ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮದ ಶ್ರೀಮತಿ ಶೋಭಾ ಹಾಗೂ ಸುಬ್ಬರಾವ್ ಇವರ ಮಗನಾಗಿ ದಿನಾಂಕ 19.04.1994ರಂದು ಇವರ ಜನನ. B.COM ಇವರ ವಿದ್ಯಾಭ್ಯಾಸ. ಯಕ್ಷಗಾನ ಹೆಜ್ಜೆಗಾರಿಕೆಯನ್ನು ಇವರು ಪ್ರಥಮವಾಗಿ ಕಲಿತದ್ದು ಯಕ್ಷಗಾನ ಕ್ಯಾಸೆಟ್ ನೋಡಿ. ಸುಧೀರ್ ಉಪ್ಪೂರು ಅವರ ಮಾವ ಆನಂದ್ ಉಪ್ಪಿನಕುದ್ರು ಅವರು ಪ್ರಸಿದ್ಧ ಸ್ತ್ರೀ ವೇಷಧಾರಿ, ಪ್ರಸ್ತುತ ಸೌಕೂರು ಮೇಳದಲ್ಲಿ ಪ್ರಧಾನ ಸ್ತ್ರೀ ವೇಷಧಾರಿ. ಅವರ ವೇಷಗಳನ್ನು ನೋಡಿದ ಇವರು ಮುಂದೆ ಇವರ ಹಾಗೆಯೇ ವೇಷ ಮಾಡಬೇಕು ಎಂಬ ಆಸೆ ಇತ್ತು, ಇದುವೇ ಇವರಿಗೆ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಆಯಿತು ಎಂದು ಸುಧೀರ್ ಉಪ್ಪೂರು ಅವರು ಹೇಳುತ್ತಾರೆ.
ಸುಧೀರ್ ಉಪ್ಪೂರು ಅವರು ತಮ್ಮ ಪ್ರಾಥಮಿಕ ಯಕ್ಷಗಾನ ನಾಟ್ಯವನ್ನು ವಿನಾಯಕ ಯಕ್ಷಗಾನ ಸಂಘ ಕೆ.ಜಿ ರೋಡ್ ಉಪ್ಪೂರು ಮತ್ತು ನಾಗಲಿಂಗೇಶ್ವರ ಯಕ್ಷಗಾನ ಸಂಘ ಅಗ್ರಹಾರ ಹೇರೂರು ಸಂಘಗಳಲ್ಲಿ ವೇಷಗಳನ್ನು ಮಾಡಿರುತ್ತಾರೆ. ದಿವಂಗತ ರಾಘವೇಂದ್ರ ನಾಯಕ್ ಕರಂಬಳ್ಳಿ ಇವರ ಯಕ್ಷಗಾನದ ಗುರುಗಳು. ನಾಗಲಿಂಗೇಶ್ವರ ಸಂಘದಲ್ಲಿ ಇವರ ಗುರುಗಳು ಹಲವು ಪ್ರಸಂಗದ ವೇಷಗಳನ್ನು ಮಾಡಿಸಿ ರಂಗ ನಡೆಯನ್ನು ತಿಳಿಸಿಕೊಟ್ಟಿದ್ದಾರೆ. ನಾನು ಹೈಸ್ಕೂಲ್ ಗೆ ಹೋಗುವಾಗ ನೀಲ್ಕೋಡು ಶಂಕರ ಹೆಗಡೆಯವರ ವೇಷವನ್ನು ಕ್ಯಾಸೆಟ್ ನಲ್ಲಿ ನೋಡಿ ಅವರಂತೆಯೇ ಕುಣಿಯುತ್ತಿದ್ದೆ. ಅವರ ಅಭಿನಯವನ್ನು ನೋಡಿ ಮನೆಯಲ್ಲಿ ಅಭಿನಯಸುತ್ತಿದ್ದೆ ಎಂದು ಸುಧೀರ್ ಉಪ್ಪೂರು ಅವರು ಹೇಳುತ್ತಾರೆ.
ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳಲ್ಲಿ ವೇಷ ಮಾಡಲು ತುಂಬಾ ಇಷ್ಟಪಡುತ್ತೇನೆ ಎಂದು ಸುಧೀರ್ ಅವರು ಹೇಳುತ್ತಾರೆ. ಹಟ್ಟಿಯಂಗಡಿ ಮೇಳದಲ್ಲಿರುವಾಗ "ಮಂತ್ರ ಮಯೂರಿ" ಪ್ರಸಂಗದ ಮಯೂರಿ ಪಾತ್ರ ಇವರಿಗೆ ಒಳ್ಳೆಯ ಹೆಸರು ಕೊಟ್ಟಿತ್ತು ಎಂದು ಸುಧೀರ್ ಉಪ್ಪೂರು ಅವರು ಹೇಳುತ್ತಾರೆ.
ರಂಗಕ್ಕೆ ಹೋಗುವ ಮೊದಲು ಯಾವುದೇ ಪಾತ್ರ ಬಂದಾಗ ಹಿರಿಯ ಕಲಾವಿದರ ಬಳಿ ಕೇಳಿ ಪಾತ್ರಕ್ಕೆ ಬೇಕಾದ ವಿಷಯವನ್ನು ಬರೆದಿಟ್ಟುಕೊಂಡು ತಯಾರಾಗುತ್ತೇನೆ ಹಾಗೂ ಎಂ.ಕೆ ರಮೇಶ್ ಆಚಾರ್ಯ, ಕೊಂಡದಕುಳಿ ರಾಮಚಂದ್ರ ಹೆಗಡೆ, ಜಯನಂದ್ ಹೊಳೆಕೊಪ್ಪ, ಸುರೇಶ್ ಶೆಟ್ಟಿ ಶಂಕರನಾರಾಯಣ ಮುಂತಾದ ಹಲವು ಹಿರಿಯ ಕಲಾವಿದರು ಹೆಚ್ಚಿನ ಮಾಹಿತಿಯನ್ನು ಹೇಳಿಕೊಟ್ಟಿದ್ದಾರೆ ಎಂದು ಸುಧೀರ್ ಉಪ್ಪೂರು ಅವರು ಹೇಳುತ್ತಾರೆ.
ಇವರು ತಮ್ಮ ಡಿಗ್ರಿ ಮುಗಿಸಿದ ಬಳಿಕ ಧಾರೇಶ್ವರ ಭಾಗವತರ ನಿರ್ದೇಶನದ ನೀಲಾವರ ಮೇಳಕ್ಕೆ ಸೇರಿದರು.ಅದು ಇವರ ಯಕ್ಷ ಪಯಣಕ್ಕೆ ಭದ್ರ ಪಂಚಾಂಗವಾಗಿತ್ತು ಎಂದು ಉಪ್ಪೂರು ಅವರು ಹೇಳುತ್ತಾರೆ. ಧಾರೇಶ್ವರ ಭಾಗವತರ ರಂಗ ನಡೆ, ಪಾತ್ರದ ನಿರ್ವಹಣೆಯನ್ನು, ಎದುರು ಪಾತ್ರಧಾರಿ ನಡೆಸುವ ಸಂಭಾಷಣೆ ಯಾವ ಪಾತ್ರಕ್ಕೆ ಎಷ್ಟು ನಾಟ್ಯ ಮಾಡಬೇಕು ಅದೆಲ್ಲವನ್ನು ನೀಲಾವರ ಮೇಳದಲ್ಲಿ ಧಾರೇಶ್ವರ ಭಾಗವತರು ನನಗೆ ಹೇಳಿಕೊಟ್ಟಿದ್ದಾರೆ ಎಂದು ಉಪ್ಪೂರು ಅವರು ಹೇಳುತ್ತಾರೆ.
ನೀಲಾವರ ಮೇಳದ ತಿರುಗಾಟದ ನಂತರ ಶ್ರೀಯುತ ರಂಜಿತ್ ಶೆಟ್ಟಿಯವರ ಯಜಮಾನಿಕೆಯ ಹಟ್ಟಿಯಂಗಡಿ ಮೇಳದಲ್ಲಿ ಶ್ರೀಯುತ ಹಳ್ಳಾಡಿ ಜಯರಾಮ ಶೆಟ್ಟರಂತಹ ಹಿರಿಯ ಕಲಾವಿದರ ಜೊತೆಯಲ್ಲಿ ಬೇಳೂರು ವಿಷ್ಣುಮೂರ್ತಿ ನಾಯಕ್ ಅವರ ನಿರ್ದೇಶನದಲ್ಲಿ ಅವರ ಹೊಸ ಪ್ರಸಂಗದಲ್ಲಿ ನಾಲ್ಕು ವರ್ಷ ತಿರುಗಾಟ ಮಾಡಿ ಪ್ರಸ್ತುತ ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಪೆರ್ಡೂರು ಮೇಳದಲ್ಲಿ ಹಿರಿಯ ಕಲಾವಿದರಾದ ವಿದ್ಯಾಧರ ಜಲವಳ್ಳಿ, ಮೇಳದ ಪ್ರಧಾನ ಸ್ತ್ರೀ ವೇಷಧಾರಿ ಶ್ರೀಯುತ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರು ಹಲವು ವಿಚಾರವನ್ನು ಹೇಳಿಕೊಡುತ್ತಿದ್ದಾರೆ ಎಂದು ಉಪ್ಪೂರು ಅವರು ಹೇಳುತ್ತಾರೆ.
"ನಾನು ಕಲಾವಿದನಾಗಿ ಬೆಳೆಯುವಲ್ಲಿ ಪ್ರೋತ್ಸಾಹಿಸಿದ ಗುರು ಹಿರಿಯರಿಗೂ, ಹಿರಿಯ ಕಲಾವಿದರಿಗೂ, ಮಿತ್ರರಿಗೂ, ಕುಟುಂಬದವರಿಗೂ ಅನಂತ ಅನಂತ ಧನ್ಯವಾದಗಳು" ಎಂದು ಉಪ್ಪೂರು ಅವರು ಹೇಳುತ್ತಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photo Click: Ashok_Donderangadi
-ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
+91 8971275651
Key Words: Yakshagana, Sudheer Uppooru, Profile
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ