ಬಳ್ಳಿಗೊಂದು ಮರ- ಪ್ರಕೃತಿಯ ವರ

Upayuktha
0

ಹುಟ್ಟು ಬದುಕು ಸಾವು ಇದು ಪ್ರಕೃತಿ ನಿಯಮ.  ಮಾನವನ ಉಗಮಕ್ಕಿಂತಲೂ ಲಕ್ಷಾಂತರ ವರ್ಷಗಳಿಂದ ಇದು ನಡೆಯುತ್ತಲೇ ಬಂದಂಥ ಒಂದು ಸೋಜಿಗ. ಏಕಾಣು ಜೀವಿಯಿಂದ ತೊಡಗಿ ಇವತ್ತಿನ ಮಾನವನವರೆಗೂ ಈ ನಿಯಮದಲ್ಲಿ ವ್ಯತ್ಯಾಸವಿಲ್ಲದೆ ಏಕಪ್ರಕಾರವಾಗಿ ಸಾಗುತ್ತಲೇ ಇರುವುದು ಇನ್ನೊಂದು ಸೋಜಿಗ. ಹೇಗೆ ಮಾನವನು ಸಂಬಂಧಗಳನ್ನು ಹುಟ್ಟು ಹಾಕಿ ಅದರೊಡನೆ ನೆಮ್ಮದಿ ಕಾಣುತ್ತೇನೆಂದು ಅಂದುಕೊಂಡಿರುವನೋ ಅದರಂತೆ ಪ್ರಕೃತಿ ಕೂಡ ನಮ್ಮಿಂದಲೂ ಮುಂಚೆಯೇ ಈ ನಿಯಮವನ್ನು ಅಳವಡಿಸಿಕೊಂಡಿದೆ ಎಂದಾಗ ನಾವಿನ್ನೂ ಬಾಲ್ಯಾವಸ್ಥೆಯಲ್ಲಿದ್ದೇವೆ ಎಂದೇ ಹೇಳಬೇಕು.


ನದಿಗಳು ಹೋಗಿ ಸಮುದ್ರವನ್ನು ಸೇರುತ್ತವೆ. ಸಮುದ್ರದಿಂದ ನೀರು ಮೋಡವಾಗುತ್ತದೆ. ಮೋಡವಾದ ನೀರು ಮಳೆಯನ್ನು ಬರಿಸುತ್ತದೆ. ಪುನಃ ಈ ನೀರು ಸಮುದ್ರವನ್ನು ಸೇರುತ್ತದೆ. ಈ ಸಂಬಂಧಗಳ ಕಾಲ ನಿರ್ಣಯ ಮಾಡಲಾದೀತೇ. ಭೂಮಂಡಲದ ಪ್ರತಿಯೊಂದು ಕ್ರಿಯೆಗಳೂ ಈ ನೀರಿನ ಸಂಬಂಧಕ್ಕೊಳಪಟ್ಟಿವೆ. ಎಲ್ಲಿಯವರೆಗೆ ಈ ನೀರು ಈ ಚಕ್ರವನ್ನು ನಿಲ್ಲಿಸದೋ ಅಲ್ಲಿವರೆಗೆ ಇಂಥ ವ್ಯವಹಾರ ಅಬಾಧಿತವೇ. ಇದಕ್ಕನುಗುಣವಾಗಿ ಗಿಡ ಮರ ಬಳ್ಳಿಗಳ ವ್ಯವಹಾರ, ಖಗ ಮೃಗ ಪಕ್ಷಿಗಳ ವ್ಯವಹಾರ ಅಂತೇಯೇ ಮನುಜನ ವ್ಯವಹಾರದ ವ್ಯಾಪಾರ.  


ಮೃಗ ಪಕ್ಷಿಗಳು ಹೇಗೆ ಒಂದಕ್ಕೊಂದು ಅರಿತು ಬಾಳು ನಡೆಸುವುದೋ ಅದೇರೀತಿ ಗಿಡ ಮರ ಬಳ್ಳಿಗಳೂ ಒಂದನ್ನೊಂದು ಅರ್ಥೈಸಿಕೊಂಡು ಬದುಕನ್ನು ಕಟ್ಟಿಕೊಂಡ ರೀತಿ ಕೂಡ ಸೃಷ್ಟಿಕರ್ತನ ಆಟವೆಂದೇ ಹೇಳಬೇಕಾಗುತ್ತದೆ. ಎಲ್ಲೋ ಒಂದು ಮರವಿರುತ್ತದೆ. ಎಲ್ಲೋ ಒಂದು ಬಳ್ಳಿ ಮೊಳಕೆಯೊಡೆಯುತ್ತದೆ.  ಬಳ್ಳಿ ಆಸರೆಯನ್ನು ಹುಡುಕಿಕೊಂಡು ಹರಡುತ್ತದೆ. ಪೂರ್ವ ನಿಯೋಜನೆಯಂತೆ ಅಲ್ಲೇ ಒಂದು ಮರವಿರುತ್ತದೆ. ಅದಕ್ಕೆ ಬಳ್ಳಿ ಹಬ್ಬತೊಡಗುತ್ತದೆ. ಮರವಾದರೊ ಬಳ್ಳಿಯನ್ನು ಉಪೇಕ್ಷಿಸದೆ ಆಶ್ರಯ ಕೊಡುತ್ತದೆ. ಬಳ್ಳಿಯೂ ಒಪ್ಪಿ ಅಪ್ಪಿಕೊಳ್ಳುತ್ತದೆ. ಅಲ್ಲಿಗೆ ಬಳ್ಳಿಗೂ ಆಸರೆಯಾಯಿತು, ಮರಕ್ಕೂ ಆಧಾರವಾಯಿತು. ಯಾವುದೋ ಒಂದು ಕಾಲ ಘಟ್ಟದಲ್ಲಿ ಮರವೂ ಬಿದ್ದು ಹೋಗಬಹುದು ಅಥವಾ ಬಳ್ಳಿಯೂ ಜಾರಿ ಬೀಳಬಹುದು. ಆವಾಗ ಅದರ ಅನ್ಯೋನ್ಯತೆಯ ಬದುಕು ಶಾಶ್ವತವಾಗಿ ಮುರಿದಂತೆ.



ಅದೇ ಮಾದರಿಯಲ್ಲಿ ಮಾನವನೂ ಬದುಕನ್ನು ಕಟ್ಟಿಕೊಳ್ಳುತ್ತಾನೆ, ರೂಢಿಸಿಕೊಳ್ಳುತ್ತಾನೆ. ಪಾಠ ಪ್ರಕೃತಿಯಿಂದಲೇ. ಅಲ್ಲಿ ಹೇಗೆ ಮರವು ಇದ್ದಲ್ಲೇ ಇದ್ದು ಬಳ್ಳಿಯನ್ನು ತನ್ನ ಬಳಿಗೆ ಸೆಳೆದುಕೊಳ್ಳುವುದೋ ಅದೇರೀತಿ ಮಾನವರು ಕೂಡ ಗಂಡು ಮರದಂತೆ ಹೆಣ್ಣು ಬಳ್ಳಿಯಂತೆ ಎಂದು ಒಪ್ಪಿಕೊಂಡು, ಗಂಡಿನ ಮನೆಗೇ ಹೆಣ್ಣು ಬಂದು ಗಂಡ ಹೆಂಡಿರಾಗಿ ಬಾಳಬೇಕು ಎಂಬ ಸಹಜ ನಿಯಮ ಮಾಡಿಕೊಂಡರು. ಅಂತೆಯೇ ಅದೇರೀತಿ ಬದುಕನ್ನು ಬದುಕಿದ್ದರು.


ಅದೇರೀತಿ ನದಿಗಳನ್ನು ಕೂಡ ಸ್ತ್ರೀಗೆ ಹೋಲಿಸುತ್ತಾರೆ ಅಥವಾ ನದಿಯಲ್ಲಿ ಮಾತೆಯನ್ನೇ ಕಾಣುತ್ತಾರೆ. ಆದರೆ ಸಮುದ್ರ ಹಾಗಲ್ಲ ಆತನನ್ನು ಸಮುದ್ರ ರಾಜನೆನ್ನುವರು. ಹೇಗೆ ಎಲ್ಲ ಸ್ತ್ರೀಯರೂ ಗಂಡಿನ ಮನೆಗೇ ಸೇರಬೇಕೋ ಅದೇರೀತಿ ಎಲ್ಲ ನದಿಗಳೂ ಸಮುದ್ರವನ್ನೇ ಸೇರುತ್ತವೆ. ಹೇಗೆ ಬಳ್ಳಿ ಇದ್ದ ಕಡೆ ಮರವು ಹೋಗದೋ ಅಥವಾ ನದಿಗಳನ್ನು ಹುಡುಕಿ ಸಮುದ್ರ ಹೋಗದೋ ಅದರಂತೆಯೇ ಮಾನವರಲ್ಲಿ ಅದರಲ್ಲೂ ಗಂಡ ಹೆಂಡಿರ ಸಂಬಂಧ ಇರುವುದು ಪ್ರಕೃತಿ ಕಲಿಸಿದ ಪಾಠದಂತೆ.  


ಆದರೆ ಇತ್ತೀಚಿನ ಬೆಳವಣಿಗೆಗಳು ಈ ನಿಯಮವನ್ನು ಪರಿಪಾಲಿಸದಿರಬಹುದು ಅಥವಾ ದೇಶಕಾಲಕ್ಕನುಗುಣವಾಗಿ ಬದಲಾವಣೆಗಳೂ ಅನಿವಾರ್ಯವಾಗಬಹುದು. ಆಗ ಕೆಲವು ಹೊಂದಾಣಿಕೆಗಳೊಡನೆ ಪರಿವರ್ತನಗಳನ್ನು ಮಾಡಿಕೊಳ್ಳುವುದು ತಪ್ಪಲ್ಲ.. ಒಂದು ಮರಕ್ಕೆ ಒಂದೇ ಬಳ್ಳಿಯಾದರೆ ಬಳ್ಳಿಗೂ ಮರಕ್ಕೂ ಬಾಧೆಯಾಗದು. ಯಾವಾಗ ಒಂದೇ ಮರಕ್ಕೆ ಹತ್ತಾರು ಬಳ್ಳಿಗಳು ಹಬ್ಬತೊಡಗಿದವೋ ಅಥವಾ ಹತ್ತಾರು ಮರಗಳಿಗೆ ಒಂದೆರಡೇ ಬಳ್ಳಿಗಳು ಸಾಕಾಗದಾದವೋ ಆಗ ಸಮಸ್ಯೆಗಳು ಎದುರಾದಂತೆ.  ಆದರೆ ಪ್ರಕೃತಿಗಾದರೋ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡುವುದು ಗೊತ್ತು. ಇಂತಹ ವಿಚಾರಗಳಲ್ಲಿ ಮಾನವನು ಮಾತ್ರ ಸೋಲುತ್ತಾನೆ. ಅದಕೆಂದೇ ಹಿರಿಯರು ಒಂದು ಮರಕ್ಕೆ ಒಂದೇ ಬಳ್ಳಿಯೆಂಬ ನಿಯಮವನ್ನು ಮಾಡಿಟ್ಟರು. ಇದಕ್ಕೆ ವಿರೋಧವಾದಾಗ ಸಂಬಂಧಗಳು ಕಳಚಿದಂತೆಯೇ ಜತೆಜತೆಗೆ ಸಂಸಾರ, ಸಂಸ್ಕಾರಗಳೂ ನಾಶವಾದಂತೆಯೇ.


ಇನ್ನು ಬಳ್ಳಿಗಳೂ ಅಷ್ಟೆ ತಾನೆ ತಾನಾಗಿ ಆರಿಸಿಕೊಳ್ಳುತ್ತವೆ ಮರವನ್ನು ತನಗೆ ಬೇಕೆನಿಸಿದಾಗ, ತನಗೆ ಬೇಕೆಂದೆನಿಸಿದ್ದನ್ನು. ಆದರೆ ಒಮ್ಮೆ ಒಂದು ಮರದ ನಂಟು ಪ್ರಾರಂಭವಾದರೆ ಅದು ಕೊನೆಗಾಲದವರೆಗೂ ಅದನ್ನು ಬಿಡದು.  ಆದರೆ ಮರವಾದರೋ ಎಷ್ಟೂ ಬಳ್ಳಿಗಳಿಗೆ ಆಶ್ರಯ ಕೊಡಬಹುದು, ಯಾವುದನ್ನೂ ಹಚ್ಚಿಕೊಳ್ಳದೆ. ಮಾನವರಲ್ಲೂ ಇದರ ಗುಣ ಕಾಣಬಹುದು. ಅದಕೆಂದೇ ಬಹುಪತ್ನಿತ್ವ ಎನ್ನುವುದು ರೂಢಿಯಲ್ಲಿತ್ತೋ ಏನೋ. ಒಂದು ಮರದಿಂದ ಇನ್ನೊಂದು ಮರಕ್ಕೆ ಬಳ್ಳಿಯು ತನ್ನ ಶಾಖೆಗಳನ್ನು ವಿಸ್ತರಿಸಬಹುದೇ ಹೊರತು ಬಳ್ಳಿಯೇ ಮರವನ್ನು ಬಿಟ್ಟು ಇನ್ನೊಂದು ಮರವನ್ನು ಬಯಸಿ ಹೋದದ್ದೇ ಇಲ್ಲ, ಮರದ ನಾಶದ ಹೊರತಾಗಿ.


ಅನಿವಾರ್ಯವಾದಾಗ ವಿಧವಾ ವಿವಾಹವೂ ತಪ್ಪಲ್ಲ ಎನ್ನುವ ಸಂದೇಶ ಇದರಲ್ಲಿದೆ ಎಂದೆನಿಸದೇ.?  ಪ್ರಕೃತಿಯ ಸಂದೇಶಗಳು ಯಾವಾಗಲೂ ವೈಜ್ಞಾನಿಕವಾಗಿಯೇ ಇರುತ್ತವೆ. ನಾವು ಮಾತ್ರ ಅದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತೇವೆ ಮತ್ತು ಅದರಿಂದಾದ ಪರಿಣಾಮವನ್ನು ನಾಗರಿಕತೆ ಎನ್ನುತ್ತೇವೆ. ಒಂದು ಬಳ್ಳಿ ಮರವೆಂಬ ಸಣ್ಣ ಕ್ರಿಯೆಯೂ ಅದೆಷ್ಟು ವಿಚಾರಗಳನ್ನು ಹೇಳುತ್ತದಲ್ಲವೇ.. ಹಾಗಾದರೆ ಪ್ರಕೃತಿಯನ್ನು ಪೂರ್ಣವಾಗಿ ಅರ್ಥೈಸಿದರೆ ನಮ್ಮ ಜೀವನದಲ್ಲಿ ಪವಾಡಗಳನ್ನೇ ಮಾಡಬಹುದು. 


- ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top