ಪರಿಚಯ: ಯಕ್ಷ ಮೇನಕೆ ಮಹೇಶ್ ಕುಮಾರ್ ಸಾಣೂರು

Upayuktha
0

 



ಕರಾವಳಿಗರ ಮನೆ ಮನಗಳಲ್ಲಿ ಯಕ್ಷಗಾನ ಕಲೆ ಬೆರೆತಿದೆ. ಕಿರಿಯ ವಯಸ್ಸಿನಿಂದಲೇ ಯಕ್ಷಗಾನ ಕಲೆ ಕರಗತ ಮಾಡಿಕೊಂಡು, ಇದೀಗ ಈ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಯುವ ಯಕ್ಷಗಾನ ಕಲಾವಿದ  ಶ್ರೀಯುತ ಮಹೇಶ್ ಕುಮಾರ್ ಸಾಣೂರು.


ಕಾರ್ಕಳ ತಾಲ್ಲೂಕಿನ ಸಾಣೂರು ಗ್ರಾಮದ ಮಹಾಬಲ ಪೂಜಾರಿ ಹಾಗೂ ವಿಶಾಲ ಪೂಜಾರಿ ದಂಪತಿಗಳ ಮೂರು ಮಕ್ಕಳಲ್ಲಿ ಹಿರಿಯ ಮಗನಾಗಿ ಜುಲೈ 30ರಂದು ಮಹೇಶ್ ಕುಮಾರ್ ಇವರ ಜನನ. ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾದ ಇವರು ವೃತ್ತಿಯಲ್ಲಿ ಉಪನ್ಯಾಸಕರು, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದ. ಎಳವೆಯಲ್ಲಿ ಊರಿನಲ್ಲಿ ಬಹಳಷ್ಟು ಟೆಂಟು ಮೇಳದ ಆಟಗಳು ಆಗುತ್ತಿದ್ದ ಕಾಲದಲ್ಲಿ ಅಪ್ಪ ಅಮ್ಮನ ಜೊತೆಗೆ ಸಾಕಷ್ಟು ಯಕ್ಷಗಾನವನ್ನು ಕಂಡ ಬಾಲಕ ಮಹೇಶ್ ನಿಧಾನವಾಗಿ ಯಕ್ಷಗಾನದತ್ತ ಆಸಕ್ತಿ ಬೆಳೆಸಿಕೊಂಡರು. ಇದಕ್ಕೆ ಇನ್ನೊಂದು ಕಾರಣ ತಾನು ಸ್ವತಃ ಶಾರದ ಮಣಿ ಶೇಖರ ಅವರಲ್ಲಿ ಅಭ್ಯಾಸ ಮಾಡುತ್ತಿದ್ದ ಭರತನಾಟ್ಯವೂ ಆಗಿತ್ತೋ ಏನೋ, ಅಂತೂ ಯಕ್ಷಗಾನದತ್ತ ಆಕರ್ಷಣೆ ಹೆಚ್ಚಿದ್ದು ದಿಟ.


ರಂಗಕ್ಕೆ ಹೋಗುವ ಮೊದಲು ಯಾವ ರೀತಿ ತಯಾರಿ ಮಾಡಿಕೊಳ್ಳುತ್ತಿರ ಎಂದು ಕೇಳಿದಾಗ ಅವರು ಹೀಗೆ ಹೇಳುತ್ತಾರೆ ಆ ದಿನದ ಪ್ರಸಂಗದ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿ ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಸಾಣೂರು ಅವರು ಹೇಳುತ್ತಾರೆ.


ತೆಂಕುತಿಟ್ಟು ನಾಟ್ಯ ಅಭ್ಯಾಸವನ್ನು ಗುರುಗಳಾದ ಮಹಾವೀರ ಪಾಂಡಿ ಕಾಂತಾವರ ಇವರ ಬಳಿ ಕಲಿತು, ಬಡಗುತಿಟ್ಟಿನ ಹೆಜ್ಜೆಗಳನ್ನು ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ ಹಾಗೂ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಇವರ ಬಳಿ ಅಭ್ಯಾಸ ಮಾಡಿದ ಮಹೇಶ್, ಆರಂಭದ ದಿನಗಳಲ್ಲಿ ಯಕ್ಷಗಾನ ಸಂಘ ಸಂಸ್ಥೆಗಳಲ್ಲಿ ವೇಷ ಮಾಡುತ್ತಾ ಮುಂದೆ ಶಾಲಾ ರಜಾದಿನಗಳಲ್ಲಿ ಮೇಳಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿ ಅನುಭವ ಪಡೆಯುತ್ತಾ ವೃತ್ತಿಪರತೆಯನ್ನು ಮೈಗೂಡಿಸಿಕೊಂಡರು.


ಮುಂದೆ ಯಕ್ಷಗಾನದಲ್ಲಿ ಪೂರ್ಣ ಪ್ರಮಾಣದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಅಂತ ನಿಶ್ಚಯಿಸಿದ ಮಹೇಶ್ ಕಟೀಲು ಮೇಳದಲ್ಲಿ ತಿರುಗಾಟ ಆರಂಭಿಸಿದರು. 2013 ನೇ ಇಸವಿಯಲ್ಲಿ ಒಂದನೇ ಮೇಳದಲ್ಲಿ ಪೂರ್ವ ರಂಗದ ವೇಷಕ್ಕೆ ಗೆಜ್ಜೆ ಕಟ್ಟಿ ಪ್ರಸಂಗದಲ್ಲಿ ಪುಂಡು, ಕಿರೀಟ, ಸ್ತ್ರೀ ವೇಷಗಳನ್ನು ಇವರಿಗೆ ಅದೇ ವರ್ಷದ ತಿರುಗಾಟದಲ್ಲಿ ಐದನೇ ಮೇಳದಲ್ಲಿ ಮೂರನೇ ಮತ್ತು ಎರಡನೇ ಬಣ್ಣದ ವೇಷಗಳನ್ನು ನಿಭಾಯಿಸುವ ಅವಕಾಶ ದೊರೆಯಿತು. ಅದೇ ವರ್ಷ ಎರಡನೇ ಮೇಳದಲ್ಲಿ ಸ್ತ್ರೀ ವೇಷದ ಕೊರತೆ ಇದ್ದುದರಿಂದ ಎರಡನೇ ಸ್ತ್ರೀ ವೇಷದ ಜಾಗಕ್ಕೆ ಭಡ್ತಿ ಪಡೆದರು.


ಯಕ್ಷಗಾನದ ಪಯಣದಲ್ಲಿ ಹವ್ಯಾಸಿ ಮತ್ತು ವೃತ್ತಿಪರ ಬದುಕಿನಲ್ಲಿ ಈವರೆಗೆ ದೇವೇಂದ್ರ ಬಲ, ಕುಮಾರ, ಬಬ್ರುವಾಹನ, ಸುದರ್ಶನ, ರಾಮ, ಲಕ್ಷ್ಮಣ, ಯಕ್ಷ, ಸುಪಾರ್ಶ್ವಕ, ಮಧು, ಕೈಟಭ, ಕೃಷ್ಣ, ವಿಷ್ಣು, ಶುಂಭ ನಿಶುಂಭರು, ಮಹಿಷ, ವೀರಭದ್ರ, ಲವಣಾಸುರ, ನರಕಾಸುರ, ಚಂಡ ಮುಂಡ, ಅರ್ಜುನ, ಭದ್ರಸೇನ, ಚಂದ್ರಸೇನ ಹೀಗೆ ಇನ್ನೂ ಹಲವು ವೇಷಗಳನ್ನು ನಿರ್ವಹಿಸಿದ್ದಾರೆ.

  Upayuktha


ಪ್ರಸ್ತುತ ಕಟೀಲು ಐದನೇ ಮೇಳದಲ್ಲಿ ಪ್ರಧಾನ ಸ್ತ್ರೀ ವೇಷಧಾರಿಯಾಗಿ ಶ್ರೀದೇವಿ, ಚಂದ್ರಮತಿ, ದಾಕ್ಷಾಯಿಣಿ, ದಮಯಂತಿ, ಸೀತೆ, ದ್ರೌಪದಿ, ಶಶಿಪ್ರಭೆ, ಭ್ರಮರಕುಂತಳೆ, ತಿಲೋತ್ತಮೆ, ಊರ್ವಶಿ, ಮೋಹಿನಿ, ಲಕ್ಷ್ಮೀ, ಸತ್ಯಭಾಮೆ, ರುಕ್ಮಿಣಿ, ಮಾಲಿನಿ, ಕನಕಾಂಗಿ ಮುಂತಾದ ಹಲವು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರಸ್ತುತ ಶ್ರೀ ದೇವಿ ಪಾತ್ರವನ್ನು ನಿರ್ವಹಿಸುತ್ತಿರುವುದು ಅವರ ಕಲಾ ಭಕ್ತಿಗೆ ಸಂದ ಗೌರವ. ಇವರು ಸ್ತ್ರೀ ವೇಷದಲ್ಲಿ ಹೆಣ್ಣನ್ನೇ ನಾಚಿಸಬಲ್ಲ ಲಾಲಿತ್ಯಪೂರ್ಣ ಅಭಿವ್ಯಕ್ತಿಯಿಂದ ರಂಗದಲ್ಲಿ ಸಾಕ್ಷಾತ್ ಶ್ರೀ ದೇವಿಯೇ ಪ್ರತ್ಯಕ್ಷಳಾದಳೋ ಎಂಬ ಭಯ ಭಕ್ತಿಯ ವಾತಾವರಣ ಮೂಡಿಸಬಲ್ಲರು.


ಇವರಿಗೆ ಸ್ತ್ರೀ ವೇಷಕ್ಕೆ ಕೋಳ್ಯೂರು ರಾಮಚಂದ್ರ ರಾಯರು ಮತ್ತು ಎಮ್.ಕೆ.ರಮೇಶ್ ಆಚಾರ್ಯರು  ಆದರ್ಶ. ಸಾಹಿತ್ಯಾತ್ಮಕ ವಾಚಿಕಕ್ಕೆ ಮತ್ತು ಪಾತ್ರ ಚಿತ್ರಣಕ್ಕೆ ಸುಣ್ಣಂಬಳರ ಮಾರ್ಗದರ್ಶನವನ್ನು ಸದಾ ಅನುಸರಿಸುತ್ತಾರೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-

ಕಲೆಯ ಶ್ರೀಮಂತಿಕೆಯನ್ನು ಶುದ್ಧತೆಯನ್ನು ನಾವು ಒಂದಾಗಿ ಉಳಿಸಬೇಕು ಎಂದು ಹೇಳುತ್ತಾರೆ ಮಹೇಶ್ ಕುಮಾರ್ ಸಾಣೂರು.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಉತ್ತಮ ಸದಭಿರುಚಿಯ ಪ್ರೇಕ್ಷಕರನ್ನು ಕಂಡಿದ್ದೇನೆ. ಬಹಳಷ್ಟು ಪ್ರೇಕ್ಷಕರ ಪ್ರೋತ್ಸಾಹದಿಂದ ಬೆಳೆಯುತ್ತಿದ್ದೇನೆ.ಕಲೆಯ ಉಳಿವಿಗೆ, ಕಲಾವಿದನ ಬೆಳವಣಿಗೆಗೆ ಸದಭಿರುಚಿಯ ಪ್ರೇಕ್ಷಕರು ಬೇಕು ಎಂದು ಹೇಳುತ್ತಾರೆ ಮಹೇಶ್ ಕುಮಾರ್ ಸಾಣೂರು.


ಇವರ ಸ್ತ್ರೀ ವೇಷದಲ್ಲಿ ಹೆಣ್ಣನ್ನೇ ನಾಚಿಸಬಲ್ಲ ಅಭಿನಯಕ್ಕೆ ಇವರಿಗೆ "ಯಕ್ಷ ರಾಣಿ", "ಯಕ್ಷ ಕುವರ", "ಯಕ್ಷ ಸಿಂಚನ", "ಯಕ್ಷ ಮೇನಕೆ", "ಅಭಿನಯ ಶಾರದೆ" ಪ್ರಶಸ್ತಿಗಳು ಇವರಿಗೆ ಸಿಕ್ಕಿರುತ್ತದೆ.


ತನ್ನ ಯಕ್ಷ ಬದುಕಿನ ಬೆಳವಣಿಗೆಗೆ ಸಹಕಾರವಿತ್ತ ತಂದೆ ತಾಯಂದಿರು, ಸಹ ಕಲಾವಿದರಾದ ನಾರಾಯಣ ಕುಲಾಲ್, ಬಾಯಾರು ರಮೇಶ್ ಭಟ್, ಕಾವಳಕಟ್ಟೆ, ಪಣೆಯಾಲರು ಹಾಗೂ ಮೇಳದ ಸರ್ವ ಕಲಾವಿದರು,  ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಮೇಳದ ಯಜಮಾನರರ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂಬುದು ಅವರ ಅಂತರಾಳದ ನುಡಿ.


ತೆಂಕುತಿಟ್ಟು ರಂಗದಲ್ಲಿ ಪ್ರೋತ್ಸಾಹಿಸಿದ ಯಕ್ಷಾಭಿಮಾನಿ ಬಳಗ ಸುರತ್ಕಲ್, ಯಕ್ಷ ಸಂಗಮ ಉಪ್ಪಿನಂಗಡಿ, ಭ್ರಾಮರಿ ಯಕ್ಷಮಿತ್ರರು, ಪಡ್ರೆ ಯಕ್ಷೋತ್ಸವ ಬಳಗ (ಪೆರ್ಲ), ಅಂತೆಯೇ ಬಡಗು ತಿಟ್ಟು ರಂಗದಲ್ಲಿ ಸದಾ ನನ್ನನ್ನು ಪ್ರೋತ್ಸಾಹಿಸಿದ ವಿಶ್ವರೂಪ ಮಧ್ಯಸ್ಥ, ರಾಘವೇಂದ್ರ ಶ್ರೀನಿವಾಸ ಪೂಜಾರಿ, ಭಟ್ಕಳ ತಾಳಮದ್ದಳೆ ತಂಡದ ಸಮಸ್ತ ಗೆಳೆಯರಿಗೂ ನಾನು ಋಣಿ. ಸದಾ ನನ್ನನ್ನು ಗೌರವದಿಂದ ಕಂಡ ತೆಂಕು ಮತ್ತು ಬಡಗು ತಿಟ್ಟಿನ ಪ್ರೇಕ್ಷಕರ ಪ್ರೀತಿ, ಗೆಳೆಯರ ಹಾರೈಕೆ ಸದಾ ನನ್ನ ಮೇಲಿರಲಿ ಎಂದು ಅವರ ಪ್ರಾರ್ಥನೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


Photo Click:

Yaksha Madhava, Suresh Suri,P.K.Jain, Navya Holla, Manjunath Bairy, S.K.Photography 


-ಶ್ರವಣ್ ಕಾರಂತ್ ಕೆ

ಸುಪ್ರಭಾತ, ಶಕ್ತಿನಗರ ಮಂಗಳೂರು.

+91 8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top