ಯಂತ್ರಗಳೊಂದಿಗೆ ತೀರಾ ಯಾಂತ್ರಿಕ ಜೀವನ ನಡೆಸುತ್ತಿರುವ, ಆಧುನಿಕ ಮಾನವನ ಮನಸ್ಸು ಹಾಗೂ ಪರಿಸರ ಕಲುಷಿತಗೊಂಡಿದೆ, ದೇಹ ದುರ್ಬಲವಾಗಿದೆ. ಆರೋಗ್ಯ ಹದಗೆಟ್ಟಿದೆ, ರೋಗ ನಿರೋಧಕ ಶಕ್ತಿ ಕುಂದಿದೆ. ಪ್ರತಿಯೊಬ್ಬ ಮಾನವನಲ್ಲೂ ಗುಪ್ತವಾಗಿ ಅಡಗಿದ ವಿಶೇಷ ಶಕ್ತಿಯೊಂದಿರುತ್ತದೆ. ಇದನ್ನು ಮನೋ ವೈಜ್ಞಾನಿಕ ರೀತಿಯಲ್ಲಿ ಹೊರಗೆಳೆದು ದೈಹಿಕ ಹಾಗೂ ಮಾನಸಿಕ ಶಾಂತಿ, ನೆಮ್ಮದಿಯನ್ನು ನೀಡಬಲ್ಲ ಯೋಗವನ್ನು ಭಾರತೀಯರೇ ಆದ ನಾವೆಲ್ಲ ಮರೆತಿದ್ದೇವೆ. ಪಾಶ್ಚಿಮಾತ್ಯರು ಭಾರತೀಯ ಯೋಗವಿಜ್ಞಾನದ ಮಹತ್ವವನ್ನು ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿ, ಅಪ್ಪಿಕೊಳ್ಳುತ್ತಿದ್ದಾರೆ. ದೈಹಿಕ ಆರೋಗ್ಯ, ಚಿತ್ತ ಶಾಂತಿ, ಮತ್ತು ಆಧ್ಯಾತ್ಮ ಸಾಧನೆಯ ಸಾಧನವಾದ, "ಯೋಗ" ಜಗತ್ತಿಗೆ ಭಾರತೀಯರ ವಿಶಿಷ್ಠ ಕೊಡುಗೆ.
ಆದ್ದರಿಂದ ಮನಸ್ಸಿನ ನಿರ್ಮಲತೆಗಾಗಿ, ಏಕಾಗ್ರತೆಗಾಗಿ ಹಾಗೂ ಆಳ ವಿಶ್ರ್ರಾಂತಿಗಾಗಿ ಮತ್ತು ಶಾಂತ ಸ್ಥಿತಿಗಾಗಿ ವೈಜ್ಞಾನಿಕವಾಗಿ ದೃಢಪಟ್ಟಂತಹ ಧ್ಯಾನ ಈ ಮೇಲಿನ ಸಮಸ್ಯೆಯ ನಿವಾರಣೆಗೆ ಬಹಳಷ್ಟು ಸಹಕಾರಿಯಾಗುತ್ತದೆ. ಯೋಗ ಎನ್ನುವ ಪದ ಸಂಸ್ಕøತ ಮೂಲಧಾತುವಾದ “ಯುಜ್” ಎನ್ನುವುದರಿಂದ ಬಂದಿದ್ದು. ಅದು ಬಂಧಿಸು, ಕೂಡಿಸು, ಚಿತ್ತವನ್ನು ನಿರ್ದೇಶಿಸಿ ಕೇಂದ್ರೀಕರಿಸು ಎನ್ನುವ ಆಜ್ಞೆಗಳನ್ನು ಕೊಡುತ್ತದೆ. ಗೀತೆಯಲ್ಲಿ ತಿಳಿಸಿದಂತೆ ಶರೀರದ, ಮನಸ್ಸಿನ ಮತ್ತು ಆತ್ಮದ ಸರ್ವ ಶಕ್ತಿಗಳನ್ನು ಭಗವಂತನೊಡನೆ ಸಂಯೋಜಿಸುವುದು ಯೋಗ. ಪತಂಜಲಿ ಋಷಿಗಳ 196 ಸೂತ್ರಗಳ 2ನೇ ಸೂತ್ರದಲ್ಲಿ “ಯೋಗ: ಚಿತ್ತ ವೃತ್ತಿ ನಿರೋಧ”: ಅಂದರೆ ಚಿತ್ತದ ವೃತ್ತಿಗಳನ್ನು (ಬಯಕೆಗಳನ್ನು) ಸಂಪೂರ್ಣ ತಡೆ ಹಿಡಿದ ಸರ್ವದಾ ವಿರೋಧಿಸಿ, ನಿಲ್ಲಿಸಿ ಏಕಾಗ್ರತೆ ಸಾಧಿಸುವುದೇ ಯೋಗವೆನಿಸುವುದು). ಪ್ರಾಚೀನಮುನಿ ಪತಂಜಲಿಯ ಪ್ರಕಾರ ಯೋಗದಲ್ಲಿ ಅಷ್ಟಾಂಗಗಳಿವೆ. ಅವು: 1. ಯಮ, 2. ನಿಯಮ, 3. ಯೋಗಾಸನ, 4. ಪ್ರಾಣಾಯಾಮ, 5. ಪ್ರತ್ಯಾಹಾರ 6. ಧಾರಣ 7. ಧ್ಯಾನ ಮತ್ತು 8. ಸಮಾಧಿ.
ಧ್ಯಾನದ ಸಂಕ್ಷಿಪ್ತ ಮಾಹಿತಿ:
ಪತಾಂಜಲಿ ಋಷಿಮುನಿ ತಿಳಿಸಿದ ಅಷ್ಟಾಂಗ ಯೋಗದ ಏಳನೇ ಮಾರ್ಗವೇ ‘ಧ್ಯಾನ’. ಧ್ಯಾನ ಎಂದರೆ ನಿರಂತರವಾದ ಪ್ರಯತ್ನ ರಹಿತವಾದ ಒಂದೇ ವಸ್ತುವಿನ ಯಾ ವಿಷಯದ ಯೋಚನೆಯ ಪ್ರವಾಹವಾಗಿದೆ. ಧ್ಯಾನದಿಂದ ಮನಸ್ಸಿನ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ. ಮನಸ್ಸು ಪರಿಶುದ್ಧವಾಗಿ, ನಿರ್ಮಲಗೊಂಡು ಪ್ರಸನ್ನತೆಯಿಂದ ಅರಳುತ್ತದೆ. ಅಪೇಕ್ಷಿತ ವಿಷಯವಾಗಿ ಮನಸ್ಸು ಗಾಢವಾಗಿ ಚಿಂತಿಸಲು ಧ್ಯಾನ ಸಹಕಾರಿ. ಧ್ಯಾನಕ್ಕೆ ಆಂತರಿಕ ವಿಷಯಗಳಾದ ಉಸಿರು, ಹೃದಯ, ನಾಸಾಗ್ರ, ಭ್ರೂಮಧ್ಯೆ ಇತ್ಯಾದಿ ಹಾಗೂ ಬಾಹ್ಯ ವಿಷಯಗಳಾದ ಓಂಕಾರ, ನಕ್ಷತ್ರ, ಚಂದ್ರ, ಇಷ್ಟದೇವತಾಚಿತ್ರ, ಪ್ರತಿಮೆ, ಇತ್ಯಾದಿಗಳನ್ನು ಉಪಯೋಗಿಸಿ ಧ್ಯಾನ ಮಾಡಲಾಗುತ್ತದೆ. ಇದು ಜಾಗೃತ ಸ್ಥಿತಿಯಲ್ಲದೆ ನಿದ್ರಾಸ್ಥಿತಿಯಲ್ಲ ಇಲ್ಲಿ ಏಕಾಗ್ರತೆಯು ಅಗತ್ಯವಾಗಿದೆ. ಧ್ಯಾನದಿಂದ ದುಃಖ, ಮನಸ್ಸಿನ ಒತ್ತಡ ನಿವಾರಣೆಯಾಗಿ ಮನಸ್ಸು ಹಗುರ, ಶಾಂತ ಆಗಿ ಲವಲವಿಕೆಯಾಗಿ ಆನಂದಮಯವೂ ಆಗುವುದು. ಮನೋಬಲ, ಆತ್ಮಬಲ ಹೆಚ್ಚುವುದು. ನಾವು ಸಮಾಧಿ ಸ್ಥಿತಿಗೆ ಸಿದ್ಧರಾಗುವೆವು. ಧ್ಯಾನದ ವೇಳೆ ಮನಸ್ಸು ಪೂರ್ಣಎಚ್ಚರ ಸ್ಥಿತಿಯಲ್ಲಿರಬೇಕು. ನಿದ್ರಿಸಬಾರದು. ಬೇರೆ ಬೇರೆ ವಿಷಯಗಳ ಆಲೋಚನೆ, ಚಿಂತೆ ಸಲ್ಲದು.
ಧ್ಯಾನ ಎಂಬ ಶಬ್ಧ ಲ್ಯಾಟಿನ್ ಭಾಷೆಯ ‘ಮೆಡಿರೈ’ ಎಂಬ ಶಬ್ಧದಿಂದ ಬಂದಿದೆ. ‘ಮೆಡಿರೈ’ ಎಂದರೆ ಶಾಂತಿ. ಧ್ಯಾನವನ್ನು ಮೊದಲ 6 ಮೆಟ್ಟಿಲುಗಳ (ಯಮ, ನಿಯಮ, ಆಸನ, ಪ್ರಾಣಯಾಮ, ಪ್ರತ್ಯಾಹಾರ, ಧಾರಣ) ಅಭ್ಯಾಸದ ನಂತರವೇ ಮಾಡಬೇಕು.
ಧ್ಯಾನದ ಉಪಯೋಗಗಳು:
ಧ್ಯಾನ ಮಾಡುವುದರಿಂದ ಮನಸ್ಸಿನ ಹಾಗೂ ಅಂತಃಕರಣಗಳ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ. ಮನಸ್ಸು ಪರಿಶುದ್ಧವಾಗುತ್ತದೆ ಹಾಗೂ ಮನಸ್ಸು ಅರಳುತ್ತದೆ. ಸಹಜ ಸ್ಥಿತಿಯಾದ ಆನಂದ ಸ್ವರೋಪವನ್ನು ಪಡೆಯಲು ಧ್ಯಾನದಿಂದ ಸಾಧ್ಯವಾಗುತ್ತದೆ.
ಮನಸ್ಸನ್ನು ನಿಯಂತ್ರಿಸದೆ ಸುಮ್ಮನೆ ಬಿಟ್ಟರೆ ಅದು ಕೊನೆಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಮನಸ್ಸನ್ನು ಪ್ರಥಮವಾಗಿ ನಿಯಂತ್ರಿಸಿಕೊಳ್ಳಬೇಕು. ನಮ್ಮ ವಿವೇಕ (ಬುದ್ಧಿ) ಹೇಳಿದಂತೆ ನಮ್ಮ ಮನಸ್ಸು ಕೇಳಬೇಕೇ ವಿನಹ ಮನಸ್ಸು ಹೇಳಿದಂತೆ ನಾವು ಕೇಳಬಾರದು. ಮನಸ್ಸನ್ನು ಜಯಿಸಿದರೆ ಜಗತ್ತನ್ನೇ ಜಯಿಸಬಹುದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ನಾವು ದೇಹದ ಆರೋಗ್ಯಕ್ಕೆ ಒತ್ತು ಕೊಡುವ ಹಾಗೇ ಮನಸ್ಸಿನ ಆರೋಗ್ಯಕ್ಕೆ ಒತ್ತು ಕೊಡುವುದಿಲ್ಲ. ಆದ್ದರಿಂದ ಮನಸ್ಸನ್ನು ಶುದ್ಧಗೊಳಿಸುವ ವಿಧಾನ ತಿಳಿದಿರಬೇಕು. ಹೆಚ್ಚಿನ ನಮ್ಮ ಸಮಸ್ಯೆ ಮನಸ್ಸಿನ ದೋಷದಿಂದಲೇ ಆಗುತ್ತದೆ.
ಧ್ಯಾನ ಮಾಡಲು ಆಂತರಿಕ/ಬಾಹ್ಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
1. ಧ್ಯಾನಕ್ಕೆ ಉಪಯೋಗಿಸುವ ಆಂತರಿಕ ವಿಷಯಗಳು: ಉಸಿರು, ಹೃದಯ ಇತ್ಯಾದಿ
2. ಧ್ಯಾನಕ್ಕೆ ಉಪಯೋಗಿಸುವ ಬಾಹ್ಯ ವಿಷಯಗಳು: ನಾಸಾಗ್ರ/ ಭ್ರೂ ಮಧ್ಯೆ/ ಓಂಕಾರ/ ನಕ್ಷತ್ರ/ ಚಂದ್ರ/ ಇಷ್ಟದೈವಚಿತ್ರ/ ಪ್ರತಿಮೆ/ ದೀಪದ ಜ್ಯೋತಿ, ಪೆನ್ಸಿಲಿನ ತುದಿ, ವ್ಯಕ್ತಿ ಹಾಗೂ ಯಾವುದೇ ಇನ್ನಿತರ ವಸ್ತುಗಳನ್ನು ಆರಿಸಿಕೊಳ್ಳಬಹುದು.
ಅಭ್ಯಾಸ ಕ್ರಮ:
ಸರಳ ಧ್ಯಾನ ಮಾಡುವ ವಿಧಾನ:
ಆರಂಭದಲ್ಲಿ ಸಿದ್ಧತೆ ಮಾಡಬೇಕು ‘ಶುಚೌದೇಶೇ ಪ್ರತಿಷ್ಠಾಪ್ಯ ಸ್ಥಿರವಾದ ಆಸನವೊಂದನ್ನು ಸ್ಥಾಪಿಸುವುದು ಎಂದರ್ಥ. ‘ಸಮಂ ಕಾಯ ಶಿರೋಗ್ರೀವಂ’ ಎಂದರೆ ಶಿರಸ್ಸು, ಬೆನ್ನು, ಕುತ್ತಿಗೆ, ನೇರ. ಪದ್ಮಾಸನ/ ವಜ್ರಾಸನ/ ಸ್ವಸ್ತಕಾಸನ/ ಸುಖಾಸನ/ ವೀರಾಸನ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
ಈ ಮೇಲೆ ತಿಳಿಸಿದ ಯಾವುದಾದರೂ ಆಸನದಲ್ಲಿ ಕುಳಿತುಕೊಳ್ಳಬೇಕು. ಬೆನ್ನು, ಕುತ್ತಿಗೆ ಶಿರಸ್ಸು ನೇರವಾಗಿರಬೇಕು. ದೇಹ ಸಡಿಲಗೊಂಡಿರಬೇಕು ಹಾಗೂ ಹಾಯಾಗಿಕುಳಿತಿರಬೇಕು. ಮುಖದಲ್ಲಿ ಪ್ರಸನ್ನತೆ, ಸೌಮ್ಯ ಭಾವವಿರಬೇಕು. ಕೈಗಳು ‘ಚಿನ್ಮುದ್ರೆ’ ಭಂಗಿಯಲ್ಲಿರಬೇಕು. ಸಾಮಾನ್ಯ ಉಸಿರಾಟದಲ್ಲೇ ನೆಲಸಬೇಕು. ಹಾಗೇ ಸ್ವಲ್ಪ ಹೊತ್ತು ಮನಸ್ಸನ್ನು ಗಮನಿಸಬೇಕು. ಆಮೇಲೆ ಮನಸ್ಸಿನಿಂದ ಸಾಮಾನ್ಯ ಉಸಿರಾಟವನ್ನೇ ಗಮನಿಸಬೇಕು. (ಆರಂಭದಲ್ಲಿ ಸ್ವಲ್ಪಹೊತ್ತು) ಈ ಸ್ಥಿತಿಯಲ್ಲಿ ಯಾವುದೇ ರಿತಿಯ ಯೋಚನೆಯನ್ನು ಮಾಡದೇ ಉಸಿರಾಟವನ್ನೇ ನಿರಂತರವಾಗಿ ಗಮನಿಸುತ್ತಾ ಇರಬೇಕು. ಈ ಸ್ಥಿತಿಯಲ್ಲಿ ಐದರಿಂದ ಹತ್ತಿಪ್ಪತ್ತು ನಿಮಿಷದವರೆಗೆ ಧ್ಯಾನ ಮಾಡಬಹುದು. ಆದರೆ ಧ್ಯಾನ ಮಾಡುವಾಗ ಯಾವುದೇ ರೀತಿಯಾ ನೋವಿನ ಅನುಭವ ಬರಬಾರದು. ಆರಂಭದಲ್ಲಿ ಉಸಿರನ್ನು ಗಮನಿಸಿಕೊಂಡೇ ಧ್ಯಾನ ಮಾಡಲು ಸುಲಭವಾಗುತ್ತದೆ. ಆಮೇಲೆ ಓಂಕಾರ/ ಇಷ್ಟದೇವರ ಚಿತ್ರ/ ಪ್ರತಿಮೆ ಭ್ರೂಮಧ್ಯ ಅಥವಾ ನಾಸಾಗ್ರದಲ್ಲಿ ದೃಷ್ಠಿಯಿರಿಸಿ ಧ್ಯಾನ ಮಾಡಬಹುದು. ಈ ಧ್ಯಾನವನ್ನು ಗುರುಮುಖದಲ್ಲೇ ಕಲಿಯಬೇಕು.
ಯೋಗದಿಂದ ದೈಹಿಕ ಮಾನಸಿಕ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ. ಈ ಆಧುನಿಕ ಯಾಂತ್ರಿಕ ವೈಜ್ಞಾನಿಕ ಸೌಕರ್ಯಗಳಿಂದ ಈ ಈಗಿನ ದಿನಗಳಲ್ಲಿ ದೈಹಿಕ ವ್ಯಾಯಾಮದ ಕೊರತೆಯನ್ನು ನಿವಾರಿಸಲು ಆರೋಗ್ಯವನ್ನು ಪಡೆಯಲು ಯೋಗಾಸನಗಳು ಅತ್ಯಾವಶ್ಯಕ. ಯೋಗ, ಆಸನ, ಪ್ರಾಣಯಾಮ, ಧ್ಯಾನ ಗುರುಮುಖೇನವೇ ಕಲಿತು ನಿತ್ಯ ನಿರಂತರ ಉದಾಸೀನ ಬಿಟ್ಟು ಅಭ್ಯಾಸ ಮಾಡಬೇಕು.
-‘ಯೋಗರತ್ನ’ ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‍ಪೆಕ್ಟರ್
ಅಂತರರಾಷ್ಟ್ರೀಯ ಯೋಗ ತೀರ್ಪುಗಾರರು
“ಪಾರಿಜಾತ”, ಮನೆ ಸಂಖ್ಯೆ 2-72:5
ಬಿಷಪ್ ಕಂಪೌಂಡು, ಯೆಯ್ಯಾಡಿ ಪದವು
ಕೊಂಚಾಡಿ ಪೋಸ್ಟ್, ಮಂಗಳೂರು -575 008
ಫೋನ್ ನಂ. : 9448394987
Time: 1.00 to 3.00 PM & 8 PM to 9.30 PM
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ