ಉಜಿರೆ: ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅವಕಾಶಗಳೂ ಮತ್ತು ಸವಾಲುಗಳೂ ಅಪಾರ. ಯಾವುದೇ ವ್ಯವಹಾರಗಳಲ್ಲಿ ತೊಡಗಿಸಿಕೊಂಡಾಗ ವಿಫಲರಾಗುತ್ತೇವೆ ಎಂದು ಹಿಂದೇಟು ಹಾಕಬಾರದು. ಅಂತಿಮವಾಗಿ ತಲುಪಬೇಕಾದ ಗುರಿಯ ಬಗ್ಗೆ ಕನಸುಗಳನ್ನು ಕಾಣಬೇಕು ಎಂದು ಕೆನರಾ ಬ್ಯಾಂಕಿನ ಉಪಮಹಾ ಪ್ರಬಂಧಕರಾದ ಪ್ರದೀಪ್. ಆರ್. ಭಕ್ತ ಅವರು ಕರೆ ನೀಡಿದರು.
ಶ್ರೀ ಪ್ರದೀಪ್. ಅರ್.ಭಕ್ತ ಅವರು ಉಜಿರೆಯ ರುಡ್ಸೆಟ್ ಸಂಸ್ಥೆ ಹಾಗೂ ಶ್ರೀ ಧ. ಮಂ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕೋಶ ಜಂಟಿಯಾಗಿ ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ಆಯೋಜಿಸಿದ ಆನ್ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
ರುಡ್ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಗಿರಿಧರ ಕಲ್ಲಾಪುರೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಪ್ರಪಂಚದಾದ್ಯಂತ ಯುವಕರು ಇಂದು ಅವರ ಪೋಷಕರು ಎದುರಿಸಿದ ಸವಾಲುಗಳಿಗಿಂತ ಮೂಲಭೂತವಾಗಿ ಭಿನ್ನವಾದ ಕೌಶಲ್ಯ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದಂತೆ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೌಶಲ್ಯವರ್ಧನೆಗೆ ಒತ್ತು ನೀಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ. ಜಯಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅವಕಾಶಗಳೂ ಮತ್ತು ಸವಾಲುಗಳೂ ಅಪಾರ. ಆಧುನಿಕ ಉದ್ಯೋಗಗಳಿಗೆ ಯುವಕರನ್ನು ಸಿದ್ಧಪಡಿಸುವದು ಮತ್ತು ಮಾನವ ಸಂಪನ್ಮೂಲ ಯೋಜನೆ ಪ್ರಸಕ್ತ ಕಾಲದ ಕಾಳಜಿಯು ಆಗಿದೆ ಎಂದು ತಿಳಿಸಿದರು.
ರುಡ್ಸೆಟಿಯಲ್ಲಿ ತರಬೇತಿ ಪಡೆದು ಯಶಸ್ವೀ ಸ್ವ ಉದ್ಯೋಗಿಯಾಗಿರುವ ಜಗ್ಗೇಶ್ ಮೂಡಿಗೆರೆ ಅವರು ಕೋವಿಡ್ ಸಮಯದಲ್ಲಿ ತಾನು ಅಳವಡಿಸಿದ ವ್ಯವಹಾರ ಚತುರತೆಯ ಬಗ್ಗೆ ಅನುಭವ ಹಂಚಿಕೊಂಡರು.
ಕಾಲೇಜಿನ ಉಪನ್ಯಾಸಕರಾದ ಹರೀಶ್ ಶೆಟ್ಟಿ ಹಾಗೂ ಅಭಿನಂದನ್ ಜೈನ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ರುಡ್ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕಿ ಶ್ರೀಮತಿ ಅನಸೂಯಾ ಸ್ವಾಗತಿಸಿ, ಹಿರಿಯ ಉಪನ್ಯಾಸಕ ಜೇಮ್ಸ್ ಅಬ್ರಹಾಂ ವಂದಿಸಿದರು. ಕಾರ್ಯಕ್ರಮದಲ್ಲಿ ರುಡ್ಸೆಟ್ ಸಂಸ್ಥೆಯ ಸಿಬ್ಬಂಧಿ ಹಾಗೂ ತರಬೇತಿ ಪಡೆದವರು, ಆಸರೆಯ ಪದಾಧಿಕಾರಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Key Words: World Youth Skill Day, SDMC Ujire, Rudset, ವಿಶ್ವ ಯುವ ಕೌಶಲ್ಯ ದಿನ, ಎಸ್‌ಡಿಎಂ ಕಾಲೇಜು ಉಜಿರೆ, ರುಡ್‌ಸೆಟ್
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ