ಬೆಂಗಳೂರು: ಹಿರಿಯ ವಿದ್ವಾಂಸರು ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಪ್ರತಿಷ್ಠಿತ ನೃಪತುಂಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 2021ನೇ ಸಾಲಿನ ಪ್ರಶಸ್ತಿಗೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನೃತಪತುಂಗ ಪ್ರಶಸ್ತಿಯನ್ನು ಪ್ರಾಯೋಜಿಸುತ್ತಿದೆ. ಏಳು ಲಕ್ಷದ ಒಂದು ರೂ ನಗದು, ಫಲಕ, ಪ್ರಶಸ್ತಿಪತ್ರ, ಶಾಲು ಮತ್ತು ಫಲತಾಂಬೂಲಗಳೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಆಯ್ಕೆ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ, ಹೆಸರಾಂತ ವಿಮರ್ಶಕ ಡಾ. ಎಸ್.ಆರ್. ವಿಜಯಶಂಕರ್, ಸಾಹಿತಿ ಡಾ. ಸರಜೂ ಕಾಟ್ಕರ್, ಬೆಂ.ಮ.ಸಾ.ಸಂಸ್ಥೆಯ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ ಮೊಹಮದ್ ಹಫೀಜುಲ್ಲಾ, ಉಪ ಮುಖ್ಯ ಕಲ್ಯಾಣ ಅಧಿಕಾರಿ ಮಥುರಾ ರಾಡ್ರಿಕ್ಸ್, ಕೆಎಸ್ಸಾರ್ಟಿಸಿಯ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ಚನ್ನೇಗೌಡ ಸದಸ್ಯರಾಗಿದ್ದರು.
ಪ್ರಶಸ್ತಿಗೆ ಭಾಜನರಾದ ಮಲ್ಲೇಪುರಂ ಜಿ ವೆಂಕಟೇಶ್ ಅವರು ಕನ್ನಡ ಕಾವ್ಯ, ವಿಮರ್ಶೆ, ಸಂಶೋಧನೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 60ಕ್ಕೂ ಅಧಿಕ ಮೌಲಿಕ ಗ್ರಂಥಗಳನ್ನು ರಚಿಸಿದ್ದಾರೆ. ಕನ್ನಡ, ಸಂಸ್ಕೃತ ಮತ್ತು ಪಾಲಿ ಭಾಷೆಯಲ್ಲಿ ಸಾಹಿತ್ಯ ಕೃಷಿ ನಡೆಸಿದ್ದಾರೆ. ಸಂಸ್ಕೃತ ವಿವಿ ಕುಲಪತಿಗಳಾಗಿ, ಕನ್ನಡ ವಿವಿ ಕುಲಸಚಿವರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಪಾಲಿ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಕನ್ನಡ ಸಾರಸ್ವತ ಲೋಕದ ಶ್ರೇಷ್ಠ ಲೇಖಕರಿಗೆ ಈ ಪ್ರಶಸ್ತಿಯನ್ನು ಪ್ರತಿವರ್ಷವೂ ನೀಡಲಾಗುತ್ತಿದೆ. 2008ರಲ್ಲಿ ಬಿಎಂಟಿಸಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಕನ್ನಡದ ಜ್ಞಾನಪೀಠವೆಂದೇ ಸಾಹಿತ್ಯಲೋಕದಲ್ಲಿ ಪ್ರಸಿದ್ಧವಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ