ಪರಿಚಯ: ಬಡಗುತಿಟ್ಟು ಯಕ್ಷಗಾನದ ಯುವ ಭಾಗವತರು- ಪಲ್ಲವ ಗಾಣಿಗ ಹೇರಂಜಾಲು

Upayuktha
0


ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಅನೇಕ ಯುವ ಭಾಗವತರು ಕಾಣಲು ಸಿಗುತ್ತಾರೆ. ಇಂತಹ ಅನೇಕ ಯುವ ಭಾಗವತರ ಸಾಲಿನಲ್ಲಿ ಸದ್ಯ ಮಿಂಚುತ್ತಿರುವ ಯುವ ಭಾಗವತರು ಶ್ರೀಯುತ ಪಲ್ಲವ ಗಾಣಿಗ ಹೇರಂಜಾಲು.


ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ಹಾಗೂ ಸುಪ್ರಸಿದ್ಧ ಭಾಗವತರು ಶ್ರೀಯುತ ಗೋಪಾಲ ಗಾಣಿಗ ಹೇರಂಜಾಲು ಹಾಗೂ ಸಾವಿತ್ರಿ‌ ಗಾಣಿಗ ಇವರ ಮಗನಾಗಿ ದಿನಾಂಕ 07.06.1995 ರಂದು ಇವರ ಜನನ. ಡಿಪ್ಲೊಮಾ ಸಿರಾಮಿಕ್ಸ್ ಇವರ ವಿದ್ಯಾಭ್ಯಾಸ. ಯಕ್ಷಗಾನ ರಕ್ತಗತವಾಗಿ ಬಂದ ಕಲೆ. ಯಕ್ಷಗಾನ ಕಲಿಕಾ ಕೇಂದ್ರವೇ ಇವರು ಹುಟ್ಟಿದ ಮನೆ. ಇದರಿಂದಲೇ  ಚಿಕ್ಕಂದಿನಿಂದಲೇ ತಾಳ ಚಂಡೆ ಮದ್ದಳೆ ನೃತ್ಯ ನೋಡುತ್ತಾ ಬೆಳೆದ ಇವರು ಇದುವೇ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಎಂದು ಪಲ್ಲವ ಗಾಣಿಗ ಅವರು ಹೇಳುತ್ತಾರೆ.


ಮನೆಯೇ ಯಕ್ಷಗಾನ ಕೇಂದ್ರವಾದ ಕಾರಣ  ಬಾಲ್ಯದಿಂದಲೇ ಇವರ ಅಜ್ಜನ ಬಳಿ ಅನೇಕ ಜನ ಯಕ್ಷಗಾನ ಅಭ್ಯಾಸಕ್ಕೆ ಬರುತ್ತಿದ್ದರು. ಅವರ ತರಗತಿಗಳನ್ನು ನೋಡಿ ಆಸಕ್ತಿ ಮೂಡಿತ್ತು. ತಾಳಗಳ ಪ್ರಾಥಮಿಕ ಅಭ್ಯಾಸವನ್ನು ಅವರಲ್ಲೇ ಮಾಡಿದೆ. ತಂದೆಯವರೊಂದಿಗೆ ಆಟಗಳಿಗೆ ಹೋಗಿ ನೋಡಿ, ತಿಳಿಯದೆ ಇರುವುದನ್ನು ತಂದೆಯವರಲ್ಲಿ ಕೇಳಿ  ಒಂದು ದಿನ ಧೈರ್ಯದಿಂದ ಶ್ರಾವಣ ಬಂತು ಎನ್ನುವ ಹಾಡಿಗೆ ರಂಗ ಏರಿದೆ ಎಂದು ಪಲ್ಲವ ಗಾಣಿಗ ಅವರು ಹೇಳುತ್ತಾರೆ.


5 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆ ಮಾಡುತ್ತಿರುವ ಇವರು ಅಮೃತೇಶ್ವರಿ, ಸಿಗಂಧೂರು, ಕಲಾಧರ ಯಕ್ಷಬಳಗದಲ್ಲಿ ತಿರುಗಾಟ ಮಾಡಿದ ಅನುಭವ ಇವರಿಗೆ ಇದೆ. ಕುಶ-ಲವ, ಕಾಳಿದಾಸ, ವೀರ ವೃಷಸೇನ, ಸುದರ್ಶನ ವಿಜಯ, ಪಾಂಚಜನ್ಯ, ಕನಕಾಂಗಿ ಕಲ್ಯಾಣ, ಬರ್ಬರಿಕ, ಮಾರುತಿ ಪ್ರತಾಪ, ರತ್ನಾವತಿ, ಬೃಹ್ಮಕಪಾಲ ಪಂಚವಟಿ ಇವರ ನೆಚ್ಚಿನ ಪ್ರಸಂಗಗಳು.


ಛಾಂದ್,ವಾಸಂತಿ, ಕಲ್ಯಾಣಿ, ನೀಲಾಂಬರಿ, ಕಲ್ಯಾಣ, ಭೀಮ್ ಪಲಾಸ್, ಬ್ರಂದಾವನ ಸಾರಂಗ, ಬಹುದಾರೆ, ಜೋಗ್, ದೇಸ್, ಕಲಾವತಿ, ಮಧುವಂತಿ, ಕರಹರಪ್ರೀಯ, ಹಿಂದೋಳ, ಮಾಂಡ್, ಚಕ್ರವಾಕ್, ಪೂರ್ಯದನ್ಯಶ್ರೀ, ಸರಸ್ವತಿ ಇವರ ನೆಚ್ಚಿನ ರಾಗಗಳು.


ರಾಕೇಶ್ ಮಲ್ಯ, ಶಿವಾನಂದ್ ಕೋಟ, ಸುಜನ್ ಹಾಲಾಡಿ, ಸುನೀಲ್ ಭಂಡಾರಿ, ಎನ್‌.ಜಿ.ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಪರಮೇಶ್ವರ ಭಂಡಾರಿ ಕರ್ಕಿ,ಅಕ್ಷಯ್ ಆಚಾರ್ಯ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು.


ತಂದೆಯವರಾದ ಹೇರಂಜಾಲ್ ಗೋಪಾಲ ಗಾಣಿಗರು, ಜನ್ಸಾಲೆ, ಹಿಲ್ಲೂರ್, ಬಾಳ್ಕಲ್, ನಗರ ಇವರ ನೆಚ್ಚಿನ ಭಾಗವತರು.

ಇವರ ಕಲಾಕೇಂದ್ರದಲ್ಲಿ ತಂದೆಯವರ ನಿರ್ದೇಶನದಲ್ಲಿ ಕೆಲವು ವೇಷಗಳನ್ನು ಮಾಡಿರುತ್ತೇನೆ. ಆದರೆ ಇವಾಗ ವೇಷ ಮಾಡುವ ಆಸಕ್ತಿ ಇಲ್ಲ ಎಂದು ಹೇಳುತ್ತಾರೆ. ಹಲವು ರಾಗಗಳನ್ನು ಕಲಿಯುವುದು ಹಾಗೆ ಹಿಂದುಸ್ತಾನಿ ಸಂಗೀತವನ್ನು ಕೇಳುವುದು ಇವರ ಹವ್ಯಾಸಗಳು.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-

ಹಿರಿಯರ ವಿದ್ವತ್, ಈಗಿನ ಅಭ್ಯಾಸ ಕೊರತೆ, ಒಂದು ರೀತಿಯ ಹೊಣೆಗಾರಿಕೆಯನ್ನು ಹೊರಿಸುತ್ತಿದೆ, ಹೊಸತನದಲ್ಲಿ ಬೆರೆಯುತ್ತಿರುವ ಈಗಿನ ಸ್ಥಿತಿ ಹಿರಿಯರ ದಾರಿಯನ್ನು ಮರೆಯದಿರಲಿ ಎಂದು ಪಲ್ಲವ ಗಾಣಿಗ ಅವರು ಹೇಳುತ್ತಾರೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಎಲ್ಲಾ ರೀತಿಯಲ್ಲೂ ಎಚ್ಚರಿಸುವ ಪ್ರೇಕ್ಷಕವರ್ಗ, ಉದಾಹರಣೆಗೆ ಕೆಲವೆಡೆ ಸಾಂದರ್ಭಿಕವಾಗಿ ರಾಗ ಬದಲಾದರೆ, ಚೌಕಿಗೆ ಬಂದು ತಂದೆಯವರ ರಾಗವೇ ಚಂದ ಆ ಶೈಲಿಯಲ್ಲಿ ಮುಂದುವರೆಸಿ ಎನ್ನುವ ಎಷ್ಟ್ತೋ ಯಕ್ಷಭಿಮಾನಿಗಳನ್ನು ನೋಡಬಹುದು, ಕಥೆಯಲ್ಲಿ ಮಾತ್ರವೇ ಅಲ್ಲದೇ ಸಂಪ್ರದಾಯ, ಶೈಲಿಗಳಲ್ಲೂ ಪ್ರಭುದ್ದ ಪ್ರೇಕ್ಷಕ ವರ್ಗ ನಮ್ಮ ಅಭ್ಯಾಸವನ್ನು ಹೆಚ್ಚು ಮಾಡುವಂಥದ್ದು ಎಂದು ಪಲ್ಲವ ಗಾಣಿಗ ಅವರು ಹೇಳುತ್ತಾರೆ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು ಕೇಳಿದಾಗ ಹೀಗೆ ಹೇಳುತ್ತಾರೆ:-

ಕಲಾವಿದರ ಮನೆಯಲ್ಲಿ ಹುಟ್ಟಿದರೆ ನಮ್ಮದೇ ಆದ ಒಂದು ಜವಾಬ್ದಾರಿ ಹೆಗಲೇರುತ್ತದೆ, ಅವರು ಗಳಿಸಿದ ಕೀರ್ತಿ ಉಳಿಸಿಕೊಂಡು ಹೋಗುವುದೇ ಧ್ಯೇಯ. ಅಜ್ಜಯ್ಯ ಹಾಗೂ ತಂದೆಯವರ ಕನಸು, ಯೋಜನೆಗಳನ್ನು ಪೂರೈಸುವಲ್ಲಿ ಶ್ರಮಿಸುವುದು ಎಂದು ಪಲ್ಲವ ಗಾಣಿಗ ಅವರು ಹೇಳುತ್ತಾರೆ.


2016 ರಲ್ಲಿ ಯುವ ಭಾಗವತ ಪ್ರಶಸ್ತಿ ಹೀಗೆ ಕೆಲವು ಸಂಘ ಸಂಸ್ಥೆಗಳಿಂದ ಇವರ ಪ್ರತಿಭೆಯನ್ನು ನೋಡಿ ಇವರಿಗೆ ಸನ್ಮಾನ ಮಾಡಿರುತ್ತದೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

- +91 8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top