ಮಂಗಳೂರು: ಮೇರಿಹಿಲ್ನ ಜಿಲ್ಲಾ ಗೃಹರಕ್ಷಕದಳ ಕಛೇರಿ ಆವರಣದಲ್ಲಿ ಸೋಮವಾರ 22ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆ ನಡೆಸಲಾಯಿತು. ಕಾರ್ಗಿಲ್ನಲ್ಲಿ ಹುತಾತ್ಮರಾದವರಿಗೆ ಗೌರವ ನಮನವನ್ನು ಸಲ್ಲಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ|| ಮುರಲೀ ಮೋಹನ್ ಚೂಂತಾರು ವಹಿಸಿದ್ದರು. 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶಕ್ಕಾಗಿ ಮಡಿದ ಆ ಸೈನಿಕರ ಆತ್ಮಗಳಿಗೆ ಭಾವಪೂರ್ಣ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟರು ಮಾತನಾಡಿ, ಪ್ರಾಣವನ್ನೇ ತೆತ್ತ ಸೈನಿಕರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಆ ಸಮಯದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿಯವರು ಶಾಂತಿ ಸಂಧಾನಕ್ಕೆ ಪ್ರಯತ್ನಿಸುತ್ತಿರುವ ಸಮಯದಲ್ಲಿ ಪಾಪಿ ಪಾಕಿಸ್ತಾನ ಕಾರ್ಗಿಲ್ ಪ್ರದೇಶಕ್ಕೆ ಮೋಸದಿಂದ ಸೈನಿಕರನ್ನು ಕಳುಹಿಸಿ ಆಕ್ರಮಣ ಮಾಡಿದ್ದರು. ಆ 74 ದಿನಗಳ ಕಾರ್ಗಿಲ್ ಕದನದಲ್ಲಿ ಭಾರತದ 20,000 ಸೈನಿಕರು ದೇಶಕ್ಕಾಗಿ ಕೆಚ್ಚೆದೆಯಿಂದ ಹೋರಾಡಿದರು, ಸುಮಾರು 500ಕ್ಕೂ ಹೆಚ್ಚು ಸೈನಿಕರು ದೇಶಕ್ಕಾಗಿ ತಮ್ಮನ್ನೇ ಬಲಿದಾನ ಮಾಡಿ ಹುತಾತ್ಮರಾದರು. ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲ ಹಾರೈಸೋಣ ಎಂದರು.
ಈ ಸಂದರ್ಭದಲ್ಲಿ ಕಛೇರಿ ಅಧೀಕ್ಷಕರಾದ ರತ್ನಾಕರ್ ಹಾಗೂ ಗೃಹರಕ್ಷಕರಾದ ದಿವಾಕರ್, ದುಷ್ಯಂತ್ ರೈ, ಮಹೇಶ್ ಪ್ರಸಾದ್, ಶುಭ ಕುಲಾಲ್, ಸುಲೋಚನಾ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.