|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ಅರಿಯಲಾಗದ ಅರಿವು

ಕವನ: ಅರಿಯಲಾಗದ ಅರಿವು

********

ಹೊಸತು ಬಟ್ಟೆ ಧರಿಸಿಕೊಂಡು 

ಮೆರೆಯುತಿಹೆವು ಠೀವಿಯಿಂದ 

ಬಟ್ಟೆ ಸವೆದು ಹರಿದ ಮೇಲೆ 

ಅರಿವು ಬರುವುದು।

ಅರಿವೆ ಹರಿಯಬಹುದು ಎಂಬ

ಸತ್ಯದರಿವು ಇದ್ದರಷ್ಟೆ 

ಮಾನದಿಂದ ಮನುಜ ನೀನು 

ಬದುಕಲು ಬಹುದು॥

 

ತುಂಬಿಸಿಟ್ಟ ನೀರು ಸತತ

ಮೊಗೆದು ಮೊಗೆದು ಬಳಸುತಿರಲು 

ತಳವ ಕಾಣಲಾಗ ಅದರ 

ಅರಿವು ಬರುವುದು।

ಬಳಸಿದಷ್ಟೆ ತುಂಬಿದಾಗ 

ಗಳಿಸಿದನ್ನು ಉಳಿಸಿದಾಗ 

ಅಳಿಯಲಾರದಂಥ ಸೊಗಸು 

ಬಾಳಿನಲ್ಲಿದೆ॥


ಹುಟ್ಟು ನಮಗೆ ಹಬ್ಬದಂತೆ 

ವರುಷ ವರುಷ ಆಚರಿಸುತ 

ಷಷ್ಟ್ಯಾಭ್ಧವು ಬಂದುದೆಮಗೆ 

ಗೊತ್ತೆ ಆಗದು। 

ವರ್ತಮಾನದರಿವಿನಲ್ಲಿ

ಸತ್ಕರ್ಮದಿ ತೊಡಗಿಸುತ್ತ 

ನಿತ್ಯ ಸುಖವ ಪಡೆದರಲ್ಲಿ

ತೃಪ್ತಿ ಇರುವುದು॥


ಆರೋಗ್ಯವು ನಮ್ಮದೆಂದು 

ಗರ್ವದಿಂದ ಬದುಕಿ ಇರಲು

ರೋಗಾಣುವು ಬಲಿತುದೆಮಗೆ

ತಿಳಿಯಲಾಗದು। 

ನಾಲಗೆಯನು ಬಳಸುವಂಥ 

ಚತುರನಾದ ಮನುಜ ಮಾತ್ರ 

ವಿಧಿವಿರೋಧವಿಲ್ಲದಿರೆ 

ಸುಖದಿ ಬಾಳುವ॥


ದಟ್ಟವಾದ ಕೂದಲನ್ನು 

ತಾಸು ತಾಸು ಬಾಚಿಕೊಂಡು 

ಬೊಕ್ಕ ತಲೆಯು ಆದುದೆಮಗೆ 

ತಿಳಿಯಲೊಲ್ಲದು।

ಬಾಹ್ಯ ಚೆಲುವು ನಿತ್ಯವಿರದು 

ಮನದಲಿಹುದು ಚೆಲುವು ಎಂಬ

ಸಂತೃಪ್ತಿಯೆ ನಿತ್ಯವಿರಲು

ಚಿಂತೆ ಬಾರದು॥


ಅಣ್ಣ ಅಕ್ಕ ಎನಿಸಿಕೊಂಡು 

ತಿರುಗುತಿದ್ದ ನಾವು ಇಂದು 

ಅಜ್ಜ ಅಜ್ಜಿ ಆದುದನ್ನು 

ತಿಳಿಯದಾದೆವು। 

ಕಾಲ ನಮಗೆ ಸಂಗಾತಿಯು 

ಕಾಲನೊಡನೆ ಸೇರಿದಾಗ 

ಕಾಯಕಾದ ವೃದ್ಧಾಪ್ಯವು

ಸಹ್ಯವೇ ಸರಿ॥


ಎಷ್ಟೆ ದೂರ ನಡಿಗೆಯಲ್ಲು 

ಸೋಲೆ ಇರದ ಗೆಲುವಿದ್ದಿತು 

ನಡಿಗೆ ಮರೆತ ಕಾರಣವನು 

ತಿಳಿಯದಾದೆವು।

ಯಂತ್ರಗಳನು ಬಳಸಿದಂತೆ

ನಮ್ಮತನವ ಕಳೆದುಕೊಂಡು 

ಯಂತ್ರಮಾನವರೇ ಆಗಿ 

ಸೋತು ಹೋದೆವು॥


ಡಾಲರೊಂದು ರೂಪಾಯಿಯ

ಮೌಲ್ಯದಷ್ಟೆ ತೂಗುತಿತ್ತು

ರೂಪಾಯಿಯ ಅಪಮೌಲ್ಯವು 

ಎಂದು ಆಯಿತು?।

ಭ್ರಷ್ಟರಾಗಿ ಆಳ್ವಿಕೆಯನು 

ವರುಷ ವರುಷ ಮಾಡಿಕೊಂಡು 

ಮೌಲ್ಯವಿರದ ವರ್ತಮಾನ 

ಸೃಷ್ಟಿಯಾಯಿತು॥


ಸದಾ ಹಸಿರು ಹೊದ್ದುಕೊಂಡು 

ಸ್ವರ್ಗದಂತೆ ಇದ್ದ ವಸುಧೆ 

ನರಕವಾಗಿ ಹೋದುದೆಂದು 

ತಿಳಿಯದಾದೆವು।

ಬೇಕು ಎನುವ ಸ್ವಾರ್ಥದಿಂದ 

ಬೇಡವಾದ ಅಪಸವ್ಯವ 

ಸದಾ ಮಾಡುತಿರಲು ಮನುಜ 

ಹಸಿರನಳಿಸಿದ॥ 


ಬೆರಳೆಣಿಕೆಯ ಆಂಗ್ಲರಂದು

ವ್ಯಾಪಾರವ ಮಾಡುತಲೀ 

ದೇಶವನ್ನೆ ನುಂಗಿದುದನು 

ಕಾಣದಾದೆವು।

ಸಂಘಟನೆಯ ಕೊರತೆಯಿಂದ 

ನಮ್ಮೊಳಗಿನ ಕಚ್ಚಾಟದ

ಲಾಭ ಪಡೆದ ಆಂಗ್ಲ ಮನಸು 

ನಮ್ಮನಾಳಿತು॥


ಮಿತ್ರರೆಂದು ಅಪ್ಪಿಕೊಂಡು 

ಭದ್ರತೆಯಲಿ ಇರುವ ನಮಗೆ 

ಶತ್ರು ಬಲಿತು ರಾಷ್ಟ್ರವಾದ 

ಬಗೆಯು ತಿಳಿಯದು। 

ಸತ್ಯವೆಂದು ತಿಳಿದುದೆಲ್ಲ 

ಮಿಥ್ಯವಾಗಿ ಹೋದ ಮೇಲೆ 

ವಿಷದ ಹಾವಿಗ್ಹಾಲು ಕುಡಿಸಿ 

ಮೋಸ ಹೋದೆವು॥


ಕರ್ಮ ಫಲವ ನೀಡಲೆಂದು 

ಹೊಂಚು ಹಾಕುತಿದ್ದ ವಿಧಿಯು 

ಅರಿವು ಇರದೆ ಎರಗಿದಾಗ 

ಕಾಲ ಮೀರಿತು।

ವರ್ತಮಾನದಲ್ಲಿ ಬದುಕು 

ತಪ್ಪು ದಾರಿಯನ್ನು ಹಿಡಿದು 

ಹೋಗುವುದನು ಅರಿಯದಿರುವ

ಫಲವಿದಲ್ಲವೇ॥


ಶಿಲೆಯ ಯುಗವ ದಾಟಿ ಬಂದು 

ನಾಗರಿಕರು ಆದೆವಿಂದು 

ಸಹಜ ಬದುಕು ಎಲ್ಲಿ ಹೋಯ್ತು 

ತಿಳಿಯದಾಯಿತು।

ತಪ್ಪು ದಾರಿಯಲ್ಲಿ ಸತತ

ಸಾಗಿ ಸಾಗಿ ದೂರವಾಗಿ 

ಹಿಂದೆ ತಿರುಗಿ ಬರುವುದಿನ್ನು 

ಸಾಧ್ಯವಾಗದು॥

**********

-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ


0 تعليقات

إرسال تعليق

Post a Comment (0)

أحدث أقدم