ಯೋಚನೆ ಮಾಡೋಣ, ನಾವು ಯಾಕೆ ಬದಲಾಗಬಾರದು?

Upayuktha
0


 

ಅಂದು ನಾವೊಂದು ಪತಿ ಆತ್ಮಹತ್ಯೆ ಮಾಡಿಕೊಂಡು, 2 ಚಿಕ್ಕ ಮಕ್ಕಳನ್ನು ಹಾಗೂ ದುಃಖದಲ್ಲಿರುವ 35 ವರ್ಷದ ಪತ್ನಿಯನ್ನು ಸಂತೈಸಲು ಅವರ ಮನೆಗೆ ಹೋಗಿದ್ದೆವು.


ಅರ್ಧ ಗಂಟೆಯ ಅಳುವಿನ ನಂತರ ಆ ದಿಟ್ಟೆ ಹೇಳಿದ ಮಾತುಗಳು ಕಿವಿಯಲ್ಲಿ ಬಹಳಷ್ಟು ಹೊತ್ತು ಝೇಂಕರಿಸುತ್ತಿತ್ತು.


ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅವರು ಅದ್ಯಾಕೆ ಈ ನಿರ್ಧಾರ ಮಾಡಿದರೋ ಗೊತ್ತಿಲ್ಲ- ಎಂದವಳೇ ಮುಖದಲ್ಲಿ ರೋಷ ತಂದುಕೊಂಡು ಗಂಡನ ಮೊಬೈಲ್ ತೋರಿಸಿ  ಹೇಳಿದ್ದಿಷ್ಟೇ...


"ನೋಡಿ ಅಣ್ಣ ಇದು ಇವರ ಫೇಸ್ ಬುಕ್ ಅಕೌಂಟ್. ಸುಮಾರು 4000+ ಇದ್ದಾರೆ ಗೆಳೆಯರು, ಸುಮಾರು 400 ಜನ ಇವರು ತೀರಿಕೊಂಡದ್ದಕ್ಕೆ ದೊಡ್ಡ ಫೋಟೋ ತಮ್ಮ ತಮ್ಮ ವಾಲ್‌ನಲ್ಲಿ ಹಾಕಿ ಆತ ಪರೋಪಕಾರಿ ಹಾಗೆ ಹೀಗೆ ಎನ್ನುತ್ತಿದ್ದಾರೆ, ಅದೇ ಮಾತುಗಳನ್ನು ಅವರಿರುವಾಗಲೇ ಹೇಳಿದ್ದರೆ, ವ್ಯಾಪಾರದಲ್ಲಿ ಸೋತಾಗ ಬಂದು ಸಮಾಧಾನದ ಮಾತುಗಳನ್ನಾಡಿದ್ದಲ್ಲಿ, ನಾವಿದ್ದೇವೆ ಎಂದು ಹೇಳಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಲ್ಲಿ ಇಂದು ನನ್ನವರು ಖಂಡಿತ ಇರುತ್ತಿದ್ದರು ನನ್ನೊಂದಿಗೆ.  ಆದರೆ ಇದೇ ಜನರು ಅಂದು ಅವರು ಸೋತಾಗ ವ್ಯಂಗ್ಯ ಮಾಡಿದರು, ಚುಚ್ಚಿ ನುಡಿದಿದ್ದರು, ಇದೇ ಸ್ಟೇಟಸ್ ಹಾಕಿದ್ದ ಗೆಳೆಯರೇ ಅವರ ವ್ಯಾಪಾರಕ್ಕೆ ಕಲ್ಲು ಹಾಕಿದ್ದರು, ಕಾಲೆಳೆದಿದ್ದರು. ಇಂದು ಫೇಸ್ಬುಕ್ ವಾಲ್‌ನಲ್ಲಿ ದೊಡ್ಡ ದೊಡ್ಡ ಸಾಲುಗಳನ್ನು ಬರೆದು ಸಮಾಜದೆದುರು ನಾಟಕ ಮಾಡುತ್ತಿದ್ದಾರೆ, ಎನ್ನುವಾಗ ಆಕೆಯ ಕಣ್ಣೀರು ಮತ್ತೆ ಉಕ್ಕಿ ಹರಿಯುತಿತ್ತು.


ಅಲ್ಲಿ ನಿಲ್ಲಲು ಮನಸ್ಸಾಗಿರಲಿಲ್ಲ ಹೊರಬಂದೆ ಅಲ್ಲಿಂದ. ಆಕೆಯ ಮಾತು ಅದೆಷ್ಟು ಸತ್ಯ ನೋಡಿ.  ನಾವು ನೀವೆಲ್ಲರೂ ಇದೇ ದುಷ್ಟ ಸಮಾಜದ ಭಾಗಗಳು. ಇಂದು ಫೇಸ್ ಬುಕ್ ವಾಲ್ ಗಳಲ್ಲಿ ವಾಟ್ಸಪ್ ಸ್ಟೇಟಸ್ ಗಳಲ್ಲಿ ಒಬ್ಬ ವ್ಯಕ್ತಿ, ಇನ್ನೊಬ್ಬನ ಫೋಟೋ ಹಾಕಿದನೆಂದರೆ ಒಂದೋ ಅವನ ಹುಟ್ಟಿದ ದಿನಕ್ಕೆ ಶುಭಾಶಯ ಕೋರಲು, ಇಲ್ಲ ಅವನ ಸಾವಿಗೆ ಸಂತಾಪ ಸೂಚಿಸಲು.


ಯಾಕೆ ಇವೆರಡನ್ನು ಬಿಟ್ಟು ಆ ವ್ಯಕ್ತಿಯ ಜೀವನವನ್ನು, ಅವನ ಒಳ್ಳೆಯ ಕೆಲಸಗಳನ್ನು, ಅವ ಮಾಡುವ ವ್ಯಾಪರವನ್ನು, ಅವನಿಗೆ ಸಹಾಯವಾಗುವ ವಿಚಾರಗಳನ್ನು ಅವ ಜೀವಂತ  ಇರುವಾಗಲೇ ಸ್ಟೇಟಸ್‌ಗಳಲ್ಲಿ ಹಾಕಿ ಶೇರ್ ಮಾಡಬಾರದು?


ಅವನ ಕಾಲೆಳೆಯುವುದು ಬಿಟ್ಟು ಆತ ವ್ಯಾಪಾರದಲ್ಲಿ ಯಶಸ್ಸಾದಾಗ, ಹೊಸ ಮನೆ, ಹೊಸಕಾರು ಕೊಂಡಾಗ ಮನಸ್ಸಿನಿಂದ ಶುಭಾಶಯ ಕೋರಿ ಬರಬಾರದು?


ಹಾಗೆ ವ್ಯಾಪಾರದಲ್ಲಿ ಸೋತಾಗ ಆತನ ಕಾಲೆಳೆಯುವುದ ಬಿಟ್ಟು ಅವನಿಗೆ ಧೈರ್ಯ ತುಂಬಿ ಮಾನಸಿಕವಾಗಿ ಅವನನ್ನು ಬಲಗೊಳಿಸುವ ಕೆಲಸ ಮಾಡೋಣವೇ?


ಆವ ಸತ್ತಾಗ ಹೊಗಳುವುದ ಬಿಟ್ಟು ಆವ ಇರುವಾಗಲೇ ಪ್ರೋತ್ಸಾಹಿಸಿ ಬೆನ್ನುತಟ್ಟುವ ಕೆಲಸ ಇಂದಿನಿಂದಲೇ ಮಾಡೋಣವೇ?


ಸತ್ಯ ತಾನೇ ಗೆಳೆಯರೇ, ಯೋಚಿಸಿ ನೋಡಿ. ನಾವು ಯಾಕೆ ಬದಲಾಗಬಾರದು?


-ಡಾ. ಶಶಿಕಿರಣ್ ಶೆಟ್ಟಿ, ಉಡುಪಿ 

9945130630 (ವಾಟ್ಸಪ್)


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top