|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೃಷ್ಣಂ ವಂದೇ ಜಗದ್ಗುರುಮ್- ಮಧ್ಯರಾತ್ರಿಯಲ್ಲಿ ಜನಿಸಿ ಜಗಕೆ ಬೆಳಕು ತಂದವನ ಹುಟ್ಟಿದ ಹಬ್ಬ

ಕೃಷ್ಣಂ ವಂದೇ ಜಗದ್ಗುರುಮ್- ಮಧ್ಯರಾತ್ರಿಯಲ್ಲಿ ಜನಿಸಿ ಜಗಕೆ ಬೆಳಕು ತಂದವನ ಹುಟ್ಟಿದ ಹಬ್ಬ



ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ

ಪ್ರಣತ ಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ


ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.


ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ.


ಕೃಷ್ಣಜನ್ಮಾಷ್ಟಮಿಯ ದಿನದಂದು, ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧ ವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲ ಕೃಷ್ಣನನ್ನು ಪೂಜಿಸಲಾಗುತ್ತದೆ. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ.


ಕೃಷ್ಣನು ಭಾದ್ರಪದ ಕೃಷ್ಣ ಅಷ್ಟಮಿಯಂದು ಮಥುರಾ ಊರಿನ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ 8ನೇ ಮಗುವಾಗಿ ಜನಿಸಿದನು. ಮಥುರಾ (ಈಗಿನ ಉತ್ತರಪ್ರದೇಶದ ಮಥುರಾ ಜಿಲ್ಲೆ) ಯಾದವ ಕುಲದ ರಾಜಧಾನಿಯಾಗಿತ್ತು.


ಕಂಸ ತಂದೆ ಉಗ್ರಸೇನನನ್ನು ಬಂಧನದಲ್ಲಿಟ್ಟು, ತಾನು ರಾಜನಾಗಿದ್ದನು. ನಂತರ ತನ್ನ ಪ್ರೀತಿಪಾತ್ರಳಾದ ತಂಗಿ ದೇವಕಿಗೆ ಮದುವೆ ಮಾಡುತ್ತಾನೆ. ಅಣ್ಣನದ ಕಂಸನು ದೇವಕಿ-ವಸುದೇವರ ಮದುವೆಯಾದ ಮೇಲೆ ಅವರನ್ನು ಗಂಡನ ಮನೆಗೆ ಕರೆದೊಯ್ಯುತ್ತಿದ್ದಾಗ, ಅವನಿಗೆ ಒಂದು ಅಶರೀರವಾಣಿ ಕೇಳಿಸಿತು. ಅದರ ಪ್ರಕಾರ ದೇವಕಿಯ ಎಂಟನೇ ಮಗುವು ಕಂಸನ ವಧೆಯನ್ನು ಮಾಡುತ್ತದೆ ಎಂದು.


ಇದನ್ನು ಕೇಳಿದ ಕಂಸನು ದೇವಕಿಯನ್ನು ಆ ತಕ್ಷಣವೇ ಕೊಲ್ಲಲು ಹೊರಟನು. ಆಗ ವಸುದೇವನು ಅವನನ್ನು ತಡೆದು ಪ್ರತಿ ಮಗುವನ್ನು ಹುಟ್ಟಿದ ತಕ್ಷಣ ಕಂಸನ ಮಡಿಲಲ್ಲಿ ಅರ್ಪಿಸುವುದಾಗಿ ಹೇಳಿದನು. ವಸುದೇವ ದೇವಕಿಯನ್ನು ಬಂಧಿಸಿ ಅವರಿಗೆ ಹುಟ್ಟಿದ ೭ ಮಕ್ಕಳನ್ನು ಕೊಂದನು. ೮ನೇ ಮಗು ಕೃಷ್ಣನನ್ನು ಕಂಸನಿಗೆ ತಿಳಿಯದ ಹಾಗೆ ವಸುದೇವನು ಯಮುನಾ ನದಿ ದಾಟಿ ಗೋಕುಲಕ್ಕೆ ಕರೆದು ಕೊಂಡು ಹೋದನು.


ಅಲ್ಲಿ ಆಗ ತಾನೆ ಹುಟ್ಟಿದ್ದ ಯಶೋದೆಯ ಮಗಳನ್ನು ಮಥುರೆಗೆ ತಂದನು. ಆದರೆ ಕಂಸ ಆ ಹೆಣ್ಣು ಮಗುವನ್ನು ಕೊಲ್ಲಲು ಬಂದಾಗ ಅವಳು ವಿಷ್ಣುವಿನ ಸಹಾಯಕಿ ಯೋಗಮಾಯಾ ರೂಪಕ್ಕೆ ಬದಲಾಗಿ ಅವನ ಸಾವಿನ ಬಗ್ಗೆ ಅರಿಯಬೇಕೆಂದು ಹೇಳಿ ಮಾಯವಾದಳು. ಕೃಷ್ಣ ಗೋಕುಲ ಹಾಗೂ ವೃಂದಾವನದಲ್ಲಿ ಬಲರಾಮನ ಜತೆ ಬೆಳೆದು, ಕೊನೇಗೆ ಮಥುರಾಗೆ ಬಂದು ಕಂಸನನ್ನು ಕೊಂದನು.


ವಿಶ್ವಗುರುವಾಗುತ್ತಿರುವ ಭಾರತಭೂಮಿಯಲ್ಲಿ ಗೀತಾಚಾರ್ಯನಾಗಿ ವಿಶ್ವಸಂದೇಶ ಸಾರಿದ ಪರಮಾತ್ಮ ಶ್ರೀಹರಿಯ ಜನುಮೋತ್ಸವದ ಶುಭಾಶಯಗಳು.


Drawing By:- Ranjitha Karanth & Navya Holla


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم