ಯಕ್ಷರಂಗದಲ್ಲಿ ಮಿಂಚುತ್ತಿರುವ ಕನ್ನಡ ಉಪನ್ಯಾಸಕ ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ

Upayuktha
0

ಕರಾವಳಿಗರ ಮನೆ ಮನಗಳಲ್ಲಿ ಯಕ್ಷಗಾನ ಕಲೆ ಬೆರೆತಿದೆ. ಇದೀಗ ಈ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಕಲಾವಿದ ಶ್ರೀಯುತ ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ.


ಶ್ರೀಮತಿ ಅಂಬಾ ಆರ್ ಕಲ್ಲೂರಾಯ ಹಾಗೂ ರಾಮಚಂದ್ರ ಕಲ್ಲೂರಾಯ ಇವರ ಮಗನಾಗಿ ದಿನಾಂಕ 26.04.1980 ರಂದು ಇವರ ಜನನ. ಎಂ.ಎ ಕನ್ನಡ (5th Rank) ಇವರ ವಿದ್ಯಾಭ್ಯಾಸ. ಮಾವ ರಘುವೀರ ರಾವ್ ಕೊಳಂಬೆ ಹಾಗೂ ದೊಡ್ಡಪ್ಪ ಅನಂತ ಕಲ್ಲೂರಾಯ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಎಂದು ಹೇಳುತ್ತಾರೆ ಕಲ್ಲೂರಾಯರು. ದ್ವಿವೇದಿ ಕೊರ್ಗಿ ವೇಂಕಟೇಶ ಉಪಾಧ್ಯಾಯ ಇವರ ತಾಳಮದ್ದಲೆ ಕ್ಷೇತ್ರಕ್ಕೆ ಗುರುಗಳು.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಹೊಸ ಪ್ರಸಂಗ ಆದರೆ ಮೊದಲು ಜೀವದ ಗೆಳೆಯ ವಾಸುದೇವ ರಂಗಣ್ಣರಿಂದ ಅರ್ಥ ಮಾಹಿತಿ ಪಡಕೊಂಡು ಬಳಿಕ ಭಾಗವತರಿಂದ ಪ್ರಸಂಗ ಮಾಹಿತಿ, ಹಿರಿಯ ಕಲಾವಿದರಿಂದ ರಂಗ ನಡೆ (ಕುಬಣೂರು ಭಾಗವತರು, ವಿಷ್ಣು ಶರ್ಮ, ರವಿಶಂಕರ ವಳಕುಂಜ, ಶ್ರುತಕೀರ್ತಿರಾಜ, ಪುಂಡಿಕಾಯಿ ಭಾಗವತರು ಬಹಳ ಹೇಳಿಕೊಟ್ಟಿದ್ದಾರೆ) ಕೇಳಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಕಲ್ಲೂರಾಯರು ಹೇಳುತ್ತಾರೆ.


ಕಟೀಲು ಕ್ಷೇತ್ರ ಮಹಾತ್ಮೆ, ದೇವೀ ಮಹಾತ್ಮೆ, ಮಾನಿಷಾದ, ಗೋವರ್ಧನೋದ್ಧರಣ ಹಾಗೂ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.

ಜಾಬಾಲಿ, ಶ್ರೀರಾಮ, ದೇವೀ ಮಹಾತ್ಮೆಯ ಸುಗ್ರೀವ, ಬ್ರಹ್ಮ, ವಿಷ್ಣು, ವಿಕ್ರಮಾದಿತ್ಯ, ಮತಂಗ ಮುನಿ ಇವರ ನೆಚ್ಚಿನ ವೇಷಗಳು. ಕಲ್ಲೂರಾಯರು ಕಳೆದ 6 ವರ್ಷದಿಂದ ಕಟೀಲು ಮೇಳದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ.



ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಈಗಿನ ಪ್ರೇಕ್ಷಕರು ಪ್ರಜ್ಞಾವಂತರು. ಓದಿನ ಹಿನ್ನಲೆಯುಳ್ಳವರು. ಬಹುತೇಕ ಸುಶಿಕ್ಷಿತರು. ಆದರೆ ಒಂದು ದೃಶ್ಯ ಮಾತ್ರ ನೋಡಿ‌ ಇಡೀ ಪ್ರದರ್ಶನದ ಅವಲೋಕನ ಮಾಡಕೂಡದು ಎಂದು ಕಲ್ಲೂರಾಯರು ಹೇಳುತ್ತಾರೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನ ಬುದ್ದಿ ಪ್ರಚೋದಕ ಕಲೆ. ಇತ್ತೀಚಿಗೆ ಅನೇಕರು ಇದರಲ್ಲಿ ಆಸಕ್ತಿ ಬೆಳೆಸಿಕೊಂಡಿರುವುದು ಗಮನಾರ್ಹ ಹಾಗೂ ಸಂತೋಷದ ವಿಷಯ. ಆದರೆ ಅವರ ತೊಡಗಿಸಿಕೊಳ್ಳುವಿಕೆ ಓದಿನೊಂದಿಗಿರಬೇಕು ಎಂದು ಕಲ್ಲೂರಾಯರು ಹೇಳುತ್ತಾರೆ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಈಗಾಗಲೇ ಯಕ್ಷಸಂವಾದ ಎಂಬ ಡಾಕ್ಯುಮೆಂಟೇಶನ್ ಕಹಳೆ ನ್ಯೂಸ್ ಸಹಕಾರದಿಂದ ಮಾಡುತ್ತಿದ್ದು ಮುಂದೆ ಬೇರೆ ಬೇರೆ ಪಾತ್ರ ಹಾಗೂ ಪ್ರಸಂಗವನ್ನಾಧರಿಸಿ ಕಲಿಯುವ ಆಸಕ್ತರಿಗೆ ಅನುಕೂಲವಾಗುವಂತೆ ಡಾಕ್ಯುಮೆಂಟೇಶನ್ ಮಾಡಿ ಕಲಾವಿದರ ಯೋಚನಾ ಹಾಗೂ ಗ್ರಹಿಕಾ ಕೌಶಲಕ್ಕೆ ವಿಷಯ ಕೊಡುವುದು.


ನಾಟಕ ಕಲಾವಿದ ಶಿವಾಜಿ ನಾಟಕದ ಸಮರ್ಥ ರಾಮದಾಸರ ಪಾತ್ರಕ್ಕೆ ರಾಜ್ಯ‌ಮಟ್ಟದ ಉತ್ತಮ ಪೋಷಕ ನಟ ಪ್ರಶಸ್ತಿ, ಮಿಮಿಕ್ರಿ ಕಲಾವಿದ, 40 ಜನ ಯಕ್ಷಗಾನ ಹಾಗೂ ಸಿನಿ‌ಕಲಾವಿದರ ಮಿಮಿಕ್ರಿ ಮಾಡುತ್ತಾರೆ ಹಾಗೂ ಒಳ್ಳೆಯ ಕ್ರಿಕೆಟ್ ಆಟಗಾರ (ಸ್ನೇಹಿತ ವಲಯದಲ್ಲಿ ಈಗಲೂ ದ್ರಾವಿಡ್ ಎಂದೇ ನಿಕ್ ನೇಮ್) ಇವರ ಹವ್ಯಾಸಗಳು.


ಸತತ 7 ವರ್ಷ ಯುವಜನ ಮೇಳದಲ್ಲಿ ಉತ್ತಮ ನಿರೂಪಕ ಪ್ರಶಸ್ತಿ, ಸಾಧನಾ ಪ್ರಶಸ್ತಿ, ನಾಡಾಜೆ ಪ್ರಶಸ್ತಿ, ಸೌರಭ ಪ್ರಶಸ್ತಿ, ಐಡಿಯಲ್ ಟೀಚರ್ ಅವಾರ್ಡ್,

ಜ್ಞಾನಜ್ಯೋತಿ ಪ್ರಶಸ್ತಿ, ಮುಂಬಯಿಯಲ್ಲಿ ಆಸ್ರಣ್ಣ ಪ್ರಶಸ್ತಿ ಹೀಗೆ ಹಲವು ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ನೋಡಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.


25.09.2006 ರಂದು ಮಹಾಲಕ್ಷ್ಮೀ ಅವರನ್ನು ವಿವಾಹವಾದ ವಾದಿರಾಜ ಕಲ್ಲೂರಾಯ ಅವರು ಇಬ್ಬರು ಮಕ್ಕಳಾದ ವಿಧಾತ್ರೀ ಹಾಗೂ ಮಹತೀ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಯಕ್ಷ ಬದುಕಿನ ಬೆಳವಣಿಗೆಗೆ ಸಹಕಾರವಿತ್ತ ತಂದೆ ತಾಯಂದಿರು, ಸರ್ವ ಕಲಾವಿದರು,  ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಮೇಳದ ಯಜಮಾನರು ದೇವೀ ಪ್ರಸಾದ ಶೆಟ್ರು, ಪದ್ಮನಾಭ ಕಟೀಲು,  ಶ್ರೀರಮಣಾಚಾರ್ ಕಾರ್ಕಳ ಇವರೆಲ್ಲರ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂಬುದು ಅವರ ಅಂತರಾಳದ ನುಡಿ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


Photo Clicks: Ram Naresh Manchi, Kiran Vittla Photography, Prabhakar Manjeshwara.


-ಶ್ರವಣ್ ಕಾರಂತ್ ಕೆ

ಸುಪ್ರಭಾತ, ಶಕ್ತಿನಗರ ಮಂಗಳೂರು.

+91 8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top