ಗಡಿನಾಡ ಸಂಚಾರ ತಡೆದ ಕರ್ನಾಟಕ ಸರಕಾರ, ದ.ಕ ಡಿಸಿಗೆ ಕೇರಳ ಹೈಕೋರ್ಟ್‌ ತರಾಟೆ: ಸ್ಪಷ್ಟೀಕರಣಕ್ಕೆ ನೋಟೀಸ್

Upayuktha
0


 

ಕಾಸರಗೋಡು: ಕೇರಳದಿಂದ ಕರ್ನಾಟಕ ತೆರಳುವವರಿಗೆ ರಸ್ತೆ ತಡೆ ಸಹಿತ ನಾಗರಿಕ ಸಂಚಾರನುಮತಿ ನಿಷೇಧಿಸಿದ ಕರ್ನಾಟಕ ಸರಕಾರದ ಕ್ರಮ ಕೇಂದ್ರದ ಕೋವಿಡ್ ನಿಯಮಾವಳಿಯ ಉಲ್ಲಂಘನೆಯಾಗಿದ್ದು ಇಂತಹ ಅಮಾನವೀಯ ನಾಗರಿಕ ಹಕ್ಕು ಉಲ್ಲಂಘನೆ ಕುರಿತು ಸ್ಪಷ್ಟೀಕರಣ ನೀಡಬೇಕೆಂದು ಕರ್ನಾಟಕಕ್ಕೆ ಕೇರಳ ಉಚ್ಛನ್ಯಾಯಾಲಯ ನೋಟೀಸು ಜ್ಯಾರಿಗೊಳಿಸಿದೆ.


ಮಂಜೇಶ್ವರದ ಸಿಪಿಎಂ ಮುಖಂಡ, ಪಕ್ಷದ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯ ಕೆ. ಆರ್. ಜಯಾನಂದ ಅವರು ನಾಗರಿಕ ಹಿತಾಸಕ್ತಿಯಿಂದ ಕೇರಳ ಹೈಕೋರ್ಟಿನಲ್ಲಿ ಹೂಡಿದ ದಾವೆ ಪರಿಗಣಿಸಿ ಕೇರಳಾ ಹೈಕೋರ್ಟು ಗಡಿಸಂಚಾರ ತಡೆದಿರುವುದನ್ನು ಪ್ರಶ್ನಿಸಿ ಕೇಂದ್ರ ಸಹಿತ ಕರ್ನಾಟಕ ಸರಕಾರಕ್ಕೆ ನೋಟೀಸು ಜ್ಯಾರಿ ಮಾಡಿದೆ.


ಇದರಂತೆ ಕರ್ನಾಟಕ ಸರಕಾರ, ದ. ಕ ಜಿಲ್ಲಾಧಿಕಾರಿ, ಕೇಂದ್ರ ಆರೋಗ್ಯ ಸಚಿವಾಲಯದ ಪ್ರತಿನಿಧಿಗಳು ಆಗಸ್ಟ್ 17ರಂದು ಕೋರ್ಟಿಗೆ ಹಾಜರಾಗಿ ಅಧಿಕೃತ ಸಮಜಾಯಿಷಿ ನೀಡುವಂತೆ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.


ಪ್ರಸ್ತುತ ಕೇರಳದಿಂದ ಯಾರೊಬ್ಬರು ಕರ್ನಾಟಕ ಪ್ರವೇಶಿಸುವುದಿದ್ದರೂ ಅವರು 72 ತಾಸುಗಳ ಒಳಗೆ ಪಡೆದ ಕೋವಿಡ್ ಆರ್‌ಟಿಪಿಸಿಆರ್ ಟೆಸ್ಟಿನ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ ಹೊಂದಿರಬೇಕು ಎಂಬುದು ಕರ್ನಾಟಕದ ಆದೇಶ. ಎರಡು ಡೋಸ್ ಲಸಿಕೆ ಪಡೆದವರಿಗೂ ವಿನಾಯಿತಿಗಳಿಲ್ಲ. ಆದರೆ ಎರಡು ಡೋಸ್ ಲಸಿಕೆ ಪಡೆದವರ ಸಂಚಾರ ಅನುಮತಿ ನಿಷೇಧಿಸಕೂಡದೆಂದು ಕೇಂದ್ರ ಸರಕಾರ ಪದೇಪದೇ ಪುನರುಚ್ಛರಿಸಿದರೂ ಅದನ್ನೆಲ್ಲ ಕಡೆಗಣಿಸಿ ಕೇರಳ ಕರ್ನಾಟಕ ಗಡಿಯಲ್ಲಿ ಸಂಚಾರ ಸ್ವಾತಂತ್ರ್ಯ ನಿಷೇಧಿಸಲಾಗಿದೆ. ಈ ಜನದ್ರೋಹಿ ನಿಲುವನ್ನು ಖಂಡಿಸಿ ತಲಪಾಡಿಯಲ್ಲಿ ಸತ್ಯಾಗ್ರಹ ನಿರತರಾಗುವುದರ ಜತೆಯಲ್ಲೇ ಕೆ. ಆರ್. ಜಯಾನಂದರು ಕೋರ್ಟಿನ ಮೊರೆ ಹೋಗಿದ್ದರು.  

ಕರ್ನಾಟಕ ಸರಕಾರ ಪ್ರಸ್ತುತ ಪಾಲಿಸುತ್ತಿರುವ ಆದೇಶ ಹಿಂತೆಗೆಯಬೇಕು, ಕೋವಿಡ್ ಲಸಿಕೆ ಪಡೆದವರಿಗೆ ಅಂತರ್ ರಾಜ್ಯ ಸಂಚಾರ ಅನುಮತಿ ನೀಡಬೇಕೆಂಬುದು ಅವರ ಬೇಡಿಕೆ.


ಕಾಸರಗೋಡು ಭೂಭಾಗ ಶತಮಾನಗಳ ಹಿಂದೆ ಮದ್ರಾಸು ಪ್ರಾಂತ್ಯ, ಮೈಸೂರು ಪ್ರಾಂತ್ಯದ ಕಾಲದಲ್ಲೇ ದ.ಕ ಜಿಲ್ಲೆಯ ಭಾಗ. ಶಿಕ್ಷಣ, ಆರೋಗ್ಯ ಚಿಕಿತ್ಸೆ, ಉದ್ಯೋಗ, ಜೀವನ ಸಂಬಂಧ ಇತ್ಯಾದಿಗಳೊಂದಿಗೆ ಕರಾವಳಿಯೊಂದಿಗೆ ಬಾಂಧವ್ಯದ ಬೆಸುಗೆ ಹೊಂದಿದೆ. ಇದು ಸಾಮರಸ್ಯದ ಜೀವನಮೌಲ್ಯದ ಸಾಂಸ್ಕೃತಿಕ ಸಂಬಂಧ. ಪ್ರಸ್ತುತ  ಇದಕ್ಕೆಲ್ಲ ತಡೆಯೊಡ್ಡಲಾಗಿದೆ. ಗಡಿನಾಡಿನ ಬಾಂಧವ್ಯ ಕೆಡಿಸುವ ಮಾದರಿಯ ಈ ಧೋರಣೆ ಇದೇ ಮೊದಲು. ಇದರಿಂದಾಗಿ ಗಡಿನಾಡ ಜನತೆಯ ಉದ್ಯೋಗ, ಶಿಕ್ಷಣ, ಚಿಕಿತ್ಸೆ ಇನ್ನಿತ್ಯಾದಿ ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗಿದೆ. ಇದು ಸ್ಪಷ್ಟವಾದ ಮಾನವ ಹಕ್ಕು ಉಲ್ಲಂಘನೆ. ಈ ಕುರಿತು ನ್ಯಾಯಾಲಯ ಮುತುವರ್ಜಿಯಿಂದ ಕಾನೂನು ಪಾಲನೆ ಕ್ರಮ ಕೈಗೊಳ್ಳಬೇಕೆಂದು ದೂರುದಾರರ ಪರವಾಗಿ ಹೈಕೋರ್ಟಿನಲ್ಲಿ ನ್ಯಾಯವಾದಿ ಪಿ. ವಿ. ಅನೂಪ್ ಹಾಜರಾಗಿ ವಾದ ಮಂಡಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top