ಮುಂಬಯಿ: ಗಂಭೀರ ಕಾಯಿಲೆಗೆ ತುತ್ತಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಕ್ಷಗಾನದ ಮೇರು ಭಾಗವತ ಹಾಗೂ ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೊತ್ತಮ ಪೂಂಜ ಅವರಿಗೆ ಮುಂಬಯಿ ಬಂಟರ ಸಂಘದ ಮಹಿಳಾ ವಿಭಾಗ ರೂ.30000/- ದ ಆರ್ಥಿಕ ನೆರವನ್ನು ನೀಡಿದೆ. ಸಂಘದ ಕಾರ್ಯಾಧ್ಯಕ್ಷೆ ಶ್ರೀಮತಿ ಉಮಾ ಕೃಷ್ಣ ಶೆಟ್ಟಿಯವರು ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರಿಗೆ ಧನಸಹಾಯದ ಚೆಕ್ಕನ್ನು ಹಸ್ತಾಂತರಿಸಿದರು.
ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಚಿತ್ರಾ ರವಿರಾಜ್ ಶೆಟ್ಟಿ, ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಶಂಕರ ಪೂಂಜಾ, ಕೋಶಾಧಿಕಾರಿ ಸುಜಾತ ಗುಣಪಾಲ ಶೆಟ್ಟಿ, ಜೊತೆ ಕಾರ್ಯದರ್ಶಿ ಅನಿತಾ ಅಶೋಕ್ ಶೆಟ್ಟಿ, ಜೊತೆ ಕೋಶಾಧಿಕಾರಿ ರತ್ನ ಪ್ರಭಾಕರ ಶೆಟ್ಟಿ ಇವರ ಸಹಕಾರದೊಂದಿಗೆ ಸಂಗ್ರಹಿಸಲಾದ ರೂ 25 ಸಾವಿರ ಹಾಗೂ ಸಂಘದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಆಶಾ ಮನೋಹರ ಹೆಗ್ಡೆ ಅವರು ನೀಡಿದ ರೂ. 5 ಸಾವಿರದ ಮೊತ್ತವನ್ನು ಅಜೆಕಾರು ಬಾಲಕೃಷ್ಣ ಶೆಟ್ಟರು ಪೂಂಜರ ಕುಟುಂಬಕ್ಕೆ ತಲುಪಿಸಿದ್ದಾರೆ.
ಅಗಲಿದ ಪೂಂಜರಿಗೆ ಶ್ರದ್ಧಾಂಜಲಿ:
ಕಳೆದ ಏಳು ತಿಂಗಳ ಸುದೀರ್ಘ ಚಿಕಿತ್ಸೆಯಿಂದ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದ ಭಾಗವತ ಪುರುಷೋತ್ತಮ ಪೂಂಜರು (68) ಇತ್ತೀಚೆಗೆ ಕೆಲವು ದಿನಗಳಿಂದ ಮತ್ತೆ ಅಸ್ವಸ್ಥಗೊಂಡಿದ್ದು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ (ಆಗಸ್ಟ್ 14) ಮಧ್ಯರಾತ್ರಿ ನಿಧನ ಹೊಂದಿದ್ದಾರೆ.
ಮುಂಬಯಿ ಹಾಗೂ ದ.ಕ.ಜಿಲ್ಲೆಗಳಲ್ಲಿ ನೂರಾರು ಶಿಷ್ಯರನ್ನು ಹೊಂದಿರುವ ಯಕ್ಷಗಾನದ ಸವ್ಯಸಾಚಿ, ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಅಗಲಿಕೆ ಯಕ್ಷಗಾನ ಹಾಗೂ ಕನ್ನಡ- ತುಳು ಸಾಹಿತ್ಯಲೋಕಕ್ಕಾದ ಬಹುದೊಡ್ಡ ನಷ್ಟ ಎಂದು 'ಯಕ್ಷಾಂಗಣ ಮಂಗಳೂರು' ಯಕ್ಷಗಾನ ಚಿಂತನ ಮಂಥನ ಹಾಗೂ ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದು ಅಗಲಿದ ಕಲಾ ಚೇತನಕ್ಕೆ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ. ಶೀಘ್ರದಲ್ಲೇ ಪೂಂಜರ ಕುರಿತಾದ ಸಂಸ್ಮರಣ ಗ್ರಂಥವೊಂದನ್ನು ಹೊರತರುವುದಾಗಿ ಅವರು ಪ್ರಕಟಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ