ಪಂ. ಹೆಗ್ಗಾರ ಅನಂತ ಹೆಗಡೆ ಅವರು ಮೂಲತಃ ಉತ್ತರಕನ್ನಡ ಜಿಲ್ಲೆ ಶಿರಸಿ ಸಮೀಪದ ಹೆಗ್ಗಾರದವರು. ಇವರು ವಿಶ್ವವಿಖ್ಯಾತ ಕಲಾವಿದರಾದ ಪದ್ಮಭೂಷಣ ಪಂ. ರಾಜನ್–ಸಾಜನ್ ಮಿಶ್ರಾ ಅವರ ಹಿರಿಯ ಶಿಷ್ಯರು.
ಇವರದು ಸಂಗೀತದ ಮನೆತನ. ಅಣ್ಣ ಬಾಲಕೃಷ್ಣ ಹೆಗಡೆ ಸಿತಾರ್ ವಾದಕ, ಮತ್ತೊಬ್ಬ ಅಣ್ಣ ರಾಜಾರಾಮ್ ಹೆಗಡೆ ಜಲತರಂಗ ವಾದಕ. ಅನಂತ ಹೆಗಡೆ ಅವರು ಶಾಸ್ತ್ರೀಯ ಸಂಗೀತ, ಭಕ್ತಿಸಂಗೀತ, ಲಘು ಸಂಗೀತ, ಸುಗಮ ಸಂಗೀತ, ವಚನ ಸಂಗೀತ, ದಾಸವಾಣಿಗಳಲ್ಲಿ ಪರಿಣತಿ ಸಾಧಿಸಿದ್ದು, ಉತ್ತಮ ಕಂಠ ಹೊಂದಿದ್ದಾರೆ.
ಸ್ನಾತಕೋತ್ತರ ಪದವಿ (ಧಾರವಾಡ ವಿಶ್ವವಿದ್ಯಾನಿಲಯದಿಂದ) ಮತ್ತು ಸಂಗೀತದಲ್ಲಿ ಬಿ ಮ್ಯೂಸಿಕ್ ಪದವಿ ಪಡೆದಿರುವ ಅನಂತ ಹೆಗಡೆ ಅವರು ಸದ್ಯ ವೃತ್ತಿಪರ ಸಂಗೀತಗಾರರು.
ಇದುವರೆಗೆ ಬೆಂಗಳೂರು, ತುಮಕೂರು, ಮೈಸೂರು, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಅಲ್ಲದೆ ಹೈದರಾಬಾದ್, ದೆಹಲಿ, ಗೋವಾಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಇವರ ಭಕ್ತಿ ಸಂಗೀತ ಕಾರ್ಯಕ್ರಮ ದೂರದರ್ಶನ ಚಂದನ ವಾಹಿನಿ, ಈಟೀವಿ, ಉದಯ ಟೀವಿಗಳಲ್ಲಿ ಪ್ರಸಾರವಾಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ಅನೇಕ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮೈಸೂರು ದಸರಾ, ಕರಾವಳಿ ಉತ್ಸವ, ಹಂಪಿ ಉತ್ಸವ, ಬನವಾಸಿಯ ಕದಂಬೋತ್ಸವ, ವಚನ ಸಂಗೀತೋತ್ಸವ, ಹರಿದಾಸ ಸಂಗೀತೋತ್ಸವಗಳಲ್ಲಿ ಇವರ ದಾಸ ವಾಣಿ ಸಂಗೀತ ಕಾರ್ಯಕ್ರಮ ಕೇಳುಗರ ಮೆಚ್ಚುಗೆಗೆ ಪಾತ್ರವಾಗಿದೆ. ಮಂತ್ರಾಲಯದಲ್ಲಿ 2014ರಲ್ಲಿ ನಡೆದ ಶ್ರೀ ರಾಘವೇಂದ್ರ ಸ್ವಾಮಿಗಳ 342ನೇ ಆರಾಧನಾ ಮಹೋತ್ಸವದಲ್ಲಿ ನಡೆಸಿಕೊಟ್ಟ ದಾಸವಾಣಿ ಕಾರ್ಯಕ್ರಮ ಅಪಾರ ಜನಮೆಚ್ಚುಗೆ ಗಳಿಸಿದೆ.
ಶ್ರವಣಬೆಳಗೊಳದಲ್ಲಿ ನಡೆದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು ದಾಸವಾಣಿ ಪ್ರಸ್ತುತಪಡಿಸಿದ್ದಾರೆ. ವಿಶೇಷ ಸಂದರ್ಭಗಳಾದ ಗಣೇಶೋತ್ಸವ, ರಾಮನವಮಿ ಸಂಗೀತೋತ್ಸವ, ವೈಕುಂಠ ಏಕಾದಶಿ ಸಂಗೀತ ಕಾರ್ಯಕ್ರಮ, ನವರಾತ್ರಿ ಉತ್ಸವಗಳಲ್ಲಿ ಇವರು ಹಿಂದೂಸ್ತಾನಿ ಗಾಯನ ಪ್ರಸ್ತುತಪಡಿಸಿದ್ದಾರೆ.
ಅನಂತ ಹೆಗಡೆ ಅವರು ಶಾಸ್ತ್ರೀಯ ಸಂಗೀತವನ್ನು ವಿಶ್ವವಿಖ್ಯಾತ ಕಲಾವಿದರಾದ ಪಂ. ರಾಜನ್-ಸಾಜನ್ ಮಿಶ್ರಾ ಅವರಲ್ಲಿ ಕಲಿತವರು. ಇವರ ಅನೇಕ ಸೀಡಿಗಳು ಹೊರಬಂದಿದ್ದು, ಕೆಲವು ಸಂಗೀತ ವಲಯದಲ್ಲಿ ಅತ್ಯಂತ ಜನಪ್ರಿಯವಾಗಿವೆ. 2014ರ ಜೂನ್ 22ರಂದು ಆರ್ಯಭಟ ಸಾಂಸ್ಕೃತಿಕ ಸಂಘಟನೆ ನೀಡುವ ಪ್ರತಿಷ್ಠಿತ ‘ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ’ ಲಭಿಸಿದೆ. ಜೊತೆಗೆ 2015ರಲ್ಲಿ ಶ್ರೀರಾಘವೇಂದ್ರಸ್ವಾಮಿ ಆರಾಧನಾ ಮಹೋತ್ಸವದಲ್ಲಿ ಇವರ ಹಾಡುಗಾರಿಕೆ ಕೇಳುಗರ ಮನ ಗೆದ್ದಿದೆ. ಇದೇ ಸಂದರ್ಭದಲ್ಲಿ ನೀಡುವ ‘ಶ್ರೀ ರಾಘವೇಂದ್ರ ಸದ್ಭಾವನಾ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
ಸದ್ಯ ಅನಂತ ಹೆಗಡೆ ಅವರು ಸಂಗೀತ ಕಾರ್ಯಕ್ರಮ, ರಾಗ ಸಂಯೋಜನೆ, ಸಂಗೀತ ಕಲಿಸುವುದರಲ್ಲಿ ತೊಡಗಿಸಿಕೊಂಡಿದ್ದು, ಅನೇಕ ಶಿಷ್ಯಂದಿರನ್ನೂ ತಯಾರು ಮಾಡಿದ್ದಾರೆ.
ಸಾಹಿತ್ಯ, ರಾಗ ಸಂಯೋಜನೆ, ಗಾಯನ:
ಸಾಮಾನ್ಯವಾಗಿ ಸಾಹಿತಿಗಳು ಕವನ ರಚಿಸುವುದು, ಸಂಗೀತ ನಿರ್ದೇಶಕರು ಸ್ವರ ಸಂಯೋಜನೆ ಹಾಗೂ ಗಾಯಕರು ಹಾಡುವುದು ವಾಡಿಕೆ. ವಿರಳವಾಗಿ ಸಾಹಿತ್ಯ ಮತ್ತು ಸ್ವರ ಸಂಯೋಜನೆ ಮಾಡುವುದನ್ನು ಕಂಡು ಕೇಳಿದ್ದೇವೆ. ಆದರೆ ಇವರದು ಸಾಹಿತ್ಯ (ಕವನ) ರಚಿಸಿ, ರಾಗ ಸಂಯೋಜನೆ ಮಾಡಿ, ಹಾಡುವ ವಿರಳಾತಿ ವಿರಳ ಪ್ರತಿಭೆ.
ಕಲಿಸುವ ಚತುರತೆ:
ಒಬ್ಬ ವೃತ್ತಿನಿರತ (Professional artist) ಕಲಾವಿದರಾಗಿ ಗುರು–ಶಿಷ್ಯ ಪರಂಪರೆಯಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿ ಅವರನ್ನು ಕಲಾವಿದರನ್ನಾಗಿ ರೂಪುಗೊಳಿಸುತ್ತಾರೆ. ಇವರು ಸಂಗೀತ ಕಲಿಸಿದ ಅನೇಕ ಯುವ ಕಲಾವಿದರು ರಾಜ್ಯ ಹಾಗೂ ರಾಷ್ಟ್ರಮಟ್ಟದ ವಾಹಿನಿಗಳ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಗಾಯನ ಮಾತ್ರವಲ್ಲದೆ ತಬಲಾದಲ್ಲೂ ಪ್ರಾವೀಣ್ಯತೆ ಹೊಂದಿದ್ದು ಹಲವಾರು ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ಇದಕ್ಕೆ ಮಾಸ್ಟರ್ ವಿನಾಯಕ ಹೆಗಡೆ ಅವರ ತಬಲಾ ನುಡಿಸಾಣಿಕೆಯೇ ನಿದರ್ಶನ.
ವಿಳಾಸ:
ಹೆಗ್ಗಾರ ಅನಂತ ಹೆಗಡೆ
ಬೆಂಗಳೂರು
ಫೋನ್; 94499 86462/ 94496 18207
website: www.sangeetasoudha.com
Key Words: Hindustani classical Music, Pandit Heggar Ananth Hegde, Indian classical Music, ಭಾರತೀಯ ಸಂಗೀತ, ಹಿಂದೂಸ್ಥಾನಿ ಸಂಗೀತ, ಪಂ. ಹೆಗ್ಗಾರ ಅನಂತ ಹೆಗಡೆ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ