ಬಾಕಾಹು (ಬಾಳೆಕಾಯಿ ಹುಡಿ/ ಹಿಟ್ಟು) ಹೇಗೆ ಬಹೂಪಯೋಗಿ ಎಂದು ಮಾಡಿ ತೋರಿಸಿದ್ದಾರೆ ಈ ಶಿರಸಿಯ ಮನೆಯೊಡತಿ.
ಹುಳಗೋಳ ಸೊಸೈಟಿ ಭೈರುಂಬೆಯಲ್ಲಿ ಬಾಕಾಹು ಕಾರ್ಯಾಗಾರ ಏರ್ಪಡಿಸಿತ್ತಲ್ಲಾ? ಮೊನ್ನೆ ಆಗಸ್ಟ್ 23ಕ್ಕೆ.
ಅದಕ್ಕಾಗಿಯೇ ಮಮತಾ ದತ್ತಾತ್ರೇಯ ಭಟ್ ತಯಾರಿಸಿ ತಂದ ಬಾಕಾಹು ಪಾಕಗಳೆಷ್ಟು ಗೊತ್ತೇ? ಬರೋಬ್ಬರಿ ಒಂದು ಡಜನ್.
ರೊಟ್ಟಿ, ದೋಸೆ, ತೆಳ್ಳೇವು, ಪೂರಿ, ಪತ್ರೊಡೆ (ಬ್ರೇಕ್ ಫಾಸ್ಟ್ ತಿಂಡಿ), ಶಿರಾ, ಅತ್ರಾಸ, ಕರ್ಜಿಕಾಯಿ (ಸಿಹಿತಿಂಡಿ), ನಿಪ್ಪಟ್ಟು, ಮದ್ದೂರು ವಡೆ, ಕರೆ ಮತ್ತು ಶೇವು (ಕುರುಕಲು ತಿಂಡಿ).
"ಮರುದಿನಕ್ಕೆ ಉಳಿಯುವಂಥದ್ದನ್ನು ಹಿಂದಿನ ರಾತ್ರಿಯೇ ಮಾಡಿಟ್ಟೆ. ದೋಸೆ ಐಟಮಿನಂಥವನ್ನು ಬೆಳಗ್ಗೆ ಬೇಗನೆ ಎದ್ದು ಮಾಡಿದೆ" ಎನ್ನುತ್ತಾರೆ ಮಮತಾ. ಏನಿದ್ದರೂ ಅವರು ಇದಕ್ಕಾಗಿಯೇ ನಾಲ್ಕು ತಾಸು ಕೆಲಸ ಮಾಡಿದ್ದಾರೆ.
ಈ ಪೈಕಿ ಮಮತಾ ಅವರಿಗೆ ತುಂಬ ಇಷ್ಟ ಆದದ್ದು ಶಿರಾ. ('ಬಣ್ಣ ಕಪ್ಪಾಗಿ ಬಂದರೂ ರುಚಿ ಸೂಪರ್') ನಂತರದ ಸ್ಥಾನ ಕರೆ (ಕಾರ ಕಡ್ಡಿ)ಗೆ. ಮಗೆಕಾಯಿ ಸೇರಿಸಿ ಮಾಡಿದ ತೆಲ್ಲೇವಿಗೆ ಮೂರನೆಯ ಸ್ಥಾನ.
ಮಮತಾ ಮತ್ತು ಪತಿ ದತ್ತಾತ್ರೇಯ ಭಟ್ ಡ್ರೈಯರ್ ಕೊಳ್ಳಲು 'ಯಾವುದು ಉತ್ತಮ’ ಎಂದು ಅಧ್ಯಯನ ಮಾಡುತ್ತಾ ಇದ್ದಾರೆ. "ಬಾಕಾಹು ತಯಾರಿ ಇನ್ನು ಆಗಾಗ ಇರುತ್ತಾ" ಎಂದು ಕೇಳಿದರೆ ಥಟ್ಟಂತ ಉತ್ತರಿಸುತ್ತಾರೆ ಮಮತಾ, "ಡ್ರೈಯರ್ ಬಂದುಕೊಳ್ಳಲಿ, ಆಮೇಲೆ ಮಾಡೋದೇಯ."
-ಶ್ರೀಪಡ್ರೆ, ಅಡಿಕೆಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ