ಗಾನಾಮೃತ, ಭಜನೆ, ಭಗವದ್ಗೀತೆ ಪಠಣ, ನೃತ್ಯವನ್ನು ನಡೆಸಿಕೊಟ್ಟರೆ ಶಿಕ್ಷಕಿಯರಿಂದ ಸಹಸ್ರನಾಮ ಪಠಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕೃಷ್ಣಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.


ತಾಳಮದ್ದಳೆ: ಅಷ್ಟಮಿ ಪ್ರಯುಕ್ತ ಸಂಸ್ಥೆಯ ಅಂಬಿಕಾ ಯಕ್ಷಕಲಾ ವೃಂದದ ವತಿಯಿಂದ ಯಕ್ಷಗಾನ ತಾಳಮದ್ದಳೆ ‘ವಿದುರಾತಿಥ್ಯ’ ನೆರವೇರಿತು. ಹಿಮ್ಮೇಳದಲ್ಲಿ ಭಾಗವತರಾಗಿ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಕನ್ನಡ ಶಿಕ್ಷಕ ಸತೀಶ್ ಇರ್ದೆ, ಚೆಂಡೆ ಮತ್ತು ಮದ್ದಳೆಯಲ್ಲಿ ಡಾ.ಶ್ರೀಪ್ರಕಾಶ್ ಬಂಗಾರಡ್ಕ ಹಾಗೂ ಮುರಳೀಧರ ಕಲ್ಲೂರಾಯ, ಚಕ್ರತಾಳದಲ್ಲಿ ಸುಂದರ ನಾಯ್ಕ ಪಾಣಾಜೆ ಭಾಗವಹಿಸಿದರು. ಮುಮ್ಮೇಳದಲ್ಲಿ ಶ್ರೀಕೃಷ್ಣನಾಗಿ ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ, ವಿದುರನಾಗಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಹಾಗೂ ಧರ್ಮರಾಯನಾಗಿ ಅಂಬಿಕಾ ಕ್ಯಾಂಪಸ್ ನಿರ್ದೇಶಕ ಭಾಸ್ಕರ ಶೆಟ್ಟಿ ಪಾತ್ರ ನಿರ್ವಹಿಸಿದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಶಂಕರನಾರಾಯಣ ಭಟ್, ಉಪ್ರಾಂಶುಪಾಲ ರಾಮಚಂದ್ರ ಭಟ್, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ, ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ, ಉಪಪ್ರಾಂಶುಪಾಲೆ ಸುಜನಿ ಬೋರ್ಕರ್, ಬೋಧಕ ಮತ್ತು ಬೋಧಕೇತರ ವೃಂದ, ಸೀಮಿತ ಸಂಖ್ಯೆಯ ಹೆತ್ತವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ ಇರ್ದೆ, ಉಪನ್ಯಾಸಕಿ ಅರ್ಪಿತಾ, ಉಪನ್ಯಾಸಕಿ ಜಯಂತಿ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors
Mandovi Motors
To Top