ಮಳೆ ಮಾನವನ ಅತ್ಯಂತ ನಿಕಟ ನೈಸರ್ಗಿಕ ವಿದ್ಯಮಾನ. ಮಳೆಯ ಮೇಲಿನ ಮಾನವನ ಅವಲಂಬನೆಯೇ ಇದಕ್ಕೆ ಕಾರಣವಾಗಿರಬಹುದು. ಮಳೆಯ ವಿತರಣೆ, ಹರವು (Distribution) ಎಂದೆಂದಿಗೂ ಕೌತುಕಕ್ಕೆ ತೆರೆದುಕೊಳ್ಳುವ ವಸ್ತು. ವಾಡಿಕೆಯ ಮಳೆ, ವಾಡಿಕೆಗಿಂತ ಹೆಚ್ಚು-ಕಡಿಮೆ ಮಳೆ, ಸಾಮಾನ್ಯ-ಇವೇ ಮೊದಲಾದ ವಿಶೇಷಣಗಳು ಮಳೆಯ ಪ್ರಮಾಣವನ್ನು ಹೇಳಲು ಉಪಯೋಗಿಸಲ್ಪಡುತ್ತಿವೆ. ಮಳೆ ಬರುವ ದಿಕ್ಕು, ಹೊತ್ತು, ತೀವ್ರತೆ, ವ್ಯಾಪಕತೆಗಳು ಒಂದೇ ತೆರನಾಗಿ ಕಂಡರೂ, ಒಂದೆರಡು ವರುಷಗಳ ನಿಖರ ವೀಕ್ಷಣೆಯಿಂದ ಅವುಗಳ ಸಂಕೀರ್ಣತೆಯ ಅರಿವಾಗುವುದು.
ಆಯಾ ಪ್ರದೇಶದ ಮಳೆಯ ಕಾಲವಿತರಣೆಗೆ ಅನುಗುಣವಾಗಿ ಕೃಷಿಸಂಬಂಧೀ ಚಟುವಟಿಕೆಗಳು ನಡೆಯುತ್ತವೆ. ಗೀತೆಯಲ್ಲಿ ಅದನ್ನೇ ಪರ್ಜನ್ಯಾದನ್ನ ಸಂಭವ:- ಅನ್ನವು ಮಳೆಯಿಂದ ಉತ್ಪತ್ತಿಯಾಗುತ್ತದೆ ಎಂದಿದ್ದು. ಮಳೆಯ ಕಾಲವಿತರಣೆ ಮಳೆಗೆ ಸಂಬಂಧಿಸಿದ ಬಹುಮುಖ್ಯ ಆಂಶ. ಹೀಗಾಗಿ ಮಳೆಯನ್ನು ಮುಂಗಾರು ಪೂರ್ವ, ನೈಋತ್ಯ ಮಾನ್ಸೂನ್ ಅಥವಾ ಮುಂಗಾರು, ಈಶಾನ್ಯ ಮಾನ್ಸೂನ್ ಅಥವಾ ಹಿಂಗಾರು ಎಂದು ವರ್ಗೀಕರಿಸಿದ್ದು. ಮುಂಗಾರಿನ ಆರಂಭದ ಜೂನ್ 1ರ ಆಸುಪಾಸಿನ ಐದು-ಹತ್ತು ದಿನಗಳ ನಿರಂತರ ಮಳೆ ಗಾಳಿಯಿಂದ ಕೂಡಿರುತ್ತದೆ. ಕಡಲ್ಕೊರೆತ, ನದಿಯ ಪ್ರವಾಹ ಇವೆಲ್ಲವೂ ಸಂಭವಿಸುವ ಸಾಧ್ಯತೆ ಹೆಚ್ಚು. ಆಗ ತಾನೇ ಆರಂಭವಾದ ಮಳೆಯ ಆರ್ಭಟವನ್ನು ಗಮನಿಸಿ ಜನರು ಈ ಬಾರಿ ಮಳೆ ತುಸು ಹೆಚ್ಚೇ! ಎಂಬ ನಿರ್ಣಯಕ್ಕೂ ಬಹುಬೇಗ ಬಂದುಬಿಡುತ್ತಾರೆ. ನಂತರದ ಜೂನ್, ಜುಲೈ, ಆಗಸ್ಟ್ ತಿಂಗಳುಗಳು ಮುಂಗಾರಿನ ಪ್ರಭಾವದ ಮಳೆಯ ದಿನಗಳು. ಜುಲೈ ಕೊನೆಯ ವಾರ ಹಾಗೂ ಆಗಸ್ಟ್ ಮೊದಲ ವಾರಗಳು ಭಾರೀ ಮಳೆಯನ್ನೇ ಪಡೆಯುತ್ತವೆ.
2020ರ ಉಜಿರೆಯ ಮಳೆ ಸಾಮಾನ್ಯ ಸರಾಸರಿಗಿಂತ ಉತ್ತಮವಾಗಿತ್ತು. 2020ರ ಮುಂಗಾರು ಮಳೆಯ ವಿತರಣೆ ಪ್ರತಿ ಹತ್ತು ದಿನಕ್ಕೊಮ್ಮೆ ಭಾರತೀಯ ಹವಾಮಾನ ಇಲಾಖೆಯ ದತ್ತದ ಆಧಾರದ ಮೇಲೆ ವಿಶ್ಲೇಷಿಸಬಹುದು. ಜೂನ್ ತಿಂಗಳ ಮೊದಲ ಹತ್ತು ದಿನಗಳು ಐದು ಇಂಚಿನಷ್ಟಾದರೆ, ಮುಂದಿನ, ಮತ್ತೂ ಹತ್ತುದಿನಗಳಲ್ಲಿ 13 ಇಂಚುಗಳ ವರೆಗಿನ ಏರುಗತಿಯನ್ನು ಹೊಂದಿತ್ತು. ಜೂನ್ ಮಾಸದ ಕೊನೆಯ ಹತ್ತು ದಿನಗಳಲ್ಲಿ ಮಳೆಯು ಸ್ವಲ್ಪ ನಿಧಾನಗತಿಯನ್ನು ಪಡೆಯಿತು. ಇನ್ನು ಜುಲೈನಲ್ಲಿ ಮೊದಲೆರಡು ವಾರಗಳು ಎಂದಿನಂತೆ ಹೆಚ್ಚಿನ ಮಳೆಯನ್ನು ಪಡೆದರೆ, ಕೊನೆಯ ಹತ್ತು ದಿನಗಳು ಸಾಮಾನ್ಯ ಮಳೆಯನ್ನು ಹೊಂದಿತ್ತು. ಆಗಸ್ಟ್‌ನ ಮೊದಲ ಹತ್ತು ದಿನಗಳ ಮಳೆ ಮುಂಗಾರಿನ ಪ್ರಮುಖ ಬಿರುಸುಗಳಲ್ಲೊಂದು. ನಿರಂತರ ಮೋಡಕವಿದ ಹವೆಯಿರುವ ಈ ದಿನಗಳಲ್ಲಿ ಮಳೆಯ ಪ್ರಾಬಲ್ಯ ತುಸು ಹೆಚ್ಚೇ ಇದ್ದಿತ್ತು. ಕಳೆದ ವರುಷ ಆಗಸ್ಟ್ ಮೊದಲ ಹತ್ತು ದಿನಗಳು ಪಡೆದದ್ದು ಒಟ್ಟು 30 ಇಂಚುಗಳ ಮಳೆ. ಆ ನಂತರದ ಮಳೆಯ ಪ್ರಮಾಣಗಳು ಕಡಿಮೆಯಾಗುತ್ತಾ ಬಂದವು. ಸರಿಸುಮಾರು 4 ರಿಂದ, ಜಾಸ್ತಿಯೆಂದರೆ 10 ಇಂಚುಗಳು ದಶದಿನಗಳಿಗೆ. ಆನಂತರದ ಹಿಂಗಾರಿನ ಸಮಯದಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರಿನ ಮಧ್ಯದ ಹತ್ತು ದಿನಗಳಲ್ಲಿ ಸುಮಾರು ಹದಿನೈದು ಇಂಚುಗಳಷ್ಟು ಗರಿಷ್ಠ ಮಳೆಯನ್ನು ಉಜಿರೆಯ ಆಸುಪಾಸಿನ ಪ್ರದೇಶಗಳು ಪಡೆದಿತ್ತು.
ಮಳೆಯ ಕಾಲಿಕ ವಿತರಣೆಯನ್ನು ನಕ್ಷತ್ರಗಳಾಧಾರದಲ್ಲೂ ವಿಶ್ಲೇಷಿಸಬಹುದು. 25 ಮೇ-7 ಜುನ್ ರೋಹಿಣಿಯ ಅವಧಿ. ತದನಂತರ ಮೃಗಶಿರಾ, ಆರಿದ್ರಾ, ಪುನರ್ವಸು ನಕ್ಷತ್ರಗಳು ಮುಂದಿನ ಹದಿನಾಲ್ಕು ದಿನಗಳ ಅಂತರದಲ್ಲಿ. ಜುಲೈ ಅಂತ್ಯದಲ್ಲಿ ಪುಷ್ಯ, ಆಗಸ್ಟ್ ಆರಂಭದಲ್ಲಿ ಆಶ್ಲೇಷ; ಹೀಗೆಯೇ ಮುಂದುವರೆದು ಮಳೆಬರುವ ಕೊನೆಯ (ಅಂದರೆ ಗಣನೆಗೆ ತೆಗೆದುಕೊಳ್ಳಬಹುದಾದಷ್ಟು) ಹದಿನಾಲ್ಕು ದಿನಗಳು ಚಿತ್ರಾ ನಕ್ಷತ್ರದವಧಿ. 2016-2020ರ ದೈನಿಕ ಮಳೆಯ ಪ್ರಮಾಣವನ್ನು ನಕ್ಷತ್ರಗಳಾಧಾರದಲ್ಲಿ ವಿಂಗಡಿಸಿ ನೋಡಿದಾಗ ಕೆಲ ಆಕರ್ಷಕ ಮಾಹಿತಿಗಳು ದೊರೆತಿವೆ. 2016, 17 ರಲ್ಲಿ ಜೂನ್ ಅಂತ್ಯದಲ್ಲಿ ಆರಂಭವಾಗುವ ಆದ್ರ್ರಾ ಮಳೆಯೇ ಬಹುಪಾಲು ಆವರಿಸಿಕೊಂಡಿತ್ತು. 2018ರಲ್ಲಿ ಮೃಗಶಿರಾ, ಪುನರ್ವಸು ದಿನಗಳ ಅವಧಿಯು ಆಶ್ಲೇಷಾ (3ರಿಂದ 16 ಆಗಸ್ಟ್) ನಕ್ಷತ್ರದ ಮಳೆಗೆ ಪೈಪೋಟಿಯನ್ನೇ ನೀಡಿವೆ. 2019, 20 ರಲ್ಲಿ ಆಶ್ಲೇಷೆಯ ಮಳೆಯ ಹೊಡೆತವೇ ಜಾಸ್ತಿ. ಆಶ್ಲೇಷಾ ನಂತರ ಮಳೆಯ ಹೊಡೆತ ತುಸು ಮಂದವೇ. ಕೊನೆಗೆ ಚಿತ್ರಾ ಮಳೆಯು ಅಕ್ಟೋಬರಿನ ಅಂತ್ಯದಷ್ಟರಲ್ಲಿ ತುಸು ಅಸ್ಥಿರತೆಯನ್ನು ತೋರಿಸಿವೆ. ವರಕವಿ, ಅವಧೂತ ಕವಿ ಬೇಂದ್ರೆಯವರು-ಕುರುಡು ಪ್ರೀತಿಯ ಹಾಂಗ ಕುರುಡು ಚಿತ್ತಿಯ ಮಳೆಯೆ ಎಂದು ಸಾಂದರ್ಭಿಕವಾಗಿ ಹೇಳಿದ್ದರು. ಈ ಐದು ವರ್ಷಗಳಲ್ಲಿ, ಅಂದರೆ 2016-20ರಲ್ಲಿ ಆಶ್ಲೇಷಾ ಮಳೆಯ ಬದಲಾವಣೆಯ ವ್ಯಾಪ್ತಿ ಹೆಚ್ಚು. ಆದರೆ, ಇದರೊಂದಿಗೆ ಪುನರ್ವಸು ಮಳೆಯ ಬೀಳುವಿಕೆಯಲ್ಲಿ ಸ್ಥಿರತೆ ಹೆಚ್ಚು ಕಂಡುಬಂದಿದೆ. ರೋಹಿಣಿಯಿಂದ ಚಿತ್ರಾನಕ್ಷತ್ರದವರೆಗಿನ ಮಳೆಯ ಪ್ರಮಾಣದಲ್ಲಿ ಭೇದಗಳು ಸ್ವಾಭಾವಿಕವೇ. ಪುನರ್ವಸುವಿನಾನಂತರ ಪುಷ್ಯಕ್ಕೆ ಮಳೆ ತಗ್ಗಿ, ಆನಂತರ ಆಶ್ಲೇಷೆಯ ಕಾಲಕ್ಕೆ ಹೆಚ್ಚುವುದು ವೀಕ್ಷಣೆಗೆ ಕಂಡುಬಂದ ಸಂಗತಿ.
ಮಳೆಯ ಅನುಭೂತಿ ಪ್ರತಿ ವರುಷಕ್ಕೂ ಹೊಸದು. ನಿರಂತರತೆ ಹೆಚ್ಚಾದಲ್ಲಿ ಅಧಿಕ ಮಳೆಯ ಆಭಾಸವಾಗುವುದು ಸಹಜವೇ. ಕವಿಪುಂಗವ ಕುವೆಂಪು "ವರ್ಷ ಭೈರವ"ದಲ್ಲಿ ಸಂಭ್ರಮಿಸಿದಂತೆ ಮಳೆಯು-ಲಯ ರುದ್ರನ ಜಯ ಡಿಂಡಿಮ ಘನ ವಜ್ರದ ರಾವ, ಭವ ವಿಪ್ಲವಕರ ಭೈರವ ವರತಾಂಡವ ಭಾವ!. ಋತುಮಾನಕ್ಕೆ ತಕ್ಕಂತೆ ವರುಣನ ಆಗಮ ಆಗುತಲಿದೆ. ಮರೆಯುವ ಮುನ್ನ, ಹಾಂ! ಈ ಬಾರಿಯದು ವಾಡಿಕೆಗಿಂತ ಉತ್ತಮ ಮಳೆಯಂತೆ.
-ವಿಶ್ವನಾಥ ಭಟ್
ಸಹಾಯಕ ಪ್ರಾಧ್ಯಾಪಕ
ಎಸ್.ಡಿ.ಎಮ್.ಐ.ಟಿ. ಉಜಿರೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ