ಪಾಲಿಟಿಕ್ಸ್‌: "ಹಾವು ಸಾಯಲೂ ಬಾರದು ಕೇೂಲು ಮುರಿಯಲೂ ಬಾರದು" ಅನ್ನುವ ಸ್ಥಿತಿಯಲ್ಲಿ ಬಿಜೆಪಿ

Upayuktha
0

ದಿನ ಬಿಜೆಪಿಯ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಅಂದರೆ ಹಾವೂ ಸಾಯಬಾರದು ಹಾಗೆಯೆ ಕೇೂಲು ಮುರಿಯಲೂ ಬಾರದು ಅನ್ನುವ ಸ್ಥಿತಿಗೆ ಕೇಂದ್ರ ಬಿಜೆಪಿ ಹೆೈಕಮಾಂಡ್ ಬಂದು ನಿಂತಂತಿದೆ!


ಇಲ್ಲಿ ಹಾವು ಯಾರು- ಯಡಿಯೂರಪ್ಪ, ಕೇೂಲು ಯಾವುದು- ಬಿಜೆಪಿ. ಇಲ್ಲಿ ಬಿಜೆಪಿಯ ತಂತ್ರಗಾರಿಕೆ ಹೇಗಿದೆ ಅಂದರೆ ನಾವಾಗಿಯೇ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದೇವೆ ಅನ್ನುವ ಸಂದೇಶ ಹೊರ ಪ್ರಪಂಚಕ್ಕೆ ರವಾನೆಯಾಗ ಬಾರದು. ಅವರಾಗಿಯೇ ತುಂಬಾ ತೃಪ್ತಿಯಿಂದ ಅವಧಿ ಮುಗಿಯುವ ಮುನ್ನವೇ ಅಧಿಕಾರ ಬಿಟ್ಟು ನಿರ್ಗಮಿಸುತ್ತಿದ್ದಾರೆ ಅನ್ನುವ ತರದಲ್ಲಿ ನಾಟಕ ನಡೆಯಬೇಕು ಅನ್ನುವ ಹಾಗೇ ಬಿಜೆಪಿ ಕೇಂದ್ರ ನಾಯಕರುಗಳ ನಿರ್ದೇಶನ ನಡೆಯುತ್ತಿದೆ ಅನ್ನುವುದು ಮೇಲ್ನೋಟಕ್ಕೆ ಕಾಣುವ ನಾಟಕದ ಮೊದಲ ದೃಶ್ಯ.


ಹಾಗಾದರೆ ಈ ನಾಟಕದಲ್ಲಿ ಸೇೂಲುವುದು ಯಾರು? ಗೆಲ್ಲುವುದು ಯಾರು ಅನ್ನುವುದೇ ನಮ್ಮ ಮುಂದಿರುವ ಯಕ್ಷ ಪ್ರಶ್ನೆ. ಒಂದಂತೂ ಸತ್ಯ ಇಂದು ಬಿಜೆಪಿ ವಲಯದಲ್ಲಿ  ನಡೆಯುತ್ತಿರುವ ರಾಜಕೀಯ ವಿದ್ಯಮಾನ ನೇೂಡುವಾಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ. ಕೆಲವು ದಿನಗಳಲ್ಲಿ  ಯಡಿಯೂರಪ್ಪನವರ ಸುತ್ತ ಮುತ್ತ ನಡೆಯುತ್ತಿರುವ ವಿಚಿತ್ರ ಬೆಳವಣಿಗೆಗಳೇ ಇದಕ್ಕೆ ಸಾಕ್ಷಿ ಅನ್ನುವಂತಿದೆ.


ಅವರು ಸರಕಾರದ ಮಟ್ಟದಲ್ಲಿ ತೆಗೆದುಕೊಂಡ ಕೆಲವು ಪ್ರಮುಖ ನಿರ್ಧಾರಗಳು; ಇದರ ಜೊತೆಗೆ ಬಹು ಮುಖ್ಯವಾಗಿ ತಮ್ಮ ಜಾತಿ ಸಮಾಜದ ಸರ್ವ ಮಠಾಧಿಪತಿಗಳನ್ನು ತಮ್ಮ ಆಸ್ಥಾನಕ್ಕೆ ಬರುವ ಸಂದರ್ಭ ಸೃಷ್ಟಿ ಮಾಡಿರುವುದು ಜೊತೆಗೆ ತಮ್ಮ ಬಹು ದೊಡ್ಡ ಸಮಾಜದ ಮಠಾಧಿಪತಿಗಳ ಬಾಯಿಂದಲೇ ಬಿಜೆಪಿಗೆ ಯಡಿಯೂರಪ್ಪ ಯಾರು ಅನ್ನುವ ಸಂದೇಶವನ್ನು ಬಿಜೆಪಿಯ ಹೆೈಕಮಾಂಡಿಗೆ ರವಾನಿಸುವ ಕೆಲಸವನ್ನು ಮಾಡಿ ಮುಗಿಸಿ ಬಿಟ್ಟಿದ್ದಾರೆ. ಅಂದರೆ ನಾನು ಅಧಿಕಾರದಿಂದ ನಿರ್ಗಮಿಸಬಹುದು ಆದರೆ ತನ್ನ ಮಕ್ಕಳಿಗೆ ಬಿಜೆಪಿ ಮತ್ತು ಸರಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಲೇಬೇಕಾದ ಅನಿವಾರ್ಯತೆಯನ್ನು ಬಿಜೆಪಿಯಲ್ಲಿಯೇ ಬಿಟ್ಟು ಹೇೂಗುವ ನಾಜೂಕಿನ ಚಾಣಾಕ್ಷತನವನ್ನು ಯಡಿಯೂರಪ್ಪ ಬಿತ್ತಿ ಹೇೂಗುವುದಂತೂ ಸತ್ಯ.


ಇನ್ನೂ ಎರಡು ವಷ೯ವಿರುವಾಗಲೇ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಾರೆ ಅಥವಾ ಇಳಿಸುತ್ತಿದ್ದಾರೆ ಅಂದರೆ ಇಲ್ಲಿ ಯಡಿಯೂರಪ್ಪನವರ ಸುದೀರ್ಘ ಕಾಲದ ರಾಜಕೀಯ ಬದುಕಿನ ಮೇಲೊಂದು ಕಪ್ಪುಚುಕ್ಕಿ ಮೂಡಿ ಬರುವುದು ಸಹಜ. ಹಾಗಾಗಿ ಈ ಕಪ್ಪು ಚುಕ್ಕೆಯನ್ನು ಹೇಗೆ ಮುಚ್ಚಿ ಹಾಕಬಹುದು ಅನ್ನುವುದು ಯಡಿಯೂರಪ್ಪನವರನ್ನು ಬಹುವಾಗಿ ಕಾಡುತ್ತಿರುವ ಪ್ರಶ್ನೆ.


ಇಂದೇನೊ ವಿಪಕ್ಷದಲ್ಲಿರುವ ಅವರದ್ದೇ ಸಮಾಜದ ಕಾಂಗ್ರೆಸ್ ಮುಖಂಡರು ಯಡಿಯೂರಪ್ಪನವರನ್ನು ಹಾಡಿ ಹೊಗಳಿರಬಹುದು. ಆದರೆ ಚುನಾವಣೆ ಬಂದಾಗ ಅವರನ್ನೆ ಪ್ರಮುಖ ಅಸ್ತ್ರವಾಗಿ ಇಟ್ಟುಕೊಂಡು ಬಿಜೆಪಿಯ ಭ್ರಷ್ಟಾಚಾರವನ್ನು ದಾರಿಗೆ ತಂದು ನಿಲ್ಲಿಸಲು ಇದೇ ನಾಯಕರು ಹಿಂಜರಿಯುವುದಿಲ್ಲ ಅನ್ನುವುದು ಅಷ್ಟೇ ಸತ್ಯ. ಒಂದು ವೇಳೆ ಇದರಿಂದ ಯಡಿಯೂರಪ್ಪ ಸಂಪೂರ್ಣವಾಗಿ ಮುಕ್ತಿ ಪಡೆಯಬೇಕಾದರೆ ಅವರ ಸಂಸಾರವೇ ಬಿಜೆಪಿಯಿಂದ ಹೊರಗೆ ನಡೆಯಬೇಕು. ಇದು ಸಾಧ್ಯವೇ?


ಸರಿ ಹಾಗೂ ಹೀಗೂ ಹಾವಂತೂ ಸಾಯಲಿಲ್ಲ, ತೆವಳಿಕೊಂಡು ಹೇೂಯಿತು ಅಂತ ಇಟ್ಟು ಕೊಳ್ಳಿ. ಹಾಗಾದರೆ ಕೇೂಲಿನ ಗತಿ ಏನು? ಇಲ್ಲಿ ಕೇೂಲು ಅಂದ್ರೆ ಬಿಜೆಪಿ. ಇಂದಿನ ಪರಿಸ್ಥಿತಿಯಲ್ಲಿ ಕರ್ನಾಟಕದ ಮಟ್ಟಿಗೆ ಬಿಜೆಪಿಯ ಕೇಂದ್ರ ನಾಯಕರು ತೆಗೆದುಕೊಳ್ಳುವ ನಿರ್ಧಾರ ಕೇೂಲು ಮುರಿಯುವ ಸ್ಥಿತಿಯಲ್ಲಿ ಇದೇ ಅನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುವಂತಿದೆ. ಹಾಗಾಗಿ ಬಿಜೆಪಿಯ ನಡಿಗೆ ಗಮನಿಸುವಾಗ ಕೆಲವೊಂದು ತಪ್ಪು ಹೆಜ್ಜೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ.


1.ಕರ್ನಾಟಕದಲ್ಲಿ ಜಾತಿ ಆಧರಿತ ರಾಜಕೀಯಕ್ಕೆ ಬ್ರೇಕ್ ಹಾಕಿ ನಿಧಾನವಾಗಿ ಸಮಗ್ರ ಹಿಂದುತ್ವ ಅಲೆ ನಿರ್ಮಾಣವಾಗಿ ಜಾತಿಮೀರಿದ ನಾಯಕತ್ವ ಬೆಳೆಸಬೇಕು; ಅನ್ನುವ ಹಿಂಡನ್ ಅಜಂಡವೂ ಇರಬಹುದು? ಒಂದು ಅಥ೯ದಲ್ಲಿ ಯಡಿಯೂರಪ್ಪನವರನ್ನು ಇಳಿಸುವ ಕಾರ್ಯತಂತ್ರವೂ ಅದೇ ಆಗಿದೆ. ಬಹು ಹಿಂದೆಯೆ ನಳಿನ್ ಕುಮಾರ್ ರನ್ನು ಪಕ್ಷ ಅಧ್ಯಕ್ಷರನ್ನಾಗಿ ಮಾಡಿದಾಗಲೇ ಇದಕ್ಕೊಂದು ಮುನ್ನುಡಿ ಬರೆದಿದ್ದರು.


2. ಉತ್ತರ ಭಾರತದಲ್ಲಿ ಬಿಜೆಪಿ ಪ್ರಯೇೂಗಿಸಿದ ಈ ತಂತ್ರಗಾರಿಕೆ ಕನ್ನಡ ನಾಡಿನಲ್ಲಿ ಫಲ ನೀಡೀತೆ? ಸದ್ಯಕ್ಕೆ ಇದು ಸಾಧ್ಯವಿಲ್ಲದ ಮಾತು ಅನ್ನುವುದನ್ನು ಯಡಿಯೂರಪ್ಪನವರೇ ತಮ್ಮ ಮಠಾಧಿಪತಿಗಳ ಮೂಲಕ ಕೇಂದ್ರಕ್ಕೆ ಸುದ್ದಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.


3. ಬಿಜೆಪಿಯ ಹಿಂದುತ್ವ ಮೇಲೆ ನಿಂತಿರುವ ರಾಜಕೀಯ ಭರವಸೆ ಕೇವಲ ಕರಾವಳಿ ಜಿಲ್ಲೆಗಳಲ್ಲಿ ಯಶಸ್ವಿ ಆಗಬಹುದು? ಹೊರತು ಬೇರೆ ಜಿಲ್ಲೆಗಳಲ್ಲಿ ಖಂಡಿತವಾಗಿಯೂ ಇದು ಸಾಧ್ಯವಿಲ್ಲದ ಮಾತು.


4. ಕರುನಾಡ ರಾಜಕೀಯ ಶಕ್ತಿ ಅಂದರೆ ಲಿಂಗಾಯತ, ಒಕ್ಕಲಿಗ, ಕುರುಬ, ಅಲ್ಪಸಂಖ್ಯಾತ ಹಿಂದುಳಿದ ವಗ೯ದ, ನೆಲೆಗಟ್ಟಿನಲ್ಲಿಯೇ ನಿಂತಿದೆ ಅನ್ನುವುದನ್ನು ನಮ್ಮ ರಾಜಕೀಯ ಇತಿಹಾಸ ಸಾಕ್ಷೀಕರಿಸಿದೆ.


5. ಜಾತಿ ಮೀರಿದ ಪ್ರಾಮಾಣಿಕ ನಾಯಕನನ್ನು ತಂದು ಕೂರಿಸುತ್ತೇವೆ ಅನ್ನುವುದೇ ಕನಾ೯ಟಕದಲ್ಲಿ ಬಿಜೆಪಿಗೆ ಊರು ಗೇೂಲು ಮುರಿದುಕೊಳ್ಳುವ ಪರಿಸ್ಥಿತಿ ಬಿಜೆಪಿಗೆ ಬಂದರೂ ಆಶ್ಚರ್ಯವಿಲ್ಲ.


ಅಂತೂ ಈ ಎಲ್ಲಾ ಹಿನ್ನಲೆ ಮತ್ತು ಮುನ್ನಲೆಯಲ್ಲಿ ಬಿಜೆಪಿ ನಡೆ ಕರ್ನಾಟಕದಲ್ಲಿ ದೊಡ್ಡ ಸವಾಲಿನ ಪ್ರಶ್ನೆಯೂ ಹೌದು.


-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top