"ಬಾಕಾಹುವಿನಿಂದ ಮೊದಲ ಸುತ್ತಿನಲ್ಲಿ ತೆಳ್ಳೇವು, ವಡಪೆ ಮತ್ತು ಇಡ್ಲಿ ಮಾಡಿದ್ದೆ. ಎಲ್ಲರಿಗೂ ಇಷ್ಟ ಆಯಿತು. ನಮ್ಮ ಇಬ್ಬರು ಮಕ್ಕಳೂ ಪುನಃಪುನಃ ಕೇಳಿ ಹಾಕಿಸಿಕೊಂಡು ತಿಂದರು."
ಹೀಗನ್ನುವ ದಿವ್ಯಾ ಸುಹಾಸ್ ಹೆಗಡೆ ಶಿರಸಿ ತಾಲೂಕಿನ ಹುಲೇಮಳಗಿಯ ಗೃಹಿಣಿ. "ಬಾಕಾಹು ಬಗ್ಗೆ ತುಂಬ ಪ್ರಚಾರ ಆಗುತ್ತಿತ್ತಲ್ಲಾ. ನಮ್ಮಲ್ಲಿ ಮೊದಲಿನಿಂದಲೂ ಡ್ರೈಯರ್ ಇದೆ. ಆದರೆ ಈಚೀಚೆಗೆ ಬಟ್ಟೆ ಒಣಗಿಸಲು, ಹಪ್ಪಳ ಮತ್ತು ಏನಾದರೂ ಚಿಕ್ಕಪುಟ್ಟ ವಸ್ತು ಒಣಗಿಸಲು ಮಾತ್ರ ಬಳಸುತ್ತಿದ್ದೆವು."
"ಮನೆಯಲ್ಲೇ ಡ್ರೈಯರ್ ಇದ್ದ ಕಾರಣ ಬಾಕಾಹು ತಯಾರಿ ಸುಲಭವಾಯಿತು ಮಳೆ- ಗಾಳಿಗೆ ಬಿದ್ದ ಯಾಲಕ್ಕಿ ಮಿಟ್ಲಿ ಬಾಳೆಗೊನೆಯನ್ನು ಬಳಸಿ ಒಣಗಿಸಿ ಹುಡಿ ಮಾಡಿಕೊಂಡೆವು. "
ದಿವ್ಯಾ ಇಡ್ಲಿಗೆ ಮೂರರಲ್ಲಿ ಎರಡು ಪಾಲು ಬಾಕಾ ರವೆ ಸೇರಿಸಿದ್ದರಂತೆ. ವಡಪೆ, ಅಂದರೆ ತಾಲಿಪ್ಪಿಟ್ಟು ಮತ್ತು ತೆಳ್ಳೇವು ಪೂರ್ತಿ ಬಾಕಾಹುವಿನದೇ. ಕರೆ (ಕಾರಕಡ್ಡಿ) ಯನ್ನೂ ಮಾಡಿದ್ದರು.
ಸ್ಥಳೀಯ ವಾಟ್ಸಪ್ ಗುಂಪುಗಳಲ್ಲಿ ಇವರು ತಮ್ಮ ಅನುಭವ ಪೋಸ್ಟ್ ಮಾಡಿದ್ದಕ್ಕೆ ತುಂಬ ಒಳ್ಳೆ ಪ್ರತಿಕ್ರಿಯೆ ಬಂದಿದೆಯಂತೆ. "ಹೇಗೂ ಡ್ರೈಯರೂ ಇದೆ ತೋಟದಲ್ಲಿ ಬಾಳೆಗೊನೆಯೂ. ಮುಂದಿನ ದಿನಗಳಲ್ಲಿ ಒಂದಷ್ಟು ಬಾಕಾಹು ಮಾಡಿ ಏಕೆ ಮಾರಾಟ ಮಾಡಬಾರದು" ಎಂಬುದು ಈಗ ದಿವ್ಯಾ ಹೆಗ್ಡೆ ಅವರ ಚಿಂತನೆ.
ದಿವ್ಯಾ ಹೆಗಡೆ, ಹುಲೇಮಳಗಿ- 82777 49179 (ಸಂಜೆ 4- 6)