ಕವನ: ಬರುವೆ ನಂದನವನಕೆ

Upayuktha
0







ನಿನ್ನೊಲವ ನಂದನವನಕೆ ಎಂದು

ಸ್ವಾಗತಿಸಿ ಕರೆವೆ?

ನೀ ಬೆಳೆದ ಪ್ರೀತಿ ಹೂವುಗಳ

ಎಂದು ತೋರಿಸುವೆ?

ನಿನ್ನ ಅಕ್ಕರೆಯ ಕೊಳದಿ 

ಎಂದು ಈಜಾಡಿಸುವೆ?

ಓ ಮಾನಸ ಬಂಧು ಕಾಯುತಿರುವೆ.


ಪಕ್ಷಿಯುಲಿಯಲಿ ನಿನ್ನ

ಧ್ವನಿಯ ಭ್ರಮಿಸಿದೆ ಮನಸು

ಗಾಳಿ, ಎಲೆಗಳ ಚಲನೆಯಲಿ, 

ನೀ ಬರುವ ಸೊಗಸು..

ಮುಂಜಾನೆ ಮಣಿ ಮುತ್ತು

ನಿನ್ನ ಕಂಗಳ 'ಚವಿ'ಯು

ಪ್ರಕೃತಿ ಪೂಜನದಲ್ಲೆ ನಿನ್ನ ಕನವರಿಸುತಿರುವೆ.


ಬಾಳು ಬಂಧುರವಾಯ್ತು

ನಿನ್ನ ನೆನಪೊಂದಿರಲು,

ತಪ್ಪು, ಒಪ್ಪುಗಳ ತೂಗಿ

ದಾರಿ ತೋರಿಸುತಿರಲು..

ಭಕ್ತಿ ಪಾರಮ್ಯದಲಿ ನನ್ನ 

ನಾನೆ ಮರೆಯುತಲಿರಲು

ದೀನ ಬಂಧುವೆ ಏಕೆ ಮೌನಿಯಾಗಿರುವೆ?


ನೀನೆ ಆರಂಭಿಸಿದ ನಿನ್ನ

ಜೊತೆಗಿನ ಪಯಣ,

ಪ್ರತಿ ನಡೆಯಲೂ ನಿನ್ನ ಅಮೂರ್ತ

ಶಕ್ತಿಯೊಂದಿಗೆ 'ಗಮನ',

'ನಾನೆಂಬ' ನಶ್ವರವ ಕಳೆದು 

ಸಾಗುವ ದಾರಿ 

ನಾನರಿಯೆ ನೀನೆ ಬಾ ಓ ಅಂತರಾತ್ಮ..


-ವಾರಿಜಾಕ್ಷಿ ಯಶ್ ಡಮ್ಮಡ್ಕ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

Post a Comment

0 Comments
Post a Comment (0)
To Top