"ಇದು ನೂರಕ್ಕೆ ನೂರು ಸ್ವೀಕಾರಾರ್ಹ". ಇದು ಕೇವಲ ಬಾಕಾಹು (ಬಾಳೆಕಾಯಿ ಹಿಟ್ಟು) ವಿನಿಂದ ಮಾಡಿದ ದೋಸೆ ತಿಂದ ಬಳಿಕ ಪಾಲಕ್ಕಾಡ್ ಜಿಲ್ಲೆಯ ಕೆ. ಕೃಷ್ಣನ್ ಉಣ್ಣಿ (57) ಮಾಡಿದ ಉದ್ಗಾರ, ಎರಡು ವರ್ಷ ಹಿಂದೆ ಮಲೆಯಾಳ ಮನೋರಮಾ ದೈನಿಕದ ’ಕರ್ಷಕಶ್ರೀ’ ಅದಕ್ಕೂ ಹಿಂದೆ ರಾಜ್ಯ ಸರಕಾರದ 'ಕಾರ್ಷಿಕೋತ್ತಮ' ಪ್ರಶಸ್ತಿ ಪಡೆದ ಸಾಧಕ ರೈತರು ಇವರು. ಚಿತ್ತೂರು ತಾಲೂಕಿನ ಪೆರುಮಾಟ್ಟಿ ಪಂಚಾಯತಿನಲ್ಲಿದೆ ಇವರ ತೋಟ.
ಮಳೆ ನಿಲ್ಲುವುದನ್ನೇ ಕಾದು ಕುಳಿತು ಬಿಸಿಲಲ್ಲಿ ತಾವೇ ಬೆಳೆದ ಬಾಳೆಕಾಯಿ ಒಣಗಿಸಿ ಅವರು ಹಿಟ್ಟು ಮಾಡಿದ್ದು ಈ ವಾರ. ಇವರು ಬಳಸಿದ್ದು ನೇಂದ್ರ ಅಲ್ಲ 'ಚಾರ ಪೂವನ್' ಎಂಬ ಸ್ಥಳೀಯ ತಳಿ. ಪತ್ನಿ ಪ್ರಸೀಜಾ ಬಾಳೆಕಾಯಿ ಹುಡಿಯನ್ನು ಇತರ ಹುಡಿಗಳೊಂದಿಗೆ ಸಮಪ್ರಮಾಣದಲ್ಲಿ ಸೇರಿಸಿ ಅಡ, ಉಣ್ಣಿಯಪ್ಪಮ್ ಮತ್ತು ದೋಸೆ ತಯಾರಿಸಿದ್ದಾರೆ. "ಬರೇ ಬಾಕಾಹುವಿನ ದೋಸೆಯೂ ರುಚಿಯಾಗಿತ್ತು. ಆದರದು ಬರೇ ಮೆತ್ತಗಾಗುತ್ತದೆ. ಕಾವಲಿಯಿಂದ ಎದ್ದು ಬರಲು ಸ್ವಲ್ಪ ಕಷ್ಟ. ಶೇಕಡಾ ಇಪ್ಪತ್ತು ಗೋಧಿ ಹುಡಿ ಸೇರಿಸಿದಾಗ ಸರಿಯಾಯಿತು" ಎನ್ನುತ್ತಾರೆ.
"ಬಾಳೆಗೆ ಬೆಲೆ ಇಲ್ಲದೆ ಸಂಕಟ ಪಡುವ ಸಂದರ್ಭಕ್ಕೆ ಇದು ಒಳ್ಳೆ ರೈತಪರ ವಿದ್ಯೆ. ಇನ್ನೂ ಇದರ ಹಲವಾರು ಪ್ರಯೋಗ ಮಾಡಿ, ನಂತರ ಊರವರಿಗೂ ಹೇಳಬೇಕು" ಎನ್ನುತ್ತಾರೆ ಕೃಷ್ಣನ್ ಉಣ್ಣಿ.
K. Krishnan Unni- 94009 34852 (6- 8 AM)
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ