ಪಕ್ಷಿಗಳ ಭಾಷೆ ನನಗೆ ಅರ್ಥವಾಯಿತು... ಮನುಷ್ಯರ ಬಗ್ಗೆ ಏನಂದವು ಗೊತ್ತಾ...?

Upayuktha
0

 



ಮೈಸೂರಿನ ಕುಕ್ಕರಳ್ಳಿ ಕೆರೆ ದಂಡೆಯ ಮೇಲೆ ಸಂಜೆ 6 ಗಂಟೆಯ ಸಮಯದಲ್ಲಿ Walking ಮತ್ತು ಲಘು ವ್ಯಾಯಾಮ ಮುಗಿಸಿ ಎಂದಿನಂತೆ ಮಾನಸಿಕ ನೆಮ್ಮದಿಗಾಗಿ ಅಲ್ಲಿಯೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತು ಕಣ್ಣು ಮುಚ್ಚಿ ಧ್ಯಾನಾಸಕ್ತನಾದೆ. 


ನನಗೆ ತೀರಾ ಹತ್ತಿರದಲ್ಲೇ ಕೆರೆಯ ಅಂಚಿನಲ್ಲಿ ಇದ್ದ ದೊಡ್ಡ ಮರದ ಮೇಲೆ ಸಾವಿರಾರು ವಿವಿಧ ಬಣ್ಣದ ಪಕ್ಷಿಗಳು ಕುಳಿತು ಚಿಲಿಪಿಲಿಗುಟ್ಟುತ್ತಿದ್ದವು.


ನಾನು ಧ್ಯಾನದ ಮೂಲ ನಿಯಮದಂತೆ ಉಸಿರಿನ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸಿದೆ. ಆ ಪಕ್ಷಿಗಳ ಧ್ವನಿ ನನ್ನ ಏಕಾಗ್ರತೆಗೆ ತಡೆಯೊಡ್ಡಿತು. ತಕ್ಷಣ ನನ್ನ ಯೋಚನೆ ಬದಲಿಸಿ ಆ ಪಕ್ಷಿಗಳ ಧ್ನನಿಯ ಮೇಲೆಯೇ ನನ್ನ ಗಮನ ಕೇಂದ್ರೀಕರಿಸಿದೆ.


ಆಶ್ಚರ್ಯ, ಕೆಲವೇ ನಿಮಿಷಗಳಲ್ಲಿ ಆ ಚಿಲಿಪಿಲಿ ಧ್ವನಿ ಸುಮಧುರ ಸಂಗೀತದ ಅಲೆಯಾಗಿ ಕೇಳತೊಡಗಿತು. ಮನಮೋಹಕ ರಾಗದ ಏರಿಳಿತ, ಮಾಧುರ್ಯ, ನಿಧಾನ ಆಲಾಪ ನನ್ನೊಳಗೆ ವಿಶಿಷ್ಟ ಅನುಭವ ನೀಡಲಾರಂಬಿಸಿತು. ಇನ್ನಷ್ಟು ಆಳಕ್ಕೆ ನನ್ನ ಏಕಾಗ್ರತೆಯನ್ನು ಕ್ರೂಡೀಕರಿಸಿ ಆಲಿಸತೊಡಗಿದೆ.  


ನೀವು ನಂಬಲೂ ಸಾಧ್ಯವಿಲ್ಲ. ಅವುಗಳ ಭಾಷೆ ನನಗೆ ಅರ್ಥವಾಗತೊಡಗಿತು. ಹೊರಗಿನ ಚಿಲಿಪಿಲಿ ಧ್ವನಿತರಂಗಗಳ ಮುಖಾಂತರ ಹೊಮ್ಮುವ ಅದರ ಸಂಭಾಷಣೆ ಎಂದು ತಿಳಿಯಿತು. 


ಮರದಲ್ಲಿ ಅನೇಕ ಪಕ್ಷಿಗಳಿದ್ದರೂ ನನಗೆ ಹತ್ತಿರದ ಕೊಂಬೆಯ ಗುಂಪಿನ ಮಾತುಕತೆ ಆಲಿಸತೊಡಗಿದೆ. ಅವುಗಳ ಭಾಷೆ ಸ್ಪಷ್ಟವಾಗಿ ತಿಳಿಯಿತು. ಅದರ ಕನ್ನಡದ ಅನುವಾದ ನಿಮ್ಮ ಮುಂದೆ ಇಡುತ್ತಿದ್ದೇನೆ.


 ಒಂದು ಧ್ವನಿ, "ಏನೋ ಗೆಳೆಯ, ಇಂದು ಬೇಸರದಲ್ಲಿದ್ದೀಯ"


ಇನ್ನೊಂದು ಧ್ವನಿ, "ಹೌದು ಗೆಳೆಯ ಇಂದು ಆಕಾಶ ಶುಭ್ರವಾಗಿದ್ದುದರಿಂದ  ಗೆಳೆಯರ ಜೊತೆ ಒಂದಷ್ಟು ದೂರ ಸೂರ್ಯ ಹುಟ್ಟುವ ಕಡೆ ಹೋಗಿದ್ದೆ. ಸೂರ್ಯ ನೆತ್ತಿಯ ಮೇಲಿದ್ದ. ಆಗ ಕೆಳಗೆ ನೋಡಿದೆ. ಯಾವುದೋ ಸಮಾರಂಭದಲ್ಲಿ ಜನರಿಗೆ ಎಲೆಗಳಲ್ಲಿ ಅನ್ನ ಹಂಚುತ್ತಿದ್ದರು. ಅದನ್ನು ಪಡೆಯಲು ಹೆಂಗಸರು ಮಕ್ಕಳು ಸೇರಿದಂತೆ  ಸಾವಿರಾರು ಜನ ಒಬ್ಬರ ಮೇಲೆ ಒಬ್ಬರು ಮುಗಿಬಿದ್ದು ಅದನ್ನು ಪಡೆಯಲು ಕೂಗಾಡುತ್ತಿದ್ದರು.  ಅನ್ನಕ್ಕಾಗಿ ಪರದಾಡುತ್ತಿದ್ದರು. ಕೆಲವರಿಗೆ ಸಿಕ್ಕ ಸಂತೋಷ, ಮತ್ತೆ ಕೆಲವರಿಗೆ ನಿರಾಸೆ ಕಾಡುತ್ತಿತ್ತು.


ಮತ್ತೊಂದು ಧ್ವನಿ, "ಅದರಲ್ಲಿ ನಿನಗೆ ಬೇಸರ ಪಡುವುದೇನಿದೆ"


ಹಳೆಯ ಧ್ವನಿ, "ಬೇಸರ ಅದಕ್ಕಲ್ಲ ಗೆಳೆಯ, ಅಲ್ಲಿಂದ ಹಾರುತ್ತಾ ವಾಪಸ್ಸು ಬರುವಾಗ ಇಲ್ಲಿ ಅರಮನೆಯ ಪಕ್ಕದಲ್ಲಿ ಯಾವುದೋ ಸಮಾರಂಭದ ನಂತರ ಉಳಿದ ಲಾಡು, ಮೈಸೂರು ಪಾಕು, ಪಲಾವ್, ಅನ್ನ, ರೋಟಿ, ಸಾಂಬಾರ್ ಇನ್ನು ಏನೇನೋ ಭಕ್ಷ್ಯಬೋಜನಗಳನ್ನು ಮೋರಿಯಲ್ಲಿ ಚೆಲ್ಲುತ್ತಿದ್ದರು. ಅಲ್ಲಿ ಊಟಕ್ಕಾಗಿ ಪರದಾಟ ಇಲ್ಲಿ ಅನ್ನದ ಚೆಲ್ಲಾಟ. ಈ ಜನರಿಗೆ ಹಂಚಿಕೊಂಡು ತಿನ್ನುವುದು ಬರುವುದಿಲ್ಲವಲ್ಲ ಎಂದು ಬೇಸರವಾಯಿತು.


ಇನ್ನೊಂದು ಧ್ವನಿ, "ಹೌದು ನಾನೂ ಕೂಡ ಮೊನ್ನೆ ಇದಕ್ಕಿಂತ ಭೀಕರ ದೃಶ್ಯ ನೋಡಿದೆ. ಸೂರ್ಯ ಮುಳುಗುವ ಕಡೆ ಹೋಗಿದ್ದೆ. ಒಂದು ಊರಿನ ಹತ್ತಿರ ಜನರೆಲ್ಲಾ ಒಟ್ಟಾಗಿ ತುಂಬಾ ಮುದ್ದಾದ ಯುವ ಜೋಡಿಯನ್ನು ಕೈಕಾಲು ಕಟ್ಟಿ ಎಳೆದುಕೊಂಡು ಹೋಗುತ್ತಿದ್ದರು. ನನಗೆ ಕುತೂಹಲವಾಗಿ ಅಲ್ಲಿಯೇ ಇದ್ದ ಮರದ ಮೇಲೆ ಕುಳಿತೆ.


ಜನ ಆ ಇಬ್ಬರನ್ನೂ ಒಂದು ಕಂಬಕ್ಕೆ ಕಟ್ಟಿ ಹಾಕಿ ಸಿಕ್ಕಸಿಕ್ಕವರೆಲ್ಲ ಅವರಿಗೆ ಹೊಡೆಯುತ್ತಿದ್ದರು. ಸ್ವಲ್ಪ ಹೊತ್ತಿಗೆ ಯಾವನೋ ಅದೇನೋ ಎಣ್ಣೆಯಂತ ನೀರನ್ನು ಅವರ ಮೇಲೆ ಚೆಲ್ಲಿದ. ಇನ್ನೊಬ್ಬನ್ಯಾರೋ ಬೆಂಕಿ ಹಚ್ವಿದ.  


ಯಪ್ಪಾ, ಆ ಜೋಡಿಯ ನರಳಾಟ ನೋಡಲು ತುಂಬಾ ಹಿಂಸೆಯಾಯಿತು. ನನ್ನ ರೆಕ್ಕೆ ಪುಕ್ಕಗಳು ಅದುರಿದವು. ಯಾಕೆ ಹೀಗೆ ಮಾಡಿದರು?  ಅವರು ಮಾಡಿದ ತಪ್ಪೇನು ಎಂದು ಯೋಚಿಸುತ್ತಾ ಅಲ್ಲಿ ಜನ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡಾಗ ತಿಳಿಯಿತು...


ಆ ಹುಡುಗಿ ಗೌಡರ ಜಾತಿಯವಳಂತೆ. ಹುಡುಗ ಹೊಲೆಯನಂತೆ. ಇಬ್ಬರೂ ಪ್ರೀತಿಸಿ ಊರ ಜನರಿಗೆ ಹೆದರಿ ಓಡಿಹೋಗಿ ಮದುವೆಯಾಗಿದ್ದರಂತೆ. ಇದು ನಮ್ಮ ಸಂಸ್ಕೃತಿ ಸಂಪ್ರದಾಯಕ್ಕೆ ಮಾಡಿದ ದೊಡ್ಡ ಅವಮಾನ ಎಂದು ಅವರ ಪೋಷಕರೂ ಸೇರಿದಂತೆ ಊರಿನ ಎಲ್ಲಾ ಜಾತಿಯ ಜನರು ಇದರಿಂದ ಇತರರಿಗೆ ಪಾಠವಾಗಲಿ ಎಂದು ಉಪಾಯ ಮಾಡಿ ಯಾವುದೋ ಊರಿನಲ್ಲಿ ಬಚ್ಚಿಟ್ಟುಕೊಂಡಿದ್ದ ಆ ಜೋಡಿಗೆ "ಆಗಿದ್ದು ಆಗಿಹೋಯಿತು. ಊರಿಗೆ ಬನ್ನಿ. ನಮ್ಮ ಸಂಪ್ರದಾಯದಂತೆ ಮತ್ತೆ ಮದುವೆ ಶಾಸ್ತ್ರ ಮಾಡೋಣ ಎಂದು ಪುಸಲಾಯಿಸಿ ಕರೆದುಕೊಂಡು ಬಂದು ಈಗ ಅವರನ್ನು ಕೊಂದಿದ್ದರು.  


ನನಗೆ ಅದನ್ನು ಕೇಳಿ ರೋಷ ಉಕ್ಕಿಬಂತು. ನನಗೇನಾದರೂ ಶಕ್ತಿಯಿದ್ದಿದ್ದರೆ ಖಂಡಿತ ಆ ಜನಗಳನ್ನು ಕುಕ್ಕಿ ಕುಕ್ಕಿ ಸಾಯಿಸುತ್ತಿದ್ದೆ. ಅಲ್ಲ ಮನುಷ್ಯನೇ ಒಂದು ಜಾತಿ ಎಂದು ನಾನು ತಿಳಿದಿದ್ದೇ. ಅದರಲ್ಲಿ ಇದ್ಯಾವುದು ಗೌಡ, ಹೊಲೆಯ, ಮೇಲ್ಜಾತಿ, ಕೆಳಜಾತಿ... ಛೆ ಎಂತಾ ಮೂರ್ಖರಿವರು.


"ಪ್ರೀತಿಸುವುದು ಸಂಪ್ರದಾಯ ವಿರೋಧಿಯಂತೆ. ಕೊಲ್ಲುವುದು ಸಂಸ್ಕೃತಿಯಂತೆ."


ಗೆಳೆಯರೆ, ಮನುಷ್ಯರು ಅನುಭವಿಸುತ್ತಿದ್ದ ಸುಖ ಸಂತೋಷ, ಸ್ವಾತಂತ್ರ್ಯ ನೋಡಿ ನಾನೂ ಮನುಷ್ಯನಾಗಿದ್ದರೆ ಎಷ್ಟೊಂದು ಚೆಂದವಿತ್ತು ಎಂದು ಆಸೆಪಡುತ್ತಿದ್ದೆ. ಆದರೆ ಆ ಘಟನೆ ನೋಡಿದಾಗಿನಿಂದ ಪಕ್ಷಿಯಾಗಿರುವುದೇ ಅತ್ಯುತ್ತಮ ಎನಿಸುತ್ತಿದೆ.


ಇದೇ ನೋವಿನಲ್ಲಿ ಊಟವೇ ಮಾಡಿರಲಿಲ್ಲ. ಆಗಷ್ಟೇ ಇತ್ತ ಕಡೆ ಬರುತ್ತಿದ್ದೆ. ನಮ್ಮ ಕೆರೆಯ ಬಳಿ ಬಂದಾಗ ನೀರಿನಲ್ಲಿ ಮೀನು ಕಂಡು ಹೊಟ್ಟೆ ಹಸಿವಾಯಿತು. ನೀರಿನಲ್ಲಿ ಮುಳುಗಿ ಮೀನು ಹಿಡಿದೆ. ಅದೃಷಕ್ಕೆ ಒಟ್ಟಿಗೇ ಎರಡು ಮೀನು ಸಿಗಬೇಕೆ. ಖುಷಿಯಿಂದ ಇನ್ನೇನು ತಿನ್ನಬೇಕು ಅಷ್ಟರಲ್ಲಿ ಆ ಯುವ ಜೋಡಿಯ ಆಕ್ರಂದನ ನೆನಪಾಯಿತು. ಕಾಲಿನಲ್ಲಿ ಹಿಡಿದಿದ್ದ ಜೋಡಿ ಮೀನುಗಳು ಅದೇ ತರಹದ ಜೋಡಿಗಳೇ ಇರಬೇಕೆಂದು ಮನಸ್ಸು ಹೇಳಿತು. ಯಾಕೋ ತಿನ್ನಲು ಮನಸ್ಸಾಗಲಿಲ್ಲ. ಹಾಗೆ ಕೆಳಕ್ಕೆ ಹಾರಿ ನೀರಿಗೆ ಬಿಟ್ಟುಬಿಟ್ಟೆ.


ನನಗೇ ಗೊತ್ತಿಲ್ಲದೆ ನನ್ನ ಹೃದಯ ಅಳುತ್ತಿತ್ತು. ಮತ್ತಷ್ಟು ಅವುಗಳ ಮಾತುಕತೆ ಕೇಳಿಸಿಕೊಳ್ಳುತ್ತಾ ಇನ್ನೂ ಇಲ್ಲಿಯೇ ಕುಳಿತಿದ್ದೇನೆ.


ಮೈಸೂರಿನ ಕುಕ್ಕರವಳ್ಳಿ ಕೆರೆಯ ಬಳಿ ನಾಗರಿಕ ಮನುಷ್ಯರ ಹುಡುಕುತ್ತಾ ಧ್ಯಾನಾಸಕ್ತನಾಗಿ.


-ವಿವೇಕಾನಂದ. ಹೆಚ್.ಕೆ.

9844013068


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top