ಹಿರಿಯ ಪ್ರಾಧ್ಯಾಪಕ ಪ್ರೊ.ವಿಬಿ. ಅರ್ತಿಕಜೆಯವರಿಗೆ ಗುರುವಂದನಾ ಕಾರ್ಯಕ್ರಮ
ಪುತ್ತೂರು: ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯ ಮತ್ತು ಅಂಬಿಕಾ ಪದವಿ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಗುರುಪೂರ್ಣಿಮಾ ಆಚರಣೆ ಹಾಗೂ ಗುರುವಂದನಾ ಕಾರ್ಯಕ್ರಮ ಶನಿವಾರ ವಿದ್ಯಾಲಯದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಗುರುವಂದನೆಯನ್ನು ಸ್ವೀಕರಿಸಿದ ಹಿರಿಯ ಪ್ರಾಧ್ಯಾಪಕ ಪ್ರೊ.ವಿ.ಬಿ. ಅರ್ತಿಕಜೆ ಮಾತನಾಡಿ ಗುರುವಂದನೆಯೆಂಬುದು ವ್ಯಕ್ತಿಗೆ ಅರ್ಪಿತವಾಗುವ ವಿಚಾರವಲ್ಲ ಬದಲಾಗಿ ಗುರು ಎಂಬ ಸ್ಥಾನಕ್ಕೆ ಸಲ್ಲಿಸುವ ಗೌರವ ಎಂದು ಅಭಿಪ್ರಾಯಪಟ್ಟರು.
ಗುರುವಾಗಬೇಕೆಂದು ಬಯಸುವವರು ಕೆಲವೊಂದು ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಜ್ಞಾನ ಸಂಪಾದನೆ ಬೋಧಿಸುವವರ ಮೊದಲ ಆದ್ಯತೆಯಾಗಬೇಕು. ನಮ್ಮ ಮುಂದಿರುವ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಒದಗಿಸಬೇಕಾದರೆ ಅವರಿಗಿಂತ ಹೆಚ್ಚಿನ ಜ್ಞಾನ ನಮ್ಮಲ್ಲಿರಬೇಕೆಂಬ ಭಾವನೆಯಿದ್ದಾಗ ಮಾತ್ರ ಉತ್ತಮ ಗುರುವೊಬ್ಬ ರೂಪುಗೊಳ್ಳುವುದಕ್ಕೆ ಸಾಧ್ಯ. ಹಾಗಾಗಿ ಜ್ಞಾನ ಹಾಗೂ ಅನುಭವದ ಹಾದಿಯಲ್ಲಿ ಕ್ರಮಿಸುವುದು ಶಿಕ್ಷಕರ ಅಗತ್ಯ ಸಂಗತಿ. ಹಾಗೆಯೇ ವಿದ್ಯಾರ್ಥಿಗಳಿಗೆ ಯಾವ ತೆರನಾಗಿ ಮಾರ್ಗದರ್ಶನ ಮಾಡಬೇಕೆಂಬ ಕಲ್ಪನೆಯನ್ನೂ ಸ್ಪಷ್ಟವಾಗಿ ಹೊಂದಿದ್ದಾಗ ನಿಜವಾದ ಗುರು ಸ್ಥಾನ ಆಕಾರಗೊಳ್ಳುತ್ತದೆ ಎಂದರು.
ಹತ್ತಿರಬೇಕು, ದೂರ ಬೇಡ ಎಂಬುದು ಗುರುವಾಗುವವರ ಮೂಲಮಂತ್ರವಾಗಬೇಕು. ಅರ್ಥಾತ್ ವಿದ್ಯಾರ್ಥಿಗಳು ಸದಾ ಗುರುವಿನ ಹತ್ತಿರದಲ್ಲೇ ಇದ್ದಾಗ ಬೋಧನೆ ಸಾಫಲ್ಯ ಕಾಣುತ್ತದೆ. ವಿದ್ಯಾರ್ಥಿಗಳನ್ನು ಗುರುವಾದವನು ಎಂದಿಗೂ ದೂರ ಇರಿಸದೆ ಜ್ಞಾನವನ್ನು ಧಾರೆ ಎರೆಯಬೇಕು. ಹತ್ತಿರಬೇಕು ಎಂಬುದನ್ನು ಹತ್ತಿ ಇರಬೇಕು ಎಂದೂ ವಿಂಗಡಿಸಬಹುದು. ಗುರುವಾದವನು ವಿದ್ಯಾರ್ಥಿಯ ಮಟ್ಟದಿಂದ ಮೇಲಕ್ಕೆ ಹತ್ತಿ ನಿಂತಿದ್ದರೆ ಮಾತ್ರ ಜ್ಞಾನ ಸುಧೆ ವಿದ್ಯಾರ್ಥಿಯೆಡೆಗೆ ಹರಿದೀತು. ವಿದ್ಯಾರ್ಥಿಯ ಮಟ್ಟದಲ್ಲೇ ಗುರುವೂ ಇದ್ದರೆ ಅಥವ ವಿದ್ಯಾರ್ಥಿಗಿಂತ ಕೆಳಗಿದ್ದರೆ ಗುರು ಸ್ಥಾನ ಬಾಧಿತವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ, ಇಂದು ಪ್ರಾಪಂಚಿಕ ಜ್ಞಾನ ಹಾಗೂ ಧಾರ್ಮಿಕ ಜ್ಞಾನದ ಅಗತ್ಯವಿದೆ. ನಾವು ತರಗತಿಯಲ್ಲಿ ಓದುವ ವಿಷಯಗಳೆಲ್ಲ ಪ್ರಾಪಂಚಿಕ ಜ್ಞಾನದಡಿ ಹೊಂದಿಕೆಯಾದರೆ ಧಾರ್ಮಿಕ ಜ್ಞಾನ ನಮ್ಮ ಪರಂಪರೆ, ಆಚರಣೆ, ಚಿಂತನೆ, ಅಲೋಚನೆಗಳಿಂದ ಮೂಡುತ್ತದೆ. ಪ್ರಾಪಂಚಿಕ ಜ್ಞಾನ ಕೇವಲ ಒಂದು ಶೇಕಡಾದಷ್ಟು ನಮ್ಮ ಬದುಕನ್ನು ಆವರಿಸಿಕೊಂಡರೆ ಧಾರ್ಮಿಕ ಜ್ಞಾನ ಉಳಿದ ತೊಂಬತೊಂಬತ್ತು ಶೇಕಡಾದಷ್ಟನ್ನು ಆವರಿಸಿಕೊಳ್ಳುತ್ತದೆ. ಎರಡು ಜ್ಞಾನಗಳೆಂಬ ಹಳಿಗಳಿದ್ದಾಗಲಷ್ಟೇ ಬದುಕಿನ ಬಂಡಿ ಸಸೂತ್ರವಾಗಿ ಸಾಗೀತು. ಧಾರ್ಮಿಕ ಜ್ಞಾನ ಎಂದರೆ ಅದು ಆತ್ಮಜ್ಞಾನವೂ ಹೌದು. ಹಾಗಾಗಿಯೇ ನಾನು ಯಾರು ಎಂಬ ಪ್ರಶ್ನೆಗೆ ಪ್ರಾಪಂಚಿಕ ಶಿಕ್ಷಣದಲ್ಲಿ ಕಂಡುಕೊಳ್ಳಲಾಗದ ಉತ್ತರವನ್ನು ಧಾರ್ಮಿಕ ಜ್ಞಾನದಲ್ಲಿ ಪಡೆದುಕೊಳ್ಳಬಹುದು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಭಾರತೀಯ ಸಂಸ್ಕಾರ, ಚಿಂತನೆಗಳು ಪ್ರಪಂಚಕ್ಕೇ ಬುನಾದಿ. ಇಲ್ಲಿಯ ವಿಧಿ ವಿಧಾನ ಆಚಾರ ವಿಚಾರಗಳು ಅಳಿದರೆ ಅದು ಪ್ರಾಪಂಚಿಕ ವಿನಾಶಕ್ಕೆ ಕಾರಣೀಭೂತವಾದೀತು. ನಮ್ಮಲ್ಲಿ ಗುರು ಶಿಷ್ಯ ಪರಂಪರೆಗೆ ಬಹುದೊಡ್ಡ ಅರ್ಥವ್ಯಾಪ್ತಿ ಇದೆ. ವಿದೇಶದಲ್ಲಿ ವಿದ್ಯಾರ್ಥಿಗಳು ಗುರುವಿನ ಹೆಸರು ಹಿಡಿದು ಕರೆಯುವ ಪದ್ಧತಿ ಇದೆ. ಆದರೆ ಭಾರತೀಯ ಸಂಸ್ಕಾರ ಅಂತಹ ವಿಚಾರಗಳಿಗೆ ಆಸ್ಪದ ಕೊಡದೆ ಗುರು ಸ್ಥಾನಕ್ಕೆ ನಿಜವಾದ ಗೌರವವಿದೆ ಎಂಬುದನ್ನು ತೋರಿಸುತ್ತಿದೆ. ನಮ್ಮಲ್ಲಿ ಗುರುಪೂರ್ಣಿಮೆಯಂತಹ ಕಾರ್ಯಕ್ರಮಗಳನ್ನು ಆಚರಿಸಿ, ಗುರುವಂದನೆ ಸಲ್ಲಿಸುವುದು ಕೇವಲ ಪ್ರದರ್ಶನವಲ್ಲ. ಬದಲಾಗಿ ಅದು ನಮ್ಮ ಪರಂಪರಾನುಗತ ಆಚರಣೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರೊ.ವಿ.ಬಿ. ಅರ್ತಿಕಜೆಯವರಿಗೆ ಸುಬ್ರಹ್ಮಣ್ಯ ನಟ್ಟೋಜ ಹಾಗೂ ರಾಜಶ್ರೀ ನಟ್ಟೋಜ ದಂಪತಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಸಿಕೊಟ್ಟರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ಶೆಟ್ಟಿ, ಪ್ರಸನ್ನ ಭಟ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆಯ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಶಂಕರನಾರಾಯಣ ಭಟ್, ಅಂಬಿಕಾ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ, ವಿವಿಧ ಅಂಬಿಕಾ ಶಿಕ್ಷಣ ಸಂಸ್ಥೆಗಳ ಶಿಕ್ಷಕ, ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.
ವಿದ್ಯಾಲಯದ ಶಿಕ್ಷಕಿ ಅಶ್ವಿನಿ ಪ್ರಾರ್ಥಿಸಿದರು. ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ ಗಾಳಿಮನೆ ಪ್ರಸ್ತಾವನೆಗೈದರು. ವಿದ್ಯಾಲಯದ ಶಿಕ್ಷಕ ಸತೀಶ್ ಇರ್ದೆ ಸ್ವಾಗತಿಸಿದರು. ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಅಕ್ಷಯ್ ಹೆಗಡೆ ವಂದಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಷೇಕ್ ಎನ್ ಕಾರ್ಯಕ್ರಮ ನಿರ್ವಹಿಸಿದರು.
Key Words: Guruvandana, Gurupoornima, Ambika Institutions Puttur, ಗುರುಪೂರ್ಣಿಮಾ, ಗುರುವಂದನೆ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ