ಹಲವು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆಯ ಗುರಿ ಕಂಡ ಪ್ರತಿಭೆ ವಿನುತ್ ಶೆಟ್ಟಿ, ದ.ಕ ಜಿಲ್ಲೆಯ, ಪಾಣೆಮಂಗಳೂರಿನ, ಪುತ್ರೋಟಿಬೈಲು ಮನೆ ನರಿಕೊಂಬು, ಬಂಟ್ವಾಳದ ಪಿ. ನಾಗೇಶ್ ಶೆಟ್ಟಿ ಮತ್ತು ವಿಮಲ ಎನ್ ಶೆಟ್ಟಿ ದಂಪತಿಗಳ ಪುತ್ರ.
ಯಕ್ಷಗಾನದಲ್ಲಿ ಅಪಾರ, ಆಸಕ್ತಿ, ಗೌರವ ಹೊಂದಿದ ಇವರು ಅರುಣ್ ಕುಮಾರ್ ಮತ್ತು ಶುಭದ ಶೆಟ್ಟಿಯರನ್ನು ಗುರುಗಳನ್ನಾಗಿ ಸ್ವೀಕರಿಸಿ ಯಕ್ಷಗಾನ ಕಲೆಯನ್ನು ಮೈಗೂಡಿಸಿಕೊಂಡು, ವಿನುತ್ 18 ವರ್ಷಗಳ ಯಕ್ಷ ಪ್ರಯಾಣ ಕಂಡು ಮುಂದುವರಿಯುತ್ತಿದ್ದಾರೆ. ಪ್ರಸ್ತುತ ಇವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರೆ.
ಶ್ರೀದೇವಿ, ಸುಭದ್ರೆ, ಭೀಮ, ಸುಗ್ರೀವ, ಸೀತೆ, ಮಾಲಿನಿ, ದೂತ, ನರಕಾಸುರ, ಕೃಷ್ಣ, ಸೈರಿಣಿ, ಲಕ್ಷ್ಮಣ, ವಿಷ್ಣು, ಈಶ್ವರ, ಹನುಮಂತ, ಬೈರಾಗಿ, ಕಿನ್ನಿದಾರು, ಪೈಯ್ಯ, ಬೈದ್ಯ, ಸರಮೆ, ಪಾತ್ರಗಳಲ್ಲಿ ಮಿಂಚಿದ ಇವರಿಗೆ ಶ್ರೀ ದೇವಿ ಹಾಗೂ ಸುಭದ್ರ ಪಾತ್ರ ನೆಚ್ಚಿನದಾಗಿದೆ ಮತ್ತು ಹಾಸ್ಯ ಪಾತ್ರದಲ್ಲಿ ಹೆಚ್ಚಿನ ಒಲವು ಹೊಂದಿದ್ದಾರೆ. ಶಾಲಾ ದಿನಗಳಲ್ಲೇ "ಬೆಸ್ಟ್ ಔಟ್‌ಗೋಯಿಂಗ್ ಸ್ಟುಡೆಂಟ್', "ಆಲ್ ರೌಂಡರ್ ಸ್ಟುಡೆಂಟ್ " ಎಂಬ ಪಟ್ಟವನ್ನು ಅಲಂಕರಿಸಿದ್ದಾರೆ.
ಕಲಾವಿದನೋರ್ವ ಇನ್ನೊಬ್ಬ ಕಲಾವಿದನ ಅಣಕು ಪ್ರದರ್ಶನ ನೀಡಬಾರದು. ಪ್ರತಿಯೊಬ್ಬರಿಗೂ ಸ್ವಂತಿಕೆಯೆನ್ನುದಿದೆ. ಅದು ಹೊರಬಂದಾಗ ಆತನೋರ್ವ ವಿಶೇಷ ಕಲಾವಿದನಾಗಬಲ್ಲ ಎಂದು ವಿನುತ್ ಅಭಿಪ್ರಾಯ ಪಡುತ್ತಾರೆ. ರಂಗಭೂಮಿಯ ನಾಟಕ ರಂಗದಲ್ಲೂ ಅನುಭವ ಹೊಂದಿರುವ ಇವರು" ಕಲಾ ಮಾತೆಯ ಕಲಾವಿದರು ನಾಗವಚಿಲ್" ತಂಡದಲ್ಲಿ ಕಾರ್ಯನಿರ್ವಹಿಸಿದ್ದರು.
ಸಾಧನೆಯೆಂಬ ದೇಗುಲಕ್ಕೆ ಮೆಟ್ಟಿಲೇರಲಾರಂಭಿಸಿದ ಇವರು ಯಕ್ಷಗಾನ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಿನಿಮಾರಂಗದಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಾಲೇಜು ಜೀವನದಲ್ಲಿ "ಬ್ಲಡಿ ಫೇಟ್" ಎಂಬ ಕಿರು ಚಿತ್ರದ ಮೂಲಕ ನಟಿಸಿದ ನಂತರ" ಬೆಸ್ಟ್ ವಿಲ್ಲನ್"ಎಂದೇ ಪರಿಚಿತರಾಗಿದ್ದಾರೆ.
ಸ್ವತಃ ಇವರ ನೇತೃತ್ವದಲ್ಲಿ ತಯಾರಾದ ತಂಡ ಪೃಥ್ವಿ ಫಿಲಂಸ್ ಹಾಗೂ ಇವರ ನಿರ್ದೇಶನ ಸಾಹಿತ್ಯ ಮೂಡಿ ಬಂದ ಚಿತ್ರ "ಅಪರಾಧಿ ನಾನಲ್ಲ". ಹಾಗೆಯೇ ಇವರ ನಿರ್ದೇಶನದಲ್ಲಿ ಮೂಡಿಬಂದ ವಿಭಿನ್ನ ಪ್ರೇಮ ಕಥೆಯಲ್ಲಿ ಕುತೂಹಲಕಾರಿ ಕ್ಲೈಮಾಕ್ಸ್ ಹೊಂದಿದ ಚಿತ್ರ "ಆದ್ಯ" ಹಾಗೂ "ಆದ್ಯ 2" ಜನರ ಮೆಚ್ಚುಗೆಗೆ ಪಾತ್ರವಾಗಿದೆ. "ಮಿಸ್ಟರ್ ಆಂಡ್ ಮಿಸಸ್ ಪ್ರೇಮಾಚಾರಿ" ಎಂಬ ಆಲ್ಬಮ್ ಸಾಂಗ್ ಚಿತ್ರೀಕರಣ ನಡೆಯುತ್ತಿದ್ದು ಸದ್ಯದಲ್ಲೇ ತೆರೆಕಾಣಲಿದೆ.
ವಿದ್ಯಾಭ್ಯಾಸದಲ್ಲಿ ಪ್ರಸ್ತುತ ಸಿ.ಎ ವಿದ್ಯಾರ್ಥಿಯಾಗಿದ್ದಾರೆ. ಅಲ್ಲದೆ "ಟೈಮ್ಸ್ ಆಫ್ ಕುಡ್ಲ" ಎಂಬ ತುಳು ಪತ್ರಿಕೆಯಲ್ಲಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಮುಂದಿನ ಹೆಜ್ಜೆಗಳು ಯಶಸ್ವಿಯಾಗಿರಲಿ ಎಂದು ಹಾರೈಸೋಣ.
-ಚೈತನ್ಯ ಮಾಣಿಲ
GFGC Carstreet, ಮಂಗಳೂರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ