ದಕ ಜಿಲ್ಲೆಯ ಕಲ್ಲಡ್ಕದ ಶ್ರೀನಿವಾಸ ಹೊಳ್ಳ (74) ನಿವೃತ್ತ ಎಂಜಿನಿಯರ್. ಈಗ ಪೂರ್ಣಾವಧಿ ಕೃಷಿಕರು. ವಾರದಿಂದ ಚಿಕ್ಕ ಪ್ರಮಾಣದಲ್ಲಿ ’ಬಾಕಾಹು’ ಉತ್ಪಾದನೆ. ದಿನಕ್ಕೈದು ಕಿಲೋ. ಬೇಕಾದವರಿಗೆ ಕಿಲೋಗೆ 200 ರೂ.ಗೆ (ಶಿಪ್ಪಿಂಗ್ ಶುಲ್ಕ ಪ್ರತ್ಯೇಕ) ಕಳಿಸಿಯೂ ಕೊಡುತ್ತಿದ್ದಾರೆ.
ಪತ್ನಿ ವೈದೇಹಿ ಅವರಿಗೀಗ 64. ಕಳೆದ ಮೂರೂ ದಿನದಿಂದ ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ಸೇರಿಕೊಂಡ ಮುಂಜಾನೆ ಉಪಾಹಾರ. ಗುಳಿಯಪ್ಪ (ಪಡ್ಡು), ದೋಸೆ ಮತ್ತು ಇಡ್ಲಿ. "ಗುಳಿಯಪ್ಪ ಗರಿಗರಿಯಾಗಿರುತ್ತದೆ. ಅದರ ಹಿಟ್ಟಿನದೇ ದೋಸೆ ಮಾಡಿದೆ. ರುಚಿ ಚೆನ್ನಾಗಿಯೇ ಇತ್ತು. ಒಂದು ವಿಶೇಷವೆಂದರೆ ತಣಿದ ಮೇಲೂ ಅಷ್ಟು ಗಟ್ಟಿಯಾಗುವುದಿಲ್ಲ", ವೈದೇಹಿ ವಿವರಿಸುತ್ತಾರೆ.
ವೈದೇಹಿ ಅವರಿಗೆ ಬಾಳೆಕಾಯಿಯ ನಂಟು ವರ್ಷಗಳದು. ಮಲಬದ್ಧತೆಯ ಸಮಸ್ಯೆ ಪರಿಹರಿಸಲು ಅವರಿಗೆ ಆಯುರ್ವೇದ ವೈದ್ಯರು ಕೊಟ್ಟ ಸಲಹೆ- ಪ್ರತಿನಿತ್ಯ ಹಸಿ ಬಾಳೆಕಾಯಿ ಸೇವನೆ. "ಸಿಪ್ಪೆಯೂ ಸೇರಿದಂತೆ ಐದು ತುಂಡು ಮಾಡಿ ದಿನದ ಬೇರೆಬೇರೆ ಸಮಯದಲ್ಲಿ ಅಷ್ಟನ್ನೂ ಜಗಿದು ನುಂಗಿಬಿಡಿ." ಈ ಚಿಕಿತ್ಸೆ ಇವರಿಗೆ ಹಿಡಿಸಿತ್ತು.
ಯಾವಾಗ ಬಾಕಾಹು ತಯಾರಾಯಿತೋ, ವೈದೇಹಿ ಹಸಿ ಬಾಳೆಕಾಯಿಯ ಕೈಬಿಟ್ಟು ಇದನ್ನು ಹಿಡಿದರು. "ಹಸಿ ಬಾಳೆಕಾಯಿಯಲ್ಲಿ ಅಂಟು ಇರುತ್ತದೆ. ಹಾಗೆಯೇ ಅದನ್ನು ತಿನ್ನುವುದಕ್ಕಿಂತ ಈ ಹುಡಿಯ ಸೇವನೆ ಉತ್ತಮ ಅನಿಸಿತು. ಮಾಡುವ ಉಪಾಹಾರದಲ್ಲಿ ಬಾಕಾಹು ಸೇರಿಸಿಕೊಳ್ಳುತ್ತಿದ್ದೇನೆ."
"ಈ ಐಡಿಯಾ ಹಿಡಿಸಿದೆ. ಈಗ ಹಸಿ ಬಾಳೆಕಾಯಿಗೆ ಬೈಬೈ. ನಮ್ಮದೇ ಡ್ರೈಯರ್ ಇದೆ. ನಮ್ಮದೇ ಬಾಳೆಕಾಯಿಯೂ. ಇನ್ನು ಬಾಕಾಹು ತಯಾರಿ, ಅದರಿಂದ ತಿಂಡಿತಿನಸು ಆಗಾಗ ಮಾಡೋಣ ಅಂದುಕೊಂಡಿದ್ದೇನೆ", ವೈದೇಹಿ ಖುಷಿಯಿಂದ ಹೇಳುತ್ತಾರೆ.
ಸಂಪರ್ಕ: ಶ್ರೀನಿವಾಸ ಹೊಳ್ಳ - 94481 09666
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key words: Banana Flour, Banana Powder, Banana Flour recipes, Bakahu, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಆಂದೋಳನ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ